ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬೇಡ, ದೇಶಕ್ಕೆ ಏನೂ ಆಗದು: ಒಬಾಮ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಶುಕ್ರವಾರ ಕೆಳಗಿಳಿಯಲಿರುವ ಒಬಾಮ ದೇಶದ ನಾಗರಿಕರಿಗೆ ಅಭಯದ ಸಂದೇಶ ನೀಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಯಪಡಬೇಕಾಗಿಲ್ಲ, ನಮ್ಮ ದೇಶಕ್ಕೇನೂ ಆಗದು’ ಎಂದಿದ್ದಾರೆ.

‘ನಮ್ಮ ದೇಶಕ್ಕೆ ಯಾವುದೇ ಹಾನಿಯಾಗದು ಎಂದು ನನ್ನ ಅಂತರಂಗ ಹೇಳುತ್ತಿದೆ. ಆದರೆ ನಾವು ನಂಬಿದ ಮೌಲ್ಯಗಳಿಗೆ ಏನಾದರೂ ಧಕ್ಕೆಯಾದರೆ ನಾನು ಮತ್ತೆ ಮಾತನಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಟ್ರಂಪ್‌ ಜತೆಗೆ ತಾವು ನಡೆಸಿರುವ ಮಾತುಕತೆಯ ಬಗ್ಗೆ ಮಾತನಾಡಿದ ಒಬಾಮ, ‘ವಿದೇಶಾಂಗ ಹಾಗೂ ದೇಶದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೂತನ ಅಧ್ಯಕ್ಷ ಟ್ರಂಪ್‌ ಅವರಿಗೆ ನಾನು ಕೆಲವು ಸಲಹೆಗಳನ್ನು ನೀಡಿದ್ದೇನೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನನ್ನ ಕೆಲ ಯೋಜನೆಗಳು ಮತ್ತು ಮೌಲ್ಯಗಳನ್ನು ಟ್ರಂಪ್‌ ಟೀಕಿಸಿದ್ದರು. ಆ ವಿಚಾರಗಳನ್ನು ಬದಿಗಿಟ್ಟು, ಟ್ರಂಪ್‌ ತಮ್ಮದೇ ಮಾರ್ಗದಲ್ಲಿ ನಡೆಯುವುದು ಸೂಕ್ತ’ ಎಂದರು.

ತಮ್ಮ ಮುಂದಿನ ಯೋಜನೆ ಬಗ್ಗೆ ಮಾತನಾಡುತ್ತ, ‘ನಾನು ಬರವಣಿಗೆಯಲ್ಲಿ ತೊಡಗಬೇಕು. ನನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಪತ್ನಿಯ ಜತೆ ಸ್ವಲ್ಪ ಸಮಯ ಕಳೆಯಬೇಕು’ ಎಂದರು.

‘ದೇಶದ ನಾಗರಿಕರಲ್ಲಿ ಭೇದಭಾವ ಮಾಡಿದರೆ, ಯಾರಿಗಾದರೂ ಮತದಾನದ ಹಕ್ಕು ನಿರಾಕರಿಸಿದರೆ, ಮಾಧ್ಯಮದ ಮೇಲೆ ದಬ್ಬಾಳಿಕೆ ನಡೆಸುವುದು ಅಥವಾ ವಲಸಿಗರನ್ನು ಸತಾಯಿಸಿದರೆ ನಾನು ಮತ್ತೆ ಅವರೆಲ್ಲರ ಪರವಾಗಿ ನಿಂತು ಮಾತನಾಡುವುದು ಅನಿವಾರ್ಯವಾಗುತ್ತದೆ ಎಂದು ಒಬಾಮ ಅವರು ಟ್ರಂಪ್‌ಗೆ ಎಚ್ಚರಿಕೆಯನ್ನೂ ನೀಡಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್‌ ಅವರು ಮುಸಲ್ಮಾನರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುತ್ತೇನೆ ಮತ್ತು ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸುತ್ತೇನೆ ಎಂದಿದ್ದರು. ಮಾಧ್ಯಮಗಳ ಮೇಲೂ ಹಲವು ಬಾರಿ ಹರಿಹಾಯ್ದಿದ್ದರು.

‘ಮೋದಿಗೆ ಧನ್ಯವಾದ’
ವಾಷಿಂಗ್ಟನ್‌ (ಪಿಟಿಐ): ಶ್ವೇತ ಭವನದಿಂದ ತೆರಳುವುದಕ್ಕೂ ಕೆಲವೇ ಗಂಟೆಗಳ ಮೊದಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿರುವ ಬರಾಕ್‌ ಒಬಾಮ ಸಹಕಾರ ನೀಡಿದ್ದಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಭಾರತ– ಅಮೆರಿಕ ನಡುವಿನ ಸಂಬಂಧ ವೃದ್ಧಿಗೊಳ್ಳಲು ಸಹಕರಿಸಿದ್ದಕ್ಕಾಗಿ ಒಬಾಮ ಅವರು  ಮೋದಿಗೆ ಧನ್ಯವಾದ ಹೇಳಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

ಮಾತುಕತೆ ಸಂದರ್ಭದಲ್ಲಿ ಇಬ್ಬರು ನಾಯಕರು ಆರ್ಥಿಕತೆ, ಭದ್ರತೆ ಮತ್ತು  ನಾಗರಿಕ ಪರಮಾಣು ವಿಷಯಗಳನ್ನು ಒಳಗೊಂಡ ರಕ್ಷಣಾ ವಲಯಗಳಲ್ಲಿನ  ಸಾಧನೆಗಳ ಬಗ್ಗೆಯೂ ಅವಲೋಕನ ನಡೆಸಿದ್ದಾರೆ ಎನ್ನಲಾಗಿದೆ. 

‘2015ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬಂದ ಸಂದರ್ಭವನ್ನು ಒಬಾಮ ನೆನಪಿಸಿಕೊಂಡರು. ಜತೆಗೆ ಈ ಬಾರಿಯ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ಸಲ್ಲಿಸಿದ್ದಾರೆ’ ಎಂದು ಶ್ವೇತ ಭವನ ಹೇಳಿದೆ.

2014ರ ಸೆಪ್ಟೆಂಬರ್‌ನಲ್ಲಿ ಮೋದಿ ಮತ್ತು ಒಬಾಮ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ವಿವಿಧ ಸಂದರ್ಭಗಳಲ್ಲಿ 8 ಬಾರಿ ಭೇಟಿಯಾಗಿದ್ದಾರೆ.  ಭಾರತ –ಅಮೆರಿಕದ ನಾಯಕರ ಭೇಟಿಗೆ ಸಂಬಂಧಿಸಿದಂತೆ ಇದೊಂದು ದಾಖಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT