ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ದಾವಣಗೆರೆ ವಿ.ವಿ ಘಟಿಕೋತ್ಸವ

ಈ ವರ್ಷವೂ ಗೌರವ ಡಾಕ್ಟರೇಟ್ ಇಲ್ಲ, ಮೊದಲ ಬಾರಿಗೆ ಮೂವರಿಗೆ ಪಿಎಚ್‌.ಡಿ ಪ್ರದಾನ
Last Updated 20 ಜನವರಿ 2017, 8:52 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ 4ನೇ ಘಟಿಕೋತ್ಸವ ಇದೇ 20ರಂದು ಬೆಳಿಗ್ಗೆ 11ಕ್ಕೆ ಶಿವಗಂಗೋತ್ರಿ ಆವರಣದಲ್ಲಿ ಹಮ್ಮಿಕೊಂಡಿದೆ.
ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ ಘಟಿಕೋತ್ಸವ ಭಾಷಣ ಮಾಡುವರು.

ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಭಾಗವಹಿಸುವರು. ಅಧ್ಯಕ್ಷತೆಯನ್ನು ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ವಹಿಸುವರು. ಆದರೆ, ಇವರ ಬರುವಿಕೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2014–15 ಮತ್ತು 2015–16 ಶೈಕ್ಷಣಿಕ ವರ್ಷಗಳ ಘಟಿಕೋತ್ಸವವನ್ನು ಈ ಬಾರಿ ಒಟ್ಟಿಗೆ ಆಚರಿಸಲು ವಿಶ್ವವಿದ್ಯಾಲಯ ತೀರ್ಮಾನಿಸಿದೆ. ವಿಶ್ವವಿದ್ಯಾಲಯ ಸ್ಥಾಪನೆಯಾದ ಇಷ್ಟು ವರ್ಷಗಳಲ್ಲಿ ಮಧ್ಯೆ ಒಂದು ವರ್ಷ ಘಟಿಕೋತ್ಸವ ನಡೆದಿರಲಿಲ್ಲ. ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಎರಡೂ ವರ್ಷದ ಪದವಿಗಳನ್ನು ಒಂದೇ ಬಾರಿ ಪ್ರದಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ 2014–15ನೇ ಸಾಲಿನಲ್ಲಿ ಒಟ್ಟು 11,907 ವಿದ್ಯಾರ್ಥಿಗಳು ಹಾಗೂ 2015–16ನೇ ಶೈಕ್ಷಣಿಕ ಸಾಲಿನಲ್ಲಿ 13,491 ವಿದ್ಯಾರ್ಥಿಗಳು ಪದವಿಗಳಿಗೆ ಅರ್ಹರಾಗಿರುದ್ದಾರೆ. ಎರಡೂ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚು ಎಂದು ಹೇಳಿದರು.

ಮೇ/ಜೂನ್ 2015ರಲ್ಲಿ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ/ಸ್ನಾತಕೋತ್ತರ ಪದವಿಗಳಿಂದ ಶೇ 50.82 ಫಲಿತಾಂಶ ಬಂದಿದೆ. ಮೇ/ಜೂನ್ 2016ರಲ್ಲಿ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ/ಸ್ನಾತಕೋತ್ತರ ಪದವಿಗಳಿಂದ ಶೇ 51.15 ಫಲಿತಾಂಶ  ಬಂದಿದೆ ಎಂದರು.

ಎಸ್‌ಜೆವಿಪಿ ಹರಿಹರ ಈ ಕಾಲೇಜು ಸ್ವಾಯತ್ತತೆಯನ್ನು ಪಡೆದಿದ್ದು, 2014–15ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ 248 ಹಾಗೂ 2015–16ನೇ ಸಾಲಿನಲ್ಲಿ 245 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಪಿಎಚ್.ಡಿ ಪ್ರದಾನ: ವಿಶ್ವವಿದ್ಯಾಲಯ ಆರಂಭವಾದ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿ ಘಟಿಕೋತ್ಸವದಲ್ಲಿ 3 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಹಾಗೂ ಒಬ್ಬ ವಿದ್ಯಾರ್ಥಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಗುವುದು ಎಂದರು.

ವಿಶ್ವವಿದ್ಯಾಲಯಕ್ಕೆ ₹20 ಕೋಟಿ ಅನುದಾನ ಬಂದಿದ್ದು, ಈ ಅನುದಾನದಲ್ಲೇ ಈಗಾಗಲೇ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿಶ್ವ ಬ್ಯಾಂಕ್‌ನಿಂದ ಉನ್ನತ ಶಿಕ್ಷಣ ಇಲಾಖೆಗೆ ನೀಡುವ ಅನುದಾನದಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ₹150 ಕೋಟಿ ಅನುದಾನದ ಭರವಸೆಯನ್ನು ಸರ್ಕಾರ ನೀಡಿದೆ. ಇದರಿಂದ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಟಿ.ವಿ. ವೆಂಕಟೇಶ, ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮಶೇಖರ್, ಹಣಕಾಸು ಅಧಿಕಾರಿ ಪ್ರೊ.ಅನಿತಾ, ಡೀನ್‌ಗಳಾದ ಎನ್‌.ಕೆ.ಗೌಡ, ಮಧುಸೂದನ್ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರೊ.ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಚಿನ್ನದಲ್ಲೂ ವಿದ್ಯಾರ್ಥಿನಿಯರ ಸಿಂಹಪಾಲು!
ಚಿನ್ನದ ಪದಕ ಪಡೆಯುವಲ್ಲಿಯೂ ವಿದ್ಯಾರ್ಥಿನಿಯರು ಮೈಲುಗೈ ಸಾಧಿಸಿದ್ದಾರೆ. 2014 ಮತ್ತು 2015ರ ಸಾಲಿನಲ್ಲೂ ವಿದ್ಯಾರ್ಥಿನಿಯರೇ ಅತಿ ಹೆಚ್ಚಿನ ಚಿನ್ನದ ಪದಕ ಗಳಿಸಿದ್ದಾರೆ.  2015ರ ಮೇನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಇ.ಮಮತಾ  ಅತಿ ಹೆಚ್ಚು ಅಂಕ ಪಡೆದು ಒಟ್ಟು 4 ಸ್ವರ್ಣ ಪದಕ ಪಡೆದಿದ್ದಾರೆ. 2016ರ ಮೇನಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಫಿಜಾನೂರ್ ಜೆಹರಾ ಅತಿ ಹೆಚ್ಚು ಅಂಕ ಪಡೆದು ಒಟ್ಟು 4 ಸ್ವರ್ಣ ಪದಕ ಗಳಿಸಿದ್ದಾರೆ.

‘ದೂರ ಶಿಕ್ಷಣ ಕೇಂದ್ರ ಸ್ಥಾಪನೆ’
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ದೂರ ಶಿಕ್ಷಣ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಕುಲಪತಿ ತಿಳಿಸಿದರು. ದೂರ ಶಿಕ್ಷಣ ಕೇಂದ್ರಗಳನ್ನು ಆಯಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮಾತ್ರ ಸ್ಥಾಪಿಸಬೇಕೆಂಬ ಯುಜಿಸಿಯ ಸ್ಪಷ್ಟ ನಿರ್ದೇಶನವಿದೆ. ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯಲ್ಲಿ ದೂರ ಶಿಕ್ಷಣ ಕೇಂದ್ರ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿ ಸಿಕ್ಕ ತಕ್ಷಣ ಕೇಂದ್ರಗಳಿಗೆ ಚಾಲನೆ ನೀಡಲಾಗುವುದು ಎಂದರು.

ಬಾಡಿಗೆ ಗೌನು!
ಘಟಿಕೋತ್ಸವಕ್ಕೆ ಈ ಬಾರಿಯೂ ಬಾಡಿಗೆ ಗೌನು ಬಳಸಲಾಗುತ್ತಿದೆ. ಘಟಿಕೋತ್ಸ ವದ ಡ್ರೆಸ್‌ಗಳನ್ನು ಈ ವರ್ಷ ಕುವೆಂಪು ವಿಶ್ವವಿದ್ಯಾಲಯದಿಂದ ಬಾಡಿಗೆ ಪಡೆದುಕೊಳ್ಳಲಾಗಿದೆ. ಕಳೆದ ವರ್ಷ ಧಾರವಾಡ ವಿಶ್ವವಿದ್ಯಾಲಯದಿಂದ ಪಡೆದುಕೊಳ್ಳಲಾಗಿತ್ತು ಎಂದು ವಿ.ವಿ. ಮೂಲಗಳು ದೃಢಪಡಿಸಿವೆ.

*
ಗೌರವ ಡಾಕ್ಟರೇಟ್ ಪ್ರದಾನಕ್ಕೆ ರಾಜ್ಯಪಾಲರ ಅನುಮತಿ ಇದುವರೆಗೂ ಸಿಕ್ಕಿಲ್ಲ. ಅರ್ಹರ  ಪಟ್ಟಿಯನ್ನು ವಿಶ್ವವಿದ್ಯಾಲಯದಿಂದ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.
–ಪ್ರೊ.ಬಿ.ಬಿ.ಕಲಿವಾಳ,ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT