ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ: ಶೇ 60 ರಷ್ಟು ಮಂದಿಗೆ ಆಸ್ತಮಾ

‘ಶಾಲೆಗಳಿಗೆ ಸುಸ್ಥಿರ ಶಿಕ್ಷಣ’ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ನಿರಂಜನಾರಾಧ್ಯ ಆತಂಕ
Last Updated 21 ಜನವರಿ 2017, 4:54 IST
ಅಕ್ಷರ ಗಾತ್ರ

ತುಮಕೂರು: ‘ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗದಿದ್ದರೆ ಕೆಲವೇ ವರ್ಷಗಳಲ್ಲಿ ಶೇ 60ರಷ್ಟು ನಾಗರಿಕರು ಆಸ್ತಮಾ ರೋಗಕ್ಕೆ ತುತ್ತಾಗುವರು’ ಎಂದು ಟ್ಯಾಕಲ್ ಸಂಸ್ಥೆ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನಾರಾಧ್ಯ ಆತಂಕ ವ್ಯಕ್ತಪಡಿಸಿದರು. 

ನಗರದಲ್ಲಿ ಶುಕ್ರವಾರ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ, ವಿಪ್ರೊ ಅರ್ಥಿಯನ್ ಹಾಗೂ ಟ್ಯಾಕಲ್ ಸಂಸ್ಥೆ ಸಹಯೋಗದಲ್ಲಿ ನಡೆದ ‘ಶಾಲೆಗಳಿಗೆ ಸುಸ್ಥಿರ ಶಿಕ್ಷಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನೈಸರ್ಗಿಕ ಸಂಪತ್ತನ್ನು ಕೆಲವೇ ವ್ಯಕ್ತಿಗಳು ಸ್ವಹಿತಾಸಕ್ತಿಗಾಗಿ ಹಾಳು ಮಾಡುತ್ತಿದ್ದಾರೆ. ಪರಿಸರ ನಾಶದಿಂದ ವಾತಾವರಣದಲ್ಲಿ ವೈಪರೀತ್ಯ ಕಂಡು ಬರುತ್ತಿದೆ. ಚಳಿ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ತಾಪಮಾನ ಅಧಿಕವಾಗುತ್ತಿದೆ. ತಾಪಮಾನ ಹೆಚ್ಚಳದಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ದೇಶದ ಹಲವು ನಗರಗಳು ಭವಿಷ್ಯದಲ್ಲಿ ಆಪತ್ತಿಗೆ ಒಳಗಾಗಲಿವೆ’ ಎಂದರು.

‘20 ವರ್ಷಗಳ ಹಿಂದೆ ಮಧುಗಿರಿ, ಪಾವಗಡ ತಾಲ್ಲೂಕಿನ ಕೆರೆ, ಹಳ್ಳಗಳು ನೀರಿನಿಂದ ತುಂಬಿದ್ದವು. ಇಂದು 1500 ಅಡಿ ಆಳದವರೆಗೆ ಕೊಳವೆ ಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ವಾಯು ಮಾಲಿನ್ಯ ಪಟ್ಟಿಯಲ್ಲಿ ತುಮಕೂರು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಇಂಥ ಪರಿಸ್ಥಿತಿ ಮುಂದುವರಿದರೆ ನಗರಕ್ಕೆ ಶುದ್ಧ ಆಮ್ಲಜನಕದ ಬ್ಯಾಂಕ್‌ಗಳು ಕೆಲವೇ ವರ್ಷದಲ್ಲಿ ಬರಬಹುದು’ ಎಂದು ವ್ಯಂಗ್ಯವಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಮಂಜುನಾಥ್, ‘ಪರಿಸರದ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ನಿವೃತ್ತ ಶಿಕ್ಷಕ ನೀಲಕಂಠಯ್ಯ ಮಾತನಾಡಿದರು. ಮಧುಗಿರಿ ಡಯಟ್‌ ಉಪನ್ಯಾಸಕ ಸೋಮಶೇಖರ್, ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ ಕಾರ್ಯದರ್ಶಿ ಎಸ್.ರವಿಕುಮಾರ್, ಟ್ಯಾಕಲ್ ಕಾರ್ಯದರ್ಶಿ ಎಸ್. ಕುಮಾರಸ್ವಾಮಿ, ವಿದ್ಯಾರ್ಥಿಗಳಾದ ವೈ.ಟಿ ರೂಪಾ, ಚಿರಾಗ್ ಜೈನ್, ಎನ್ ರೋಹನ್, ಆದಿತ್ ಇತರರು ಇದ್ದರು.

*
ಜಾಗತಿಕ ತಾಪಮಾನ ತಗ್ಗಿಸಲು ಪರಿಸರ ರಕ್ಷಣೆ ಮುಖ್ಯವಾಗಿದೆ. ಇಂಥ ಮಹತ್ವದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ.
ಡಾ.ಎಚ್.ಎಸ್.ನಿರಂಜನಾರಾಧ್ಯ, ಟ್ಯಾಕಲ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT