ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವದಲ್ಲಿಯೇ ಅಡಗಿತ್ತು ಸಾಕ್ಷ್ಯ...!

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಕೊಲೆ ಪ್ರಕರಣಗಳಲ್ಲಿ ಶವಪರೀಕ್ಷೆ ಮಾಡುವ ವೈದ್ಯರು ನಿರ್ವಹಿಸುವ ಪಾತ್ರ, ಅದರ ಮಹತ್ವ ಕುರಿತು ಜನರಿಗೆ ಮಾಹಿತಿ ಇಲ್ಲ. ಅಪರಾಧ ನ್ಯಾಯ ನಿರ್ವಹಣೆಯಲ್ಲಿ ಶವ ಪರೀಕ್ಷೆ ಮಾಡುವ ವೈದ್ಯರಿಗೆ ವಿಶೇಷ ಸ್ಥಾನ ಉಂಟು. ಅವರ ಸಾಕ್ಷಿ ಅದೆಷ್ಟೋ ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನೇ ಹಿಮ್ಮೆಟ್ಟಿಸಿರುವುದುಂಟು. ಸುಪ್ರೀಂ ಕೋರ್ಟ್‌ ಮತ್ತು ದೇಶದ ಎಲ್ಲಾ ಹೈಕೋರ್ಟ್‌ಗಳು ಶವಪರೀಕ್ಷೆ ಮಾಡುವ ವೈದ್ಯರ ಹೇಳಿಕೆಗಳನ್ನು ವಿಶೇಷವಾಗಿ ಪರಿಗಣಿಸುತ್ತವೆ.

ವೈದ್ಯರ ಪಾಟಿಸವಾಲು ಮಾಡುವುದೆಂದರೆ ಆರೋಪಿಪರ ವಕೀಲರುಗಳಿಗೆ ದೊಡ್ಡ ಸವಾಲೇ ಸರಿ. ವೈದ್ಯಕೀಯ ನ್ಯಾಯಶಾಸ್ತ್ರವನ್ನು ಕರತಲಾಮಲಕ ಅಭ್ಯಸಿಸದ ಹೊರತು ವೈದ್ಯರ ಪಾಟಿ ಸವಾಲಿನಲ್ಲಿ ಯಶಸ್ಸು ಸಾಧ್ಯವಾಗದು. ಅಪರಾಧ ಪ್ರಕರಣ ನಡೆಸುವ ಎಲ್ಲಾ ವಕೀಲರಿಗೂ ಸಾಮಾನ್ಯವಾಗಿ ಇವರನ್ನು ಪಾಟಿಸವಾಲು ಮಾಡುವುದು ಕಬ್ಬಿಣದ ಕಡಲೆ ಇದ್ದಂತೆ. ಪಾಟಿಸವಾಲಿನ ದಿನದ ಮಟ್ಟಿಗಾದರೂ ಕ್ರಿಮಿನಲ್ ವಕೀಲ ಒಬ್ಬ ವೈದ್ಯಕೀಯ ಪರಿಣತನಂತೆ ಕಾಣದೇ ಹೋದರೆ ಅಪಹಾಸ್ಯಕ್ಕೆ ಗುರಿಯಾಗುವುದು ನಿಶ್ಚಿತ. ವೈದ್ಯಕೀಯ ಸಾಕ್ಷ್ಯ ಒಬ್ಬ ಆರೋಪಿಯನ್ನು ನಿರಪರಾಧಿಯೆಂದು ಇಲ್ಲವೇ ಅಪರಾಧಿಯೆಂದು ಸಾಬೀತುಪಡಿಸುವಷ್ಟರ ಮಟ್ಟಿಗೆ ಮಹತ್ವದ್ದು ಮತ್ತು ಪರಿಣಾಮಕಾರಿಯಾದುದು.

ಇಷ್ಟೆಲ್ಲಾ ಹೇಳಲು ಕಾರಣ, ಈ ಪ್ರಕರಣ...
1974–84ರ ನಡುವೆ ಬೆಂಗಳೂರಿನ ಜಾಲಹಳ್ಳಿ ಪ್ರದೇಶದ ಬಹುಪಾಲು ಎಚ್.ಎಂ.ಟಿ. ಕಾರ್ಖಾನೆ ಕಬಳಿಸಿಕೊಂಡು ಒಂದಷ್ಟು ಜಾಗ ಉಳಿದುಕೊಂಡಿತ್ತು. ಈ ಅವಧಿಯಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ. ಆಂಜನಪ್ಪ, ಅಳಿದುಳಿದ ಆ ಗ್ರಾಮದ ಪ್ರದೇಶವನ್ನು ಎಲ್ಲರೂ ಮೆಚ್ಚುವಂತೆ ಅಭಿವೃದ್ಧಿಗೊಳಿಸಿ ಗ್ರಾಮಸ್ಥರ ಪಾಲಿಗೆ ಇಂದಿಗೂ ಪ್ರಾತಃಸ್ಮರಣೀಯರಂತೆ ಕಾಣುತ್ತಾರೆ. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿ ಆ ಕಾರ್ಖಾನೆಗೆ ಸೇರಿದ್ದ ಚಿತ್ರಮಂದಿರದ ಎಲ್ಲಾ ಆದಾಯವನ್ನು ಜಾಲಹಳ್ಳಿ ಗ್ರಾಮದ ಉದ್ಧಾರಕ್ಕೆ ಕೊಡುವಂತೆ ಕೋರ್ಟಿನಿಂದ ಆದೇಶ ತಂದಿದ್ದವರು.

ಇವರ ಪರಿಚಯ ನನಗೆ ಇತ್ತು. 22–2–1982ರ ಸೋಮವಾರ ಶಿವರಾತ್ರಿ ಹಬ್ಬ. ಮಾರನೆಯ ಸಾಯಂಕಾಲ ಅವರು ನನ್ನ ಬಳಿ ಬಂದರು. ಈ ಹಿಂದೆ ಅವರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ದತ್ತು ಅಲಿಯಾಸ್ ಕೊಕ್ಕೆಚಿಕ್ಕ ಎಂಬ ವ್ಯಕ್ತಿ ಕೊಲೆ ಕೇಸೊಂದರಲ್ಲಿ ಸ್ಥಳದಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅವನ ಪರ ವಕಾಲತ್ತು ವಹಿಸುವಂತೆ ನನ್ನನ್ನು ಕೋರಿದರು. ಘಟನೆಯ ಹಿಂದು ಮುಂದು ಗೊತ್ತಿಲ್ಲದಿದ್ದರೂ ಆಂಜನಪ್ಪನವರ ವ್ಯಕ್ತಿತ್ವ ತಿಳಿದಿದ್ದ ನಾನು ಆ ಕ್ಷಣಕ್ಕೆ ಏನನ್ನೂ ಕೆದಕಿ ಕೇಳದೆ ಒಪ್ಪಿಕೊಂಡೆ. ನನಗೆ ಆಂಜನಪ್ಪನವರು ವಹಿಸಿಕೊಟ್ಟ ಮತ್ತು ಅವರು ಅಕ್ಕರೆಯಿಂದ ಕೊಕ್ಕೆಚಿಕ್ಕ ಎಂದೇ ಕರೆಯುತ್ತಿದ್ದ ಆರೋಪಿಗೆ ಸಂಬಂಧಿಸಿದ ಕೊಲೆ ಪ್ರಕರಣ ವೈದ್ಯಕೀಯ ನ್ಯಾಯಶಾಸ್ತ್ರದ (Medical Jurisprudence) ನೆಲೆಯ ಮೇಲೆ ನಿಂತಿತ್ತು.

ರಾಜಮ್ಮ ಜಾಲಹಳ್ಳಿಯವಳು. ಆಕೆ 50 ವರ್ಷದವಳಿದ್ದಾಗ ಅವಳ ಗಂಡ ಅಪಘಾತವೊಂದರಲ್ಲಿ ಮೃತನಾದ. ಆಕೆಗೆ ರಾಮಲತಾ ಎಂಬ ಒಬ್ಬಳೇ ಮಗಳಿದ್ದು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಳು. ರಾಜಮ್ಮನನ್ನು ನೋಡಿಕೊಳ್ಳಲು ಆಕೆಯ ಅಳಿಯ ಮತ್ತು ಮಗಳು, ಕದಂಬಿ ಎಂಬುವವನನ್ನು ನೇಮಕ ಮಾಡಿದ್ದರು. ಕದಂಬಿ ಒಳ್ಳೆಯವನಾದರೂ ಬಾಯಿ ಬಡುಕ. ಗುಟ್ಟು ನಿಲ್ಲುತ್ತಿರಲಿಲ್ಲ.

ಶಿವರಾತ್ರಿ ಹಬ್ಬಕ್ಕೆ ಎಂಟು ದಿನಗಳ ಹಿಂದಿನ ರಾತ್ರಿ ರಾಜಮ್ಮನಿಗೆ ಅಮೆರಿಕದಿಂದ ಒಂದು ದೂರವಾಣಿ ಕರೆ ಬಂತು. ಅವಳ ಮಗಳು ತನ್ನ ಗಂಡನ ಜತೆ ಶಿವರಾತ್ರಿ ಹಬ್ಬದ ನಂತರ ಕೆಲವು ದಿನಗಳಲ್ಲಿ ಬೆಂಗಳೂರಿಗೆ ಬಂದು ಮನೆ, ಸೈಟು ಮತ್ತು ಚಿನ್ನಾಭರಣಗಳನ್ನು ಮಾರಿ ತಾಯಿ ಮತ್ತು ತಂದೆ ಹೆಸರಿನಲ್ಲಿ ಬೆಂಗಳೂರಿನ ಹೊರವಲಯದಲ್ಲಿ ವೃದ್ಧಾಶ್ರಮವನ್ನು ಕಟ್ಟಲು ತೀರ್ಮಾನಿಸಿರುವುದಾಗಿ ತಿಳಿಸಿದಳು. ಅದಕ್ಕೆ ರಾಜಮ್ಮ ಸಂತೋಷದಿಂದ ಸಮ್ಮತಿಸಿದಳು. ಮಗಳು, ಅಳಿಯ ಬೆಂಗಳೂರಿಗೆ ಬರುವಷ್ಟರಲ್ಲಿ ತನ್ನ ತಂಗಿ ಮತ್ತು ಅವಳ ಗಂಡನನ್ನು ಕರೆಸಿಕೊಂಡು ಬ್ಯಾಂಕ್ ಲಾಕರ್‌ನಲ್ಲಿರುವ ಅಷ್ಟೂ ಚಿನ್ನಾಭರಣಗಳನ್ನು ತಂದು ಮನೆಯಲ್ಲಿರಿಸಿಕೊಳ್ಳುವುದಾಗಿ ಮಗಳಿಗೆ ಫೋನ್‌ನಲ್ಲಿ ಹೇಳಿದಳು.

ಈ ಸಂಭಾಷಣೆಯನ್ನೆಲ್ಲಾ ಪಕ್ಕದ ರೂಮಿನಲ್ಲಿದ್ದ ಕದಂಬಿ ಕಿವಿ ತುಂಬಿಕೊಂಡ. ಇದೇ ಗುಂಗಿನಲ್ಲಿದ್ದ ಅವನಿಗೆ ಯಾರಲ್ಲಾದರೂ ಹೇಳಿಕೊಳ್ಳುವ ತವಕ ತೀವ್ರಗೊಂಡು ಅವನ ಗೆಳೆಯನಾಗಿದ್ದ ದತ್ತು ಅಲಿಯಾಸ್ ಕೊಕ್ಕೆಚಿಕ್ಕನನ್ನು ಗಂಗಮ್ಮಗುಡಿ ಸರ್ಕಲ್‌ನಲ್ಲಿದ್ದ ಬಾರ್ ಒಂದಕ್ಕೆ ಎಳೆದೊಯ್ದ. ಇಬ್ಬರೂ ಕಂಠಪೂರ್ತಿ ಹೆಂಡ ಹೀರಿದರು. ವಿಷಯ ಹೇಳುವಷ್ಟು ಅಮಲು ಸಾಕಾದ ಮೇಲೆ ಅಮೆರಿಕದಿಂದ ಬಂದ ದೂರವಾಣಿ ಕರೆಯ ವಿಚಾರವನ್ನು ಕೊಕ್ಕೆಚಿಕ್ಕನ ಮುಂದೆ ಕದಂಬಿ ಕಕ್ಕಿಬಿಟ್ಟ. ಮತ್ತೇರಿದ್ದ ಕೊಕ್ಕೆಚಿಕ್ಕನನ್ನು ಈ ವಿಷಯ ಹುಚ್ಚನನ್ನಾಗಿಸಿತು. ಶ್ರೀಮಂತನಾಗುವ ಹೆಬ್ಬಯಕೆ ಅವನೆದುರು ಥಕಧಿಮಿ ಕುಣಿಯಲಾರಂಭಿಸಿತು.

ಕದಂಬಿಗೆ ತಾನು ಹೇಳಿದ ವಿಚಾರ ಕೊಕ್ಕೆಚಿಕ್ಕನಲ್ಲಿ ಹುಟ್ಟುಹಾಕಿರಬಹುದಾದ ಭ್ರಮೆಗಳ ಅಂದಾಜು ಸಿಗಲಿಲ್ಲ. ಅವನಿಗೆ ಪರಿಣಾಮಗಳಿಗಿಂತ ಬಾಯಿ ಚಪಲ ತೀರಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಅವನ ಚಪಲ ಕೊಕ್ಕೆಚಿಕ್ಕನಿಗೆ ತಿಳಿಸುವುದಕ್ಕಷ್ಟೇ ಸೀಮಿತವಾಗಿತ್ತು ಎಂದು ತಿಳಿದರೆ ತಪ್ಪಾದೀತು- ಅಂತಹ ಅರಿವುಗೇಡಿ ಅವನು.
***

ಶಿವರಾತ್ರಿಗೆ ಮುಂಚೆ ರಾಜಮ್ಮ ತನ್ನ ತಂಗಿ ಮತ್ತು ಆಕೆಯ ಗಂಡನ ಜೊತೆ ಬ್ಯಾಂಕಿಗೆ ಹೋಗಿ ಸಂಜೆಯ ಹೊತ್ತಿಗೆ ಹಿಂದಿರುಗಿದ್ದರು. ಈ ವಿಚಾರದಲ್ಲಿ ಕದಂಬಿ ಪತ್ತೇದಾರಿ ಕೆಲಸ ಮಾಡುತ್ತಲೇ ಇದ್ದ. ಅವನ ಈ ಚಪಲ ಇದನ್ನೆಲ್ಲಾ ಯಾರ್‍ಯಾರಿಗೋ ಮುಟ್ಟಿಸುತ್ತಿತ್ತು.

ಶಿವರಾತ್ರಿಯ ಜಾಗರಣೆಗೆ ಊರಿಗೆ ಊರೇ ಎಚ್ಚರವಾಗಿತ್ತು. ಎಲ್ಲೆಲ್ಲೂ ಜಾಗರಣೆಯ ಸಂಭ್ರಮ. ಅವತ್ತು ರಾಜಮ್ಮ ವಾಸವಿದ್ದ ಪ್ರದೇಶದಲ್ಲಿ ದಾನಪ್ಪಗೌಡ ಮತ್ತು ಖಾಲಿದ್ ಎಂಬ ಪೊಲೀಸ್ ಪೇದೆಗಳು ಗಸ್ತು ತಿರುಗುತ್ತಿದ್ದರು. ಅದು ಬೆಳಗಿನ ಜಾವ ನಾಲ್ಕು ಗಂಟೆ. ರಾಜಮ್ಮನ ಮನೆಯಿಂದ ಒಬ್ಬ ವ್ಯಕ್ತಿ ದಢಾರನೆ ಹೊರಗೆ ಬಂದ. ಪೊಲೀಸರನ್ನು ನೋಡುತ್ತಿದ್ದಂತೆಯೇ ಓಡಲಾರಂಭಿಸಿದ. ಪೊಲೀಸರ ಬುದ್ಧಿ ಎಚ್ಚೆತ್ತು ಅವನನ್ನು ಬೆನ್ನು ಹತ್ತಿಸಿತು. ಕೆಲವೇ ನಿಮಿಷಗಳಲ್ಲಿ  ಆ ವ್ಯಕ್ತಿ ಸಿಕ್ಕಿಬಿದ್ದ. ಅವನೇ ಕೊಕ್ಕೆಚಿಕ್ಕ. ಅವನನ್ನು ಹಿಡಿದಲ್ಲಿಯೇ ಪ್ರಶ್ನಿಸಿದಾಗ ಅವನಿಗೆ ಮಾತೇ ಹೊರಡದೆ ಆಘಾತದಲ್ಲಿರುವುದು ಕಂಡುಬಂತು. ಪೇದೆಗಳಿಬ್ಬರೂ ಅವನನ್ನು ರಾಜಮ್ಮನ ಮನೆಗೆ ಎಳೆದುತಂದು ಪರಿಶೀಲಿಸಿದಾಗ ರಾಜಮ್ಮ ಸತ್ತುಬಿದ್ದಿದ್ದಳು. ಈ ಕೊಲೆ ತಾನು ಮಾಡಿಲ್ಲ ಎಂದು ಕೊಕ್ಕೆಚಿಕ್ಕ ಬಡಬಡಿಸಿದ.

ಗಸ್ತು ಪೊಲೀಸರು ಕೂಡಲೇ ಠಾಣೆಗೆ ಫೋನ್ ಮಾಡಿ ರಾಜಮ್ಮನ ಸಾವಿನ ಸುದ್ದಿ ತಿಳಿಸಿದರು. ಪೊಲೀಸ್ ವ್ಯಾನ್‌ನಲ್ಲಿ ಬಂದ ಠಾಣಾಧಿಕಾರಿ ಶವವನ್ನು ಆಸ್ಪತ್ರೆಗೆ ಸಾಗಿಸಿದರು. ಪೊಲೀಸ್ ಪೇದೆಯಿಂದ ಫಿರ್ಯಾದು ಪಡೆದು ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ವಹಿಸಿಕೊಂಡರು.

ರಾಜಮ್ಮನ ಶವವನ್ನು ಮನೆಯಿಂದ ಹೊರ ತೆಗೆಯುವ ಮುನ್ನ, ವ್ಯಾನಿನಲ್ಲಿ ಸಾಗಿಸುತ್ತಿದ್ದಾಗ ಮತ್ತು ಆಸ್ಪತ್ರೆಯಲ್ಲಿ ಇರಿಸಿದಾಗ ಆಕೆಯ ಮೈಮೇಲೆ ಆಯುಧದಿಂದ ಉಂಟಾದ ಗಾಯಗಳೇನಾದರೂ ಇರಬಹುದೇ ಎಂದು ತನಿಖಾಧಿಕಾರಿ ಮತ್ತೆ ಮತ್ತೆ ಪರಿಶೀಲಿಸಿದ್ದರು. ಆದರೆ ಯಾವ ಗಾಯವೂ ಕಂಡುಬರಲಿಲ್ಲ. ಅದು ಶವಪಂಚನಾಮೆಯಲ್ಲೂ ದೃಢಪಟ್ಟಿತು.

ಶವಪರೀಕ್ಷೆ ಡಾ. ಝಳಕಿಯವರಿಂದ ನಡೆಯಿತು. ಮೂಗು ಮತ್ತು ಬಾಯಿಯನ್ನು ಮೃದು ವಸ್ತುವಿನಿಂದ ಭದ್ರವಾಗಿ ಅಮುಕಿ ಉಸಿರುಗಟ್ಟಿಸಿರುವುದರಿಂದ ಸಾವು ಉಂಟಾಗಿದೆ ಎಂದು ಅಭಿಪ್ರಾಯಕೊಟ್ಟರು. ಆಗಿನ ಸರ್ಕಾರ, ಅನೇಕ ಪೊಲೀಸ್ ಅಧಿಕಾರಿಗಳನ್ನು ಬೆಂಗಳೂರಿನಿಂದ ಬೇರೆ ಊರುಗಳಿಗೆ ವರ್ಗಾವಣೆ ಮಾಡಿತ್ತು. ಆ ಸಮಯದಲ್ಲಿ ಈ ಕೇಸಿನ ತನಿಖೆ ವಹಿಸಿಕೊಂಡಿದ್ದ ತನಿಖಾಧಿಕಾರಿಯೂ ವರ್ಗವಾಗಿ ಹೋದರು. ಅವರ ಜಾಗಕ್ಕೆ ಎರ್ರಿಸ್ವಾಮಿ ಬಂದು ತನಿಖೆಯನ್ನು ಗ್ರಹಿಸಿಕೊಂಡು ಮುಂದುವರೆಸುವ ವೇಳೆಗೆ ಅನೇಕ ದಿನಗಳೇ ಕಳೆದು ಹೋಗಿದ್ದವು. ಕೊನೆಗೂ ಎರ್ರಿಸ್ವಾಮಿ ತನಿಖೆಯನ್ನು ಮುಗಿಸಿ ನ್ಯಾಯಾಲಯದಲ್ಲಿ ಆರೋಪಿ ಕೊಕ್ಕೆಚಿಕ್ಕನ ವಿರುದ್ಧ ಕೊಲೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ಪ್ರಕರಣ ವಿಚಾರಣೆಗೆ ಬರುವ ವೇಳೆಗೆ ದೋಷಾರೋಪ ಪಟ್ಟಿಯನ್ನು ಅಧ್ಯಯನ ಮಾಡಿದೆ. ಆಗ ನನ್ನ ಒಳಮನಸ್ಸಿನಲ್ಲಿ ಈ ಕೇಸನ್ನು ಗೆಲ್ಲಬಹುದೆಂದು ಎನಿಸಿತು. ಹೀಗೆ ಕೆಲವು ಪ್ರಕರಣಗಳಲ್ಲಿ  ಆಗಾಗ್ಗೆ  ಅನುಭೂತಿ ಆಗುವುದುಂಟು. ನನ್ನ ವೃತ್ತಿಜೀವನದ ಅನುಭವ, ಕೇಸನ್ನು ನಡೆಸುವಾಗ ಮಾಡಿಕೊಳ್ಳುವ ಸಿದ್ಧತೆಗಳು, ಅಧ್ಯಯನ... ಇವೆಲ್ಲವುಗಳ ಪರಿಣಾಮ ಹೀಗಾಗಿರಲಿಕ್ಕೆ ಸಾಕು.

ತನಿಖಾಧಿಕಾರಿಯು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಅನೇಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ವಶಪಡಿಸಿಕೊಂಡ ವಸ್ತುಗಳು ಸೇರಿದಂತೆ ತಮಗೆ ಸಿಕ್ಕ ಎಲ್ಲ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕೋರ್ಟಿನ ಮುಂದೆ ತಂದರು. ಇದರಲ್ಲಿ ರಾಜಮ್ಮ ಅವರು ಶಿವರಾತ್ರಿಯ ದಿನ ರಾತ್ರಿ ಏಳು ಗಂಟೆಗೆ ಊಟ ಮಾಡುತ್ತಿದ್ದುದನ್ನು ಕಡೆಯ ಬಾರಿ ಕಂಡಿದ್ದ ಕದಂಬಿಯ ಸಾಕ್ಷಿಯೂ ಸೇರಿತ್ತು. ಇವೆಲ್ಲವನ್ನೂ ಕೋರ್ಟ್‌ ಮುಂದೆ ಯಥಾವತ್ತಾಗಿ ಅವರು ಮಂಡಿಸಿದರು.

ಈ ಎಲ್ಲಾ ಬಲವಾದ ಸಾಕ್ಷ್ಯಾಧಾರಗಳನ್ನು ಗಮನಿಸಿದವರಿಗೆ ಆರೋಪಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಿಸಿತು, ಸಾಲದು ಎಂಬುದಕ್ಕೆ ಕೊಕ್ಕೆಚಿಕ್ಕ ಸ್ಥಳದಲ್ಲಿಯೇ ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಬೇರೆ! ಆದರೆ ನನ್ನ ತಲೆಯಲ್ಲಿ ಮಾತ್ರ ಬೇರೆಯದ್ದೇ ಹೊಳೆಯುತಲಿತ್ತು. ರಾಜಮ್ಮ ಅವರನ್ನು ಕದಂಬಿ ಕೊನೆಯದ್ದಾಗಿ ನೋಡಿದ್ದು ರಾತ್ರಿ 7 ಗಂಟೆಗೆ. ಕೊಕ್ಕೆಚಿಕ್ಕ  ಸಿಕ್ಕಿಬಿದ್ದದ್ದು ಬೆಳಗಿನ ಜಾವ 4 ಗಂಟೆಗೆ. ಈ 7–4ರ ನಡುವಿನ ಅವಧಿ ನನ್ನ ಕೇಸಿನ ಕೇಂದ್ರಬಿಂದುವಾಗಿತ್ತು.
***

ಶವಪರೀಕ್ಷೆ ಮಾಡಿದ ವೈದ್ಯರೂ ಮತ್ತು ತನಿಖಾಧಿಕಾರಿಯ ವಿಚಾರಣೆ ಇನ್ನೂ ಆಗಬೇಕಿತ್ತು. ವೈದ್ಯಾಧಿಕಾರಿಯ ವಿಚಾರಣೆ ಸಾಮಾನ್ಯ ಸಂದರ್ಭಗಳಲ್ಲಿ ಪ್ರಾರಂಭದ ಹಂತದಲ್ಲೇ ಆಗುತ್ತದೆ. ಆದರೆ ಈ ಪ್ರಕರಣದಲ್ಲಿ ವೈದ್ಯರು ವಿದೇಶಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕರೆಸಿ ವಿಚಾರಣೆ ಮಾಡಬೇಕಾಗಿ ಬಂದಿತ್ತು. ಆದ್ದರಿಂದ ಈ ಪ್ರಕರಣದಲ್ಲಿ ಅವರ ವಿಚಾರಣೆಯಾದದ್ದು ಕೊನೆಯಲ್ಲಿ. ಅಲ್ಲಿಯವರೆಗೆ ಉಳಿದ ಸಾಕ್ಷಿದಾರರನ್ನು ನಾನು ತೀವ್ರವಾಗಿ ಪಾಟಿಸವಾಲು ಮಾಡಲೇ ಇಲ್ಲ. ಏಕೆಂದರೆ ನನ್ನ ದೃಷ್ಟಿ ನೆಟ್ಟಿದ್ದು ಮರಣೋತ್ತರ ಪರೀಕ್ಷೆ ಮಾಡಿದ್ದ ವೈದ್ಯರ ಮೇಲೆ.

ವೈದ್ಯರು ವಿಚಾರಣೆಗೆ ಬಂದರು. ಪ್ರಾಸಿಕ್ಯೂಟರ್ ಅವರು ವೈದ್ಯರ ಹೇಳಿಕೆ ಪಡೆದರು. ನಂತರ ಅವರನ್ನು ನಾನು ಪಾಟಿಸವಾಲಿಗೆ ಒಳಪಡಿಸಿದೆ. ಅವರ ಗಮನವನ್ನು ಶವಪರೀಕ್ಷಾ ವರದಿಯತ್ತ ಹರಿಸಿದೆ.

ಆ ವರದಿಯಲ್ಲಿ ಶವದ ಹೊಟ್ಟೆಯ ತುಂಬಾ ಆಹಾರವಿದ್ದ ಬಗ್ಗೆ ಉಲ್ಲೇಖಿಸಲಾಗಿತ್ತು (ಶವದ ಹೊಟ್ಟೆಯನ್ನು ಗುರುತು ಮಾಡಲಾಗಿತ್ತು). ಅದೇ ರೀತಿ,  ಶವದ ಕಣ್ಣು ರೆಪ್ಪೆಗಳು, ಕುತ್ತಿಗೆ, ಗಲ್ಲ, ಮುಖ, ಎದೆ ಸೆಟೆದುಕೊಂಡು ಕಟ್ಟಿಗೆಯಂತಾಗಿದ್ದುದನ್ನೂ ನಮೂದು ಮಾಡಲಾಗಿತ್ತು. ಅಷ್ಟನ್ನು ಮಾತ್ರ ಅವರಿಗೆ ತೋರಿಸಿ, ಆ ವಿಷಯವನ್ನು  ಕೋರ್ಟ್‌ ಗಮನಕ್ಕೆ ತಂದು ನನ್ನ ಒಳಮನಸ್ಸಿನ ಆಜ್ಞೆಯಂತೆ ಆ ಹಂತಕ್ಕೆ ಪಾಟಿಸವಾಲು ನಿಲ್ಲಿಸಿದೆ. ವಿಚಾರಣೆ ಮುಂದೂಡಲಾಯಿತು.

ಮರುದಿನ ಪ್ರಕರಣ ವಿಚಾರಣೆಗೆ ಬಂತು. ಎರಡೂ ಕಡೆಯವರ ವಾದ ಪ್ರತಿವಾದಗಳು ಜೋರಾಗಿ ನಡೆದವು. ರಾಜಮ್ಮನ ಕೊಲೆ ಮಾಡಿದ ಕೂಡಲೇ ಕೊಕ್ಕೆಚಿಕ್ಕ  ಮನೆಯಿಂದ ಹೊರಬಂದಿದ್ದು ಹಾಗೂ ಆ ವೇಳೆ ಪೊಲೀಸರು ಆತನನ್ನು ಹಿಡಿದದ್ದನ್ನು ಬಲವಾದ ಸಾಕ್ಷ್ಯದಂತೆ ಪ್ರಾಸಿಕ್ಯೂಟರ್‌ ಪರ ವಕೀಲರು ತೋರಿಸಿ, ಅವನೇ ಕೊಲೆಗಾರನೆಂದು ಸಾಧಿಸಿದರು.

ನನ್ನ ಸರದಿ ಬಂತು. ಪ್ರಾಸಿಕ್ಯೂಟರ್‌ ಅವರ ವಾದಮಂಡನೆಯನ್ನೇ ಮುಂದಿಟ್ಟುಕೊಂಡು ನಾನು ಒಂದೊಂದಾಗಿ ವಿಷಯ ಪ್ರಸ್ತಾಪಿಸುತ್ತಾ ಹೋದೆ. ನನ್ನ ವಾದ ಮಂಡನೆ ಹೀಗಿತ್ತು...
ಮೊದಲನೆಯದ್ದಾಗಿ, ರಾಜಮ್ಮ ಅವರನ್ನು ಕದಂಬಿ ಕೊನೆಯದ್ದಾಗಿ ನೋಡಿದ್ದು ಊಟ ಮಾಡುತ್ತಿದ್ದ ಸಮಯದಲ್ಲಿ ಅಂದರೆ ರಾತ್ರಿ ಏಳು ಗಂಟೆಯ ವೇಳೆಗೆ. ಆಕೆಯ ಶವಪರೀಕ್ಷೆ ಮಾಡಿದಾಗ ಸೇವಿಸಿದ್ದ ಅಷ್ಟೂ ಆಹಾರ ಹೊಟ್ಟೆಯಲ್ಲೇ ಇದ್ದುದು ತಿಳಿದಿತ್ತು. ಇದರ ಅರ್ಥ ಊಟ ಮಾಡಿದ ಮೇಲೆ ಪಚನಕ್ರಿಯೆ ಪ್ರಾರಂಭವಾಗುವ ಮುನ್ನವೇ  ಆಕೆ ಸತ್ತಿದ್ದಳು ಎಂದಾಯಿತು. ಅಂದರೆ ಬೆಳಗಿನ ಜಾವ 4 ಗಂಟೆಗೆ ಕೊಲೆ ನಡೆದಿಲ್ಲ ಎನ್ನುವುದು ಅಲ್ಲಿಗೆ ಸಾಬೀತಾಯಿತು.

ಎರಡನೆಯದ್ದಾಗಿ, ಒಬ್ಬ ವ್ಯಕ್ತಿ ಸತ್ತ ಅರ್ಧ ಗಂಟೆಯಿಂದ ಎರಡು ಗಂಟೆಯ ಒಳಗೆ ಮಾಂಸಖಂಡಗಳ ಸೆಟೆತ ಪ್ರಾರಂಭವಾಗುತ್ತದೆ. ಸಾವಿನ ನಂತರದಲ್ಲಿ ಎರಡು ಗಂಟೆಯಿಂದ ಎಂಟು ಗಂಟೆಯೊಳಗೆ ಕಣ್ಣಿನ ರೆಪ್ಪೆ, ಮುಖ, ಗಲ್ಲ, ಕುತ್ತಿಗೆ, ಎದೆ ಮತ್ತು ಇತರ ಭಾಗಗಳು ಸೆಟೆದುಕೊಂಡು ಕಟ್ಟಿಗೆಯಂತೆ ಗಟ್ಟಿಯಾಗುತ್ತವೆ. ಈ ಕಾರಣದಿಂದಾಗಿಯೇ ಕೆಲವು ಧಾರ್ಮಿಕ ಸಂಪ್ರದಾಯಗಳಲ್ಲಿ ಸತ್ತ ನಂತರ ಕಾಲುಗಳನ್ನು ಕೂಡಲೇ ಮಡಚಿಬಿಡುತ್ತಾರೆ, ಕಣ್ಣುಗಳನ್ನು ಕೂಡಲೇ ಮುಚ್ಚುತ್ತಾರೆ. ಇಲ್ಲೂ ಹಾಗೆಯೇ ಆಗಿತ್ತು. ರಾಜಮ್ಮ ಅವರ ಶವವನ್ನು ಪೇದೆಗಳಾದ ದಾನಪ್ಪಗೌಡ ಮತ್ತು ಖಾಲಿದ್ ಕಾಣುವ ಹೊತ್ತಿಗೆ ಎಲ್ಲವೂ ಸೆಟೆದು ಹೋಗಿದ್ದವು. ಇದರ ಅರ್ಥ ಕೊಲೆ ನಡೆದು 8–10 ಗಂಟೆಗಳ ಮೇಲಾಗಿತ್ತು...

ಕೋರ್ಟ್‌ಗೆ ಇಷ್ಟೇ ಸಾಕಾಯಿತು ಕೊಕ್ಕೆಚಿಕ್ಕ ನಿರಪರಾಧಿ ಎಂದು ಸಾಬೀತು ಮಾಡಲು. ವೈದ್ಯಕೀಯ ನ್ಯಾಯಶಾಸ್ತ್ರವನ್ನು ಆಧರಿಸಿದ ನನ್ನ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯವು, ರಾಜಮ್ಮ ಅವರ ಸಾವು ಶಿವರಾತ್ರಿಯ ದಿನದಂದೇ ಸಂಭವಿಸಿದ್ದು  ವಿನಾ ಬೆಳಗಿನ ಜಾವ 4 ಗಂಟೆಗೆ ಅಲ್ಲ ಎಂದು ಅಭಿಪ್ರಾಯಪಟ್ಟು ಕೊಕ್ಕೆಚಿಕ್ಕನನ್ನು  ನಿರಪರಾಧಿ ಎಂದು ಆದೇಶಿಸಿತು. ಅಂತೂ ಶವ ನುಡಿದ ‘ಸಾಕ್ಷಿ’ಯಿಂದಾಗಿ ಕೊಕ್ಕೆಚಿಕ್ಕ ಬಚಾವಾದ.

(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT