ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿವರೆಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ
Last Updated 21 ಜನವರಿ 2017, 19:58 IST
ಅಕ್ಷರ ಗಾತ್ರ

ಬೆಳಗಾವಿ: ‘ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ‘ಜ್ಞಾನ ಸಂಗಮ’ ಸಭಾಂಗಣದಲ್ಲಿ ಶನಿವಾರ ನಡೆದ 16ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಆದರೆ, ಅವರಲ್ಲಿ ಶೇ 15–16ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನುಳಿದವರು ನಿರುದ್ಯೋಗಿಗಳಾಗಿ ಕಷ್ಟಪಡುತ್ತಿದ್ದಾರೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾಗಿದೆ’ ಎಂದರು.

‘ತಾಂತ್ರಿಕ ಶಿಕ್ಷಣದ ಜೊತೆ ಕೌಶಲ ಅಭಿವೃದ್ಧಿ ಪಡಿಸುವ ವಿಶ್ವವಿದ್ಯಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ. ಈ ರೀತಿಯ ಪ್ರಯೋಗವು ಚೀನಾದಲ್ಲಿ ಚಾಲ್ತಿಯಲ್ಲಿದೆ. ಹೀಗಾಗಿ ಅಲ್ಲಿ ಕೌಶಲ ಆಧಾರಿತ ಉದ್ಯಮ ಸಾಕಷ್ಟು ಅಭಿವೃದ್ಧಿಯಾಗಿದೆ’ ಎಂದರು.

‘ಹೈದರಾಬಾದ್‌– ಕರ್ನಾಟಕ ಪ್ರದೇಶದಲ್ಲಿ ವಿಟಿಯು ಸ್ನಾತಕೋತ್ತರ ಕೇಂದ್ರ ತೆರೆಯಲು ಚಿಂತನೆ ನಡೆಸಿದ್ದೇವೆ. ವಿಶ್ವವಿದ್ಯಾಲಯದ ಕುಲಪತಿ ಅವರ ಜೊತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ಆರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ. ₹107 ಕೋಟಿ ಅನುದಾನ ಮೀಸಲಿಟ್ಟಿದ್ದು, ಇದಕ್ಕಾಗಿ 44 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಇಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಕೈ ತಪ್ಪಿದ ರ್ಯಾಂಕ್‌; ಅಳಲು: ‘ನನಗೆ ಸಿಗಬೇಕಾದ ರ್ಯಾಂಕ್‌ ಹಾಗೂ ಚಿನ್ನದ ಪದಕ ಕಾಲೇಜು ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಕೈತಪ್ಪಿತು’ ಎಂದು ಎಂ.ಟೆಕ್‌ (ಇನ್‌ಫ್ರಾಸ್ಟ್ರಕ್ಚರ್‌ ಕನ್‌ ಸ್ಟ್ರಕ್ಷನ್‌ ಅಂಡ್‌ ಮ್ಯಾನೇಜ್‌ಮೆಂಟ್‌) ವಿದ್ಯಾರ್ಥಿ ಸುರೇಶ ಬಿ.ಮಾಸಣಗಿ ಆರೋಪಿಸಿದರು. ಘಟಿಕೋತ್ಸವ ನಡೆ ಯುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಅವರು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT