ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಕಿತ್ತೊಗೆಯಲು ಟ್ರಂಪ್‌ ಶಪಥ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ‘ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನು  ಮತ್ತು ಇಸ್ಲಾಂ ಮೂಲಭೂತವಾದನ್ನು ಕಿತ್ತೊಗೆಯುವುದು ಮಾತ್ರ ಅಮೆರಿಕದ ಮುಂದಿರುವ ಆಯ್ಕೆ’ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಸಿಬ್ಬಂದಿ ಜತೆ ಅವರು ಶುಕ್ರವಾರ ಮಾತುಕತೆ ನಡೆಸಿದರು. ‘ಉಗ್ರರ ವಿರುದ್ಧ ನಾವು ದೀರ್ಘಕಾಲದಿಂದ ಯುದ್ಧ ನಡೆಸುತ್ತಿದ್ದೇವೆ. ಬಹುಶಃ ಅಮೆರಿಕ ಈವರೆಗೆ ಇಷ್ಟು ದೀರ್ಘಕಾಲದ ಯುದ್ಧ ನಡೆಸಿಯೇ ಇಲ್ಲ.  ಆದರೆ ಗಮನಿಸಬೇಕಾದ ಅಂಶವೆಂದರೆ ನಾವು ಈವರೆಗೆ ನಮ್ಮ ಸಂಪೂರ್ಣ ಬಲವನ್ನು ಬಳಸಿಯೇ ಇಲ್ಲ. ಇಸ್ಲಾಮಿಕ್ ಸ್ಟೇಟ್‌ ಉಗ್ರರ ಮೂಲಭೂತವಾದಕ್ಕೆ ಕೊನೆ ಹಾಡುವ ಸಮಯ ಈಗ ಬಂದಿದೆ. ಸಿಐಎ ಸಿಬ್ಬಂದಿಯನ್ನು ಕೈಕಟ್ಟಿ ಕೂರಿಸಲಾಗಿದೆ ಎಂಬ ವದಂತಿ ಇದೆ. ಆದರೆ ಅಮೆರಿಕವನ್ನು ರಕ್ಷಿಸುವಲ್ಲಿ ಸಿಐಎ ಅತ್ಯಂತ ಮಹತ್ವದ ಸಂಸ್ಥೆಯಾಗಲಿದೆ ಎಂದು ನಾನು ಹೇಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ನಮ್ಮಲ್ಲಿ ಸಾವಿರಾರು ಸಮಸ್ಯೆಗಳಿವೆ. ಆ ಸಮಸ್ಯೆಗಳು ಒಂದಕ್ಕೊಂದು ಹೇಗೆಲ್ಲಾ ತಳಕು ಹಾಕಿಕೊಂಡಿವೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಅವೆಲ್ಲವೂ ಈ ಕೀಳು (ಐಎಸ್) ಜನರ ಗುಂಪು ತಂದೊಡ್ಡುತ್ತಿರುವ ಭಯದೊಂದಿಗೆ ತಳಕು ಹಾಕಿಕೊಂಡಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ದುಷ್ಟ ಜನರಿಗೆ ಕೊನೆ ಹಾಡುವ ಮಹತ್ವದ ಕೆಲಸವನ್ನು ನೀವು ಮಾಡಲಿದ್ದೀರಿ. ನಾನು ನಿಮ್ಮೊಂದಿಗೆ ಇರುತ್ತೇನೆ’ ಎಂದು ಟ್ರಂಪ್ ಅವರು ಸಿಐಎ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.

ಪತ್ರಕರ್ತರು ಅತ್ಯಂತ ಅಪ್ರಾಮಾಣಿಕರು: ‘ನನ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನೋಡಲು 15 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಮಾಧ್ಯಮಗಳು 2.5 ಲಕ್ಷ ಜನ ಸೇರಿದ್ದರು ಎಂದು ವರದಿ ಮಾಡಿವೆ. ಜತೆಗೆ ಜನರು ಮನೆಗೆ ತೆರಳಿದ ನಂತರ ತೆರವಾಗಿದ್ದ ಜಾಗದ ಚಿತ್ರಗಳನ್ನು ಪ್ರಕಟಿಸಿವೆ. ಪತ್ರಕರ್ತರು ಭೂಮಿ ಮೇಲಿನ ಅತ್ಯಂತ ಅಪ್ರಾಮಾಣಿಕ ಜೀವಿಗಳು. ನೀವು ಪದೇ ಪದೇ ಇಂತಹ ತಪ್ಪು ಮಾಡುತ್ತಿದ್ದೀರಿ. ಇದಕ್ಕೆ ಭಾರಿ ಬೆಲೆ ತೆರಲಿದ್ದೀರಿ’ ಎಂದು ಡೊನಾಲ್ಡ್ ಟ್ರಂಪ್ ಅವರು ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ಸಂಬಂಧ ಕಾಯ್ದುಕೊಳ್ಳಲು ಕ್ರಮ

ನವದೆಹಲಿ: ‘ಡೊನಾಲ್ಡ್ ಟ್ರಂಪ್ ಅವರ ನೂತನ ನೀತಿಗಳು ನಮ್ಮ ಐಟಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.  ಅಮೆರಿಕದ ಜತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಿರುವ ಸಂಬಂಧವನ್ನು ಕಾಯ್ದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ನಮ್ಮ ಐಟಿ ಸಂಸ್ಥೆಗಳಿಂದ ಅಮೆರಿಕಕ್ಕೆ ನೂರಾರು ಕೋಟಿ ಡಾಲರ್ ತೆರಿಗೆ ಸಂದಾಯವಾಗುತ್ತಿದೆ. ಜತೆಗೆ ಲಕ್ಷಾಂತರ ಅಮೆರಿಕನ್ನರಿಗೆ ನಮ್ಮ ಕಂಪೆನಿಗಳು ಕೆಲಸ ನೀಡಿವೆ. ಇದರಿಂದ ಅಮೆರಿಕದ ಆರ್ಥಿಕತೆಗೆ ಒಳ್ಳೆಯದೇ ಆಗುತ್ತಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್ ಹೇಳಿದ್ದಾರೆ.

ತಾಲಿಬಾನ್ ಎಚ್ಚರಿಕೆ

ಕಾಬೂಲ್ (ಎಎಫ್‌ಪಿ): ಆಫ್ಘಾನಿಸ್ತಾನ ವಿಚಾರದಲ್ಲಿ ಅಮೆರಿಕ ತನ್ನ ನೀತಿ ಬದಲಿಸಿಕೊಳ್ಳಬೇಕು, ಇಲ್ಲವಾದರೆ ಐತಿಹಾಸಿಕ ಅಪಮಾನಕರ ಸೋಲಿಗೆ ಸಿದ್ಧವಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಾಲಿಬಾನ್ ಎಚ್ಚರಿಕೆ ನೀಡಿದೆ.

ಪ್ರತಿಭಟನೆಗೆ ಪ್ರತಿಕ್ರಿಯೆಗಳು

ಮಹಿಳಾ ರ‍್ಯಾಲಿಗಾಗಿ ಸೇರಿದ ನನ್ನ ಸೋದರಿಯರ ಬಗ್ಗೆ ಹೆಮ್ಮೆಯಾಗುತ್ತಿದೆ. ಇಲ್ಲೇ ಇದ್ದೂ, ಅದರಲ್ಲಿ ಭಾಗವಹಿಸದ್ದಕ್ಕೆ ಬೇಸರವಾಗುತ್ತಿದೆ
ಪ್ರಿಯಾಂಕಾ ಛೋಪ್ರಾ, ಬಾಲಿವುಡ್ ನಟಿ

ಇಷ್ಟೊಂದು ಜನರು ನನ್ನನ್ನು ವಿರೋಧಿಸುತ್ತಿದ್ದಾರೆ. ಆದರೆ ಇವರೆಲ್ಲಾ ನನ್ನ ವಿರುದ್ಧ ಮತ ಚಲಾಯಿಸದೇ ಇದ್ದದ್ದು  ಏಕೆ?

ಡೊನಾಲ್ಡ್‌ ಟ್ರಂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT