ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲಕೃಷ್ಣ ವರ್ತನೆ ಸ್ವಯಂಕೃತ ಅಪರಾಧ

Last Updated 21 ಜನವರಿ 2017, 7:51 IST
ಅಕ್ಷರ ಗಾತ್ರ

ರಾಮನಗರ : ‘ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಶಾಸಕ ಎಸ್.ಸಿ.ಬಾಲಕೃಷ್ಣ ಅವರ  ಸ್ವಯಂಕೃತ ಅಪರಾಧ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಸಂಗಬಸವನದೊಡ್ಡಿಯ ಗ್ರಾಮದ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಇದು ಅವರ ಕ್ಷೇತ್ರದ ಅವರದೆ ಸಮಸ್ಯೆ. ಇದಕ್ಕೂ ಜೆಡಿಎಸ್‌ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ ನಂತರವೇ ನನಗೂ ಮಾಹಿತಿ ತಿಳಿದದ್ದು. ಜತೆಗೆ
ಮಾಧ್ಯಮದವರೊಂದಿಗೂ ಅನುಚಿತ ವರ್ತನೆ ತೋರಿರುವ ಬಾಲಕೃಷ್ಣ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೇ ಉತ್ತರ ನೀಡಬೇಕು ಎಂದರು.

‘ರಾಮನಗರದ ಜನ ನನ್ನನ್ನು ವಿಧಾನ ಸಭೆಗೆ ಆಯ್ಕೆಗೊಳಿಸಿದ ಅಂದಿನಿಂದ ಇಂದಿನವರೆಗೆ ಈ ರೀತಿಯ ಒಂದು ಪ್ರಮಾದವು ನನ್ನಿಂದ ನಡೆದಿಲ್ಲ.
ಹೀಗಿರುವಾಗ ಬಾಲಕೃಷ್ಣ ಅವರ ವರ್ತನೆ ಕುರಿತು ನನ್ನಲ್ಲಿ ಸ್ಪಷ್ಟೀಕರಣ ಕೇಳಿದರೆ ಹೇಗೆ ಎಂದು ಅವರು ಪ್ರಶ್ನಿಸಿದರು. ಹಾರ ಹಾಕಲಿಲ್ಲ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವುದು ನಿಜ. ಆದರೆ, ಇಲ್ಲಿ ಪಕ್ಷಗಳನ್ನು ಮಧ್ಯದಲ್ಲಿ ತರುವುದು ಸರಿಯಲ್ಲ ಎಂದು ತಿಳಿಸಿದರು.

ಪಟ್ಟಿ ಸಿದ್ಧ ಪಡಿಸಿಲ್ಲ: ಇಲ್ಲಿಯವರೆಗೆ ಜೆಡಿಎಸ್‌ ಪಕ್ಷದಿಂದ ಯಾವುದೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಪಡಿಸಿಲ್ಲ. ನಂಜನಗೂಡು ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ನಾವು ಅಭ್ಯರ್ಥಿಯೆಂದು ಘೋಷಿಸಿದ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ದೂರಿದರು.

‘ಜತೆಗೆ ಚುನಾವಣೆ ನಡೆದು ಪಕ್ಷ ಆಡಳಿತ ನಡೆಸಿದರೂ ಅದು ಕೇವಲ ಆರು ತಿಂಗಳು ಮಾತ್ರ. ಹೀಗಾಗಿ ಚುನಾವಣೆಯಲ್ಲಿ ಸ್ಫರ್ಧಿಸದಿರಲು ನಿರ್ಧರಿಸಲಾಗಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಇದೇ 24ರಂದು ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಆಯೋಜಿಸಿದೆ. ಸಭೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಪಡೆದು, ಒಮ್ಮತದ ನಿರ್ಧಾರ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕಿನ ಬಸವನಪುರ ಗ್ರಾಮಸ್ಥರು ಆಶ್ರಯ ಸಮಿತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಆಶ್ರಯ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಎಂಜಿ ರಸ್ತೆಯಿಂದ ಕೇತೋಹಳ್ಳಿ, ಕೆಂಜೆಗರಹಳ್ಳಿ, ಉರಗಳ್ಳಿ, ಸೀಬೆಕಟ್ಟೆ, ಹುಚ್ಚಮನದೊಡ್ಡಿ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ, ಬಸವನಪುರದ ಪ.ಜಾತಿ. ಕಾಲೋನಿಯಲ್ಲಿನ ಚರಂಡಿ ಕಾಮಗಾರಿ, ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ, ತಾಲ್ಲೂಕಿನ ವಿವಿಧೆಡೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಅಶೋಕ್‌ಕುಮಾರ್‌, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT