ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ದಾಖಲೆ ತಿದ್ದುಪಡಿ: ರೈತರಿಗೆ ವಂಚನೆ

Last Updated 21 ಜನವರಿ 2017, 7:49 IST
ಅಕ್ಷರ ಗಾತ್ರ

ಹಾವೇರಿ: ‘ಬೆಳೆವಿಮೆ ಕಂಪೆನಿಗಳ ಆಮಿಷಕ್ಕೆ ಮಣಿದ ಅಧಿಕಾರಿಗಳು ದಾಖಲೆಗಳನ್ನು ತಿದ್ದುವ ಮೂಲಕ ರೈತರಿಗೆ ನೀಡಬೇಕಾದ 2015–16ರ ಮುಂಗಾರು ಬೆಳೆ ವಿಮಾ ಪರಿಹಾರದಲ್ಲಿ ವಂಚನೆ ಮಾಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ   ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಬೆಳೆವಿಮೆ ಕಂಪೆನಿಗಳು ರೈತರಿಂದ ಕಂತು ಪಾವತಿಸಿಕೊಳ್ಳುತ್ತವೆ. ಹಂಗಾಮು ಮುಗಿದ ಬಳಿಕ ಬೆಳೆ ನಷ್ಟದ ಆಧಾರದ ಮೇಲೆ ಶೇಕಡಾವಾರು ವಿಮಾ ಪರಿಹಾರವನ್ನು ನೀಡಲಾಗುತ್ತದೆ. 

ಬೆಳೆ ನಷ್ಟವನ್ನು ಅಂದಾಜಿಸಲು ‘ಬೆಳೆ ಕೊಯಿಲಿನ ಫಲಿತಾಂಶದ ಪ್ರಯೋಗ’ ನಡೆಸುತ್ತಾರೆ. ಈ ಬಾರಿಯ ಪ್ರಯೋಗದ ವರದಿಯನ್ನು ಹಿಂದಿನ ಮೂರು ವರ್ಷದ ಫಲಿತಾಂಶದ ಜೊತೆ ತುಲನೆ ಮಾಡಿಕೊಂಡು ಬೆಳೆವಿಮೆಯ ಪರಿಹಾರವನ್ನು ನಿರ್ಧರಿಸುತ್ತಾರೆ. ಆದರೆ, ಈ ಬಾರಿ ವಿಮಾ ಕಂಪೆನಿ ಜೊತೆ ಕೈಜೋಡಿಸಿದ ಅಧಿಕಾರಿಗಳು ‘ಬೆಳೆ ಕೊಯಿಲಿನ ಫಲಿತಾಂಶ’ವನ್ನು ತಿದ್ದುಪಡಿ ಮಾಡಿ, ‘ನಕಲಿ ದಾಖಲೆ’ ಸೃಷ್ಟಿಸಿದ್ದಾರೆ. ಆ ‘ನಕಲಿ ದಾಖಲೆ’ ಆಧಾರದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರದ ವಂಚನೆ ಮಾಡಲಾಗಿದೆ’ ಎಂದು ಆರೋಪಿಸಿದರು.

ಈ ಕುರಿತ ದಾಖಲೆ ಬಿಡುಗಡೆ ಮಾಡಿದ ಅವರು, ‘ಮೋಟೆಬೆನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋವಿನಜೋಳಕ್ಕೆ ನಡೆಸಿದ ‘ಬೆಳೆ ಕೊಯಿಲಿನ ಫಲಿತಾಂಶ’ದ  ನಮೂನೆ 2ರ ದಾಖಲೆಯನ್ನು ತಿದ್ದಲಾಗಿದೆ.   ತಹಶೀಲ್ದಾರ್ ಕಚೇರಿಯಲ್ಲಿರುವ ನಮೂನೆ–2ರಲ್ಲಿ ಕಟಾವಿನ ದಿನ ಬಂದ ಹಸಿ ಇಳುವರಿಯ ತೂಕವು 7.9 ಕೆ.ಜಿ. (ಪ್ರಯೋಗ–1) ಹಾಗೂ 6,7 ಕೆ.ಜಿ (ಪ್ರಯೋಗ–2) ಎಂದು ಇದೆ.

ಇದೇ ನಮೂನೆ–2 ಅನ್ನು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಜಿಲ್ಲಾ ಅಧಿಕಾರಿಯ ಕಚೇರಿಯಲ್ಲಿ ಪರಿಶೀಲಿಸಿದಾಗ ತಿದ್ದಿರುವುದು ಬೆಳಕಿಗೆ ಬಂದಿದೆ. ಇಳುವರಿಯನ್ನು 19.8 ಕೆ.ಜಿ. (ಪ್ರಯೋಗ–1) ಹಾಗೂ 16.9 ಕೆ.ಜಿ. (ಪ್ರಯೋಗ–2) ಎಂದು ತಿದ್ದಲಾಗಿದೆ. ಇಳುವರಿಯನ್ನು ‘ಅಧಿಕ’ವಾಗಿ ಎಂದು ನಮೂದಿಸುವ ಮೂಲಕ ಸುಮಾರು ₹2 ಕೋಟಿಗೂ ಅಧಿಕ ವಿಮಾ ಪರಿಹಾರ ವಂಚಿಸಲಾಗಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಿದ್ದು, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ಇದೆ. ಆದರೆ, ಈ ತಿದ್ದುಪಡಿಗಳು ಯಾವ ಅಧಿಕಾರಿ, ಕಚೇರಿಯಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಈ ಪ್ರಕರಣದ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.  ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ, ಸಂಬಂಧಿತ ಕಚೇರಿಗಳಿಗೆ ಬೀಗ ಹಾಕುವ ಮೂಲಕ ರೈತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

ತಿದ್ದುಪಡಿ:  ‘ಈ ಹಿಂದೆ, ಹಳೇ ವರ್ಷದ ಅಕ್ಕಿಯ ಇಳುವರಿಯನ್ನು ಈ ವರ್ಷದ ಭತ್ತದ ಇಳುವರಿಗೆ ಹೋಲಿಸಿ ವಂಚನೆ ಮಾಡಲಾಗಿತ್ತು. ಈ ಬಗ್ಗೆ ದೂರು ನೀಡಿದ ಬಳಿಕ ಸರಿಪಡಿಸಿಕೊಂಡಿದ್ದಾರೆ’ ಎಂದರು.

ನಿರಂತರ ವಂಚನೆಯ ಶಂಕೆ!:‘ರೈತರು ಜಾಗೃತರಾಗಿಲ್ಲ. ಅಲ್ಲದೇ, ಅಧಿಕಾರಿಗಳು ಮಾಹಿತಿ, ದಾಖಲೆಗಳನ್ನೂ ನೀಡುವುದಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ವಿಮಾ ಕಂಪೆನಿ ಸೇರಿಕೊಂಡು ಹಲವಾರು ವರ್ಷಗಳಿಂದ ರೈತರಿಗೆ ಕೋಟಿಗಟ್ಟಲೆ ವಂಚಿಸಿರುವ ಬಗ್ಗೆ ಸಂಶಯ ಇದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು’ ಎಂದು ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

‘ಅಲ್ಲದೇ, ಸುಮಾರು 9 ತಿಂಗಳು ಕಳೆದರೂ ಬೆಳೆ ವಿಮೆ ಪರಿಹಾರದ ಮೊತ್ತವನ್ನು ರೈತರಿಗೆ ಸಂಪೂರ್ಣವಾಗಿ ವಿತರಿಸಿಲ್ಲ. ಈ ಬಡ್ಡಿಯ ಹಣವನ್ನೂ ರೈತರಿಗೆ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತರಾದ ಎನ್.ಜಿ. ಹಾವೇರಿ ಮಠ, ಶೇಖಪ್ಪ ಹಾವನೂರ, ಬಸವಣೆಪ್ಪ ಬಳ್ಳಾರಿ, ಗಂಗಪ್ಪ ಎಲಿ, ಕಿರಣ ಬೆಳಗೊಳ, ಶಿವಪ್ಪ ಮತ್ತೂರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT