ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣ ಸಾಹಿತ್ಯ ಮನುಕುಲಕ್ಕೆ ದಾರಿದೀಪ’

ಜಿಲ್ಲಾ ಮಟ್ಟದ ಪ್ರಥಮ ಯುವಜನ ಹಾಗೂ ಮಹಿಳಾ ಸಮಾ­ವೇಶದಲ್ಲಿ ಪುಸ್ತಕ ಬಿಡುಗಡೆ, ಗಣ್ಯರಿಂದ ಉಪನ್ಯಾಸ
Last Updated 24 ಜನವರಿ 2017, 6:57 IST
ಅಕ್ಷರ ಗಾತ್ರ

ಬಾಗಲಕೋಟೆ: ಶರಣ ಸಾಹಿತ್ಯ ಕೇವಲ ಲಿಂಗಾಯತರು ಇಲ್ಲವೇ ವೀರಶೈವರಿಗೆ ಸಂಬಂಧಿಸಿದ್ದು ಅಲ್ಲ. ಬದಲಿಗೆ ಇಡೀ ಮನುಕುಲಕ್ಕೆ ದಾರಿದೀಪವಾಗುವ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ  ಹೇಳಿದರು.

ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಯುವಜನ ಹಾಗೂ ಮಹಿಳಾ ಸಮಾ­ವೇಶದಲ್ಲಿ ಕಿಣಗಿ ಬಸವಲಿಂಗಪ್ಪನವರು ಹಾಗೂ ಪಾರ್ವತಮ್ಮ ಅವರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಆಧುನಿಕ ಭೋಗ, ಭಾಗ್ಯ, ಮೋಹ, ಮಜಲಗಳಿಗೆ ಸಿಲುಕಿ ಇಂದಿನ ಯುವ­ಜನಾಂಗ ದಿಕ್ಕು ತಪ್ಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹದ­ಗೆಟ್ಟು ಹೋದ ಇಂದಿನ ವ್ಯವಸ್ಥೆಗೆ ಪರಿ­ಹಾರ ಕಂಡುಕೊಳ್ಳಲು ಯುವಜನತೆ ,ಮಹಿಳೆಯರಿಗೆ ವಚನ ಸಾಹಿ­ತ್ಯದ ಮೂಲಕ ಶರಣರು ನೀಡಿದ ಸಂ­ದೇ­ಶ ಮಾರ್ಗದರ್ಶಿಯಾಗಲಿದೆ ಎಂದರು.
ನಿವೃತ್ತಿಯ ಬದುಕನ್ನು ಸಮು­ದಾಯದ ಏಳ್ಗೆಗೆ ವಿನಿಯೋಗಿಸುವಂತೆ ಹಿರಿಯರಿಗೆ ಕಿವಿಮಾತು ಹೇಳಿದ ಅವರು, ವೃದ್ಧ ತಾಯಿ–ತಂದೆಯನ್ನು  ರಕ್ಷಣೆ ಮಾಡುವ ಮನೋಭಾವ ಇಂದಿನ ಯುವ ಮನಸ್ಸಿಗೆ ಬರುತ್ತಿಲ್ಲ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸಾದರ ಮಾತನಾಡಿ ವೈಚಾರಿಕ ಸಂದೇಶ ನೀಡಲು ಈ ಕಾರ್ಯಕ್ರಮ ಆಯೋಜಿಸ­ಲಾಗಿದೆ. ನುಡಿದಂತೆ ನಡೆಯುವುದೇ ನಿಜವಾದ ಸಾಹಿತ್ಯ. ಅದೇ ಕಾರಣಕ್ಕೆ ವಚನ ಸಾಹಿತ್ಯ 900 ವರ್ಷಗಳ ನಂತರವೂ ಇಂದಿಗೂ ಸಾರ್ವಕಾಲಿಕ ಸಾಹಿತ್ಯವಾಗಿ ಉಳಿದಿದೆ ಎಂದು ಹೇಳಿದ ಸಾದರ, ಬ್ರಿಟಿಷ್ ಪಾರ್ಲಿಮೆಂಟ್‌ನ ಎದುರು ಬಸವಣ್ಣನ ಪ್ರತಿಮೆ ಅನಾ­ವರಣ ಮಾಡಿ ಜಗತ್ತಿಗೆ ಮೊದಲು ಸಂವಿ­ಧಾನ, ಸಂಸತ್ ಕೊಟ್ಟು ದೊಡ್ಡ ಸಾಮಾ­ಜಿಕ ಹಾಗೂ ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೆದಿದ್ದನ್ನು ಸ್ಮರಿಸ­ಲಾಯಿತು. ಇತಿಹಾಸ ಮರುಕಳಿಸಲಿದೆ ಎಂದು ಅಭಿಪ್ರಾಯಪಟ್ಟರು. ಮಾದಕ ವಸ್ತು ಸೇವಿಸುವುದಿಲ್ಲ. ತಂದೆ–ತಾಯಿಯನ್ನು ವೃದ್ಧಾಪ್ಯದಲ್ಲಿ ಜೋಪಾನ ಮಾಡುತ್ತೇವೆ ಎಂದು ಯುವಜನರಿಂದ ಇದೇ ವೇಳೆ ಪ್ರತಿಜ್ಞೆ ಮಾಡಿಸಲಾಯಿತು.

ಸಮಾರಂಭದಲ್ಲಿ ಚರಂತಿಮಠದ ಪ್ರಭುಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಹಾಜರಿದ್ದರು. ಮಧ್ಯಾಹ್ನ ನಡೆದ ಯುವಜನ ಗೋಷ್ಠಿಯಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಡಾ.­ವಿಜ­ಯ­ಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.

ಸಂಕೇಶ್ವರದ ನಿವೃತ್ತ ಪ್ರಾಧ್ಯಾಪಕ ಡಾ.ಗುರುಪಾದ ಮರೇಗುದ್ದಿ ‘ವಚನ ಸಾಹಿತ್ಯ ಮತ್ತು ವರ್ತಮಾನದ ಯುವಜನತೆ’ ವಿಷಯದ ಬಗ್ಗೆ ಹಾಗೂ ಬಿ.ವಿ.ವಿ.ಎಸ್ ಪಾಲಿಟೆಕ್ನಿಕ್‌ನ ಪ್ರಾಚಾ­ರ್ಯ ಪ್ರೊ.ಜಿ.ಬಿ.ದಾನಶೆಟ್ಟಿ ‘ತಂತ್ರಜ್ಞಾನ ಯುಗದಲ್ಲಿ ವಚನ ಸಾಹಿತ್ಯದ ಮೌಲ್ಯಗಳ ಸ್ಥಾನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.  ಮಹಿಳಾ ಗೋಷ್ಠಿಯ ಅಧ್ಯಕ್ಷತೆಯನ್ನು ಅಕ್ಕನ­ಬಳಗದ ಅಧ್ಯಕ್ಷೆ ಶಾಂತಾತಾಯಿ ಶಾಬಾದಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT