ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬಿಲ್‌ ಪಾವತಿಗೆ ಆಗ್ರಹಿಸಿ ಧರಣಿ

Last Updated 21 ಜನವರಿ 2017, 8:05 IST
ಅಕ್ಷರ ಗಾತ್ರ

ರಾಮದುರ್ಗ: ಕಳೆದ ಮೂರು ವರ್ಷಗಳಿಂದಲೂ ಕಬ್ಬು ಪೂರೈಕೆ ಮಾಡಿರುವ ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವುದನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಬಾದಾಮಿ ತಾಲ್ಲೂಕಿನ ಬಾಚನಗುಡ್ಡ ಗ್ರಾಮದ ರೈತರು ಇಲ್ಲಿನ ಶಿವಸಾಗರ ಸಕ್ಕರೆ ಕಾರ್ಖಾನೆ ಎದುರಿಗೆ ಶುಕ್ರವಾರ ಧರಣಿ ನಡೆಸಿದರು.

ಬಾದಾಮಿ ತಾಲ್ಲೂಕು ಮತ್ತು ಸುತ್ತಮುತ್ತಲಿನ ರೈತರು ತಮ್ಮ ಬಾಕಿ ಬರಬೇಕಿದ್ದ ಕಬ್ಬಿನ ಬಿಲ್‌ನ್ನು ನೀಡಬೇಕೆಂದು ಇಲ್ಲಿನ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಕಾರ್ಖಾನೆಯ ಮುಂದು ಧರಣಿ ನಡೆಸುವ ಮೂಲಕ ಒತ್ತಾಯಿಸಿದರು.

ಕಳೆದ 2013–14, 2014–15 ಮತ್ತು 2015–16ನೇ ಸಾಲಿನಲ್ಲಿ ನಿರಂತರವಾಗಿ ರಾಮದುರ್ಗ ತಾಲ್ಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ್ದರೂ ಅರ್ಧದಷ್ಟು ಬಿಲ್‌ ಪೂರೈಕೆ ಮಾಡಿದ ಆಡಳಿತ ಮಂಡಳಿಯವರು ಉಳಿದಿರುವ ಬಾಕಿ ಬಿಲ್‌ನ್ನು ನೀಡುತ್ತಿಲ್ಲ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಬಾದಾಮಿ ತಾಲ್ಲೂಕಿನ ಬಾಚನಗುಡ್ಡದ ಮಲಕಾಜ ಗೌಡ ಚನ್ನಗೌಡ್ರ ಆರೋಪಿಸಿದರು.

ಕಳೆದ ಮೂರು ವರ್ಷದಿಂದ ಕಾರ್ಖಾನೆಯಿಂದ ಬಾಕಿ ನೀಡುವುದಾಗಿ ಸತಾಯಿಸುತ್ತಿದ್ದರೂ ಮಧ್ಯ ಪ್ರವೇಶಿಸಿದ ತಾಲ್ಲೂಕಿನ ಅಧಿಕಾರಿಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಸಕ್ಕರೆ ಸಾಗಿಸಿ ಹಣ ನೀಡಲು ಸತಾಯಿಸುತ್ತಿದ್ದಾರೆ ಎಂದು ಅರೋಪಿಸಿದರು.

’ಸಾಲ ಮಾಡಿಕೊಂಡು ಕಬ್ಬು ನಾಟಿ ಮಾಡಿ ಬೆಳೆದು ಕಾರ್ಖಾನೆಗೆ ಪೂರೈಕೆ ಮಾಡಲಾಗಿದೆ. ಇಲ್ಲಿನ ಕಬ್ಬಿನ ಬಾಕಿಯೂ ಸಿಗುತ್ತಿಲ್ಲ. ಮನೆಯಲ್ಲಿ ಹೆಂಡ್ತಿಯರು ಬಾಕಿ ವಸೂಲಿಗೆಂದು ಹೋಗಿ ಚೈನಿ ಮಾಡಿ ಬರತ್ತೀರಿ ಎಂದು ಗೇಲಿ ಮಾಡುತ್ತಿದ್ದಾರೆ. ಸಾಲ ನೀಡಿರುವ ಬ್ಯಾಂಕಿನವರು ಮನೆ ಬಾಗಿಲಿಗೆ ಬಂದರೆ ಮಾನ ಉಳಿಸಿಕೊಳ್ಳಲು ಇದ್ದ ಆಸ್ತಿ ಮಾರಿ ಕೊಡಬೇಕು. ಇಲ್ಲವೇ ಆತ್ಮಹತ್ಯೆ ಮಾಡಿ ಕೊಳ್ಳಬೇಕು’ ಎಂದು ದೂರಿದರು.

’ಕಾರ್ಖಾನಿಗೆ ಅಡ್ಡ್ಯಾಡಿ ಅಡ್ಡ್ಯಾಡಿ ಒಂದು ಜೋಡ್‌ ಚಪ್ಪಲ ಹರದ್‌ ಹೋದವ್ರೀ, ಮೂರು ವರ್ಷ್‌ ಅಡ್ಡ್ಯಾಡಿದ್ರೂ ಯಾರೂ ಕೇಳ್ವಲ್ರೀ, ಬೆಳಗಾವಿ ಜಿಲ್ಲೆನ್ಯಾಗ್‌ ಆಡಳಿತ ಐತೋ ಇಲ್ಲೋ ಗೊತ್ತಾವಲ್ದು. ಇನ್ನೋದ್‌ ಸಾರಿ ಹೊಳ್ಳಿ ಬರತೀವ್ರಿ, ಆಗ ಬಿಲ್‌ ಕೊಡಲಿಲ್ಲಂದ್ರ್ ಪ್ಯಾಕ್ಟರಿಗೆ ಉರಿ ಹಚ್ಚತ್ತೀವಿ. ಇಲ್ಲಂದ್ರ ಕೈಗೆ ಸಿಕ್ಕದ್ದು ತಗೊಂಡ್‌ ಹೋಗತ್ತೀವಿ’ ಎಂದು ನೀಲಗುಂದ ಗ್ರಾಮದ ಹನಮಂತಗೌಡ ತಿಮ್ಮನಗೌಡ ಪಾಟೀಲ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬಿಲ್‌ ಕೇಳಲೆಂದು ಕಾರ್ಖಾನೆಗೆ ಬಂದರೂ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾರು ಇರುವುದಿಲ್ಲ. ಬಾಗಿಲು ಮುಚ್ಚಿಕೊಂಡು ಹೋಗಿರು ತ್ತಾರೆ. ಇಲ್ಲಿ ಕಾವಲ ಕಾಯಲು ಇಬ್ಬಂದಿ ಮತ್ತು ಪೊಲೀಸರು ಮಾತ್ರ ಇರುತ್ತಾರೆ. ತಹಶೀಲ್ದಾರರನ್ನು ಕೇಳಿದರೆ ಕಾರ್ಖಾನೆ ಮುಚ್ಚಿ ಹೋಗುತ್ತಿದೆ. ನಾವೇನು ಮಾಡಲು ಸಾಧ್ಯವಿಲ್ಲ. ಕಾರ್ಖಾನೆಗೆ ಹೋಗಿ ವಿಚಾರಿಸಿರಿ ಎಂದು ಜಾರಿ ಕೊಳ್ಳುತ್ತಿದ್ದಾರೆ ಎಂದು ಜಾಲಿಹಾಳದ ರಾಜೇಸಾಬ ನದಾಫ್‌ ಹೇಳುತ್ತಾರೆ.

’ಕಳೆದ ಮೂರು ವರ್ಷಗಳಿಂದ ರೈತರ ಬಾಕಿ ಬಿಲ್‌ ಪೂರೈಕೆ ಮಾಡದೇ ಆಡಳಿತ ಮಂಡಳಿ ಸತಾಯಿಸುತ್ತಿದೆ. ಮುಂದಿನ ಅನಾಹುತಗಳಿಗೆ ಆಡಳಿತ ಮಂಡಳಿಯೇ ಹೊಣೆಯಾಗಲಿದೆ. ರೈತರು ನಡೆಸುವ ಪ್ರತಿಯೊಂದು ಹೋರಾಟಕ್ಕೆ ಇಲ್ಲಿನ ರೈತ ಸಂಘ ಮತ್ತು ಹಸಿರು ಸೇನೆ ಸದಾ ಸಿದ್ದವಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ದೇವರಡ್ಡಿ ಹೇಳಿದರು.

ಮಲ್ಲಿಕಾರ್ಜುನ ರಾಮದುರ್ಗ, ಯಲ್ಲಪ್ಪ ದೊಡಮನಿ, ರಮೇಶ ಮಾದರ, ಮಹಾದೇವ ಮೇಟಿ, ಗೌಡಪ್ಪ ಹಾದಿಮನಿ, ಬಸಯ್ಯ ಹಿರೇಗೌಡ್ರ, ಯಂಕನಗೌಡ ಗೌಡರ, ಶ್ರವಣಕುಮಾರ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT