ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸದಿಂದಲೇ ಸ್ವಾವಲಂಬನೆ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಮಯೋರಾ

ಕಲೆಯ ಅಭಿವ್ಯಕ್ತಿಗೆ ದಾರಿ ಹಲವು. ಸೃಜನಶೀಲ ಕಲೆಯ ಅಭಿವ್ಯಕ್ತಿಗೆ ದೃಷ್ಟಿದೋಷ, ಅಂಗಹೀನತೆ ಯಾವುದೂ ಅಡ್ಡಿ ಪಡಿಸುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಗುಂಡಮ್ಮ ಗಂಜಾಳ.

ಅಂಗಹೀನತೆಯನ್ನೇ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಉತ್ತುಂಗ ಸಾಧನೆ ಮಾಡಿರುವ ಗಟ್ಟಿಗಾತಿ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದ ಗುಂಡಮ್ಮ. ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಗುಂಡಮ್ಮನವರಿಗೆ ಆಧಾರವಾದದ್ದು ಅವರ ಹವ್ಯಾಸವಾಗಿರುವ ಕರಕುಶಲ ವಸ್ತುಗಳ ತಯಾರಿಕೆ.

ಇವರ ಕೈಗಳಿಗೆ ಸಿಗುವ ಪ್ರತಿಯೊಂದು ವಸ್ತುಗಳೂ ಅಂದ ಚಂದದ ಕಲಾಕೃತಿಗಳಾಗಿ ಜೀವತಳೆಯುತ್ತವೆ. ಮಕ್ಕಳು, ಗೃಹಿಣಿಯರು, ವೃದ್ಧರು, ನೌಕರರು... ಹೀಗೆ ಇವರಿಗೆಲ್ಲಾ ದಿನನಿತ್ಯ ಬೇಕಾಗುವ ಟಿಫನ್ ಬ್ಯಾಗ್, ಸ್ಕೂಲ್ ಬ್ಯಾಗ್, ವ್ಯಾನಿಟಿ ಬ್ಯಾಗ್, ಮಾರ್ಕೆಟ್, ಟ್ರಾವೆಲಿಂಗ್ ಎಲ್ಲ ವಿನ್ಯಾಸದ ಹತ್ತಾರು ನಮೂನೆಯ ರೆಕ್ಸಿನ್, ಪರ್ಸ್‌, ಬ್ಯಾಗ್‌ಗಳನ್ನು ಕೂತಲ್ಲಿಯೇ ಹೆಣೆಯುತ್ತಾರೆ. ಸೂಕ್ಷ್ಮ ಎಳೆಗಳಿಂದ ಆಕರ್ಷಕ ಬ್ಯಾಗ್‌ಗಳನ್ನು ತಯಾರಿಸುತ್ತಾರೆ.

ಉಲ್ಲನ್‌, ಪ್ಲಾಸ್ಟಿಕ್ ವೈರ್‌ಗಳು ಇವರ ಕೈಯಲ್ಲಿ ವಿವಿಧ ರೂಪ ತಳೆಯುತ್ತವೆ. ಜೂಲಾ, ಕುಂಡಲಿ, ಜ್ಯೂಮರ್, ವಾಲ್ ಪ್ಲೇಟ್, ಕೀಬೆಂಚ್, ರಿಂಗ್ ಜೂಲಾ... ಹೀಗೆ ವಿವಿಧ ಬಗೆಯ ಡಿಸೈನ್‌ಗಳನ್ನು ಇವರು ತಯಾರಿಸುತ್ತಾರೆ.  ಇವುಗಳಿಗೆ ಬೇಕಾದ ಸಾಮಗ್ರಿಗಳನ್ನು ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಿಂದ ಆಮದು ಮಾಡಿಕೊಳ್ಳುತ್ತಾರೆ.

ಹವ್ಯಾಸವೆಂಬಂತೆ ಆರಂಭವಾದ ಇವರ ಕಲಾಕೌಶಲ ಈಗ ಉದ್ಯಮದ ರೂಪು ಪಡೆದಿದೆ. ಇವರು ತಯಾರಿಸಿದ ವಸ್ತುಗಳು ಧಾರವಾಡ, ಬೆಳಗಾವಿ, ಮಂಗಳೂರು, ಮುಂಬೈ, ಬೆಂಗಳೂರು, ಹುಬ್ಬಳ್ಳಿ ಹೀಗೆ ಎಲ್ಲೆಡೆಯೂ ಪ್ರದರ್ಶನಗೊಂಡಿವೆ. ಕೈ ಕೆಲಸದ ವಸ್ತುಗಳಿಗೆ ಮಾರುಕಟ್ಟೆ ಗಟ್ಟಿಗೊಳಿಸಿದ್ದಾರೆ. ಇವರ ಬಳಿ ಬಹಳಷ್ಟು ಮಂದಿ ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಬಿ.ಕಾಂ. ಪದವೀಧರೆಯಾಗಿರುವ ಗುಂಡಮ್ಮ, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ ಸಮಯ ಸಿಕ್ಕಾಗಲೆಲ್ಲಾ ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ಬರೆಯುತ್ತಾರೆ. ಮಕ್ಕಳಿಗೆ ಮನೆಪಾಠ ಹೇಳುತ್ತಾರೆ. ಕಂಪ್ಯೂಟರ್ ಕೆಲಸ ಮಾಡುತ್ತಾರೆ.

‘ನನ್ನ ಈ ಸ್ವಾವಲಂಬಿ ಬದುಕಿಗೆ ಸಂಜೀವಿನಿ ಕೇಂದ್ರದ ಸಿಸ್ಟರ್ ಸಿಂತಿಯಾ ಕಾರಣ. ನನ್ನಲ್ಲಿರುವ ಆತ್ಮವಿಶ್ವಾಸವನ್ನು  ಕಂಡು ಅವರು ಸಂಸ್ಥೆಯೊಂದರಲ್ಲಿ ರೆಕ್ಸಿನ್ ಬ್ಯಾಗ್ ತಯಾರಿಕೆಯ ತರಬೇತಿ ಕೊಡಿಸಿದರು. ಅದರಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು’ ಎನ್ನುತ್ತಾರೆ ಗುಂಡಮ್ಮ.

‘ಸ್ವಾವಲಂಬಿ ಬದುಕು ಅಂಗವೈಕಲ್ಯದ ದುಃಖವನ್ನು ದೂರ ಮಾಡಿದೆ.  ಅಂಗವೈಕಲ್ಯದಿಂದಾಗಿ ಮನೆ ಬಿಟ್ಟು ಹೊರಗೆ ಹೋಗದಿದ್ದರೂ ನಾನು ತಯಾರಿಸಿದ ವಸ್ತುಗಳು ಮಾತ್ರ ಎಲ್ಲೆಲ್ಲೂ ಹೆಸರು ಪಡೆಯುತ್ತಿದೆ. ಜನರೇ ನನ್ನನ್ನು ಗುರುತಿಸಿ ನನ್ನ ಬಳಿ ಬರುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂತೋಷ ಏನು ಬೇಕು’ ಎಂದು ಕೇಳುತ್ತಾರೆ.
ಅವರ ಸಂಪರ್ಕಕ್ಕೆ  9845914714.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT