ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಥಿನ್ನಿಂಗ್‌’ ಹೆಸರಿನಲ್ಲಿ ಮರಗಳ ಹನನ ಸಲ್ಲದು

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಬೀಟೆ, ಸಾಗುವಾನಿ, ಮತ್ತಿ ಸೇರಿದಂತೆ ಕಾಡು ಜಾತಿಯ ಮರಗಳನ್ನು ‘ಥಿನ್ನಿಂಗ್‌’ ಹೆಸರಿನಲ್ಲಿ ಕತ್ತರಿಸುವ ಕಾರ್ಯಕ್ರಮಕ್ಕೆ ಜನವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಡಿವಾಣ ಬಿದ್ದಿದೆ.

ರಾಜ್ಯದಲ್ಲಿ ಅರಣ್ಯದ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವಾಗ ಅರಣ್ಯ ನೀತಿಯ ಹೆಸರಿನಲ್ಲಿ ಮರಗಳ ಹನನವನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲಾಗದು.

ಬಾಳೆಹೊನ್ನೂರು– ಎನ್‌.ಆರ್‌.ಪುರ ಮುಖ್ಯ ರಸ್ತೆಯ ಮೀಸಲು ಅರಣ್ಯ, ಗಡಿಗೇಶ್ವರ ಚಿಕ್ಕಅಗ್ರಹಾರ ವಲಯ, ದೇವದಾನ ಮೀಸಲು ಅರಣ್ಯ, ಬಸವನಕೋಟೆ ಮೀಸಲು ಅರಣ್ಯದಿಂದ ಬೆಲೆಬಾಳುವ ಬಲಿತ ಮರಗಳನ್ನು ಕತ್ತರಿಸಿ ಎನ್‌.ಆರ್‌ ಪುರ ಡಿಪೊ ಮತ್ತು ಸಂಗಮೇಶ್ವರಪೇಟೆ ಡಿಪೊಗೆ ಸಾಗಿಸುವ ಕೆಲಸಕ್ಕೆ ಇಲಾಖೆಯಿಂದಲೇ ತಡೆಬಿದ್ದಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಎದ್ದಿದ್ದ ಪ್ರತಿಭಟನೆಗೆ ಅರಣ್ಯ ಇಲಾಖೆ ಮಣಿದಿದೆ ಎನ್ನಬಹುದು. ಇದೇ ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಮರ ಕಡಿತದ ಕಾರಣ ನೀಡಿ, ಮರ ಕಡಿಯದೆ, ಸಾಗಣೆ ಮಾಡದೆ ನಕಲಿ ಬಿಲ್‌ ಸೃಷ್ಟಿಸಲಾಗಿತ್ತು. ಡಿಪೊಗಳಲ್ಲಿ ಮರದ ಲೆಕ್ಕವೂ ಇರದೆ ಕೆಲ ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದರು. ಆದರೂ ಈಗ ಮತ್ತೆ ಮರ ಕತ್ತರಿಸುವ ಚಾಳಿ ಮುಂದುವರಿದಿರುವುದು ವಿಪರ್ಯಾಸವೇ ಸರಿ.

ಅರಣ್ಯ ಇಲಾಖೆ ಪ್ರತಿ ವಿಭಾಗಕ್ಕೂ ಪ್ರತ್ಯೇಕವಾದ ಕಾರ್ಯಯೋಜನಾ ವರದಿಯನ್ನು ಸಿದ್ಧಪಡಿಸುತ್ತದೆ. ಇದರಲ್ಲಿ ಎಲ್ಲಾ ಬಗೆಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ಅಂಶಗಳನ್ನು ಉಲ್ಲೇಖಿಸಲಾಗುತ್ತದೆ. ಅದರಲ್ಲಿದ್ದ ‘ಥಿನ್ನಿಂಗ್‌’ ಅಂಶವನ್ನೇ ತೆಗೆದುಕೊಂಡು, ಬೆಲೆ ಬಾಳುವ ಮರಗಳನ್ನು ಕತ್ತರಿಸುವುದು ಸಂರಕ್ಷಣೆಯ ದೃಷ್ಟಿಯಿಂದ ಅಪರಾಧ.

ರಾಜ್ಯದಲ್ಲಿ ಒಟ್ಟು ಭೂವಿಸ್ತೀರ್ಣದ ಶೇ 22.61ರಷ್ಟು ಅರಣ್ಯವಿದೆ. ಇದರಲ್ಲಿ ಎಲ್ಲಾ ಬಗೆಯ ಅರಣ್ಯವೂ ಸೇರುತ್ತದೆ. ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಶೇ 0.39 ರಷ್ಟು ಕಡಿಮೆಯಿದೆ. ರಾಷ್ಟ್ರೀಯ ಅರಣ್ಯ ಸರಾಸರಿಯನ್ನೇ ಶೇ 33ರಷ್ಟು ಏರಿಸುವ ಉದ್ದೇಶದ ನೀತಿ ಕೇಂದ್ರ ಸರ್ಕಾರದಲ್ಲಿದೆ. ಈ ಗುರಿಯನ್ನು ಮುಟ್ಟಲು ರಾಜ್ಯ ಅರಣ್ಯ ಇಲಾಖೆ ಮತ್ತಷ್ಟು ಶ್ರಮಿಸಬೇಕು.

ಕಾಡಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೆ ಮೀಸಲು ಅರಣ್ಯದಲ್ಲಿ ಕೆಲ ಮರಗಳನ್ನು ಕಡಿಯುವುದನ್ನು ಒಪ್ಪಬಹುದು. ಆದರೆ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಒಂದು ಕಡೆ ಅರಣ್ಯ ಒತ್ತುವರಿ ನಿರಂತರವಾಗಿ ಮನಸ್ಸಿಗೆ ಬಂದಂತೆ ನಡೆಯುತ್ತಿದೆ. ಪ್ರಭಾವಿ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗದ ಸ್ಥಿತಿ ಅರಣ್ಯ ಇಲಾಖೆಯಲ್ಲಿದೆ. ಮತ್ತೊಂದು ಕಡೆ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ.

ಮಗದೊಂದು ಕಡೆ ಜಾಗತಿಕ ತಾಪಮಾನ ಏರಿಕೆ ತಡೆಗೆ ಹಸಿರು ಹೊದಿಕೆ ಹೆಚ್ಚಾಗಬೇಕು. ದೊಡ್ಡಮರವನ್ನು ಕಡಿದು ಪಕ್ಕದಲ್ಲಿರುವ ಸಣ್ಣ ಮರಕ್ಕೆ ಬೆಳೆಯಲು ಅವಕಾಶ ನೀಡಿದರೂ ಹಸಿರು ಹೊದಿಕೆ ಕಡಿಮೆಯಾಗುತ್ತದೆ.ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದನ್ನು ಮನಗಾಣಬೇಕು.

ಇಂತಹ ಸ್ಥಿತಿಯಲ್ಲಿ ,ಮೀಸಲು ಅರಣ್ಯದಲ್ಲಿ ಬೆಳೆದ ಮರ ಕಡಿಯುವ ಕಾರ್ಯಕ್ರಮವೇ ಅನಗತ್ಯ. ಇದನ್ನು ಇಲಾಖೆಯ ಕಾರ್ಯಯೋಜನೆಯಿಂದಲೇ ತೆಗೆದುಹಾಕಬೇಕು. ರಾಜ್ಯದ ಯಾವುದೇ ಬಗೆಯ ಅರಣ್ಯದಿಂದ ಸಣ್ಣ ಕಡ್ಡಿಯನ್ನು ಸಹ ಕತ್ತರಿಸದಂತಹ ಕಾನೂನು ಜಾರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT