ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಷ್ಕಿಂಧೆ ರಸ್ತೆಗಳಲ್ಲಿ ಪಾದಚಾರಿಗಳ ಪಯಣ

ವಿದ್ಯಾಮಂಗಲ ಮಂದಿರದ ಬಳಿ ನಿತ್ಯ ಕಿರಿಕಿರಿ
Last Updated 23 ಜನವರಿ 2017, 9:52 IST
ಅಕ್ಷರ ಗಾತ್ರ

ಯಾದಗಿರಿ: ರೈಲ್ವೆ ಟೇಷನ್‌ ರಸ್ತೆ ಅಂದೊಡನೆ ಸದಾ ಜನಸಂದಣಿ ದೃಶ್ಯ ನಗರದ ಜನರ ಕಣ್ಮುಂದೆ ಬರುತ್ತದೆ. ನಿತ್ಯ ರೈಲು ಪ್ರಯಾಣಿಕರ ಸಂಚಾರ ಇರುವುದರಿಂದ ಸ್ವಲ್ಪಮಟ್ಟಿಗೆ ಈ ರಸ್ತೆಯಲ್ಲಿ ಜನದಟ್ಟಣೆ ಸಂಜೆವರೆಗೂ ಕಡಿಮೆಯಾಗುವುದಿಲ್ಲ. ಪಾದಚಾರಿ ರಸ್ತೆ ಸೌಕರ್ಯ ಇಲ್ಲಿ ಇಲ್ಲದೇ ಇರುವುದರಿಂದ ಅವರೂ ಸಹ ಮುಖ್ಯರಸ್ತೆಗೆ ಇಳಿಯುತ್ತಾರೆ. ಹಾಗಾಗಿ, ರೈಲ್ವೆ ಟೇಷನ್‌ ಸದಾ ಕಿಷ್ಕಿಂಧೆ ಅಂತಲೇ ಹೇಳಬಹುದು.

ಇದು ಬರೀ ನಗರದ ರೈಲ್ವೆ ಟೇಷನ್‌ ರಸ್ತೆಯ ಕತೆಯಲ್ಲ. ಚಿತ್ತಾಪುರ, ಹೈದರಾಬಾದ್, ಶಹಾಪುರ, ಎಪಿಎಂಸಿ ಸಂಪರ್ಕ ರಸ್ತೆಗಳಲ್ಲೂ ಪಾದಚಾರಿ ಸೇವಾ ರಸ್ತೆಗಳೇ ಇಲ್ಲ. ಮುಖ್ಯರಸ್ತೆಗಳಿಗೆ ಗ್ರಿಲ್‌ ಅಳವಡಿಸದ ಕಾರಣ ಬಿಡಾಡಿ ದನಗಳು ಎಲ್ಲಿಂದ ಬೇಕಾದರೂ ಮುಖ್ಯರಸ್ತೆಗೆ ನುಗ್ಗಬಹುದು. ಸುಭಾಷ್ ಮತ್ತು ಶಾಸ್ತ್ರಿಚೌಕ್‌ಗಳಲ್ಲಿ ಮಾತ್ರ ಔಪಚಾರಿಕವಾಗಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ. ಕೆಲವೊಮ್ಮೆ ಅವೂ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿಗಳಾದ ಮಹಮ್ಮದ್ ಷಫಿ, ಶ್ರೀನಿವಾಸ್ ಮುದ್ನಾಳ.

ಹಾದಿ ತಪ್ಪಿದ ವಾಹನ ನಿಲುಗಡೆ: ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಹಮ್ಮಿಕೊಳ್ಳುವ ಅಧಿಕಾರಿಗಳು ನಗರದಲ್ಲಿ ರಸ್ತೆ ನಿಯಮಗಳು ಪಾಲನೆ ಆಗುತ್ತಿವೆಯೇ ಎಂಬುದಾಗಿ ಒಮ್ಮೆ ಅವಲೋಕಿಸಿಕೊಂಡರೆ ಸಪ್ತಾಹದ ಆಚರಣೆ ಉದ್ದೇಶ ಮನವರಿಕೆಯಾಗುತ್ತದೆ. ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರಗಳನ್ನು ಬೇಕಾಬಿಟ್ಟಿ ನಿಲುಗಡೆ ಮಾಡಿದ್ದರೂ, ಅವನ್ನು ನೋಡಿಕೊಂಡೇ ಅಧಿಕಾರಿಗಳು ಮತ್ತೊಂದೆಡೆ ಸಪ್ತಾಹ, ಜಾಥಾ ನಡೆಸುತ್ತಾರೆ!

‘ಸರ್ಕಾರಿ ಕಾರ್ಯಕ್ರಮ ಮಾಡಿ ಮುಗಿಸಿದರೆ ಸಾಕು ಎಂಬ ಧೋರಣೆಯಿಂದ ಅಧಿಕಾರಿಗಳು ಹೊರಬರಬೇಕು. ಜನರಿಗೆ ರಸ್ತೆ ನಿಯಮಗಳನ್ನು ಭಾಷಣದಲ್ಲಿ ಹೇಳುವ ಬದಲು ಆಡಳಿತಾತ್ಮಕ ಹಾಗೂ ಅಧಿಕಾರಯುತವಾಗಿ ಅದನ್ನು ಅಳವಡಿಸಬೇಕು.

ಹಿರಿಯ ಪೊಲೀಸ್‌ ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ರಸ್ತೆ ನಿಯಮಗಳನ್ನು ಸಾರ್ವಜನಿಕರು ಸಹಜವಾಗಿಯೇ ಪಾಲಿಸುತ್ತಾರೆ’ ಎನ್ನುತ್ತಾರೆ ರೈಲ್ವೆ ಟೇಷನ್ ರಸ್ತೆ ವ್ಯಾಪಾರಿ ವೆಂಕಟೇಶ್. ನಗರದಲ್ಲಿ ಒಟ್ಟು 74,000 ಜನಸಂಖ್ಯೆ ಇದೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದೆ. ಪಾದಚಾರಿಗಳ ಸಂಖ್ಯೆಯೂ ವೃದ್ಧಿಸಿದೆ. ಆದರೆ ಸೌಕರ್ಯ ಮಾತ್ರ ಶೂನ್ಯ. ಜಿಲ್ಲಾಧಿಕಾರಿ ಕಚೇರಿ ಸಂಪರ್ಕ ರಸ್ತೆಯಲ್ಲಿ ಪಾದಚಾರಿ ರಸ್ತೆ ಇದ್ದರೂ ಅದು ಸಾರ್ವಜನಿಕರ ಸಂಚಾರಕ್ಕೆ ಯೋಗ್ಯವಾಗಿಲ್ಲ.

***
ಜಿಲ್ಲೆಯಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಸಾರ್ವಜನಿಕರು ಸಹ ಈ ನಿಟ್ಟಿನಲ್ಲಿ ಪೊಲೀಸರಿಗೆ ಸಹರಿಸಬೇಕು.
-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್
ಪೊಲೀಸ್ ವರಿಷ್ಠಾಧಿಕಾರಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT