ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯದ ಧಾನ್ಯ ಮಂಜೂರಾತಿಗೆ ಮನವಿ

ಅಡುಗೆ ಅನಿಲ ಸಂಪರ್ಕಕ್ಕೆ ರಾಜ್ಯದ ಆಗ್ರಹ
Last Updated 20 ಜನವರಿ 2017, 19:34 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದಲ್ಲಿ ಇತ್ತೀಚೆಗೆ ವೈಜ್ಞಾನಿಕ ಸಮೀಕ್ಷೆ ನಡೆಸುವ ಮೂಲಕ ಒಟ್ಟು 8 ಲಕ್ಷ ಅಕ್ರಮ ಬಿಪಿಎಲ್‌ ಪಡಿತರ ಚೀಟಿ ರದ್ದುಪಡಿಸಿದ್ದರಿಂದ ಮಾಸಿಕ ಉಳಿತಾಯವಾಗುತ್ತಿರುವ 40 ಲಕ್ಷ ಟನ್‌ ಆಹಾರಧಾನ್ಯವನ್ನು ರಾಜ್ಯ ಸರ್ಕಾರಕ್ಕೇ ಒದಗಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಯು.ಟಿ. ಖಾದರ್‌, ಉಳಿತಾಯವ ಆಗುತ್ತಿರುವ ಆಹಾರ ಧಾನ್ಯವನ್ನು ರಾಜ್ಯ ಸರ್ಕಾರಕ್ಕೆ ಮಂಜೂರು ಮಾಡಿದಲ್ಲಿ ಬಡವರಿಗೆ ವಿತರಣೆ ಮಾಡುತ್ತರುವ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ ಎಂದರು.

‘ಉಜ್ವಲ್‌’ ಯೋಜನೆ ಅಡಿ ಅಡುಗೆ ಅನಿಲ ಒದಗಿಸುತ್ತಿರುವ ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯದ 4 ಲಕ್ಷ ಅರ್ಜಿದಾರ ಕುಟುಂಬಗಳಿಗೆ ರೆಗ್ಯುಲೇಟರ್‌, ಪೈಪ್‌ ಒದಗಿಸಿದಲ್ಲಿ, ರಾಜ್ಯ ಸರ್ಕಾರ ಉಚಿತ ಸ್ಟೌ ಒದಗಿಸಲಿದೆ. ಈ ಕುರಿತೂ ಕೇಂದ್ರದ ಪೆಟ್ರೋಲಿಯಂ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸೀಮೆ ಎಣ್ಣೆ ಪೂರೈಕೆಯಲ್ಲಿ ಸಾಕಷ್ಟು  ಕಡಿತ ಉಂಟುಮಾಡಿದೆ. ಇದರಿಂದ ವಿದ್ಯುತ್‌ ಸಂಪರ್ಕ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದ ಬಡಜನತೆ ಸಮಸ್ಯೆಗೆ ಸಿಲುಕಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ಶೀಘ್ರವೇ ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆ ಎಣ್ಣೆ ಮಾರಾಟ ಮಾಡುವ ವ್ಯವಸ್ಥೆ ಆರಂಭಿಸುವಂತೆ ರಾಜ್ಯ ಸರ್ಕಾರ ಕೋರಿದೆ ಎಂದು ಅವರು ವಿವರಿಸಿದರು.

ಬೇಳೆ ಕಾಳು ವಿತರಣೆ: ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರ ಉಚಿತ ಅಕ್ಕಿ, ಕಡಿಮೆ ದರದ ಅಡುಗೆ ಎಣ್ಣೆ, ಉಪ್ಪು, ಗೋಧಿ, ಸಕ್ಕರೆ ವಿತರಿಸುತ್ತಿದೆ. ಮುಂದಿನ ದಿನಗಳಲ್ಲಿ ಪೌಷ್ಟಿಕಾಂಶ ಇರುವ ತೊಗರಿ ಬೇಳೆ, ವಠಾಣಿ, ಹೆಸರು ಮತ್ತಿತರ ಬೇಳೆ ಕಾಳು ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಅನೇಕ ಜನರು ಪಡಿತರ ವ್ಯವಸ್ಥೆ ಅಡಿ ನೀಡಲಾಗುತ್ತಿರುವ ತಾಳೆ ಎಣ್ಣೆಯನ್ನು ಅಡುಗೆಗೆ ಬಳಕೆ ಮಾಡದೆ, ಅದನ್ನು ದೇವರ ಮುಂದೆ ದೀಪ ಹಚ್ಚುವುದಕ್ಕೆ ಬಳಸುತ್ತಿದ್ದಾರೆ.ಅಂಥವರಿಗೆ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ದರ ನೀಡಿ ಪಡೆಯಬಹುದಾಗಿದೆ ಎಂದು ಖಾದರ್‌ ತಿಳಿಸಿದರು.

ಸಮಸ್ಯೆ ನಿವಾರಣೆಗೆ ಕ್ರಮ: ರಾಜ್ಯದಲ್ಲಿ ಒಟ್ಟು 1.10 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದು, ಪಡಿತರ ಪಡೆಯಲು ಜನರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

ನೂತನವಾಗಿ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಕೂಪನ್‌ ಪಡೆಯುವ ಮೂಲಕ ರಾಜ್ಯದ ಯಾವುದೇ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯ ಪಡೆಯಬಹುದಾಗಿದೆ. ಇದರಿಂದಾಗಿ, ಆಯಾ ನ್ಯಾಯ ಬೆಲೆ ಅಂಗಡಿಯವರು ನೀಡುತ್ತಿದ್ದ ಕಿರುಕುಳ ತಪ್ಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 25 ಲಕ್ಷ ಎಪಿಎಲ್‌ ಕುಟುಂಬಗಳಿವೆ. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ಗಳ ವಿತರಣೆಯನ್ನು ‘ಸಕಾಲ’ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಆನ್‌ಲೈನ್‌ ಮೂಲಕವೇ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೂಲಕ 15 ದಿನಗಳಲ್ಲಿ ಪಡೆಯುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT