ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಿಶಿಷ್ಟ ನೃತ್ಯ ನಾಟಕ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಕವಿ, ಸಾಹಿತಿ, ನಟ, ನಿರ್ದೇಶಕ  ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರು ರಚಿಸಿದ ‘ಊರ್ವಶಿ’ ಮತ್ತು ‘ನೆನಪಾದಳು ಶಕುಂತಳೆ’ ನೃತ್ಯರೂಪಕಗಳು ಒಂದು ಭಿನ್ನ-ವಿಶಿಷ್ಟ ಪ್ರಯೋಗಗಳು. 
 
ರಂಗಭೂಮಿಯಲ್ಲಿ ಮಾಧವಾಚಾರ್ಯರು ಮಾಡಿರುವ ಪ್ರಯೋಗಗಳು ಒಂದು ಸಾಂಸ್ಕೃತಿಕ ದಾಖಲೆ. ಯಕ್ಷಗಾನ ಮತ್ತು ತಾಳಮದ್ದಳೆಗಳ ತಂತ್ರಗಳನ್ನು ಬಳಸಿಕೊಂಡು ಅವರು ಪು.ತಿ.ನ. ಅವರ ‘ಹರಿಶ್ಚಂದ್ರ’ವನ್ನು ಮಾಡಿರುವ ಬಗೆಯೇ ಆಕರ್ಷಕ. ಹಾಗೆಯೇ ಭವಭೂತಿಯ ಉತ್ತರ ರಾಮ ಚರಿತೆಯನ್ನು ರಂಗಭೂಮಿಗೆ ತಂದುದು, ಯಕ್ಷಗಾನ ಮತ್ತು ತಾಳಮದ್ದಳೆಗಳನ್ನು ಬಳಸಿಕೊಂಡು ಕಡಂಗೋಡ್ಲು ಶಂಕರಭಟ್ಟರ ‘ಸೀತಾಪಹರಣ’, ಆಶು ಯಕ್ಷಗಾನ ರೀತಿ ವೃತ್ತಿನಿರತ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ‘ಹರಿದಾಸ ವಿಜಯ’, ಏಕವ್ಯಕ್ತಿ ತಾಳಮದ್ದಳೆ, ಶಂಕರಾಚಾರ್ಯರ ಸೌಂದರ್ಯಲಹರಿ, ವಾದಿರಾಜರ ರುಕ್ಮಿಣಿ ವಿಜಯ, ಶಿವರಾಮ ಕಾರಂತರ ‘ಮುಕ್ತದ್ವಾರ’, ತನಿ ಯಕ್ಷ ನೃತ್ಯನಾಟಕ ‘ಪಾಂಚಾಲಿ’ ಮತ್ತು ‘ಭೀಷ್ಮ’ - ಇವುಗಳಲ್ಲಿ ಕನ್ನಡ ವೇದಿಕೆಗೆ ಹೊಸತು ಹಲವು. ಮಾಧವಾಚಾರ್ಯರ ಈ ನೂತನ ರಚನೆಗಳು ಕಲಾಭಿಮಾನಿಗಳಿಗೆ ಹೊಸ ಅನುಭವ ನೀಡಿ, ಕನ್ನಡ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ.
 
ಏಕವ್ಯಕ್ತಿ ಪ್ರದರ್ಶನ
ಏಕವ್ಯಕ್ತಿ ನೃತ್ಯದಲ್ಲಿ ‘ಊರ್ವಶಿ’ಯನ್ನು ಪ್ರಸ್ತುತಪಡಿಸಲಿರುವ ಭ್ರಮರಿ ಶಿವಪ್ರಕಾಶ್ ಅವರು ಉದ್ಯಾವರ ಮಾಧವಾಚಾರ್ಯರ ಮಗಳು. ಸ್ತ್ರೀಶಕ್ತಿ, ಶಬರಿ, ಹರಿಚರಿತ, ಜ್ವಾಲೆ, ನಾರದ, ಕೊರವಂಜಿ ಹಾಗೂ ವೀಣೆ ಶೇಷಣ್ಣನವರ ರಚನೆಗಳಿಗೆ ನೃತ್ಯ ಸಂಯೋಜಿಸಿ  ಪ್ರಸ್ತುತಪಡಿಸಿದ್ದಾರೆ. ಇದೀಗ ’ಊರ್ವಶಿ’ಯಲ್ಲಿ ಏಕವ್ಯಕ್ತಿ ನೃತ್ಯ ಪ್ರಸ್ತುತಿಯಲ್ಲಿ ಯಾವುದೇ ವಾದ್ಯ (ಶ್ರುತಿ ಮತ್ತು ತಾಳಗಳ ಹೊರತಾಗಿ) ಬಳಸದೆ ನೃತ್ಯರೂಪಕ ಪ್ರದರ್ಶಿಸುತ್ತಿದ್ದಾರೆ.
 
ಊರ್ವಶಿ -ಶಕುಂತಲೆ
ಉದ್ಯಾವರ ಮಾಧವ ಆಚಾರ್ಯರ ಕೃತಿಗೆ ಉಡುಪಿಯ ಸಮೂಹ ಕಲಾವಿದರು ಹಾಗೂ ಮಂಗಳೂರಿನ ’ನಾದ ನೃತ್ಯ’ ತಂಡದವರು ಪ್ರಸ್ತುತ ಪಡಿಸಲಿರುವ ಊರ್ವಶಿಯಲ್ಲಿ ದೇವಕನ್ಯೆಯ ಜೀವನ ಗಾಥೆಯನ್ನು ಏಕವ್ಯಕ್ತಿ ಕಥಾನಕದ ಮೂಲಕ ಚಿತ್ರಿಸುವ ಪ್ರಯತ್ನ ನಡೆದಿದೆ.
 
ಕಾಳಿದಾಸನ ಅಭಿಜ್ಞಾನ ಶಾಕುಂತಲವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯರು ’ನೆನಪಾದಳು ಶಕುಂತಳೆ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಆಯ್ದ ಭಾಗಗಳ ನೃತ್ಯ ರೂಪಕವನ್ನು ಡಾ. ಉದ್ಯಾವರ ಮಾಧವ ಆಚಾರ್ಯರು ನಿರ್ದೇಶಿಸಿದ್ದರೆ, ಶಕುಂತಳೆಯಾಗಿ ನರ್ತಿಸಲಿರುವ ಭ್ರಮರಿ ಶಿವಪ್ರಕಾಶ್, ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಸಂಗೀತ ಸಂಯೋಜನೆ ಮಾಡಿರುವ ಮಧೂರ್ ಬಾಲಸುಬ್ರಹ್ಮಣ್ಯ ಗಾಯನವನ್ನೂ ಮಾಡಿದ್ದಾರೆ.
 
ಒಟ್ಟಿನಲ್ಲಿ ಅಭಿಮಾನಿಗಳ- ವಿಶೇಷವಾಗಿ ನೃತ್ಯಾಸಕ್ತರ ಕುತೂಹಲ ಕೆರಳಿಸಿರುವ ಎರಡು ನೃತ್ಯರೂಪಕಗಳಿಗೂ (ಭಾನುವಾರ ಬೆಳಿಗ್ಗೆ10 ಗಂಟೆ) ಉಚಿತ ಪ್ರವೇಶ.
 
**
ಜ. 22ರಂದು ‘ಊರ್ವಶಿ’ ಮತ್ತು ‘ನೆನಪಾದಳು ಶಕುಂತಳೆ’ ನೃತ್ಯ ನಾಟಕ
ಪ್ರದರ್ಶನ: ಭರತನಾಟ್ಯ-ಭ್ರಮರಿ ಶಿವಪ್ರಕಾಶ್. 
ಆಯೋಜನೆ- ಸಮೂಹ, ಉಡುಪಿ.
ಸ್ಥಳ: ಬೆಂಗಳೂರು ಗಾಯನ ಸಮಾಜ, ಭಾನುವಾರ ಬೆಳಗ್ಗೆ 10.
ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT