ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಮನೆಗೆ ಬೆಂಕಿ

ಶಾರ್ಟ್ ಸರ್ಕಿಟ್‌ನಿಂದ ಬೆಂಕಿ; ಅಪಾರ ಹಾನಿ
Last Updated 19 ಜನವರಿ 2017, 6:56 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪಟ್ಟಣದ ಹೊರ ವಲಯ ತಿಪ್ಪಾಪುರ ರಸ್ತೆಯಲ್ಲಿರುವ ಗಡಿ ದುರುಗಮ್ಮ ದೇವಸ್ಥಾನ ಬಳಿ  ಬುಧ ವಾರ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ನಾಲ್ಕು ಮೇವಿನ ಬಣವೆ, ತೋಟದ ಮನೆ, ದನದ ಕೊಟ್ಟಿಗೆ ಭಸ್ಮವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಬೆಂಕಿ ದುರಂತದಲ್ಲಿ ಪಟ್ಟಣದ ತೇರು ಹನುಮಪ್ಪ ದೇವಸ್ಥಾನದ ಗುಮಾಸ್ತ ಗುಜ್ಜಲ ಮಾರುತಿ ಅವರಿಗೆ ಸೇರಿದ ಅಪಾರ ಆಸ್ತಿಪಾಸ್ತಿ ಹಾನಿ ಆಗಿದೆ.  ಬೆಳಗ್ಗೆ 11.20ರ ಸುಮಾರಿಗೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಉಂಟಾದ ಬೆಂಕಿಯ ಕಿಡಿಗಳು ಮೇವಿನ ಬಣವೆಗೆ ತಗುಲಿವೆ. ಗಾಳಿಯ ವೇಗ ಹೆಚ್ಚಾಗಿದ್ದ ರಿಂದ ಬೆಂಕಿಯ ಜ್ವಾಲೆಗಳು  ಪಕ್ಕದಲ್ಲಿದ್ದ ವಾಸದ ಮನೆ, ಕೊಟ್ಟಿಗೆಗೂ ವ್ಯಾಪಿಸಿದೆ.

ಮನೆಯಲ್ಲಿದ್ದ ಸಿಲಿಂಡರ್‌ಗೂ ಬೆಂಕಿ ತಗುಲಿದ್ದರಿಂದ ಕ್ಷಣಾರ್ಧದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು, ಛಾವಣಿಗೆ ಹೊದಿಸಿದ್ದ ತಗಡುಗಳು ಕರಗಿ ಹೋಗಿವೆ. ಮುಖ್ಯರಸ್ತೆ ಬದಿಯಲ್ಲಿ ಈ ದುರಂತ ಘಟಿಸಿದ್ದರಿಂದ ದಾರಿ ಹೋಕರು ಧಾವಿಸಿ ಬಂದು ಮನೆಯಲ್ಲಿ ಇದ್ದ ನಿವಾಸಿಗಳನ್ನು ಮತ್ತು ಕೊಟ್ಟಿಗೆ ಯಲದ್ದ ದನ ಕರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.

ದುರಂತದಲ್ಲಿ ₹ 70 ಸಾವಿರ ನಗದು, 40 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿಯ ಆಭರಗಳು, ದವಸ ಧಾನ್ಯ, ಟಿವಿ ಹಾಗೂ ಗೃಹ ಉಪಯೋಗಿ ಸಾಮಗ್ರಿ ಹಾಗೂ ಪಾತ್ರೆ– ಪಗಡಗಳೆಲ್ಲವೂ ಸುಟ್ಟು ಕರಕಲಾಗಿವೆ.

ಜತನದಿಂದ ಕಾಪಿಟ್ಟುಕೊಂಡು ಬಂದಿದ್ದ ಚಿನ್ನಾಭರಣ, ನಗದು ಹಣ ಇಟ್ಟ ಜಾಗದಲ್ಲೇ ಬೂದಿಯಾಗಿದ್ದನ್ನು ಕಂಡು ಮನೆಯ ಒಡತಿ ಶಿವಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಹತ್ತಾರು ವರ್ಷಗಳಿಂದ ನೆರಳಾಗಿದ್ದ ತಗಡಿನ ಮನೆ, ಬೆವರು ಸುರಿಸಿ ದುಡಿದ ಹಣ ಕಣ್ಣೆದುರೇ ದಹನವಾಗಿದ್ದನ್ನು ಕಂಡು ಮಾರುತಿ ತೀವ್ರ ಆಘಾತಕ್ಕೆ ಒಳಗಾಗಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಹೂವಿನ ಹಡಗಲಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡರು. ಸ್ಫೋಟಗೊಳ್ಳದೇ ಬೆಂಕಿ ಉಗುಳುತ್ತಿದ್ದ ಸಿಲಿಂಡರ್‌ನ್ನು ನಿಷ್ಕ್ರಿಯ ಗೊಳಿಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು. ಅಗ್ನಿಶಾಮಕ ದಳ ಅಧಿಕಾರಿ ಕೃಷ್ಣೋಜಿ ನೇತೃತ್ವದ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿದರು.

ಪುರಸಭೆ ಅಧ್ಯಕ್ಷೆ ಆರ್.ಪವಿತ್ರಾ, ತಹಶೀಲ್ದಾರ್ ರಾಘವೇಂದ್ರ ರಾವ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ‘ಪುರಸಭೆಯಿಂದ ನಮ್ಮ ಮನೆ ಯೋಜನೆಯಲ್ಲಿ ಕೂಡಲೇ ಮನೆ ಮಂಜೂರು ಮಾಡಲಾಗುವುದು. ಅಧಿ ಕಾರಿ ಜತೆ ಚರ್ಚಿಸಿ ಪರಿಹಾರ ಕೊಡಿಸಲು ಪ್ರತ್ನಿಸುವುದಾಗಿ’ ಪುರಸಭೆ ಅಧ್ಯಕ್ಷೆ ಆರ್. ಪವಿತ್ರಾ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT