ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಯ ಮಾತು ರಾಜಕಾರಣಿ ಆಲಿಸಬೇಕು

ದಾವಣಗೆರೆ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಅಭಿಮತ
Last Updated 19 ಜನವರಿ 2017, 5:56 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ಎಸ್‌.ಬಿ.ರಂಗನಾಥ್‌ ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ.

ಹುಟ್ಟಿದ ಊರು ಚನ್ನಗಿರಿ ತಾಲ್ಲೂಕು ಸಿದ್ದನಮಠ. ವಯಸ್ಸು 75 ಆದರೂ ದಣಿವಿಲ್ಲದ ಕಾಯಕ. ‘ಟಿಪ್ಪು ಸುಲ್ತಾನನ ಖಡ್ಗ’, ‘ಪ್ರತಿದ್ವಂದಿ’, ‘ಭುವನ್ ಸೋಮ್’ ಇವರ ಕಾದಂಬರಿಗಳು. ‘ರಣಹದ್ದುಗಳ ಮಧ್ಯೆ’, ‘ಜಹೂರ್ ಬಕ್ಷ್’ ಅನುವಾದದ ಸಣ್ಣಕಥೆಗಳ ಸಂಕಲನಗಳು. ಹಾಸ್ಯ ಬರವಣಿಗೆಯಲ್ಲೂ ಮಾಡಿದ ಕೃಷಿ ‘ಎಲೆಲೆ ಮಧುಬಾಲೆ’ ಕೃತಿಯಲ್ಲಿ ಬಿಂಬಿತ.

ದಶಕಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಅನುಭವ. 70ರ ದಶಕದಲ್ಲಿ ‘ಪ್ರಜಾವಾಣಿ’, ‘ಡೆಕನ್‌ ಹೆರಾಲ್ಡ್’ ಅರೆಕಾಲಿಕ ವರದಿಗಾರ. ಎರಡೆರಡು ಜಿಲ್ಲೆಗಳ ಸಾಹಿತ್ಯ ಪರಿಷತ್ತುಗಳಿಗೆ ಅಧ್ಯಕ್ಷರಾಗುವ ಅಪರೂಪದ ಯೋಗ ರಂಗನಾಥ್ ಅವರ ಪಾಲಿಗೆ ಒದಗಿ ಬಂದಿತ್ತು. ಚಿತ್ರದುರ್ಗದಲ್ಲಿ 1992ರಿಂದ 95ರಲ್ಲಿ ಪರಿಷತ್ತು ಅಧ್ಯಕ್ಷರಾಗಿದ್ದರೆ, 2001ರಿಂದ 04ರವರೆಗೆ ದಾವಣಗೆರೆ ಅಧ್ಯಕ್ಷರಾಗಿ ಕೆಲಸ.

ಶೈಕ್ಷಣಿಕ ಕ್ಷೇತ್ರದಲ್ಲಿ 54 ವರ್ಷದ ಅಪಾರ ಅನುಭವ, ಇದರಲ್ಲಿ 12 ವರ್ಷ ಶೈಕ್ಷಣಿಕ ಆಡಳಿತಗಾರರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಕುವೆಂಪು ವಿಶ್ವ ವಿದ್ಯಾಲಯದ ಸಿಂಡಿಕೇಟ್‌ ಹಾಗೂ ಸೆನೆಟ್‌ ಸದಸ್ಯನಾಗಿಯೂ ಕಾರ್ಯ ನಿರ್ವಹಣೆ. ಸುದೀರ್ಘ ಸೇವೆಗೆ ಸಿಕ್ಕ ಪ್ರಶಸ್ತಿ–ಪುರಸ್ಕಾರ ಸಾಕಷ್ಟು.
ಅಧ್ಯಕ್ಷರ ಭಾಷಣದ ಸಿದ್ಧತೆ ಯಲ್ಲಿರುವ ರಂಗನಾಥ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಪ್ರಮುಖವಾಗಿ ಯಾವ ವಿಚಾರಗಳನ್ನು ಚರ್ಚಿಸಲು ಬಯಸುವಿರಿ?
ಭಾಷಾ ಮಾಧ್ಯಮ, ಮಾತೃಭಾಷೆ, ‘ನೀಟ್‌’ ಪರೀಕ್ಷೆಯ ಗೊಂದಲ, ಶಾಸ್ತ್ರೀಯ ಸ್ಥಾನಮಾನ ಸಿಕ್ಕರೂ ಸಂಸ್ಥೆಯ ಕಚೇರಿ ಸ್ಥಾಪನೆ ವಿಚಾರದಲ್ಲಿರುವ ಜಿಜ್ಞಾಸೆ ಮತ್ತಿತರ ವಿಚಾರಗಳ ಕುರಿತಂತೆ ಸುದೀರ್ಘವಾಗಿ ಚರ್ಚೆ ಮಾಡಲಿದ್ದೇನೆ.

ಜಿಲ್ಲೆಯಲ್ಲಿ ಈಗ ಬರದ ವಾತಾವರಣ ಇದೆ. ಕುಡಿಯಲು ನೀರು, ಜಾನುವಾರಿಗೆ ಮೇವು ಒದಗಿಸುವುದೇ ಕಷ್ಟವಾಗಿದೆ. ಸಾಹಿತಿಯಾಗಿ ರೈತರ ನೋವಿಗೆ ಯಾವ ರೀತಿಯ ದನಿ ನೀಡುತ್ತೀರಿ?
ಸಾಹಿತಿ, ಶಿಕ್ಷಣತಜ್ಞರು ನೇರವಾಗಿ ರೈತರಿಗೆ ಸ್ಪಂದಿಸಲು ಸಾಧ್ಯವಾಗುವು ದಿಲ್ಲ. ಆದರೆ, ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಜಿಲ್ಲೆಯಲ್ಲಿ ಶೇ 90ರಷ್ಟು ಮಳೆಯಾಶ್ರಿತ ಭೂಮಿ. ಇಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಬೇಕು. ಇಂಗುಗುಂಡಿ ನಿರ್ಮಾಣಕ್ಕೆ ರೈತರಿಗೆ ಸರ್ಕಾರ ಸಹಾಯಧನ ನೀಡಬೇಕು. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಬಹಳಷ್ಟು ಸಮಸ್ಯೆಗಳಿಗೆ ರಾಜಕಾರಣಿಗಳೇ ಕಾರಣ. ಸಾಹಿತಿ, ಕಲಾವಿದರಿಂದ ರಾಜಕಾರಣಿಗಳು ಸಲಹೆ–ಸೂಚನೆಗಳನ್ನು  ಪಡೆದುಕೊಳ್ಳಬೇಕು; ಅದು ಆಗುತ್ತಿಲ್ಲ. 
 
ಹೈದರಾಬಾದ್– ಕರ್ನಾಟಕ ವಿಶೇಷ ಸ್ಥಾನಮಾನ ಜಾರಿಗೊಳಿಸಿರುವ ಸಂವಿಧಾನದ ತಿದ್ದುಪಡಿ 371(ಜೆ) ಕಲಂನಡಿ ಹರಪನಹಳ್ಳಿ ತಾಲ್ಲೂಕನ್ನೂ ಸೇರ್ಪಡೆ ಮಾಡಬೇಕೆಂಬ ಆ ಭಾಗದ ಜನರ ಕೂಗಿಗೆ ನೀವು ಹೇಗೆ ಸ್ಪಂದಿಸುತ್ತೀರಿ?
ಹರಪನಹಳ್ಳಿ ಹಲವು ಕಾರಣ ಗಳಿಂದ ಹಿಂದುಳಿದಿದೆ ನಿಜ. ಅದಕ್ಕೆ ಹೈದರಾಬಾದ್–ಕರ್ನಾಟಕ ವಿಶೇಷ ಸ್ಥಾನಮಾನ ಸಿಗಬೇಕು ಎನ್ನುವುದೂ ನಿಜ. ಆದರೆ, ಹರಪನಹಳ್ಳಿ ಬೇರೆ ಜಿಲ್ಲೆಗೆ ಸೇರಿಸಬೇಕೆಂಬ ಕೂಗು ಸರಿ ಅಲ್ಲ. ಅಲ್ಲಿ ಒಡಕಿನ ಪ್ರಶ್ನೆ ಉದ್ಭವಿಸಬಾರದು. 
    
ದಾವಣಗೆರೆ ಕರ್ನಾಟಕದ ಎರಡನೇ ರಾಜ್ಯಧಾನಿಯಾಗಬೇಕೆಂಬ ಕೂಗು ಬಲಗೊಳ್ಳದಿರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣವೇ?
ಎರಡನೇ ರಾಜ್ಯಧಾನಿ ಏಕೆ, ದಾವಣಗೆರೆ ರಾಜ್ಯದ ಮೊದಲನೆಯ ರಾಜಧಾನಿಯೇ ಆಗಬೇಕು. ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಇದ್ದರೂ ಭೌಗೋಳಿಕವಾಗಿ ಇದು ಸಾಧುವಾಗು ತ್ತಿಲ್ಲ. ಭೂಮಿ, ನೀರು ಸೇರಿದಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸುವ ವ್ಯವಸ್ಥೆಯಾಗಬೇಕು. ಇದಕ್ಕೆ ಹೋರಾಟಗಳು ನಡೆಯಬೇಕು.

ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲೇ ನಡೆಯಬೇಕೆಂಬ ಸಾಹಿತ್ಯಾಸಕ್ತರ ಒತ್ತಾಸೆ ಇದ್ದು, ಇದನ್ನು ನೀವು ಸಮ್ಮೇಳನದ ಮೂಲಕ ಹಕ್ಕೊತ್ತಾಯ ಮಂಡಿಸುವಿರಾ?
1992ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಬಿಟ್ಟರೆ ಸುಮಾರು 25 ವರ್ಷಗಳಿಂದ ದಾವಣಗೆರೆಯಲ್ಲಿ ಸಾಹಿತ್ಯ ಸಮ್ಮೇಳನ ಆಗಿಯೇ ಇಲ್ಲ. ದಾವಣಗೆರೆ ಎಲ್ಲಾ ದೃಷ್ಟಿ ಯಿಂದ ಸೂಕ್ತವಾದ ಸ್ಥಳ. ಅತ್ಯುತ್ತಮ ಸಾರಿಗೆ ಸಂಪರ್ಕ, ಊಟ–ವಸತಿ ನೀಡಲು ಮಠ, ಮಂದಿರಗಳಿವೆ. ಉತ್ತಮ ಸಂಘಟಕರು, ಅಭಿರುಚಿವುಳ್ಳ ಸಾಹಿತ್ಯಾಸ್ತಕರು ಇದ್ದಾರೆ. ದಾವಣಗೆರೆ ಯಲ್ಲೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ರಾಜಕೀಯ ನೇತಾರರು ಆಸಕ್ತಿ ವಹಿಸಿದ್ದು ಇನ್ನಷ್ಟು ಸಂತೋಷ ತಂದಿದೆ. 
 
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಗಳು ಹಿರಿಯ ಸಾಹಿತಿಗಳಿಗಷ್ಟೇ ಮಣೆ ಹಾಕುತ್ತವೆ; ಉದಯೋನ್ಮುಖರ ಗುರುತಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳಿಗೆ ನಿಮ್ಮ ಉತ್ತರ?
ಮಾರ್ಗದರ್ಶನ ನೀಡಲು ಹಿರಿ ಯರು ಸಂಸ್ಥೆಗಳ ಮುಖ್ಯ ಸ್ಥಾನದಲ್ಲಿರ ಬೇಕಾಗುತ್ತದೆ ನಿಜ. ಆದರೆ, ಅವರಿಗೆ ಇಂತಹ ಸಂಸ್ಥೆಯನ್ನು ಕಿರಿಯರನ್ನೂ ಒಳಗೊಳ್ಳುವಂತೆ ರೂಪಿಸುವ ಜವಾ ಬ್ದಾರಿ ಇರುತ್ತದೆ. ಉದಯೋನ್ಮುಖರನ್ನು ಪ್ರೋತ್ಸಾಹಿಸುವ ಕೆಲಸಗಳು ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ.
  
ಸರ್ಕಾರಿ ಕನ್ನಡ ಶಾಲೆ ಬಲಪಡಿಸುವುದಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ. ಆದರೂ ಪೋಷಕರು, ಮಕ್ಕಳನ್ನು ಈ ಶಾಲೆಗಳಿಗೆ ಕಳುಹಿಸದಿರಲು ಕಾರಣಗಳೇನು?
ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದಲ್ಲಿ ಹಲವಾರು ಯೋಜನೆಗಳಿವೆ. ಈ ಯೋಜನೆಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ಅನುಷ್ಠಾನಗೊಳಿಸಬೇಕು. ಪಠ್ಯಪುಸ್ತಕ, ಬೈಸಿಕಲ್, ಸಮವಸ್ತ್ರಗಳನ್ನು ವರ್ಷದ ಕೊನೆಗೆ ಕೊಟ್ಟರೆ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT