ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ; ಕಾಂಗ್ರೆಸ್‌ ವಿಫಲ

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ವಾಗ್ದಾಳಿ
Last Updated 23 ಜನವರಿ 2017, 10:43 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯದಲ್ಲಿ ಬರಗಾಲ ತೀವ್ರ ವಾಗಿದ್ದು, ಅಣೆಕಟ್ಟೆಗಳು ಬರಿದಾಗಿವೆ. ಜನರು ಕುಡಿಯುವ ನೀರಿಗೂ ಪರದಾಡುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಹಾಗೂ ಕುಡಿಯುವ ನೀರಿಲ್ಲದೇ ಜನರು ಹಳ್ಳಿ ಗಳಿಂದ ನಗರದತ್ತ ಗುಳೆ ಹೊರಟಿದ್ದಾರೆ. ಮೂರು ವರ್ಷದಲ್ಲಿ ₹ 17 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟ ಆಗಿದೆ. ರಾಜ್ಯ ಸರ್ಕಾರವು ಸಂಕಷ್ಟಕ್ಕೆ ಸ್ಪಂದಿಸದೇ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯುತ್ತಾ ಕುಳಿತಿದೆ ಎಂದು ದೂರಿದರು.

ಬರ ಪರಿಹಾರ ವಿತರಿಸುವ ಕೆಲಸ ಆಗಿಲ್ಲ. ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ನೀರಾವರಿ ಪ್ರದೇಶದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇವಿನ ಕೊರತೆಯೂ ಕಾಡುತ್ತಿದೆ. ಮೇವು ಖರೀದಿಯಲ್ಲಿಯೂ ಅವ್ಯವಹಾರ ಆಗಿದೆ ಎಂದು ಆರೋಪಿಸಿದರು.

ಕೇಂದ್ರ ನೀಡಿದ ಪರಿಹಾರ ಹಣವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ. ಹಿಂದಿನ ಐದು ವರ್ಷದಲ್ಲಿ ಕೆಟ್ಟ ಆಡಳಿತ ನೀಡಿದ್ದ ಬಿಜೆಪಿಯವರೇ ಟೀಕಿಸುತ್ತಾರೆ ಎಂದು ಕಾಂಗ್ರೆಸ್‌ ಆಡಳಿತ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಕೇಂದ್ರವು ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್‌ ನಾಯಕರು ದೂರಿದರೆ, ಬಿಡುಗಡೆ ಮಾಡಿದ ಅನುದಾನ ಬಳಸಿಕೊಂಡಿಲ್ಲ ಎಂದು ಬಿಜೆಪಿ ನಾಯಕರು ದೂರು ತ್ತಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿದೇ ಎರಡೂ ಪಕ್ಷಗಳ ನಾಯಕರು ಆರೋಪ, ಪತ್ಯಾರೋಪದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಜಲ್ಲಿಕಟ್ಟುಗೆ ಬೆಂಬಲ ನೀಡುವ ಕೇಂದ್ರ ಸರ್ಕಾರವು, ಕಾವೇರಿ, ಮಹಾದಾಯಿ ಜಲ ವಿವಾದದಲ್ಲಿ ತುಟಿ ಬಿಚ್ಚುತ್ತಿಲ್ಲ. ಕೇಂದ್ರವು ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದರು.

ಕಂಬಳ ಕ್ರೀಡೆ ನಿಷೇಧಿಸಿದಾಗ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಪುನರ್‌ ಪರಿಶೀಲನೆ ಅರ್ಜಿ ಹಾಕಲಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಸಂಸದ ಸಿ.ಎಸ್‌.ಪುಟ್ಟರಾಜು, ಮಾಜಿ ಶಾಸಕ ಎಂ. ಶ್ರೀನಿವಾಸ್‌, ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಪ್ರೇರಣಾ ಟ್ರಸ್ಟ್‌ನ ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT