ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೇಳು ಕಡಿದಾಗಲೇ ಪ್ರತಿರೋಧ ಒಡ್ಡಬೇಕಿತ್ತು’

ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ವಿ. ಶ್ರೀಶಾನಂದ ಅವರಿಂದ ಪ್ರತಿಪಾದನೆ
Last Updated 23 ಜನವರಿ 2017, 12:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚೇಷ್ಟೆಯ ಸ್ವಭಾವದವರಾದ ಭಾರತೀಯರು ಗಣೇಶ ಮೂರ್ತಿಯ ಹೊಕ್ಕಳಿನಲ್ಲಿದ್ದ ಚೇಳು ಕಡಿದ ಕೂಡಲೇ ಅದಕ್ಕೆ ಪ್ರತಿರೋಧ ಒಡ್ಡಬೇಕಿತ್ತು. ಆದರೆ, ಹಾಗೆ ಮಾಡುವುದು ಬಿಟ್ಟು ಇತರರೂ ಕಡಿಸಿಕೊಳ್ಳಲು ಅವಕಾಶ ನೀಡಿದ್ದರಿಂದಲೇ ಭಾರತೀಯ ಸಂಸ್ಕೃತಿ ವಿನಾಶದತ್ತ ಸಾಗಿದೆ. ಚೇಳು ಕಡಿದುದನ್ನು ಪಾಶ್ಚಾತ್ಯರ ದಾಳಿ ಎಂದೇ ತಿಳಿಯಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವಿ. ಶ್ರೀಶಾನಂದ ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯು ಇಲ್ಲಿನ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ಪ್ರಾಂತೀಯ ಹಿಂದೂ ಅಧಿ­ವೇಶನದ ಸಮಾರೋಪದಲ್ಲಿ ಭಾನು­ವಾರ ಅವರು ಮಾತನಾಡಿದರು.

‘ಶತಮಾನಗಳ ಕಾಲ ಅನೇಕ ವಿದೇಶಿಯರು ಭಾರತದ ಮೇಲೆ ದಾಳಿ ಮಾಡಿದ್ದಾರೆ. ಅವರ ದಾಳಿಗಳು ಉಳಿಪೆ­ಟ್ಟುಗಳಿದ್ದಂತೆ. ಆದರೆ, ಭಾರತವೆಂಬ ಮೂರ್ತಿ ಮಾತ್ರ ಆ ಉಳಿಪೆಟ್ಟಿನ ಏಟಿಗೆ ಭಗ್ನವೇನೂ ಆಗಿಲ್ಲ. ಡೆರೆಕ್‌ ಎಂಬ ವಿದ್ವಾಂಸ ತಮ್ಮ 56ನೇ ವಯಸ್ಸಿನಲ್ಲಿ ಹಿಂದೂ ಪಂಡಿತರನ್ನು ಭೇಟಿಯಾಗಿ ಸಂಸ್ಕೃತ ಕಲಿತರು. ಈ ಧರ್ಮದ ಮಹತ್ವವನ್ನು ವಿವರಿಸಲು ಹಿಂದೂ  ಧರ್ಮಶಾಸ್ತ್ರ ಕುರಿತು 9 ಸಂಪುಟಗಳನ್ನು ಬರೆದರು. ಇದೇ ವ್ಯಕ್ತಿ ಕ್ರಿಶ್ಚಿಯನ್‌, ಇಸ್ಲಾಂ, ಪಾರ್ಸಿ ಸೇರಿದಂತೆ ಹಲವು ಧರ್ಮಗಳ ಬಗ್ಗೆ ತೌಲನಿಕ ಅಧ್ಯಯನ ಮಾಡಿ ಹಿಂದೂ ಧರ್ಮವೇ ಶ್ರೇಷ್ಠ ಎಂದು ಹೇಳಿದ್ದಾರೆ. ನಮ್ಮ ತಾಯಿಗೆ ಬೇರೆಯವರು ಪ್ರಮಾಣಪತ್ರ ಕೊಟ್ಟಿ­ದ್ದಾರೆ. ಆದರೆ, ನಮಗೇ ತಾಯಿಯ ಮಹತ್ವ ಗೊತ್ತಾಗುತ್ತಿಲ್ಲ’ ಎಂದು ವಿಷಾದಿಸಿದರು.

‘ದೇವರನ್ನು ಪ್ರಶ್ನಿಸುವ ಅಧಿಕಾರ­ವನ್ನು ಹಿಂದೂ ಧರ್ಮದಲ್ಲಿ ಮಾತ್ರ ­ಕೊಡಲಾಗಿದೆ. ಬ್ರಹ್ಮ ನೀಡಿದ ಉಪದೇಶ ಸರಿ ಎನಿಸದಿದ್ದರೆ ನಾಸ್ತಿಕರಾಗಿಯೇ ಉಳಿಯಬಹುದಾಗಿದೆ. ನಮ್ಮದು ಜಾತ್ಯತೀತ, ಧರ್ಮನಿರಪೇಕ್ಷ ರಾಷ್ಟ್ರ. ಬೇಕಾದ ಧರ್ಮವನ್ನು ಆಚರಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಎಲ್ಲ ಧರ್ಮಗಳ ಸಮನ್ವಯವನ್ನು ಸಂವಿಧಾನ ಹೇಳಿದೆ. ಹಾಗೆಂದು ನಿಮ್ಮ ಧರ್ಮವನ್ನು ಬಿಡಿ ಎಂದಿಲ್ಲ’ ಎಂದು ಹೇಳಿದರು.

ಪ್ರವಚನಕಾರ ಸಮೀರಾಚಾರ್ಯ ಕಂಠಪಲ್ಲಿ ಮಾತನಾಡಿ, ‘ದೇಶದ ಎಲ್ಲ ನದಿಗಳಿಗೂ ಹೆಣ್ಣಿನ ಹೆಸರೇ ಇದೆ. ನದಿಗಳು ನಮ್ಮ ತಾಯಿಯ ಸಮಾನ. ಆ ನದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವ, ಸಾಬೂನು ಹಚ್ಚಿ ಮೈ ತೊಳೆಯುವುದನ್ನು ನಿಲ್ಲಿಸಬೇಕು’ ಎಂದರು. ಮಾತಾ ಆಶ್ರಮದ ತೇಜೋಮಯಿ ಸಾನ್ನಿಧ್ಯ ವಹಿಸಿದ್ದರು. ವಕೀಲ ನೀಲೇಶ್‌ ಮಾತನಾಡಿದರು.

ಸಮಿತಿಯ ಕರ್ನಾಟಕ ಘಟಕದ ಸಮನ್ವಯಕಾರ ಗುರುಪ್ರಸಾದ್‌ ಇದ್ದರು. ಇದನ್ನೂ ಮುನ್ನ ನಡೆದ ಗೋಷ್ಠಿ­ಯಲ್ಲಿ ಗುರುಪ್ರಸಾದ ಅವರು ಮೌಢ್ಯ ನಿಷೇಧ ಕಾನೂನು ಕುರಿತು; ನೀಲೇಶ್‌ ಜಿಹಾದಿ ಅವರು ಭಯೋ­ತ್ಪಾದನೆ ಕುರಿತು; ವಿಜಯ್‌ ರೇವಣಕರ್‌ ಹಿಂದೂ ಧರ್ಮ ಶಿಕ್ಷಣದ ಕುರಿತು; ಭ್ರಷ್ಟಾಚಾರ ಇದು ಪ್ರಜಾಪ್ರಭುತ್ವದ ವೈಫಲ್ಯ ಕುರಿತು ‘ರಣರಾಗಿಣಿ’ ಸಂಘಟ­ನೆಯ ವಿದುಲಾ ಹಳದೀಪುರ; ಧರ್ಮಕಾರ್ಯ ಮಾಡುವ ಧರ್ಮ­ಪ್ರೇಮಿಗಳಿಗೆ ಕಾನೂನು ಸಲಹೆ ಕುರಿತು ವಕೀಲ ದಿನೇಶ್ ನಾಯ್ಕ್; ಧರ್ಮಾ­ಚರಣೆಯಿಂದ ದೇವರ ಕೃಪೆ ಕುರಿತು ವಕೀಲೆ ರೂಪಾ ಢವಳಗಿ; ಮಾಹಿತಿ ಹಕ್ಕು ಕಾಯ್ದೆ ಕುರಿತು ವಕೀಲ ಕೆ.ಪ್ರಹ್ಲಾದ್; ಗೋವು ಸಂರಕ್ಷಣೆ ಕುರಿತು ಗಿರೀಶ ಅಗಡಿ; ಸಾಮಾಜಿಕ ಮಾಧ್ಯಮ­ಗಳ ಮೂಲಕ ಧರ್ಮಪ್ರಸಾರ ಕುರಿತು ಪ್ರಥಮೇಶ್ ಪೀರಾಪುರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT