ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.19ರಿಂದ ಹಗಲಿನಲ್ಲಿ ವಿಮಾನ ಹಾರಾಟ ಬಂದ್‌

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಮಗಾರಿ
Last Updated 20 ಜನವರಿ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೇಲ್ದರ್ಜೆಗೇರಿಸುವ  ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅದರಿಂದಾಗಿ ಫೆ. 19ರಿಂದ ಏ. 30ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿಮಾನ ಹಾರಾಟ ಬಂದ್‌ ಆಗಲಿದೆ.

ಈ ಅವಧಿಯಲ್ಲಿ ಸಂಚರಿಸುವ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳು, ಸಂಜೆ 5 ಗಂಟೆಯಿಂದ ಬೆಳಿಗ್ಗೆ 10.30ರೊಳಗಿನ ಅವಧಿಯಲ್ಲಿ ಪ್ರಯಾಣಿಸಲಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ  ವಿಮಾನ ನಿಲ್ದಾಣ ಇದಾಗಿದ್ದು, ಈಗ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ ಆಗುವ ಒಂದನೇ ರನ್‌ವೇ ಸ್ಥಳದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಏಪ್ರಿಲ್‌ ಕೊನೆಯ ವಾರದಲ್ಲೇ ಕಾಮಗಾರಿ ಮುಗಿಯಲಿದ್ದು, ಬಳಿಕ ರನ್‌ವೇ ಸೇವೆಗೆ ಮುಕ್ತಗೊಳಿಸಲಾಗುವುದು’

‘ನಾಗರಿಕ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿತ್ತು.  ಅದರನ್ವಯ ಕೆಂಪೇಗೌಡ ವಿಮಾನ ನಿಲ್ದಾಣದ ರನ್‌ವೇ ಸುಧಾರಣೆಗೆ ಶಿಫಾರಸು ಮಾಡಿತ್ತು. ಅದರ ಆಧಾರದಲ್ಲೇ ಒಂದನೇ ರನ್‌ವೇಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸದ್ಯದ ರನ್‌ವೇನಲ್ಲಿ   ಪ್ರತಿ ಗಂಟೆಗೆ 38 ವಿಮಾನಗಳ ಹಾರಾಟವಿತ್ತು.   ಅದನ್ನು ಮೇಲ್ದರ್ಜೆಗೇರಿಸಿದರೆ  ಅದರ ಪ್ರಮಾಣ ಪ್ರತಿ ಗಂಟೆಗೆ 48 ಆಗಲಿದೆ. ಆಗ ಮತ್ತಷ್ಟು ವಿಮಾನಗಳ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ಗೆ ಅನುಕೂಲವಾಗಲಿದೆ’ ಎಂದು ವಿವರಿಸಿದ್ದಾರೆ.

‘ಎರಡನೇ ರನ್‌ವೇ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಮೊದಲನೇ ಹಾಗೂ ಎರಡನೇ ರನ್‌ವೇಗಳಿಗೆ ಸಂಪರ್ಕ ಕಲ್ಪಿಸಲು ಟ್ಯಾಕ್ಸಿ ಮಾರ್ಗಗಳನ್ನು ಸಹ ನಿರ್ಮಿಸಲಾಗುತ್ತಿದೆ.   ಜತೆಗೆ ಎರಡನೇ ರನ್‌ವೇಯು 2019ರ ನವೆಂಬರ್‌ನಲ್ಲಿ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಫೆ. 19ರಿಂದ ಏ. 30ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಅನ್ವಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT