ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಪ್ರಕಾರಗಳಿಗೆ ಕನ್ನಡಿ ಹಿಡಿಯುವ ಪ್ರದರ್ಶನ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ನಗರದ ಹೆಸರಾಂತ ‘ಮ್ಯಾಗ್ನಿಟ್ಯೂಡ್’ ಆರ್ಟ್‌ ಗ್ಯಾಲರಿ ಹೊಸ ವರ್ಷದ ಅಂಗವಾಗಿ ‘ನೃತ್ಯ’ ಶೀರ್ಷಿಕೆ ಅಡಿ ದೇಶದ ವಿವಿಧ ಭಾಗಗಳ ನೃತ್ಯ ಪ್ರಕಾರಗಳನ್ನು ಪರಿಚಯಿಸುವ ಚಿತ್ರಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್‌, ರಾಜಸ್ತಾನ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನೃತ್ಯ ಪ್ರಕಾರಗಳ ಕುರಿತ ಚಿತ್ರಕಲಾಕೃತಿಗಳು ಜ. 31ರವರೆಗೆ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತ. ಚಿತ್ರಕಲಾಕೃತಿಗಳೇ ಅಲ್ಲದೇ ಉಡುಗೊರೆ ನೀಡಬಹುದಾದ ಕಲಾಕೃತಿಗಳು ಅಲ್ಲಿವೆ.

ಗ್ರಾಮೀಣ ಭಾಗದ ಚಟುವಟಿಕೆಗಳನ್ನು ಕಲಾವಿದರು ತಮ್ಮ ಕುಂಚದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗಾಳಿಪಟ ಹಾರಿಸುವುದು ಸೇರಿದಂತೆ ಬಗೆ ಬಗೆಯ ಗ್ರಾಮೀಣ ಕ್ರೀಡೆಗಳು, ಮಕ್ಕಳನ್ನು ಸಲಹುವ ತಾಯಿ, ಹಿಂದೂ–ಮುಸ್ಲಿಂ–ಕ್ರೈಸ್ತ ಧರ್ಮೀಯರು ಹಬ್ಬ ಆಚರಿಸುವ ಬಗೆ, ಸಾಯಿಬಾಬ ಮತ್ತು ಜನರ ನಡುವಿನ ಒಡನಾಟ ಇತ್ಯಾದಿ ವಿಷಯಗಳ ಕುರಿತ ಚಿತ್ರ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತವೆ.

‘ಚಿತ್ರಕಲಾಕೃತಿಗಳು ಸಂವಹನ ಪ್ರಕ್ರಿಯೆಯ ಉತ್ತಮ ಮಾಧ್ಯಮ. ಮಾತು ಮತ್ತು ಬರಹದ ಮೂಲಕ ಹೇಳಲು ಸಾಧ್ಯವಾಗದ್ದನ್ನು ಈ ಮೂಲಕ ಹೇಳಲು ಸಾಧ್ಯವಿದೆ. ಚಿತ್ರಕಲಾಕೃತಿಗಳ ಪ್ರದರ್ಶನ ನೋಡಲು ಹಲವು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ವಿವಿಧ ಥೀಮ್‌ಗಳ ಮೇಲೆ ಪ್ರದರ್ಶನ ಆಯೋಜಿಸುವುದರಿಂದ ವಿಷಯಗಳನ್ನು ಅರಿಯಲು ಸಾಧ್ಯವಾಗಿದೆ. ಈ ಬಾರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ನೃತ್ಯ ಪ್ರಕಾರಗಳ ಬಗ್ಗೆ ಪರಿಚಯವಾಯಿತು’ ಎನ್ನುತ್ತಾರೆ ಪ್ರದರ್ಶನ ವೀಕ್ಷಿಸಿದ ಸುಮಾ.

ಉತ್ತಮ ಕಲಾವಿದರನ್ನು ಪ್ರೋತ್ಸಾಹಿಸಲು ಮತ್ತು ಗ್ರಾಹಕರಿಗೆ ಗುಣಮಟ್ಟದ ಕಲಾಕೃತಿಗಳನ್ನು ನೀಡುವ ಉದ್ದೇಶದಿಂದ 2000ದಲ್ಲಿ ‘ಮ್ಯಾಗ್ನಿಟ್ಯೂಡ್‌ ಆರ್ಟ್‌’ ಗ್ಯಾಲರಿಯನ್ನು ಆರಂಭಿಸಲಾಯಿತು. ಅಂದಿನಿಂದಲೂ ಪ್ರತಿ ತಿಂಗಳು ಒಂದೊಂದು ಥೀಮ್‌ ಆಧಾರದಲ್ಲಿ ಚಿತ್ರಕಲಾಕೃತಿಗಳ ಪ್ರದರ್ಶನ ಆಯೋಜಿಸುತ್ತಾ ಬಂದಿರುತ್ತೇವೆ.

ಈ ಬಾರಿ ಹೊಸ ವರ್ಷವನ್ನು ಸ್ವಾಗತಿಸುವ ಸಲುವಾಗಿ ‘ನೃತ್ಯ’ ಹೆಸರಿನಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಆರ್ಟ್‌ ಗ್ಯಾಲರಿ ಸಂಸ್ಥಾಪಕ ರಮೇಶ್‌ ಮಗರ್‌.

ನಮ್ಮಲ್ಲಿ ವೃತ್ತಿಪರ ಕಲಾವಿದರಿದ್ದು, ಒಮ್ಮೆ ರಚಿಸಿದ ಚಿತ್ರವನ್ನು ಮತ್ತೆ ರಚಿಸುವುದಿಲ್ಲ. ನೈಜ ಕಲಾಕೃತಿಗಳಿಂದ ಮನೆಯ ಸೌಂದರ್ಯ ಇಮ್ಮಡಿಗೊಳ್ಳಲಿದೆ ಎನ್ನುವ ಮಾತು ರಮೇಶ್‌ ಅವರದು.

ಪ್ರದರ್ಶನದ ಕೊನೆಯ ದಿನ :ಜ. 31
ಸಮಯ: ಬೆಳಿಗ್ಗೆ 10ರಿಂದ ಸಂಜೆ 7.
ಸ್ಥಳ: ನಂ.140/13, 27ನೇ ಕ್ರಾಸ್‌, 3ನೇ ಬ್ಲಾಕ್‌, ಜಯನಗರ. ಮಾಹಿತಿಗೆ: 99001 17201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT