ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗಳಿಗಾಗಿ ಅಂಡರ್‌ ಪಾಸ್‌ಗೆ ಒಪ್ಪಿಗೆ

ಬಿ.ಆರ್‌.ಟಿ.ಎಸ್ ಕಂಪೆನಿ ಕೊಡುಗೆ
Last Updated 20 ಜನವರಿ 2017, 9:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾಗರಿಕರ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿತು. ಹುಬ್ಬಳ್ಳಿ–ಧಾರವಾಡ ಬಿ.ಆರ್.ಟಿ.ಎಸ್‌ ಯೋಜನೆಯ ರಸ್ತೆ ಕಾಮಗಾರಿ ಸಾಗುತ್ತಿರುವ ಬೈರಿದೇವರಕೊಪ್ಪದಲ್ಲಿ ಅಂಡರ್ ಪಾಸ್‌ ನಿರ್ಮಿಸಲು ಬಿ.ಆರ್.ಟಿ.ಎಸ್ ಕಂಪೆನಿ ಒಪ್ಪಿಕೊಂಡಿತು.

ವಾಹನಗಳ ಓಡಾಟದಿಂದಾಗಿ ಬೈರಿದೇವರಕೊಪ್ಪದ ಸನಾ ಕಾಲೇಜು ಮುಂಭಾಗದಲ್ಲಿ ಶಾಂತಿನಿಕೇತನ ಬಡಾವಣೆ ಮತ್ತು ಸಂಗೊಳ್ಳಿ ರಾಯಣ್ಣ ನಗರ ನಿವಾಸಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ, ಆದ್ದರಿಂದ ಇಲ್ಲಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್‌  ನಿರ್ಮಿಸಬೇಕು ಎಂಬ ಬೇಡಿಕೆ ಈ ಎರಡೂ ಬಡಾವಣೆಗಳ ನಿವಾಸಿಗಳಿಂದ ಬಂದಿತ್ತು. ತಿಂಗಳುಗಳಿಂದ ಬೇಡಿಕೆಗಳನ್ನು ಇರಿಸುತ್ತ ಬಂದಿದ್ದ ನಾಗರಿಕರಿಗೆ ಕಳೆದ ವರ್ಷ ನವೆಂಬರ್‌ ಎರಡನೇ ವಾರದಲ್ಲಿ ಹಂಪ್‌ ಅಳವಡಿಸಿ ಬಿ.ಆರ್.ಟಿ.ಎಸ್ ‘ತಾತ್ಕಾಲಿಕ ಆಶ್ವಾಸನೆ’ ನೀಡಿತ್ತು.

ಜನವರಿ 18ರಂದು ಹಿರಿಯ ನಾಗರಿಕರನ್ನು ಕಚೇರಿಗೆ ಕರೆಸಿ ಚರ್ಚಿಸಿದ ಹಿರಿಯ ಅಧಿಕಾರಿಗಳು ಅಂಡರ್ ಪಾಸ್‌ ನಿರ್ಮಿಸಬೇಕೆಂಬ ಬೇಡಿಕೆಯಲ್ಲಿ ‘ಹುರುಳಿದೆ’ ಎಂಬುದನ್ನು ಮನಗಂಡರು. ನಂತರ ಇದಕ್ಕೆ ಒಪ್ಪಿಕೊಂಡರು.

‘ಮೂಲ ಯೋಜನೆಯಲ್ಲಿ ಇಲ್ಲಿ ಅಂಡರ್ ಪಾಸ್ ನಿರ್ಮಿಸುವ ಚಿಂತನೆ ಇರಲಿಲ್ಲ. ಆದರೆ ಎರಡೂ ಬಡಾವಣೆಗಳ ಹಿರಿಯ ನಾಗರಿಕರು ಮೇಲಿಂದ ಮೇಲೆ ಮನವಿಗಳನ್ನು ಸಲ್ಲಿಸುತ್ತಿದ್ದರು. ಈ ಕಾರಣದಿಂದ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರ ಬೇಡಿಕೆ ನ್ಯಾಯಯುತವಾಗಿದೆ ಎಂದು ತಿಳಿದು ಬಂತು. ಆದ್ದರಿಂದ ಇದಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದು ಬಿ.ಆರ್.ಟಿ.ಎಸ್‌. ಮೂಲಸೌಲಭ್ಯ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಬಸವರಾಜ ಕೆರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಸ್ಥಿಕೆ ವಹಿಸಿದ ‘ಅಮೃತ’: ನಾಗರಿಕರ ಬೇಡಿಕೆಗೆ ಹಿರಿಯ ನಾಗರಿಕರ ಸಹಾಯವಾಣಿ ‘ಅಮೃತ’ದವರು ಮಧ್ಯಸ್ಥಿಕೆ ವಹಿಸಿದ್ದರು. ಹಿರಿಯ ನಾಗರಿಕರ ಓಡಾಟಕ್ಕೆ ಅನುಕೂಲವಾಗುವಂತೆ ಅಂಡರ್‌ ಪಾಸ್‌ ನಿರ್ಮಿಸಲು ಸೂಚಿಸಬೇಕು ಎಂದು ಸಹಾಯವಾಣಿಗೆ ಕಳೆದ ವರ್ಷ ಅಕ್ಟೋಬರ್‌ 27ರಂದು ನಾಗೇಶ ಮಾನ್ವಿ ಪತ್ರ ಬರೆದಿದ್ದರು.

ಇದಕ್ಕೆ ಸ್ಪಂದಿಸಿದ ಸಹಾಯವಾಣಿಯವರು ನವೆಂಬರ್‌ 2ರಂದು ಬಿ.ಆರ್‌.ಟಿ.ಎಸ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಅಧಿಕಾರಿಗಳು ರಸ್ತೆಯಲ್ಲಿ ಹಂಪ್ ನಿರ್ಮಿಸಿಕೊಟ್ಟಿದ್ದರು. ನವೆಂಬರ್‌ 18ರಂದು ಈ ಕುರಿತು ಸಹಾಯವಾಣಿ ಕಚೇರಿಗೆ ಪತ್ರ ಬರೆದು ಮಾಹಿತಿಯನ್ನೂ ನೀಡಿದ್ದರು. ನಂತರ ಅಂಡರ್ ಪಾಸ್‌ ನಿರ್ಮಿಸಲು ಅನುಮತಿ ನೀಡುವಂತೆ ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.

‘ವಾಹನ ದಟ್ಟಣೆ ಇದ್ದಾಗ ಸನಾ ಕಾಲೇಜು ಎದುರು ರಸ್ತೆ ದಾಟುವುದು ಕಷ್ಟ. ಆದ್ದರಿಂದ ಅಂಡರ್‌ ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಿಸಬೇಕು ಎಂದು ಕೋರಲಾಗಿತ್ತು. ತಾತ್ಕಾಲಿಕವಾಗಿ ಹಂಪ್ಸ್‌ ಹಾಕಿ ಕರುಣೆ ತೋರಿದ್ದ ಬಿ.ಆರ್‌.ಟಿ.ಎಸ್ ಈಗ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಒಪ್ಪಿಕೊಂಡಿದೆ. ಇದರಿಂದ ಈ ಭಾಗದ ಹಿರಿಯ ನಾಗಕರಿಗೆ ತುಂಬ ಸಂತೋಷವಾಗಿದೆ’ ನಿವೃತ್ತ ಸರ್ಕಾರಿ ನೌಕರ ನಾಗೇಶ ಮಾನ್ವಿ ಹೇಳಿದರು.

ಏನು ಅನುಕೂಲ?
ಹುಬ್ಬಳ್ಳಿ:
  ಶಾಂತಿನಿಕೇತನ ಕಾಲೊನಿ ಮತ್ತು ಸಂಗೊಳ್ಳಿ ರಾಯಣ್ಣ ನಗರದಿಂದ ಬರುವವರು ಹುಬ್ಬಳ್ಳಿ ಕಡೆಗೆ ತೆರಳುವ ಬಸ್ ಏರಬೇಕಾದರೆ ಅಥವಾ ಎಪಿಎಂಸಿ ಕಡೆಗೆ ಹೋಗಬೇಕಾದರೆ ರಸ್ತೆ ದಾಟಬೇಕು. ಇಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಇದಕ್ಕೆ ಅಡ್ಡಿಯಾಗುತ್ತಿದೆ. ಅಂಡರ್ ಪಾಸ್ ನಿರ್ಮಿಸಿದರೆ ಸರಾಗವಾಗಿ ಸಾಗಿ ರಸ್ತೆಯ ಆಚೆ ಬದಿ ಸೇರಬಹುದು.

*
ಸಾಧ್ಯಾಸಾಧ್ಯತೆ ಮನಗಂಡು ಜನರ ಬೇಡಿಕೆಗಳಿಗೆ ಸ್ಪಂದಿಸಲಾ ಗುತ್ತದೆ. ಅಂಡರ್ ಪಾಸ್‌ಗೆ ಇಲ್ಲಿ ಸಾಧ್ಯತೆ ಇರುವುದರಿಂದ ಕಾರ್ಯರೂ ಪಕ್ಕೆ ತರಲು ನಿರ್ಧರಿಸಲಾಗಿದೆ.
-ಬಸವರಾಜ ಕೆರಿ,
ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT