ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಹೊಸ ಬಗೆಯ ಕಾರ್ಪೊರೇಟ್‌ ವಂಚನೆ

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ಮುಂಬರುವ ದಿನಗಳಲ್ಲಿ ಕಾರ್ಪೊರೇಟ್‌ ವಂಚನೆ ಪ್ರಕರಣಗಳು ಏರಿಕೆ ಕಾಣಲಿವೆ ಎಂಬುದು ಭಾರತದ ಕಾರ್ಪೊರೇಟ್‌ ಸಂಸ್ಥೆಗಳ ಅಭಿಪ್ರಾಯವಾಗಿದೆ. ಡೆಲಾಯ್ಟ್‌ ಸಂಸ್ಥೆ ನಡೆಸಿದ ಭಾರತದಲ್ಲಿನ ವಂಚನೆ ಪ್ರಕರಣಗಳ ಎರಡನೆ ಆವೃತ್ತಿಯ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ 70ರಷ್ಟು ಜನರು  ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ದೇಶಿ ಉದ್ದಿಮೆ ಸಂಸ್ಥೆಗಳನ್ನು ಪ್ರತಿನಿಧಿಸಿದ್ದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಶೇ   54ರಷ್ಟು ಮತ್ತು ಶೇ 65ರಷ್ಟು ಜನರು ವೃತ್ತಿನಿರತರಾಗಿದ್ದಾರೆ. ಭವಿಷ್ಯದಲ್ಲಿ ಕಾರ್ಪೊರೇಟ್‌ ವಂಚನೆ ಪ್ರಕರಣಗಳು ಹೆಚ್ಚಲಿವೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

ವಂಚನೆ ಪ್ರಕರಣಗಳಲ್ಲಿ ಏರಿಕೆಯಾಗುವುದಕ್ಕೆ ನೈತಿಕ ಮೌಲ್ಯಗಳ ಅಧಃಪತನ ಮುಖ್ಯ ಕಾರಣವಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ  ವಿವಿಧ ವರ್ಗಗಳಿಗೆ ಸೇರಿದವರು ತಮ್ಮ ಅನಿಸಿಕೆ ದಾಖಲಿಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತಹ ಲಂಚ, ಭ್ರಷ್ಟಾಚಾರ, ನಿಧಿಗಳ ವರ್ಗಾವಣೆ – ಕಳ್ಳತನ, ಬೃಹತ್‌ ಉದ್ದಿಮೆ ಸಂಸ್ಥೆಗಳಲ್ಲಿ  ಮಾರಾಟಗಾರರ ಪರ ನಿಲುವು ತಳೆಯುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಹಿತಾಸಕ್ತಿಗಳ ಸಂಘರ್ಷವು ಸಾಮಾನ್ಯವಾಗಿವೆ. ಕಳೆದ ಎರಡು ವರ್ಷಗಳಲ್ಲಿ ಪ್ರಮುಖ ವಂಚನೆ ಪ್ರಕರಣಗಳೂ ಈ ಸಂಗತಿಗಳ ಸುತ್ತವೇ ಗಿರಕಿ ಹೊಡೆಯುತ್ತವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ತಿಳಿಸಿದ್ದಾರೆ.

ಹೊಸ ಬಗೆಯ ವಂಚನೆ
ವಂಚನೆಗಳ ಬಗ್ಗೆ ಎಲ್ಲೆಡೆ ಒಂದೇ ಬಗೆಯಲ್ಲಿ ಕಳವಳ ವ್ಯಕ್ತವಾಗಿದ್ದರೂ,  ವಂಚನೆ ಪ್ರಕರಣಗಳನ್ನು ನಿರ್ಬಂಧಿಸಲು ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿರುವ ಕ್ರಮಗಳಲ್ಲಿ ವ್ಯಾಪಕ ವ್ಯತ್ಯಾಸಗಳು ಇರುವುದೂ ಬೆಳಕಿಗೆ ಬಂದಿದೆ. ವಂಚನೆಗಳ ಸ್ವರೂಪ ತುಂಬ ಸಂಕೀರ್ಣವಾಗಿದ್ದು, ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉದ್ದಿಮೆ ಸಂಘಟನೆಗಳು ಸಾಕಷ್ಟು ದೂರ ಕ್ರಮಿಸಬೇಕಾಗಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಬೃಹತ್‌ ಉದ್ದಿಮೆ ಸಂಸ್ಥೆಗಳು ಗೊತ್ತಿರುವ ವಂಚನೆಗಳ ಬಗ್ಗೆ ನಿರಂತರವಾಗಿ ನಿಗಾ ಇರಿಸಿದ್ದರೂ, ಹೊಸ ಬಗೆಯ ವಂಚನೆಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿಲ್ಲ.

ಬೃಹತ್‌ ಉದ್ದಿಮೆ ಸಂಸ್ಥೆಗಳು ಬಹಳ ವರ್ಷಗಳಿಂದ ಗೊತ್ತಿರುವ ವಂಚನೆಗಳನ್ನು ತಡೆಗಟ್ಟಲು ಹೆಚ್ಚು ಆದ್ಯತೆ ನೀಡುತ್ತಿವೆ. ಆದರೆ, ಸಾಮಾಜಿಕ ಮಾಧ್ಯಮ ಮತ್ತು ಸ್ಪರ್ಧಾತ್ಮಕ ವಿರೋಧಿ ವರ್ತನೆಯಂತಹ ಹೊಸ ಆತಂಕಕಾರಿ ವಂಚನೆ ಪ್ರವೃತ್ತಿಗಳ ಬೆಳವಣಿಗೆಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಸನ್ನದ್ಧತೆ ಕಂಡು ಬರುವುದಿಲ್ಲ.

ಉದಾಹರಣೆಗೆ– ಸಾಮಾಜಿಕ ಮಾಧ್ಯಮಗಳಲ್ಲಿ  ಸಂಸ್ಥೆಗೆ ಕಳಂಕ ಹಚ್ಚುವ ಅಪಪ್ರಚಾರವನ್ನು ತಮ್ಮ ಸಂಸ್ಥೆ ಹೇಗೆ ಎದುರಿಸಿತು ಎನ್ನುವುದರ ಬಗ್ಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬಹುತೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇಂತಹ ವಂಚನೆ ಪ್ರಕರಣಗಳು ಸಂಸ್ಥೆ ಯೊಂದರ ಯಶಸ್ಸನ್ನೇ ಗಂಡಾಂತರಕ್ಕೆ ಒಳಪಡಿಸುತ್ತವೆ.

ಅನಧಿಕೃತ ಬಳಕೆದಾರರು ಬೌದ್ಧಿಕ ಆಸ್ತಿ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಶೇ 68ರಷ್ಟು ಜನರು ಹೇಳುತ್ತಾರೆ. ಗ್ರಾಹಕರನ್ನು ಮೋಸ ಮಾಡಲು  ಕೆಲ ಸಂಸ್ಥೆಗಳು ನಕಲಿ ವ್ಯಕ್ತಿಚಿತ್ರ ಮತ್ತು ಛದ್ಮವೇಷದ  ಮೊರೆ ಹೋಗುತ್ತವೆ ಎಂದು ಶೇ 65ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ಕದಿಯಲು ಸಂಸ್ಥೆಗಳ ಕಂಪ್ಯೂಟರ್‌ ಜಾಲಕ್ಕೆ ಕನ್ನ ಹಾಕುವ (ಹ್ಯಾಕಿಂಗ್‌) ಸಂಚು ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಹುತೇಕ ಉದ್ದಿಮೆ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. 90ರ ದಶಕದ ಹ್ಯಾಕರ್ಸ್‌ಗಳನ್ನು ನಿಯಂತ್ರಿಸುವಂತಹ ಹಳೆಯ ಸೈಬರ್‌ ಸುರಕ್ಷತಾ ಕ್ರಮಗಳಿಗೆ ಅನೇಕ ಸಂಸ್ಥೆಗಳು ಈಗಲೂ ಜೋತು ಬಿದ್ದಿವೆ ಎನ್ನುವುದೂ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ವಂಚನೆಗಳು ನಡೆಯುತ್ತಿರುವ ಬಗ್ಗೆ ಅನಾಮಧೇಯ ವ್ಯಕ್ತಿಗಳು ಗಮನ ಸೆಳೆದಾಗಲೇ ಅಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ.  ವಂಚನೆ ಪ್ರಕರಣಗಳಿಗೆ ಸ್ಪಂದಿಸುವುದೂ ತುಂಬ ಸಂಕೀರ್ಣವಾಗಿದೆ. ವಂಚನೆ ಪ್ರಕರಣಗಳಿಗೆ ಸ್ಪಂದಿಸುವುದೂ ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ.

ವಂಚನೆಯ ತೀವ್ರತೆ ಆಧರಿಸಿ ತನಿಖೆ ಆರಂಭಿಸಲಾಗುವುದು ಎಂದು ಶೇ 43 ರಷ್ಟು ಜನರು ತಿಳಿಸಿದ್ದಾರೆ. ವಂಚನೆ ಎಸಗಿದವರು ರಾಜೀನಾಮೆ ಕೊಟ್ಟು ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ಶೇ 36ರಷ್ಟು ಜನರು ಹೇಳಿದ್ದಾರೆ. ವಂಚನೆ ನಡೆದಿರುವುದನ್ನು ಸಂಸ್ಥೆಯ ನಿರ್ದೇಶಕ ಮಂಡಳಿ, ಉದ್ಯೋಗಿಗಳು ಮತ್ತು ನಿಯಂತ್ರಣ ಸಂಸ್ಥೆಗಳ ಗಮನಕ್ಕೆ ತರಲಾಗುತ್ತದೆ ಎಂದು ಶೇ 33 ರಷ್ಟು ಜನರು ಹೇಳುತ್ತಾರೆ.

ಹೊಸ ಬಗೆಯ ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಬೃಹತ್‌ ಉದ್ದಿಮೆ ಸಂಸ್ಥೆಗಳು ಕ್ರಮ ಕೈಗೊಳ್ಳಲು ಮತ್ತು ನಿಯಮಗಳನ್ನು ಪಾಲಿಸಲು ಮುಂದಾಗದಿರುವುದು  ಕಳವಳ ಮೂಡಿಸುವ ಸಂಗತಿಯಾಗಿದೆ. 

ಹೊಸ ಕ್ರಮಗಳು ಅಗತ್ಯ
‘ವಂಚನೆ ತಡೆ ನಿರ್ವಹಣಾ ಕ್ರಮದ ಅಂಗವಾಗಿ ನಿರಂತರ  ನಿಗಾ ವ್ಯವಸ್ಥೆ ಮತ್ತು ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಿಕೊಳ್ಳುವುದರಲ್ಲಿ ಹೆಚ್ಚಳವಾಗಿದೆ. ಹೀಗಿದ್ದರೂ ಹೊಸ ಬಗೆಯ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ.

ಹೊಸ ವಂಚನೆಗಳ ನಿಯಂತ್ರಣಕ್ಕೆ ಹೊಸ ಪ್ರತಿಬಂಧನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಡೆಲಾಯ್ಟ್‌ ಇಂಡಿಯಾದ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಹಣಕಾಸು ಸಲಹೆಗಾರ ರೋಹಿತ್‌ ಮಹಾಜನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT