ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ರಂಗ ಸುಗ್ಗಿ’ ಮಕ್ಕಳ ನಾಟಕೋತ್ಸವ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
‘ವಿಜಯನಗರ ಬಿಂಬ’ ಜ. 22ರಂದು (ಭಾನುವಾರ) ‘ರಂಗ ಸುಗ್ಗಿ’ ಎಂಬ ಮಕ್ಕಳ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. 
 
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ಜಿ.ಎನ್‌. ಮೋಹನ್‌, ಸಮುದ್ರ ಫೌಂಡೇಷನ್‌ನ ಭಾರತಿ ಸಿಂಗ್‌ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 
 
ಮಕ್ಕಳ ನಾಟಕೋತ್ಸವಗಳು ನಡೆಯುವುದು ಅಪರೂಪ. ಒಂದು ವೇಳೆ ಆಯೋಜಿಸಿದರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿರುತ್ತದೆ. ಸ್ಥಳವೂ ದೂರದಲ್ಲಿರುತ್ತದೆ. ಮಕ್ಕಳು ನಾಟಕ ನೋಡಲು ಅನುಕೂಲವಾಗಲೆಂದು  ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ‘ಅರ್ಬುದ ಕಾಡು’, ‘ಸಲಿಲ’, ‘ಸ್ವಪ್ನ ದ್ವೀಪ’ ನಾಟಕಗಳನ್ನು ಮಕ್ಕಳು ಪ್ರದರ್ಶಿಸಲಿದ್ದಾರೆ ಎಂದು ಮಾಹಿತಿ ನೀಡಿದರು ‘ವಿಜಯನಗರ ಬಿಂಬ’ ಅಧ್ಯಕ್ಷೆ ಶೋಭಾ ವೆಂಕಟೇಶ್‌. 
 
‘ಸತ್ಯದ ಹೆಸರಿನಲ್ಲಿ ಸುಳ್ಳನ್ನೇ ವೈಭವೀಕರಿಸುವ ರಿಯಾಲಿಟಿ ಷೋಗಳ ಹಾವಳಿಗಳಿಂದಾಗಿ ಸಮಾಜ ನಲುಗಿ ಹೋಗಿದ್ದು, ‘ಅರ್ಬುದ ಕಾಡು’ ನಾಟಕ ಅದಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡಿದೆ. ಡಾ.ಎಸ್‌.ವಿ.ಕಶ್ಯಪ್‌ ಈ ನಾಟಕ ರಚಿಸಿದ್ದು, ಎಸ್‌.ವಿ. ಸುಷ್ಮಾ ನಿರ್ದೇಶಿಸಿದ್ದಾರೆ. ಶೈಲೇಶ್‌ಕುಮಾರ್‌ ರಚನೆ ಮತ್ತು ನಿರ್ದೇಶನದ ‘ಸಲಿಲ’ ನಾಟಕ ಜೀವಜಲದ ಕುರಿತಾದುದು. ನೀರನ್ನು ಪುರಾತನ ಕಾಲದಿಂದಲೂ ಜೀವಜಲ, ಜೀವರಸ ಎಂದು ಕರೆಯುತ್ತಾ ಬಂದಿರುತ್ತೇವೆಯಾದರೂ, ನೀರನ್ನು ಅಲಕ್ಷಿಸಿರುವುದೇ ಹೆಚ್ಚು. ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿಯೇ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಇನ್ನಾದರೂ ನೀರನ್ನು ಸಂರಕ್ಷಿಸೋಣ, ಗೌರವಿಸೋಣ ಎಂಬುದು ಈ ನಾಟಕದ ಆಶಯ’ ಎನ್ನುತ್ತಾರೆ.
 
ಬುದ್ಧಿ–ಭಾವಗಳ ತಾಕಲಾಟ, ನಂಬಿಕೆ–ಅಪನಂಬಿಕೆಗಳ ನಡುವಿನ ಸಣ್ಣಗೆರೆ, ಮುಗ್ಧತೆ ಮತ್ತು ತಿಳಿವಳಿಕೆಯ ನಡುವಿನ ಹಾದಿ ಕುರಿತ ನಾಟಕ ‘ಸ್ವಪ್ನ ದ್ವೀಪ’. ಭರತ್‌ ಅವರು ಈ ನಾಟಕವನ್ನು ರಚಿಸಿದ್ದು, ಕಶ್ಯಪ್‌ ಅವರು ನಿರ್ದೇಶಿಸಿದ್ದಾರೆ. ಮಕ್ಕಳು ತಪ್ಪದೇ ನೋಡಬೇಕಾದ ನಾಟಕಗಳಿವು ಎನ್ನುತ್ತಾರೆ ಶೋಭಾ.
 
ಇದೇ ಸಂದರ್ಭದಲ್ಲಿ ಮಕ್ಕಳೇ ಬರೆದ ಹತ್ತು ನಾಟಕಗಳು ಮತ್ತು ‘ಚಿತ್ರ ಕಥನ’ ಕಾರ್ಯಕ್ರಮ  ಕುರಿತ ವಿವರಗಳನ್ನು ಒಳಗೊಂಡ ‘ಪದ ಚಿತ್ತಾರ’ ಪುಸ್ತಕ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT