ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗಿಯರ ಮುಂದುವರಿದ ಚಿನ್ನದ ಬೇಟೆ!

ಅಮ್ಮನಿಗೆ ಪದಕ ಅರ್ಪಿಸಿದ ಪವಿತ್ರಾ, ವಿಜ್ಞಾನಿಯಾಗುವುದೇ ಕನಸೆಂದ ಝಹಾರಾ
Last Updated 21 ಜನವರಿ 2017, 5:21 IST
ಅಕ್ಷರ ಗಾತ್ರ

ದಾವಣಗೆರೆ: ‘ಅಪ್ಪ ಇಲ್ಲ, ಅಮ್ಮನೇ ಕೂಲಿ ಮಾಡಿ ಓದಿಸಿದ್ದು, ಅಮ್ಮನ ಋಣ ಈ ಜನ್ಮದಲ್ಲಿ ನಾನು ತೀರಿಸಲು ಸಾಧ್ಯವಿಲ್ಲ. ಈ ಚಿನ್ನದ ಪದಕ ಅಮ್ಮನಿಗೆ ಅರ್ಪಣೆ’ ಎಂದು ಚಿನ್ನದ ಪದಕ ಕೊರಳಿಗೇರಿಸಿಕೊಂಡ ಎಂ.ಎಸ್. ಪವಿತ್ರಾರಿಗೆ ಮಾತು ಕಟ್ಟಿಹೋಯಿತು. ಕೈಯಲ್ಲಿ ಪ್ರಮಾಣ ಪತ್ರ ಹಿಡಿದು ಕಣ್ಣಲ್ಲಿ ಆನಂದಬಾಷ್ಪ ತುಂಬಿಕೊಂಡ ಪವಿತ್ರಾರಿಗೆ ಭವಿಷ್ಯದ ಬಗ್ಗೆ ಸ್ಪಷ್ಟತೆ ಇದೆ.

ಚಿತ್ರದುರ್ಗದ ಮಹರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ 2016ರ ಅಂತಿಮ ಬಿ.ಎ.ಯಲ್ಲಿ ಪ್ರಥಮ ರ್‍್ಯಾಂಕ್ ಗಳಿಸಿದ್ದಾರೆ. ಇದಕ್ಕಾಗಿ ಒಂದು ಚಿನ್ನದ ಪದಕವನ್ನೂ ಪಡೆದಿದ್ದಾರೆ.

‘ನಾಲ್ಕನೇ ತರಗತಿಯಲ್ಲಿದ್ದಾಗಲೇ ತಂದೆ ಕಳೆದುಕೊಂಡೆ. ಚಿತ್ರದುರ್ಗ ತಾಲ್ಲೂಕು ತುರುವನೂರು ಹುಟ್ಟೂರು. ಚಿತ್ರದುರ್ಗದಲ್ಲಿ ರೂಂ ಮಾಡಿಕೊಂಡು ಓದಿದೆ.     ಸಾಧನೆಗೆ ಅಡ್ಡದಾರಿಗಳಿಲ್ಲ, ಶ್ರಮವೊಂದೇ ರಹದಾರಿ. ಪರಿಶ್ರಮ ಪಟ್ಟೆ, ರ್‍್ಯಾಂಕ್ ಗಳಿಸಿದೆ’ ಎಂಬುದು ಅವರ ದೃಢವಿಶ್ವಾಸದ ಮಾತು.

‘ಪದವಿಯಲ್ಲಿ ಮೂರು ವರ್ಷವೂ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಿಭಾವಂತೆ. ಓದಿನಲ್ಲಷ್ಟೇ ಅಲ್ಲ, ಚರ್ಚಾಸ್ಪರ್ಧೆಯಲ್ಲೂ ಪವಿತ್ರಾ ಸೈ ಎನಿಸಿಕೊಂಡಿದ್ದಾಳೆ. ತತ್ವಶಾಸ್ತ್ರ ಇಷ್ಟದ ವಿಷಯ. ಎನ್‌ಎಸ್‌ಎಸ್‌ನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ರಾಜ್ಯಮಟ್ಟಕ್ಕೂ ಆಯ್ಕೆಯಾಗಿದ್ದಳು’ ಎಂದು ವಿದ್ಯಾರ್ಥಿ ನಿಯ ಸಾಧನೆ ಪ್ರಶಂಸಿಸುತ್ತಾರೆ ಅಧ್ಯಾಪಕ ಡಾ.ರಾಜೀವ ಲೋಚನ.

ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್‌ನ ರಸಾಯನ ವಿಜ್ಞಾನದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಫಿಝಾ ನೂರ್ ಝಹಾರಾ ಅವರಿಗೆ ಎಲ್ಲಿಲ್ಲದ ಹೆಮ್ಮೆ.

ಝಹಾರಾ ಊರು ಚನ್ನಗಿರಿ ತಾಲ್ಲೂಕು ಕೆರೆಬಿಳಚಿ. ಅಪ್ಪ ಜಾವೇದ್ ವ್ಯಾಪಾರಸ್ಥರು. ಅಮ್ಮ ಗೃಹಿಣಿ. ದಂಪತಿಗೆ ಮೂವರು ಹೆಣ್ಣುಮಕ್ಕಳು. ಹಿರಿಯ ಮಗಳೇ ಝಹಾರಾ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಮೂರರಲ್ಲೂ ಝಹಾರಾ ಶಾಲಾ–ಕಾಲೇಜಿಗೆ ಮೊದಲಿಗರು. ತಂಗಿಯರಲ್ಲಿ ಒಬ್ಬಳು ಎಸ್ಸೆಸ್ಸೆಲ್ಸಿ, ಇನ್ನೊಬ್ಬಳು ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

‘ಪಾಸಿಟಿವ್ ಯೋಚನೆ, ಸತತ ಪರಿಶ್ರಮಗಳಿಂದಲೇ ರ್‍್ಯಾಂಕ್ ಪಡೆಯಲು ಸಾಧ್ಯವಾಯಿತು. ಅಂದಿನ ಪಾಠ ಅಂದೇ ಓದಬೇಕು ಎಂಬುದು ನನ್ನ ಅಭಿಪ್ರಾಯ. ವಿಜ್ಞಾನಿಯಾಗಬೇಕು ಎನ್ನುವುದು ಕನಸು. ಇದಕ್ಕೆ ಬೇಕಾಗುವ ಎಲ್ಲಾ ಶ್ರಮ ಹಾಕಲು ನಾನು ಸಿದ್ಧ’ ಎಂಬ ಉತ್ತರ ಝಹಾರಾ ಅವರದ್ದು.

‘ನನ್ನಕ್ಕ ಮೊದಲಿನಿಂದಲೂ ಅಷ್ಟೇ ಕ್ಲಾಸಿಗೆ ಅವಳೇ ಟಾಪರ್. ಅಪ್ಪ–ಅಮ್ಮನಿಗೆ ಇದು ಸಂತೋಷದ ಕ್ಷಣ’ ಎಂದು ಝಹಾರಾ ಅವರ ತಂಗಿ ಷರೀಫಾ, ಅಕ್ಕನ ಸಾಧನೆಗೆ ಹೆಮ್ಮೆಪಡುತ್ತಾರೆ.

2015ರ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಈ.ಮಮತಾ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದವರು. ಸದ್ಯ ಸಿರಿಗೆರೆಯಲ್ಲಿ ಅತಿಥಿ ಉಪನ್ಯಾಸಕಿ. ಮುಂದೆ ಪಿಎಚ್‌.ಡಿ ಮಾಡಬೇಕು; ಉಪನ್ಯಾಸಕಿ ಯಾಗಬೇಕು ಎನ್ನುವುದು ಇವರ ಗುರಿ.

ತಂದೆ ಪೊಲೀಸ್, ತಾಯಿ ಗೃಹಿಣಿ. ಪತಿ ಅಜೇಯಕುಮಾರ್ ಶಿಕ್ಷಕರು. ಅಣ್ಣ ಎಂಜಿನಿಯರ್. ಇವರೆಲ್ಲರ ಸಹಕಾರದಿಂದಲೇ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ ಮಮತಾ.

ಕೃಷಿಕರಾದ ಕೇಶವರೆಡ್ಡಿ ಮತ್ತು ವರಲಕ್ಷ್ಮಿ ದಂಪತಿ ಪುತ್ರಿ ಎಚ್‌.ಕೆ.ಚೈತ್ರಾ  ಅರ್ಥಶಾಸ್ತ್ರದಲ್ಲಿ (2015) ಪ್ರಥಮ ರ್‍್ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕ ಗಳಿಸಿದ್ದು ಮುಂದೆ ಉಪನ್ಯಾಸಕಿ ಆಗುವ ಕನಸು ಹೊಂದಿದ್ದರೆ, ಎಂಎಸ್‌ಡಬ್ಲ್ಯು ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸುಧೀಂದ್ರ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳವ ಆಸೆ ಹೊತ್ತಿದ್ದಾರೆ.

ಚನ್ನಗಿರಿಯ ಗೊಪ್ಪೇನಹಳ್ಳಿಯ ಕೃಷಿಕರ ಮಗನಾದ ನಾಗರಾಜ, ಅರ್ಥಶಾಸ್ತ್ರದಲ್ಲಿ (2016 )ಮೂರು ಚಿನ್ನದ ಪದಕ ಪಡೆದಿದ್ದು, ಕೆಎಎಸ್ ಮಾಡುವ ಹಂಬಲ ವ್ಯಕ್ತಪಡಿಸಿದರು. ಎಂ.ಎ.ಪತ್ರಿಕೋದ್ಯ ಮದಲ್ಲಿ ಎರಡು ಪದಕ ಪಡೆದ ಗಂಗಾವತಿಯ ಶಬ್ಬೀರ್ ಹಾಗೂ ಶ್ರುತಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಜೊತೆ ಸಮಾಜ ಸೇವೆ ಮಾಡುವ ಆಸೆ ಇದೆ ಎಂದು ಹೇಳಿದರು.

ಚಿನ್ನದ ಪದಕ ಪಡೆಯುವಲ್ಲಿ ಎರಡೂ ವರ್ಷವೂ ವಿದ್ಯಾರ್ಥಿನಿಯರೇ ಮೈಲುಗೈ ಸಾಧಿಸಿದ್ದಾರೆ. 2014–15ರಲ್ಲಿ 55 ಸ್ವರ್ಣ ಪದಕಗಳನ್ನು 21 ವಿದ್ಯಾರ್ಥಿನಿಯರು, 16 ವಿದ್ಯಾರ್ಥಿಗಳು ಹಂಚಿಕೊಂಡಿದ್ದರೆ, 2015–16ರಲ್ಲಿ 53 ಸ್ವರ್ಣ ಪದಕಗಳಲ್ಲಿ 30 ವಿದ್ಯಾರ್ಥಿನಿಯರಿಗೆ, 4 ವಿದ್ಯಾರ್ಥಿಗಳಿಗೆ ಸಿಕ್ಕಿದೆ. 2013–14ರ ಸಾಲಿನಲ್ಲೂ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT