ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ: ಸರಣಿ ಪ್ರತಿಭಟನೆ

ಕೃಷ್ಣ ಏತ ನೀರಾವರಿ ಯೋಜನೆ ಶೀಘ್ರ ಜಾರಿಗೆ ರೈತರ ಒತ್ತಾಯ, ನಗರದಲ್ಲಿ ಬೃಹತ್‌ ಮೆರವಣಿಗೆ
Last Updated 24 ಜನವರಿ 2017, 7:25 IST
ಅಕ್ಷರ ಗಾತ್ರ

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಸರಣಿ ಪ್ರತಿಭಟನೆ ನಡೆಸಿದವು.

ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ  ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಯಾದವ (ಗೊಲ್ಲ) ಜನಾಭಿವೃದ್ಧಿ ವೇದಿಕೆ ಪದಾಧಿಕಾರಿಗಳು ತೋಂಟದಾರ್ಯ ಮಠದ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರೋಣ ತಾಲ್ಲೂಕಿನ 16 ಗ್ರಾಮಗಳಿಗೆ ಕೃಷ್ಣ ಏತ ನೀರಾವರಿ ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ರೈತರು ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಸಿದರು. ಹೆಚ್ಚುವರಿ ದಂಡ, ಶುಲ್ಕ ವಿಧಿಸಿರುವ ನೂತನ ಮೋಟಾರು ವಾಹನ ಕಾಯ್ದೆಗೆ ತಿದ್ದಪಡಿ ಮಾಡಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ನೌಕರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರತಿ ತಿಂಗಳು ನೀಡುವಂತೆ ಹಾಗೂ ಅನುಮೋದನೆ ಬಡ್ತಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಆಟೋ ಚಾಲಕರ ಪ್ರತಿಭಟನೆ :  ಆಟೋ ಚಾಲನೆ ವೃತ್ತಿ ಅವಲಂಬಿಸಿದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ ಕೈಗೊಳ್ಳದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಟೋ ಚಾಲಕರಾಗಿದ್ದಾರೆ. ಹೊಸ ಮೋಟಾರು ವಾಹನ ಕಾಯ್ದೆಯಲ್ಲಿನ ಹೆಚ್ಚುವರಿ ದಂಡ ಹಾಗೂ ಪಾಸಿಂಗ್ ಶುಲ್ಕದ ಏರಿಕೆಯಿಂದ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ, ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿ, ತಹಶೀಲ್ದಾರರ ಮೂಲಕ ಕೇಂದ್ರ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.

ಪಾಸಿಂಗ್ ನವೀಕರಣ ಆಗದ ಆಟೋಗಳು ರಸ್ತೆ ಮೇಲೆ ಓಡಾಡಿದರೇ ದಿನಕ್ಕೆ ₨50ರಂತೆ ದಂಡ ವಿಧಿಸುವ ಕಾನೂನು ಜಾರಿಗೊಳಿಸಲಾಗಿದೆ. ಪಾಸಿಂಗ್ ನವೀಕರಣಕ್ಕೆ ಕೆಲವು ದಿನಗಳು ಹಿಡಿಯುತ್ತವೆ. ಏಕಾಏಕಿ ಹೆಚ್ಚಿನ ದಂಡ ವಿಧಿಸಿದರೆ ಮತ್ತಷ್ಟು ಆರ್ಥಿಕ ಹೊರೆ ಬೀಳುತ್ತದೆ ಎಂದು ಚಾಲಕರು ದೂರಿದರು.

ಪರವಾನಗಿ, ಚಾಲನಾ ಪತ್ರ ಶುಲ್ಕವನ್ನು ಏರಿಸಲಾಗಿದೆ. ಹಸಿರು ತೆರಿಗೆಯನ್ನು ವಿಧಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ತಕ್ಷಣಕ್ಕೆ ಯಾವುದೇ ಕೆಲಸಗಳು ಆಗುವುದಿಲ್ಲ. ಅಂಥದರಲ್ಲಿ ಶುಲ್ಕ ಏರಿಸಿದರೇ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಪದಾಧಿಕಾರಿಗಳು ಅಳಲು ತೋಡಿಕೊಂಡರು.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ನಗರದ ಹೆಚ್ಚಿನ ಆಟೋ ಚಾಲಕರಿಗೆ ಸ್ವಂತ ಮನೆಯಿಲ್ಲ. ಆದ್ದರಿಂದ ಪ್ರತ್ಯೇಕ ಆಟೋ ಕಾಲೋನಿ ನಿರ್ಮಿಸಿ ಮನೆ ಒದಗಿಸಬೇಕು. ಕುಟುಂಬ ಸದಸ್ಯರನ್ನು ಇಎಸ್‍ಐ ವ್ಯಾಪ್ತಿಗೆ ಸೇರಿಸಬೇಕು. ವಾಹನ ವಿಮೆ ಮೊತ್ತವನ್ನು ಇಳಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದರು.

ಬಿಪಿಎಲ್ ಹಾಗೂ ಚಾಲನಾ ಪತ್ರದ ಆಧಾರದ ಮೇಲೆ ಚಾಲಕರನ್ನು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ಸೇರಿಸಬೇಕು. 60 ವರ್ಷ ಮೀರಿದ ಆಟೋ ಚಾಲಕರಿಗೆ ವೃದ್ಧಾಪ್ಯ ವೇತನ ನೀಡಬೇಕು. ಚಾಲನಾ ಪರವಾನಿಗೆಗೆ ನಿಗದಿ ಪಡಿಸಿರುವ ಕಡ್ಡಾಯ ವಿದ್ಯಾರ್ಹತೆ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ.ನೌಕರರ ಪ್ರತಿಭಟನೆ
ಗ್ರಾಮೀಣ ಅಭಿವೃದ್ಧಿ ಇಲಾಖೆ 2016ರ ಆಗಸ್ಟ್‌ನಲ್ಲಿ ಹೊರಡಿಸಿರುವ ಕನಿಷ್ಠ ವೇತನ ಜಾರಿ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ವಿಳಂಬ ಧೋರಣೆ ಅನುಸರಿಸುತ್ತಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರ್ಕಾರದ ಆದೇಶದಂತೆ ಪ್ರತಿ ತಿಂಗಳು ಸಂಬಳ ಕೊಡುತ್ತಿಲ್ಲ ಸೇರಿದಂತೆ ಅನುಮೋದನೆ ಬಡ್ತಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ಗ್ರಾಮ ಪಂಚಾಯಿತಿ ಎಲ್ಲ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು, ಸಿಬ್ಬಂದಿಯಲ್ಲಿ ಯಾರು ಮೊದಲು ನೇಮಕಗೊಂಡಿದ್ದಾರೆ ಅವರಿಗೆ ಮೊದಲು ಆದ್ಯತೆ ನೀಡಿ ಅನುಮೋದನೆ ನೀಡಬೇಕು, ಪಂಪ್‌ ಆಪರೇಟರ್‌ಗಳಿಂದ ಖಾಲಿ ಇರುವ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು, ಕರ ವಸೂಲಿಗಾರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಗ್ರೇಡ್‌–2 ಹಾಗೂ ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೃಷ್ಣ ಏತ ನೀರಾವರಿ ರೈತರ ಪ್ರತಿಭಟನೆ:  ಕೃಷ್ಣಾ ಮೇಲ್ದಂಡೆ ಮೂರನೆಯ ಹಂತದ ಯೋಜನೆ ಅಡಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ  ಯೋಜನೆಯಲ್ಲಿ ರೋಣ ತಾಲ್ಲೂಕು ಕೂಡ ಫಲಾನುಭವಿ ತಾಲ್ಲೂಕಾಗಿದೆ. ಈ ಯೋಜನೆಯಿಂದ ರೋಣ ತಾಲ್ಲೂಕಿನ ಪ್ಯಾಟಿ, ನೆಲ್ಲೂರ, ಕಲ್ಲಿಗನೂರ, ಮುಶಿಗೇರಿ, ರುದ್ರಾಪೂರ, ಬೇವಿನಕಟ್ಟಿ, ಅಮರಗಟ್ಟಿ, ಗುಳಗುಳಿ, ದ್ಯಾಮುಣಿಸಿ, ಚಿಕ್ಕಅಳಗುಂಡಿ, ಹೊನ್ನಿಗ ನೂರ, ಬಳಗೋಡ, ಸರ್ಜಾಪೂರ, ಶಾಂತಗೇರಿ, ಬೊಮ್ಮಸಾಗರ ಸೇರಿ 16 ಗ್ರಾಮಗ 8430 ಏಕರೆ ಜಮೀನು ನೀರಾವರಿಗೆ ಒಳಪಡಲಿದೆ.

ಗಜೇಂದ್ರ ಗಡ ಹಾಗೂ ರೋಣ ತಾಲ್ಲೂಕಿನ ಕುಡಿಯುವ ನೀರಿನ ಬವಣೆಯೂ ನೀಗಲಿದೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರಾವರಿ ಯೋಜನೆ ಪ್ರಾರಂಭಗೊಳ್ಳದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಇದನ್ನು ವಿರೋಧಿಸಿ  ಕೃಷ್ಣಾ ಏತ ನೀರಾವರಿ ರೋಣ ಮತ್ತು ಗಜೇಂದ್ರಗಡ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಹಾತ್ಮಾಗಾಂಧಿ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಯೋಜನೆಗೆ ಸಂಬಂಧಿಸಿದ ರೋಣ ತಾಲ್ಲೂಕು ಕೇಂದ್ರದಲ್ಲಿ ಕೊಪ್ಪಳ ಏತ ನೀರಾವರಿ ಉಪ ವಿಭಾಗ ತೆರೆಯಬೇಕು ಎಂದು ಆಗ್ರಹಿಸಿದರು. ಕೂಡ್ಲೆಪ್ಪ ಗುಡಿಮನಿ, ಶಾಂತಣ್ಣ ಸಜ್ಜನವರ, ಆನಂದ ಕುಲಕರ್ಣಿ, ಎಂ.ಎಸ್‌. ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT