ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಕ್‌–ಕ್ಯಾಂಡಿಯನ್‌ ಜುಗಲ್‌ಬಂದಿ ‘ಕಥಾಕಾರ’

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ನೃತ್ಯದ ಸೊಬಗೇ ಅಂಥದ್ದು. ಅದಕ್ಕೆ ದೇಶ–ಭಾಷೆಯ ಹಂಗಿಲ್ಲ. ಕಾಲದ ಮಿತಿಯೂ ಇಲ್ಲ. ಎಲ್ಲಾಕಡೆ, ಯಾವುದೇ ಕಾಲದಲ್ಲಿ ಸಲ್ಲುವ ಮತ್ತು ಗೆಲ್ಲುವ ಶಕ್ತಿ ನೃತ್ಯ ಪ್ರಕಾರಕ್ಕಿದೆ. ದೂರದ ಶ್ರೀಲಂಕಾದ ವಿಶಿಷ್ಟ ನೃತ್ಯ ಪ್ರಕಾರವಾದ ‘ಕ್ಯಾಂಡಿಯನ್‌’   ಜೊತೆಗೆ ನಮ್ಮ ಕಥಕ್‌ ನೃತ್ಯವನ್ನೂ ಸೇರಿಸಿದರೆ ಅದರ ಮೋಡಿ ಹೇಗಿರಬಹುದು ಎನ್ನುವುದನ್ನು ಬೆಂಗಳೂರಿನ ಕಲಾಪ್ರಿಯರಿಗೆ ತೋರಿಸಲು ಮುಂದಾಗಿದೆ ‘ಕಥಾಕಾರ’ ಸಂಸ್ಥೆ. ಎಡಿಎ ರಂಗಮಂದಿರದಲ್ಲಿ ಜ. 22ರ ಭಾನುವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ.
 
‘ನಟರಾಜ–ಶಕುಂತಲಾ ಅತ್ಯುತ್ತಮ ನೃತ್ಯ ಜೋಡಿ’ ಪ್ರಶಸ್ತಿಗೆ ಭಾಜನರಾದ ಪೂಜಾ ಭಟ್‌ ಮತ್ತು ತುಷಾರ್‌ ಭಟ್‌ ದಂಪತಿಯ ಕನಸಿನ ಕೂಸು ‘ಕಥಾಕಾರ’. ಬೆಂಗಳೂರಿನ ಯುವ ಕಲಾವಿದರಿಗೆ ಕಥಕ್‌ ತರಬೇತಿ ನೀಡುವ ಜೊತೆಗೆ ಅವರಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಈ ಜೋಡಿ ಕಥಾಕಾರ ಸಂಸ್ಥೆಯನ್ನು ಹುಟ್ಟುಹಾಕಿದೆ.  ಬೇರೆ ಬೇರೆ ದೇಶಗಳ ಕಲಾವಿದರಿಗೆ ವೇದಿಕೆ ಒದಗಿಸುವ ಕಥಾಕಾರ ಕಾರ್ಯಕ್ರಮವನ್ನು ಈಗ ಎರಡನೇ ಬಾರಿಗೆ ಅವರು ಹಮ್ಮಿಕೊಂಡಿದ್ದಾರೆ.
 
ಶ್ರೀಲಂಕಾದ ‘ಕ್ಯಾಂಡಿಯನ್‌’  ನೃತ್ಯದ ಜೊತೆಗೆ ಕಥಕ್‌ ನೃತ್ಯವನ್ನು ಬೆರೆಸಿ ನೋಡಬೇಕು ಎನ್ನುವ ತವಕ ಈ ವರ್ಷದ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು.  
ಕಾರ್ಯಕ್ರಮದಲ್ಲಿ ಏನೇನಿದೆ?
 
ಖ್ಯಾತ ಯೋಗ ನಿರೂಪಕ ರುದ್ರಸ್ವಾಮಿ ಮತ್ತು ತಂಡದ ‘ಕಲಾತ್ಮಕ ಯೋಗ’ ನೃತ್ಯದೊಂದಿಗೆ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ.
 
‘ಯೋಗವೂ ನೃತ್ಯದ ಒಂದು ಭಾಗ ಹಾಗೂ ಇದು ಪ್ರತಿಯೊಬ್ಬ ಕಲಾವಿದನಿಗೆ ಅನಿವಾರ್ಯ ಎನ್ನುವ ಸಂಗತಿಯನ್ನು ಮನದಟ್ಟು ಮಾಡುವುದು ‘ಕಲಾತ್ಮಕ ಯೋಗ’ ನೃತ್ಯದ ಉದ್ದೇಶ’ ಎನ್ನುತ್ತಾರೆ ಕಥಾಕಾರದ ಸಂಯೋಜಕರಾದ ಪೂಜಾ ಮತ್ತು ತುಷಾರ್‌ ಭಟ್‌.
 
ಸಮಕಾಲೀನ ನೃತ್ಯಕ್ಕೂ ತನ್ನದೇ ಆದ ಗತಿ, ವೇಗ ಇದೆ. ಅದರ ಕಡೆಗಣನೆ ತರವಲ್ಲ ಎನ್ನುವ ಸಂದೇಶ ಸಾರಲು ವೇದಿಕೆಗೆ ಬರಲಿದೆ ಸಮಕಾಲೀನ ಯುವ ನೃತ್ಯಗಾರರ ತಂಡ. ‘ಮೀರಾ’ ರೂಪಕದ ಮೂಲಕ ಅವರು ಮಹಿಳಾ ಸಬಲೀಕರಣದ ಸಂದೇಶ ಸಾರಲಿದ್ದಾರೆ.
 
ನಂತರ ಕಥಾಕಾರ ಸಂಸ್ಥೆಯ ಪೂಜಾ–ತುಷಾರ್‌ ಜೋಡಿ ಹಾಗೂ ತಂಡ  ಶಿವತಾಂಡವ ನೃತ್ಯ ಮಾಡಲಿದೆ. ಜೊತೆಗೆ ಸೂಫಿ ಗೀತೆಗೆ ಕಥಕ್‌ ಶೈಲಿಯ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಈ ನೃತ್ಯ ಹಿಂದೂ ಹಾಗೂ ಮೊಘಲ್‌ ಸಂಸ್ಕೃತಿಯ ಸಾಮ್ಯತೆಗಳನ್ನು ಎತ್ತಿ ತೋರಲಿದೆ.
 
ಕೊನೆಯ ಆದರೆ ಅಷ್ಟೇ ಪ್ರಮುಖ ಘಟ್ಟ ಶ್ರೀಲಂಕಾದ ಮೋಕ್ಷ ಆರ್ಟ್‌ ಆಫ್‌ ಡಾನ್ಸ್‌ ಕಂಪೆನಿಯ ‘ಕ್ಯಾಂಡಿಯನ್‌’  ನೃತ್ಯ ಪ್ರದರ್ಶನ. ಶ್ರೀಲಂಕಾದ 14 ನೃತ್ಯಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
 
**
ಕಥಕ್‌,  ಯಾವುದೇ ಪ್ರಕಾರದ ಜೊತೆ ಸಮ್ಮಿಳಿತಗೊಂಡರೂ ತನ್ನ ಮೂಲ ಸ್ವರೂಪ ಕಳೆದುಕೊಳ್ಳದೇ ಹೊಸ ಗುಣವನ್ನು ಅಳವಡಿಸಿಕೊಳ್ಳಬಲ್ಲದು. ಕಥಕ್‌ನ ಈ ಸೊಬಗನ್ನು ಕಲಾವಿದರಿಗೂ–ಕಲಾಪ್ರಿಯರಿಗೂ ತೋರಿಸಿಕೊಡುವುದೇ ಕಥಾಕಾರದ ಗುರಿ.
–ತುಷಾರ್‌ ಭಟ್‌ 
ಕಥಾಕಾರ ಸಂಸ್ಥಾಪಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT