ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದ ಅಂಗನವಾಡಿ ಕೇಂದ್ರಗಳು...

ಚಿಣ್ಣರು ಕಲಿವ ನಲಿವ ತಾಣಗಳಲ್ಲಿ ಮೂಲಸೌಲಭ್ಯಗಳ ಕೊರತೆ
Last Updated 19 ಜನವರಿ 2017, 5:17 IST
ಅಕ್ಷರ ಗಾತ್ರ

ಚಿಂತಾಮಣಿ: ಮಹಿಳೆಯರ ಮತ್ತು ಮಕ್ಕಳ ಸಮಗ್ರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಅಂಗನವಾಡಿ ಕೇಂದ್ರಗಳು ಆರಂಭವಾಗಿ 40 ವರ್ಷ ಕಳೆದರೂ ತಾಲ್ಲೂಕಿನ ಬಹುತೇಕ  ಕೇಂದ್ರಗಳು ಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.

ಹೊಸದಾಗಿ  ನಿರ್ಮಾಣವಾಗಿರುವ ಕೆಲವು ಕಟ್ಟಡಗಳನ್ನು ಹೊರತುಪಡಿಸಿ, ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯಗಳಿಲ್ಲ. ಮಕ್ಕಳ ಸ್ನೇಹಿ ಶೌಚಾಲಯಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಣ್ಣ ಮಕ್ಕಳಿಗೆ ಬೇಕಾದಂತಹ ಯಾವ ಅನುಕೂಲತೆಗಳು ಇಲ್ಲದೆ ಪರದಾಡುವಂತಾಗಿದೆ.

ಅಂಗನವಾಡಿ ಕೇಂದ್ರಕ್ಕೆ ಕನಿಷ್ಠ  ಅಡುಗೆಮನೆ, ಮಕ್ಕಳು ಆಟವಾಡಲು ವಿಶಾಲವಾದ ಕೋಣೆ, ಉಗ್ರಾಣ ಕೋಣೆ, ಕಚೇರಿ, ಶೌಚಾಲಯ ಇರಬೇಕು. ಆದರೆ ಬಹುತೇಕ ಅಂಗನವಾಡಿ ಕೇಂದ್ರಗಳು ಕೇವಲ ಒಂದು ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

  ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿಗಳಿಗೆ ಆದೇಶ ನೀಡಲಾಗಿದೆ. ಬಹುತೇಕ ಗ್ರಾಮ ಪಂಚಾಯಿತಿಗಳು ಅಂಗನವಾಡಿ ಕೇಂದ್ರಗಳ ಕಡೆಗೆ ಗಮನ ಹರಿಸುವುದಿಲ್ಲ ಎಂದು ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಆರೋಪಿಸುತ್ತಾರೆ.

ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆ (ಐಸಿಡಿಎಸ್‌) 1975 ರಲ್ಲಿ ಆರಂಭವಾಯಿತು.  ಮಕ್ಕಳ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ನೀಡುವುದು, ರೂಢಿಗತವಲ್ಲದ ಶಾಲಾ ಪೂರ್ವ ಶಿಕ್ಷಣ, ಮಾಹಿತಿ ಸೇವೆ, ರೋಗ ನಿರೋಧಕ ಚುಚ್ಚುಮದ್ದು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವೈದ್ಯಕೀಯ ವೆಚ್ಚ ನೀಡುವುದು ಯೋಜನೆಯ ಉದ್ದೇಶವಾಗಿತ್ತು. ನಂತರ ಸಾಕಷ್ಟು ಹೊಸ ಯೋಜನೆಗಳನ್ನು ಸೇರಿಸಲಾಗಿದೆ.

6 ತಿಂಗಳಿನಿಂದ 3 ವರ್ಷದ ಮಕ್ಕಳಿಗೆ ದಿನಕ್ಕೆ ₹ 6 ನಂತೆ ತಿಂಗಳಿಗೆ 25 ದಿನಗಳಿಗೆ ₹ 150 ವೆಚ್ಚದಲ್ಲಿ  ಪೌಷ್ಟಿಕ ಆಹಾರ, 3 ರಿಂದ 6 ವರ್ಷದ ಮಕ್ಕಳಿಗೆ ಅಕ್ಕಿ, ಗೋಧಿ, ಹೆಸರುಕಾಳು, ಸಕ್ಕರೆಯುಳ್ಳ ಬ್ಯಾಗ್‌ ನೀಡಲಾಗುತ್ತದೆ.

ಗರ್ಭಿಣಿ, ಬಾಣಂತಿ, ಕಿಶೋರಿಯರಿಗೆ ದಿನಕ್ಕೆ ₹ 7ರಂತೆ, ತಿಂಗಳಿಗೆ 25 ದಿನ ₹ 175 ವೆಚ್ಚದಲ್ಲಿ ಅಕ್ಕಿ, ಗೋದಿ, ಕಡಲೆ ಬೀಜ, ಸಕ್ಕರೆಯುಳ್ಳ ಬ್ಯಾಗ್‌ನ್ನು ನೀಡಲಾಗುತ್ತದೆ.  ಪ್ರಸ್ತುತ ತಾಲ್ಲೂಕಿನಲ್ಲಿ 2693 ಗರ್ಭಿಣಿಯರು, 2926 ಬಾಣಂತಿಯರು ಹಾಗೂ 920 ಕಿಶೋರಿಯರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಸ್ತ್ರೀಶಕ್ತಿ ಸಂಘಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ  1287 ಸ್ತ್ರೀಶಕ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ.
ಸಾಮಾನ್ಯವಾಗಿ 15 ರಿಂದ 20 ಮಹಿಳೆಯರು ಒಟ್ಟುಗೂಡಿ ಸಂಘ ಮಾಡಿಕೊಳ್ಳುತ್ತಾರೆ.

ಬ್ಯಾಂಕ್‌ ಸಾಲ, ಸಬ್ಸಿಡಿ ಮತ್ತಿತರ ಸೌಲಭ್ಯಗಳಿರುತ್ತವೆ. ಇದು ಸಹ ಅಂಗನವಾಡಿ ಕಾರ್ಯಕರ್ತೆಯರ ಮೂಲಕವೇ ಅನುಷ್ಠಾನವಾಗುತ್ತದೆ. ಉದ್ಯೋಗಿನಿ ಮತ್ತು ಸಮೃದ್ಧಿ: ಅಂಗನವಾಡಿಗಳ ಮೂಲಕವೇ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಮತ್ತು ಸಮೃದ್ಧಿ ಯೋಜನೆಗಳು ಜಾರಿಯಲ್ಲಿವೆ. ಉದ್ಯೋಗಿನಿಯಲ್ಲಿ ಮಹಿಳೆಯರಿಗೆ ಬ್ಯಾಂಕ್‌ ಸಾಲ, ಸಬ್ಸಿಡಿಯ ಮೂಲಕ ಉದ್ಯೋಗದ ಅವಕಾಶಗಳನ್ನು ಮಾಡಿಕೊಡಲಾಗುತ್ತದೆ.

ಸಮೃದ್ದಿ ಯೋಜನೆಯಲ್ಲಿ ಮಹಿಳಾ ಬೀದಿ ವ್ಯಾಪಾರಿಗಳಿಗೆ ₹ 10 ಸಾವಿರ  ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇಂತಹ ಹಲವಾರು ಮಹತ್ವದ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಸೂಕ್ತವಾದ ಕಟ್ಟಡ ಇಲ್ಲದಿದ್ದರೆ ಯೋಜನೆಯ ಅನುಷ್ಠಾನದ ಮೇಲೆ ಅಡ್ಡ ಪರಿಣಾಮ  ಬೀರಲಿದೆ.

ಹಾಗಾಗಿ ಜಿಲ್ಲಾಡಳಿತ ಅಂಗನವಾಡಿಗಳಿಗೆ ಸೂಕ್ತವಾದ  ಕಟ್ಟಡ ಕಲ್ಪಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮಿನರಸಮ್ಮ ಹಾಗೂ ಖಜಾಂಚಿ ಅಶ್ವತ್ಥಮ್ಮ ಒತ್ತಾಯಿಸಿದ್ದಾರೆ.
-ಎಂ.ರಾಮಕೃಷ್ಣಪ್ಪ

*
ತಾಲ್ಲೂಕಿನಲ್ಲಿ ನರೇಗಾ, ಆರ್‌ಐಡಿಎಫ್‌ ಯೋಜನೆಯಲ್ಲಿ 75 ಕಟ್ಟಡಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಡೆ ನಿವೇಶನಗಳನ್ನು ಗುರುತಿಸಲಾಗಿದ್ದು ಕಟ್ಟಡ ನಿರ್ಮಾಣಕ್ಕೆ ಕೋರಲಾಗಿದೆ.
-ಲಕ್ಷ್ಮಿನರಸಪ್ಪ, ಶಿಶು ಅಭಿವೃದ್ದಿ ಯೋಜನಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT