ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಧನ ಮೊತ್ತ ಕಡಿತ: ಪ್ರತಿಭಟನೆ

ತೋಟಗಾರಿಕೆ ಇಲಾಖೆ ಆದೇಶ ಹಿಂಪಡೆಯುವಂತೆ ಒತ್ತಾಯ
Last Updated 21 ಜನವರಿ 2017, 5:05 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕಕ್ಕೆ ಕೊಡುತ್ತಿದ್ದ ಸಹಾಯಧನದ ಮೊತ್ತವನ್ನು ಕಡಿಮೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿನ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.

ಜಿಲ್ಲೆಯಲ್ಲಿ 2015–16ನೇ ಹಣಕಾಸು ವರ್ಷದಲ್ಲಿ 155 ರೈತರು ಪಾಲಿಹೌಸ್ ಹಾಗೂ ನೆರಳು ಪರದೆ ಘಟಕಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ 67 ಫಲಾನುಭವಿಗಳಿಗೆ ಮಾತ್ರ ಸಹಾಯಧನ ನೀಡಲಾಗಿದೆ. ಉಳಿದ 88 ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆಯಾಗಿಲ್ಲ. ಈ ಮಧ್ಯೆ ಕೃಷಿ ಇಲಾಖೆಯು ಸಹಾಯಧನದ ಮೊತ್ತವನ್ನು ಏಕಾಏಕಿ ಕಡಿಮೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸಹಾಯಧನ ನಂಬಿ ರೈತರು ಬ್ಯಾಂಕ್‌ ಹಾಗೂ ಖಾಸಗಿ ಲೇವಾದೇವಿದಾರರ ಬಳಿ ಜಮೀನು ಮತ್ತು ಚಿನ್ನಾಭರಣ ಅಡವಿಟ್ಟು ಬಡ್ಡಿ ಸಾಲ ಪಡೆದು ಪಾಲಿಹೌಸ್‌, ನೆರಳು ಪರದೆ ಘಟಕಗಳನ್ನು ನಿರ್ಮಿಸಿದ್ದಾರೆ. ಆದರೆ, ವರ್ಷವಾದರೂ ಸರ್ಕಾರ ಸಹಾಯಧನ ಬಿಡುಗಡೆ ಮಾಡಿಲ್ಲ. ಇದರಿಂದ ಸಾಲದ ಬಡ್ಡಿ ಹಾಗೂ ಸಾಲದ ಕಂತು ಕಟ್ಟಲಾಗದೆ ಫಲಾನುಭವಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ಯೋಜನೆಯ ಫಲಾನುಭವಿಗಳು ಸಹಾಯಧನದ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಕೃಷಿ ಇಲಾಖೆಯು ಏಕಾಏಕಿ ಸಹಾಯಧನ ಕಡಿಮೆ ಮಾಡಿ ರೈತರಿಗೆ ಆಘಾತ ನೀಡಿದೆ. ಪರಿಷ್ಕೃತ ದರದ ಪ್ರಕಾರ ಪಾಲಿಹೌಸ್‌ಗೆ ₹ 4.16 ಲಕ್ಷ ಮತ್ತು ನೆರಳು ಪರದೆ ಘಟಕಕ್ಕೆ ₹ 13.04 ಲಕ್ಷ ಸಹಾಯಧನ ಕಡಿಮೆ ಆಗಲಿದೆ. ಈಗಾಗಲೇ ಸಾಲದ ಬಡ್ಡಿ ಹೊರೆಯಿಂದ ತೊಂದರೆ ಅನುಭವಿಸುತ್ತಿರುವ ರೈತರನ್ನು ಸರ್ಕಾರ ಸಹಾಯಧನ ಕಡಿಮೆ ಮಾಡುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ರೈತರು ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕಗಳ ನಿರ್ಮಾಣಕ್ಕೆ ಪಡೆದಿದ್ದ ಸಾಲವನ್ನು ಸಕಾಲಕ್ಕೆ ಕಟ್ಟದ ಕಾರಣ ಅವರ ಜಮೀನು ಹಾಗೂ ಆಭರಣಗಳು ಹರಾಜಾಗುವ ಆತಂಕ ಎದುರಾಗಿದೆ. ಸಾಲ ಕೊಟ್ಟಿದ್ದ ಬ್ಯಾಂಕ್‌ಗಳು ಹಾಗೂ ಲೇವಾದೇವಿ ಸಂಸ್ಥೆಗಳು ರೈತರಿಗೆ ನೋಟಿಸ್‌ ಜಾರಿ ಮಾಡಿವೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಸಹಾಯಧನ ಕಡಿಮೆ ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಹಾಯಧನ ಕಡಿಮೆ ಮಾಡಿರುವ ಆದೇಶವನ್ನು ಹಿಂಪಡೆದು ಹಳೆ ದರದಲ್ಲೇ ಸಹಾಯಧನ ಕೊಡಬೇಕು. ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೊಡಬೇಕಿರುವ ಸಹಾಯಧನದ ಬಾಕಿಯನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ನಾಲ್ಕು ವರ್ಷಕ್ಕೊಮ್ಮೆ ಸಹಾಯಧನ ಕೊಡಬೇಕು. ಸಹಾಯಧನ ದಲ್ಲಾಳಿಗಳ ಪಾಲಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಫಾರೂಕ್‌ ಪಾಷಾ, ರಾಮು ಶಿವಣ್ಣ, ರಂಜಿತ್‌ಕುಮಾರ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT