ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ಸಜ್ಜಾದ ರೈತರು

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
Last Updated 21 ಜನವರಿ 2017, 4:58 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮ ಹಾಗೂ ಜಯಮಂಗಲಿ ನದಿಪಾತ್ರದ ಸುತ್ತ ಮುತ್ತಲಿನ 900 ಎಕರೆ ಪ್ರದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸ ವಿಲೇವಾರಿ ಘಟಕ ಸ್ಥಾಪಿಸಲು ಅಧಿಕಾರಿಗಳು ಸ್ಥಳ ಪರಿಶೀಲಿಸಿರುವುದು ಸ್ಥಳೀಯ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಈಗಾಗಲೇ ರೈತ ಸಂಘಟನೆಗಳ ನೇತೃತ್ವದಲ್ಲಿ ಸ್ಥಳೀಯರು ಮತ್ತು 15 ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬಿಬಿಎಂಪಿ ಹಾಗೂ ತುಮಕೂರು ಕೆಐಎಡಿಬಿ ಅಧಿಕಾರಿಗಳು ಈಗಾಗಲೇ ಭೂಮಿ ಪರಿಶೀಲಿಸಿದ್ದಾರೆ.

ಭೂಮಿ ಪರಿಶೀಲನೆಯಲ್ಲಿ ತೊಡಗಿದ್ದ ದಿನದಿಂದಲೂ ರೈತರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಭಾಗದಲ್ಲಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. 

ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರು ಸಭೆ ಸಮಾರಂಭಗಳಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಬೆಂಗಳೂರಿನ ಕಸ ಸುರಿಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ಈ ನಡುವೆಯೇ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆಂಚೇಗೌಡ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಮಧುಗಿರಿ ಹಾಗೂ ಕೋಲಾರದಲ್ಲಿ ತಲಾ ಒಂದು ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಿದೆ ಎನ್ನುವ ಹೇಳಿಕೆ ರೈತರನ್ನು ಹೋರಾಟಕ್ಕೆ ಅಣಿಗೊಳಿಸಿದೆ.

ರೈತರ ಹೋರಾಟಕ್ಕೆ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಬೆಂಬಲಿಸಿವೆ. ಹೋರಾಟಗಳ ರೂಪುರೇಷೆಗಳ ಕುರಿತು ತಾಲ್ಲೂಕಿನಲ್ಲಿ
ಚರ್ಚೆಗಳು ನಡೆಯುತ್ತಿವೆ.

ಕಸ ವಿಲೇವಾರಿ ಘಟಕ :ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮದ ವ್ಯಾಪ್ತಿಯಲ್ಲಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ: ಗ್ರಾಮಸ್ಥರು

*
ಕೃಷ್ಣಮೃಗಗಳನ್ನು ರಕ್ಷಿಸುವುದು ಸರ್ಕಾರ ಹಾಗೂ ಜನರ ಕರ್ತವ್ಯ. ಆದರೆ ಸರ್ಕಾರವೇ ಕಸ ಸುರಿಯುವ ಮೂಲಕ ಇವುಗಳ ಸಂತತಿ ನಾಶ ಪಡಿಸಲು ಮುಂದಾಗಿರುವುದು ಆಘಾತ ತಂದಿದೆ. 
–ಜಿ.ಸಿ.ಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ, ರೈತ ಸಂಘ

*
ವನ್ಯಧಾಮ, ಜಯಮಂಗಲಿ ನದಿ ಹಾಗೂ ರೈತರ ಜಮೀನು ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸಲು ತಾಲ್ಲೂಕು ರೈತ ಸಂಘ ಮುಂದಾಗಿದೆ.
–ಶಿವಣ್ಣ, ತಾಲ್ಲೂಕು ಕಾರ್ಯದರ್ಶಿ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT