ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಮಾತಿ, ಕನಿಷ್ಠ ವೇತನಕ್ಕೆ ಆಗ್ರಹ

ಜಿಲ್ಲೆಯ ವಿವಿಧ ಕಡೆ ಅಕ್ಷರದಾಸೋಹ, ಗುತ್ತಿಗೆ ನೌಕರರಿಂದ ಪ್ರತಿಭಟನೆ
Last Updated 21 ಜನವರಿ 2017, 5:01 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಿ ಅವರ ಸೇವೆ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಸಿಐಟಿಯು ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಪ್ರವಾಸಿ ಮಂದಿರದಿಂದ ತಾಲ್ಲೂಕು ಪಂಚಾಯಿತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಧಿಕಾರಿಗಳು ಗುತ್ತಿಗೆ ನೌಕರರಿಗೆ ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನ ನೀಡದೆ ಶೋಷಿಸುತ್ತಿದ್ದಾರೆ. ಅಲ್ಲದೇ, ಸರ್ಕಾರಿ ಸವಲತ್ತುಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಅಧಿಕಾರಿಗಳು ಗುತ್ತಿಗೆ ನೌಕರರಿಗೆ ಸಕಾಲಕ್ಕೆ ವೇತನ ಕೊಡುತ್ತಿಲ್ಲ. ಜಿಲ್ಲೆಯ ಹಲವೆಡೆ ಏಳೆಂಟು ತಿಂಗಳಿಂದ ನೌಕರರ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ನೌಕರರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ. ವೇತನವಿಲ್ಲದ ಕಾರಣ ನೌಕರರು ಬಡ್ಡಿ ಸಾಲ ಮಾಡಿ ಬದುಕು ಸಾಗಿಸುತ್ತಿದ್ದಾರೆ’ ಎಂದು ಹೇಳಿದರು.

ಅಧಿಕಾರಿಗಳು ಜನಪ್ರತಿನಿಧಿಗಳ ಜತೆ ಸೇರಿ ನೌಕರರ ವೇತನ ಹಾಗೂ ಸವಲತುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ನೌಕರರು ಸೇವೆ ಕಾಯಂಗೊಳಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಅವರಿಗೆ ಸೇವಾ ಭದ್ರತೆ ಇಲ್ಲವಾಗಿದೆ ಎಂದು ತಿಳಿಸಿದರು.

ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿ ಕನಿಷ್ಠ ಕೂಲಿ ಕಾಯ್ದೆ ವ್ಯಾಪ್ತಿಗೆ ತರಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಬೇಕು. ಸಣ್ಣ ಪುಟ್ಟ ದೋಷಗಳಿಗೆ ಕೆಲಸದಿಂದ ಅವರನ್ನು ವಜಾಗೊಳಿಸಬಾರದು. ಭಾರತೀಯ ಕಾರ್ಮಿಕ ಸಮ್ಮೇಳನದ (ಐಎಲ್‌ಸಿ) ಶಿಫಾರಸಿನಂತೆ ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ದುಡಿಯುವವರನ್ನು ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಮಗ್ರ ಶಿಶು ಅಭಿವೃದ್ದಿ ಯೋಜನೆ, ಅಕ್ಷರ ದಾಸೋಹ ಯೋಜನೆ, ಆಶಾ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತಿತರ ಯೋಜನೆಗಳನ್ನು ಬಲಪಡಿಸಬೇಕು. ಈ ಯೋಜನೆಗಳಿಗೆ ಕಡಿತವಾಗಿರುವ ₹ 3 ಲಕ್ಷ ಕೋಟಿ ಅನುದಾನವನ್ನು ವಾಪಸ್‌ ನೀಡಬೇಕು. ಗ್ರಾಮೀಣ ಭಾಗದಲ್ಲಿ ಜಲಗಾರರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ಸೇವೆ ಕಾಯಂಗೊಳಿಸಬೇಕು ಎಂದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷರಾದ ಮುನಿರಾಜಮ್ಮ, ರಾಜಮ್ಮ, ಕಾರ್ಯದರ್ಶಿ ಎಂ.ವಿಜಯಕೃಷ್ಣ, ಸದಸ್ಯರಾದ ಎಂ.ಭೀಮರಾಜ್, ಮಂಜುಳಾ, ಸರೋಜಮ್ಮ, ಅಶ್ವತ್ಥಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನಿಷ್ಠ ವೇತನಕ್ಕೆ  ಆಗ್ರಹ
ಮಾಲೂರು:
ಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಕನಿಷ್ಠ ವೇತನ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಎದರು ಶುಕ್ರವಾರ ಧರಣಿ ನಡೆಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಿ.ಎಸ್ .ನಾಗರತ್ನಮ್ಮ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ‘ಮಹಿಳೆಯರ ಹಾಗೂ ಮಕ್ಕಳ  ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ , ಪೌಷ್ಟಿಕ ಆಹಾರ ಸೇರಿದಂತೆ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಸ್ವಾತಂತ್ರ್ಯ ನಂತರ ಕೇಂದ್ರ ಸರ್ಕಾರಗಳು ಜಾರಿಗೆ ತಂದಿವೆ. ಆದರೆ, ಅದೇ ಗ್ರಾಮೀಣ ಭಾಗದ ಮಹಿಳೆಯರನ್ನು ಕೇವಲ ₹ 600 ರಿಂದ ₹ 3 ಸಾವಿರ ಅತಿ ಕಡಿಮೆ ಸಂಭಾವನೆ ಕೊಟ್ಟು ದುಡಿಸಿ ಕೊಳ್ಳಲಾಗುತ್ತಿದೆ’ ಎಂದು ದೂರಿದರು.

ತಾಲುಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಪಿ.ಸಂಜೀವಪ್ಪ ಅವರಿಗೆ ಮನವಿ ಪತ್ರ  ಸಲ್ಲಿಸಿದರು.  ಸಿಐಟಿಯು ಮಹಿಳಾ ಘಟಕದ ಶಿವಾನಂದಾ , ದೇವಾರಾಜ್, ಸವಿತಾ, ಜಯಮ್ಮ, ಜಯಲಕ್ಷ್ಮಿ, ಶ್ರೀವಳ್ಳಿ, ನಾರಾಯಣಮ್ಮ, ಮುನಿಸ್ವಾಮಿ ಗೌಡ, ಸಿ.ಎಂ.ನಂಜುಂಡಪ ಭಾಗವಹಿಸಿದ್ದರು.

25 ಲಕ್ಷ ಮಕ್ಕಳಿಗೆ ಬಿಸಿಯೂಟ
ಬಂಗಾರಪೇಟೆ:
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

25ಲಕ್ಷ ಶಾಲಾ ಮಕ್ಕಳಿಗೆ ನಿತ್ಯ ಬಿಸಿಯೂಟ ಉಣ ಬಡಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಸರ್ಕಾರಗಳು ಕಡೆಗಣಿಸಿವೆ. ಕಳೆದ 7ವರ್ಷದಿಂದ ಸಂಭಾವನೆ ಹೆಚ್ಚಿಸದೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ  ಪ್ರತಿಭಟನಾಕಾರರು ದೂರಿದರು.

ಅಲ್ಲದೆ ಬಿಸಿಯೂಟ ಯೋಜನೆಯನ್ನು ಕೇಂದ್ರಿಕೃತ ಅಡುಗೆ, ಇಸ್ಕಾನ್, ಅದಮ್ಯ ಚೇತನ, ಸ್ವಸಹಾಯ ಗುಂಪುಗಳಿಗೆ ಒಪ್ಪಿಸುವ ಮೂಲಕ ಯೋಜನೆಯ ಪರಿಕಲ್ಪನೆಗೆ ಧಕ್ಕೆ ತರಲಾಗುತ್ತಿದೆ ಎಂದರು.

ಅಕ್ಷರ ದಾಸೋಹ ಯೋಜನೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ಶಶಿಕಲಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಲಲಿತಮ್ಮ, ಎಂ.ಎನ್.ರವೀಂದ್ರ, ಎಂ.ಜಯಲಕ್ಷ್ಮಿ, ಎಂ.ಶ್ರೀನಿವಾಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT