ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಯಡಿ ಹಿಂದುಳಿದ ವರ್ಗಕ್ಕೆ ಅನ್ಯಾಯ?

Last Updated 21 ಜನವರಿ 2017, 6:56 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಆಯ್ಕೆ ಪದ್ಧತಿ ಅವೈಜ್ಞಾನಿಕವಾಗಿದ್ದು ಹಿಂದುಳಿದ ವರ್ಗದವರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಮೂರು ದಶಕ ಕಳೆದಿದೆ. ಇತರೇ ಸಮುದಾಯಕ್ಕೆ ನೀಡುತ್ತಿರುವ ಶೇಕಡವಾರು ಮಿಸಲಾತಿಯಡಿ ವಸತಿಗಳ ವರ್ಗವಾರು ಮೀಸಲಾತಿ, ಹಿಂದುಳಿದ ವರ್ಗದ ಸಮುದಾಯಗಳಿಗೆ ಪರಿಗಣಿಸುತ್ತಿಲ್ಲ. ಇದರಿಂದ ಯೋಜನೆ ಕೆಲವು ಸಮುದಾಯಗಳಿಗೆ ಸೀಮಿತವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪಂಚಾಯತ್‌ರಾಜ್ ಸುಧಾರಣಾ ಕಾಯ್ದೆ (ತಿದ್ದುಪಡಿ) ಅನ್ವಯ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಪ್ರತಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಚುನಾವಣೆಯಲ್ಲಿ ಪ್ರತಿಯೊಂದು ಸಮುದಾಯಕ್ಕೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ‘ಅ’ ಮತ್ತು ‘ಬ’, ಸಾಮಾನ್ಯ ಮಹಿಳೆ ಮತ್ತು ಪುರುಷರಿಗೆ ಇಂತಿಷ್ಟು ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿ  ಪಡಿಸಲಾಗಿದೆ.

ಆದರೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ  ಬಸವ ವಸತಿ ಯೋಜನೆಯಡಿ ವರ್ಗೀಕರಣ ವ್ಯವಸ್ಥೆಯಡಿ ಹಿಂದುಳಿದ ವರ್ಗದವರನ್ನು ಹೊರಗಿಟ್ಟು ಕೇವಲ ಸಾಮಾನ್ಯ ವರ್ಗಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಯೋಜನೆಯ ಲಾಭ ಒಂದೆರಡು ಸಮುದಾಯಕ್ಕೆ ಸೀಮಿತವಾಗಿದೆ ಎಂದು ಹಿಂದುಳಿದ ವರ್ಗದ ಮುಖಂಡರು ಹೇಳುತ್ತಾರೆ.

ಸಾಮಾನ್ಯ ವರ್ಗದಲ್ಲಿ ಅನೇಕ ಜಾತಿಗಳ ಸಮುದಾಯ ಯೋಜನೆಗೆ ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಯೋಜನೆಗೆ ಪರಿಶಿಷ್ಟರನ್ನು ಹೊರತು ಪಡಿಸಿ ಬೇರೆಯವರಿಗೆ ಅವಕಾಶವಿಲ್ಲ. ಪ್ರಧಾನ ಮಂತ್ರಿ ಅವಾಸ್ ಯೋಜನೆ, ಬಸವ ವಸತಿ ಯೋಜನೆಯಡಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ, ಸಾಮಾನ್ಯ ವರ್ಗಕ್ಕೆ ಸಿಮಿತಗೊಳಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಯೋಜನೆಯಡಿ ಪರಿಶಿಷ್ಟರಿಗೆ ಮಾತ್ರ ಅವಕಾಶವಿದೆ.

ಇಂತಹ ಸಂದಿಗ್ಧ ಸ್ಥಿತಿಯಿಂದ ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಮೀಸಲು ನಿಗದಿಗೊಳಿಸಿ ವಸತಿ ಯೋಜನೆ ಕಲ್ಪಿಸಬೇಕು ಎಂದು ಬೆಸ್ತರ ಸಂಘದ ತಾಲ್ಲೂಕು ಅಧ್ಯಕ್ಷ ಅಂಜಿನಪ್ಪ ಮತ್ತು ತಾಲ್ಲೂಕು ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಸತೀಶ್ ಒತ್ತಾಯಿಸುತ್ತಾರೆ.

ಪ್ರಸ್ತುತ ತಾಲ್ಲೂಕಿನಲ್ಲಿ ಗೊಲ್ಲರು, ಕುರುಬ, ಕಾಡುಕುರಬು, ದೊಂಬಿದಾಸ, ಬಳೆಗಾರದಾಸ, ಬಲಜಿಗ, ನೇಕಾರ, ಬಿಲ್ಲವ, ಈಡಿಗ, ಕುಂಬಾರ ಸೇರಿದಂತೆ ಪ್ರಾದೇಶಿಕವಾಗಿ ಹಿಂದುಳಿದ ವರ್ಗದಲ್ಲಿ 18 ಜಾತಿಗಳ ಸಮುದಾಯವಿದೆ. ಈ ಸಮುದಾಯದ ಕುಟುಂಬದಲ್ಲಿ ಅನೇಕ ಕುಟುಂಬಗಳು ವಸತಿ ಯೋಜನೆಯಡಿ ಸಾಮಾನ್ಯ ವರ್ಗದಲ್ಲಿ ಅರ್ಜಿ ಸಲ್ಲಿಸಿದರೂ ಹೆಚ್ಚಿನ ಪೈಪೋಟಿಯಿಂದ ವಸತಿ ಕನಸಾಗಿದೆ.

ತಾಲ್ಲೂಕಿನಲ್ಲಿರುವ ಎರಡು ಲಕ್ಷ ಮತದಾರರಲ್ಲಿ ಹಿಂದುಳಿನ ವರ್ಗ 70 ರಿಂದ 80 ಸಾವಿರವಿದೆ. ಕನಿಷ್ಠ ವಾರ್ಷಿಕ 50 ಅರ್ಹರಿಗೆ ವಸತಿ ಯೋಜನೆಗೆ ಅವಕಾಶವಿಲ್ಲ. ಚುನಾವಣೆಗೆ ಒಂದು ನೀತಿ, ವಸತಿ ಯೋಜನೆಗೆ ಒಂದು ನೀತಿ, ಸಮಾನತೆ ಎಂಬುದು ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಲ್ಲೇಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲ ಎಂ.ಎಂ ಶ್ರೀನಿವಾಸ್.

ತಾಲ್ಲೂಕು ಪಂಚಾಯಿತಿ ಇಲಾಖೆ ಮಾಹಿತಿಯಂತೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2016–17 ನೇ ಸಾಲಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಗೆ 112, ಪರಿಶಿಷ್ಟ ಪಂಗಡಕ್ಕೆ 21, ಅಲ್ಪಸಂಖ್ಯಾತರಿಗೆ 13, ಸಾಮಾನ್ಯ ವರ್ಗಕ್ಕೆ 17 ಫಲಾನುಭವಿಗಳನ್ನು ಅಯ್ಕೆ ಮಾಡಲಾಗಿದೆ.

ಬಸವ ವಸತಿ ಯೋಜನೆಯಡಿ 498, ವಸತಿ ಪೈಕಿ 189 ಸಾಮಾನ್ಯ ವರ್ಗಕ್ಕೆ ಮೀಸಲು ಇಡಲಾಗಿದೆ. ಉಳಿಕೆ ಇತರೆ ಸಮುದಾಯಕ್ಕೆ ಮೀಸಲಿದೆ (ಅಯ್ಕೆ ಪ್ರಕ್ರಿಯಲ್ಲಿದೆ). ಡಾ.ಬಿ.ಆರ್ ಅಂಬೇಡ್ಕರ್ ಯೋಜನೆಯಡಿ ಪರಿಶಿಷ್ಟ ಜಾತಿಗೆ 446, ಪಂಗಡಕ್ಕೆ 130, ಒಟ್ಟು 576 ವಸತಿ ಅರ್ಹ ಫಲಾನುಭವಿಗಳ ಅಯ್ಕೆ ಮಾಡಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ವಸತಿ ಯೋಜನೆಯಲ್ಲೂ ಅನ್ಯಾಯ ಮಾಡಲಾಗಿದೆ. ಹಿಂದುಳಿದ ವರ್ಗಕ್ಕೆ ಕನಿಷ್ಠ ಒಂದೆರಡು ಕುಟುಂಬಗಳನ್ನು ಪರಿಗಣಿಸಿಲ್ಲ ಎಂಬುದು ಮುಖಂಡರ ಆರೋಪ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ 2016ರ ಆಗಸ್ಟ್‌ 11ರಂದು 2011ರ ಸಾಮಾಜಿಕ ಅರ್ಥಿಕ ಜನಗಣತಿಯಂತೆ ಫಲಾನುಭವಿಗಳ ಆಯ್ಕೆ ನಡೆಸಲು ಸುತ್ತೋಲೆ ಹೊರಡಿಸಿತ್ತು. ರಾಜ್ಯದಲ್ಲಿ ಒಟ್ಟು 80,012 ವಸತಿ ಪೈಕಿ ಎಸ್ಸಿಗೆ 33126, ಎಸ್ಟಿಗೆ 14881, ಅಲ್ಪಸಂಖ್ಯಾತರಿಗೆ 18,114 ಸಾಮಾನ್ಯ ವರ್ಗಕ್ಕೆ 13,891 ಮೀಸಲಿಟ್ಟಿದೆ. ವರ್ಗವಾರು ನಿಗಮವೇ ವರ್ಗೀಕರಿಸುವುದರಿಂದ ತಾಲ್ಲೂಕು ಪಂಚಾಯಿತಿ ಪಾತ್ರ ಇಲ್ಲವೆಂಬುದು  ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯೆ.
–  ವಡ್ಡನಹಳ್ಳಿ ಬೊಜ್ಯಾನಾಯ್ಕ

ಅನುದಾನದಲ್ಲೂ ತಾರತಮ್ಯ
ಆಯ್ಕೆಗೊಂಡ ಪರಿಶಿಷ್ಟರಿಗೆ ತಳಪಾಯಕ್ಕೆ, ಕಿಟಕಿ ಮತ್ತು ಸಜ್ಜಾ ಮುಕ್ತಾಯದ ಹಂತ, ಛಾವಣಿ ಮುಕ್ತಾಯ ಹಂತ, ಮನೆ ಪೂರ್ಣಗೊಂಡ ನಂತರ ನಾಲ್ಕು ಹಂತದಲ್ಲಿ 37,500, ಶೌಚಾಲಯ ಪೂರ್ಣಗೊಂಡ ನಂತರ 15 ಸಾವಿರ ಒಟ್ಟು 1,64,800 ಅನುದಾನ ಇದೆ.

ಆದರೆ, ಸಾಮಾನ್ಯ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೊದಲ ಹಂತ 29,800 ನಂತರ ಮೂರು ಹಂತದಲ್ಲಿ 30 ಸಾವಿರ, ಶೌಚಾಲಯ ಪೂರ್ಣಗೊಂಡ ನಂತರ 12 ಸಾವಿರ. ಒಟ್ಟು 1,31,800 ಸಾವಿರ ನೀಡಲಾಗುತ್ತದೆ.

ಇಲ್ಲೂ  ತಾರತಮ್ಯವಿದೆ ಎಂಬ ಆಕ್ಷೇಪ ಕೇಳಿಸಿದೆ. ಸಿಮೆಂಟ್, ಮರಳು, ಇಟ್ಟಿಗೆ, ಕೂಲಿ ಹಿಂದುಳಿದ ವರ್ಗದವರಿಗೆ ಮಾತ್ರ ಕಡಿಮೆಗೆ ಸಿಗಲಿದೆಯೇ ಎಂಬ ಪ್ರಶ್ನೆಯೂ ಮುಖಂಡರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT