ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದಲ್ಲಿ ಅಂತ್ಯವಾದ ಎಡ–ಬಲ ಚರ್ಚೆ

ಧಾರವಾಡ ಸಾಹಿತ್ಯ ಸಂಭ್ರಮ
Last Updated 20 ಜನವರಿ 2017, 20:14 IST
ಅಕ್ಷರ ಗಾತ್ರ

ಧಾರವಾಡ: ಸಾಹಿತ್ಯ ಸಂಭ್ರಮದಲ್ಲಿ ಶುಕ್ರವಾರ ಸಂಜೆ ನಡೆದ ‘ಎಡ ಬಲಗಳ ನಡುವೆ?’ ಕುರಿತ ಗೋಷ್ಠಿ ವಿಷಯಾಂತರವಾಗಿ ಗದ್ದಲ, ಗಲಾಟೆ ನಡೆಯಿತು.

ಎಸ್‌ಬಿಎಂ ನಿವೃತ್ತ ವ್ಯವಸ್ಥಾಪಕ ಮತ್ತು ಅರುಣ್ ಶೌರಿ ಸಾಹಿತ್ಯ ಮಾಲೆ ಗೌರವ ಸಂಪಾದಕ ಮಂಜುನಾಥ ಅಜ್ಜಂಪುರ ಅವರು, ಎಡಪಂಥೀಯ ವಾದಿಗಳು ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶ ತೊರೆದಿರುವ ಲೇಖಕರಾದ ಸಲ್ಮಾನ್ ರಶ್ದಿ ಮತ್ತು ತಸ್ಲಿಮಾ ನಸ್ರೀನ್ ಅವರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಈ ಮಾತಿನಿಂದ ಕೆರಳಿದ ಕೆಲ ಸಭಿಕರು, ‘ಅಜ್ಜಂಪುರ ಅವರು ಕ್ಷಮಾಪಣೆ ಕೇಳಿ ವೇದಿಕೆಯಿಂದ ಕೆಳಗೆ ಇಳಿಯಬೇಕು’ ಎಂದು ಆಗ್ರಹಿಸಿದರು. ರಶ್ದಿ ಮತ್ತು ತಸ್ಲಿಮಾ ಅವರದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸಂಬಂಧಿಸಿದ ವಿಷಯ ಎಂದು ಕೆಲ ಸಭಿಕರು ಜೋರಾದ ದನಿಯಲ್ಲಿ ಕೂಗಿದರು. ಆಗ ಮಂಜುನಾಥ ಅವರು, ‘ಆಸ್ತಿಯ ಜಗಳಕ್ಕೆ ರಶ್ದಿ ದೇಶ ತೊರೆದಿದ್ದಾರೆ ಎಂದು ಸರ್ಕಾರದ ತನಿಖಾ ಸಂಸ್ಥೆ ವರದಿ ಹೇಳಿದೆ’ ಎಂದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕೆಲ ಸಭಿಕರು ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇದೆ. ನೀವೇ ಹೇಗೆ ತೀರ್ಮಾನ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಕೆಲವರು ವೇದಿಕೆ ಮುಂಭಾಗ ಬಂದು ಮಂಜುನಾಥ ಅವರಿಗೆ ಈ ಗೋಷ್ಠಿಯಲ್ಲಿ ಮಾತನಾಡುವ ನೈತಿಕ ಹಕ್ಕು ಇಲ್ಲ. ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿದರು. ಆಗ ಪೋಲೀಸರು ಬಂದು ಸಭಿಕರನ್ನು ಸಮಾಧಾನಪಡಿಸಿ ಕೂರಿಸುವ ಪ್ರಯತ್ನ ಮಾಡಿದರು.

ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಗೋಷ್ಠಿಯಲ್ಲಿ ಮಾತನಾಡುವುದು ಬೇಡ. ಹಾಗಾಗಿ ಮಂಜುನಾಥ ಅಜ್ಜಂಪುರ ಅವರು ತಮ್ಮ ಮಾತುಗಳನ್ನು ವಾಪಸ್ ಪಡೆಯಬೇಕು ಎಂದು ಕಾರ್ಯಕ್ರಮ ಆಯೋಜಕರು ಒತ್ತಾಯಿಸಿದರು.

ವೇದಿಕೆ ಕೆಳಗೆ ಇದ್ದ ಕೆಲವರಿಂದಲೂ ಇದೇ ಅಭಿಪ್ರಾಯ ಕೇಳಿಬಂತು. ಒತ್ತಡ ಹೆಚ್ಚಾದಾಗ ಅಜ್ಜಂಪುರ ಅವರು ‘ನನ್ನ ಮಾತುಗಳನ್ನು ವಾಪಸ್ ಪಡೆದಿದ್ದೇನೆ’ ಎಂದು ವೇದಿಕೆ ಮೇಲೆ ಹೇಳಿದಾಗ ಗದ್ದಲ ತಣ್ಣಗಾಯಿತು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ರಾಜಾರಾಮ ತೋಳ್ಪಾಡಿ, ಎಡ ಮತ್ತು ಬಲ ಎಂಬುದು ವಿಚಾರಗಳನ್ನು ವಿಶ್ಲೇಷಣಾತ್ಮಕವಾಗಿ ನೋಡುವ ಉಪಕರಣಗಳು ಅಷ್ಟೆ. ಆದರೆ, ಈ ಉಪಕರಣಗಳನ್ನು ಬಳಸುವವರಿಗೆ ತಾವು ಬಳಸುವ ಆಯುಧದ ಹಿನ್ನೆಲೆ ಗೊತ್ತಿರಬೇಕು’  ಎಂದು ಹೇಳಿದರು.

ಲೇಖಕ ಕೆ.ಸತ್ಯನಾರಾಯಣ, ‘ಮೀಸಲಾತಿಯ ಪರ ಇದ್ದರೆ ಅವರನ್ನು ಎಡಪಂಥೀಯ ಎನ್ನಲಾಗುತ್ತದೆ. ಆದರೆ ಅವರೇ ಒಳಮೀಸಲಾತಿ ವಿರೋಧಿಸಿದರೆ ಏನನ್ನಬೇಕು? ಎಡ ಬಲಗಳ ನಡುವೆ ಮಧ್ಯಮವೂ ಇದೆ ಎಂದರು.

ಗೋಷ್ಠಿಯ ನಿರ್ದೇಶನ ಮಾಡಿದ ಕತೆಗಾರ ರಾಘವೇಂದ್ರ ಪಾಟೀಲ, ಎಡಪಂಥೀಯರಲ್ಲಿ ಅತಿರೇಕದ ಸ್ಟಾಲಿನ್ ಇದ್ದರೆ, ಬಲಪಂಥೀಯರಲ್ಲಿ ಅತಿರೇಕದ ಹಿಟ್ಲರ್ ಮತ್ತು ಗಾಂಧಿಯನ್ನು ಕೊಂದ ಗೋಡ್ಸೆ ಇದ್ದಾನೆ. ಆದರೆ, ಇವೆರಡರ ನಡುವೆ ಮಧ್ಯಮ ಎಂಬುದೂ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT