ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಈಶ್ವರಪ್ಪ ನಡುವೆ ಹೆಚ್ಚಿದ ಕಂದಕ

ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲೂ ಒಂದಾಗದ ನಾಯಕರು
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಕಲಬುರ್ಗಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನಡುವೆ ಕಂದಕ ಮತ್ತಷ್ಟು ಹೆಚ್ಚಾಗಿರುವುದು ರಾಜ್ಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನವಾದ ಭಾನುವಾರ ಎದ್ದು ಕಾಣಿಸಿತು.
 
ವೇದಿಕೆಯಲ್ಲಿ ಈಶ್ವರಪ್ಪ ಮೊದಲೇ ಕುಳಿತಿದ್ದರು. ಅವರ ಪಕ್ಕದಲ್ಲಿ ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪದಾಧಿಕಾರಿಗಳು ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡರು. ಇದನ್ನು ನಯವಾಗಿಯೇ ತಿರಸ್ಕರಿಸಿದ ಯಡಿಯೂರಪ್ಪ ಕೇಂದ್ರ ಸಚಿವ ರಮೇಶ ಜಿಗಜಣಗಿ ಅವರನ್ನು ಈಶ್ವರಪ್ಪನವರ ಪಕ್ಕ ಕುಳ್ಳಿರಿಸಿ, ತಾವು ಅವರ ಪಕ್ಕ ಕುಳಿತುಕೊಂಡರು.
 
ಇಬ್ಬರೂ ಗಂಭೀರ ಮುಖಭಾವವನ್ನು ಹೊಂದಿದ್ದರು. ಒಬ್ಬರನ್ನೊಬ್ಬರು ನೋಡದೆ ವಿರುದ್ಧ ದಿಕ್ಕಿಗೆ ಮುಖ ತಿರುಗಿಸಿ ಕುಳಿತುಕೊಂಡಿದ್ದರು. ಅನ್ಯ ಮನಸ್ಕರಾಗಿದ್ದ ಇಬ್ಬರ ಮುಖದಲ್ಲೂ ನಗು ಮಾಯವಾಗಿತ್ತು. ಕಾರ್ಯಕಾರಿಣಿ ಸಭೆ ನೆಪದಲ್ಲಾದರೂ ‘ಬಿಜೆಪಿ–ಬ್ರಿಗೇಡ್‌’ ಬಿಕ್ಕಟ್ಟು ಬಗೆಹರಿಯಬಹುದು ಎಂದು ನಿರೀಕ್ಷಿಸಿದ್ದ ಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ತೀವ್ರ ನಿರಾಶೆ ಉಂಟುಮಾಡಿತು ಎನ್ನಲಾಗಿದೆ.
 
ಯಡಿಯೂರಪ್ಪನವರ ಪರೋಕ್ಷ ಎಚ್ಚರಿಕೆಯನ್ನೂ ಲೆಕ್ಕಿಸದ ಈಶ್ವರಪ್ಪ, ಕಲಬುರ್ಗಿ ಜಿಲ್ಲೆ ಅಫಜಲಪುರದಲ್ಲಿ ಭಾನುವಾರ ಮಧ್ಯಾಹ್ನ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶದಲ್ಲಿ ಭಾಗವಹಿಸಿದ್ದರು.
 
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರೇ. ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದ ಮೇಲೆ ಯಾರಾದರೂ ಕಣ್ಣಿಟ್ಟಿದ್ದರೆ ಅದು ಪಕ್ಷಕ್ಕೆ ದ್ರೋಹ ಬಗೆದಂತೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಕೊನೆಯ ಗುರಿ. ಆದರೆ ಬ್ರಿಗೇಡ್ ವಿಚಾರವನ್ನು ಯಡಿಯೂರಪ್ಪ  ವೈಯಕ್ತಿಕವಾಗಿ ಏಕೆ ತೆಗೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ’ ಎಂದು ಸಮಾವೇಶದಲ್ಲಿ ಈಶ್ವರಪ್ಪ ಹೇಳಿದರು.
 
**
ಸಮಾವೇಶ ನಿಲ್ಲಲ್ಲ: ಈಶ್ವರಪ್ಪ
ಕಲಬುರ್ಗಿ: ‘ಜ.26ರಂದು ಕೂಡಲಸಂಗಮದಲ್ಲಿ ಬ್ರಿಗೇಡ್ ಸಮಾವೇಶ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಯಣ್ಣ ಬ್ರಿಗೇಡ್ ಬಗ್ಗೆ ಕೇಂದ್ರದ ನಾಯಕರಿಗೆ ಮನವರಿಕೆಯಾಗಿದೆ. ವರಿಷ್ಠರ ಮನವರಿಕೆ ಬಳಿಕ ಯಡಿಯೂರಪ್ಪ ಅವರು ಬ್ರಿಗೇಡ್ ಅನ್ನು ಒಪ್ಪಬಹುದು’ ಎಂದರು. 
 
‘ಉಚ್ಚಾಟಿತ ಪಕ್ಷದ ನಾಯಕರನ್ನು ಪುನಃ ಪಕ್ಷಕ್ಕೆ ಕರೆತರಲಾಗುವುದು. ಪಕ್ಷದಲ್ಲಿನ ಆಂತರಿಕ ಭಿನ್ನಮತಗಳು ಮುಂದಿನ ದಿನಗಳಲ್ಲಿ ಬಗೆಹರಿಯಲಿವೆ’ ಎಂದು ಹೇಳಿದರು.
 
**
 ಮೋದಿಗೆ ಅಭಿನಂದನೆ
ಕಲಬುರ್ಗಿ: ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಪ್ರಮುಖ ನಿರ್ಣಯದೊಂದಿಗೆ ನಗರದಲ್ಲಿ ಎರಡು ದಿನ ನಡೆದ ಬಿಜೆಪಿ ಕಾರ್ಯಕಾರಿಣಿ ಭಾನುವಾರ ಮುಕ್ತಾಯವಾಯಿತು.
 
ಕಾರ್ಯಕಾರಿಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ನಿರ್ಣಯಗಳ ವಿವರ ನೀಡಿದರು.
 
**
‘ಬ್ರಿಗೇಡ್ ಒಪ್ಪುವ ಪ್ರಶ್ನೆಯೇ ಇಲ್ಲ’ 
ಕಲಬುರ್ಗಿ: ‘ಈ ಜನ್ಮದಲ್ಲಿ ಬ್ರಿಗೇಡ್ ಅನ್ನು ಒಪ್ಪುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಲ್ಲಿ ಸ್ಪಷ್ಟವಾಗಿ ಹೇಳಿದರು.
 
ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯ ಎರಡನೆ ದಿನವಾದ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬ್ರಿಗೇಡ್ ಹೆಸರಿನಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆಯಾಗುತ್ತಿದೆ. ನಿನ್ನೆಯ ಕಾರ್ಯಕಾರಿಣಿಯಲ್ಲೇ ಈ ಬಗ್ಗೆ ಬ್ರಿಗೇಡ್ ಸಂಘಟಕರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ’ ಎಂದು ಕೆ.ಎಸ್.ಈಶ್ವರಪ್ಪ ಅವರ ಹೆಸರು ಉಲ್ಲೇಖಿಸಿದೆ ಹೇಳಿದರು.
 
‘ಕಾರ್ಯಕಾರಿಣಿಯಲ್ಲಿ ಬ್ರಿಗೇಡ್ ಕುರಿತು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಅವರ ಬಳಿ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಸಮಾಧಾನ ಸರಿಪಡಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಕೂಡಿ ನಡೆಯುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
ಮುಂದಿನ ರಾಜ್ಯ ಕಾರ್ಯಕಾರಿಣಿ ಮೇ 6, 7ರಂದು ಮೈಸೂರಿನಲ್ಲಿ ನಡೆಯಲಿದೆ ಎಂದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT