ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಇನ್ನಾದರೂ ಆದ್ಯತೆ ಸಿಗಲಿ

ಸಂಪಾದಕೀಯ
Last Updated 26 ಜನವರಿ 2017, 19:30 IST
ಅಕ್ಷರ ಗಾತ್ರ
ಭಾರತದ ಶಾಲೆಗಳಲ್ಲಿರುವ ಐದನೇ ತರಗತಿಯ ಮಕ್ಕಳಲ್ಲಿ ಎಷ್ಟು ಮಂದಿಗೆ ಎರಡನೇ ತರಗತಿಯ ಪುಸ್ತಕಗಳನ್ನು ಓದಲು ಸಾಧ್ಯ? ಸ್ವಯಂ ಸೇವಾ ಸಂಸ್ಥೆ ‘ಪ್ರಥಮ್’ ಹೊರ ತಂದಿರುವ ಶೈಕ್ಷಣಿಕ ಸ್ಥಿತಿಗತಿಯ ವರದಿಯ ಪ್ರಕಾರ ಶೇ 47.8ರಷ್ಟು ಮಕ್ಕಳಿಗಷ್ಟೇ ಈ ಸಾಮರ್ಥ್ಯವಿದೆ. ಎಂಟನೇ ತರಗತಿಯ ಶೇ 43.2ರಷ್ಟು ವಿದ್ಯಾರ್ಥಿಗಳು ಮಾತ್ರ ಸರಳ ಭಾಗಾಕಾರ ಮಾಡಬಲ್ಲರು. ಕರ್ನಾಟಕದ ಗ್ರಾಮೀಣ ಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಒಂದನೇ ತರಗತಿಯ ಶೇ 46.2ರಷ್ಟು ಮಕ್ಕಳಿಗೆ ಒಂದು ಅಕ್ಷರವನ್ನೂ ಗುರುತಿಸುವ ಸಾಮರ್ಥ್ಯ ಇಲ್ಲ.  ಅಂಕಗಣಿತ ಸಾಮರ್ಥ್ಯ ಇನ್ನೂ ದಯನೀಯ. ಎಂಟನೇ ತರಗತಿಯ ಮಕ್ಕಳಲ್ಲಿ ಶೇ 42.2ರಷ್ಟು ಮಂದಿಗೆ ಮಾತ್ರ ಸರಳ ಭಾಗಾಕಾರದ ಜ್ಞಾನವಿದೆ. ಆರರಿಂದ ಹದಿನಾಲ್ಕು ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಶೇ 96.9ರಷ್ಟು ಮಂದಿ ಶಾಲೆಗೆ ಹೋಗುತ್ತಿದ್ದಾರೆ ಎಂಬ ಅಂಕಿ-ಅಂಶಗಳ ಜೊತೆಗೆ ಕಲಿಕಾ ಸಾಮರ್ಥ್ಯವನ್ನು ಹೋಲಿಸಿ ನೋಡಿದರೆ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಎಷ್ಟು ದೊಡ್ಡದು ಎಂದು ಅರ್ಥವಾಗುತ್ತದೆ.
 
ಈ ಹಿನ್ನಡೆಗೆ ಕಾರಣಗಳೇನು ಎಂಬುದನ್ನು  ವಿವರಿಸುವ ಅಗತ್ಯವೇ ಇಲ್ಲ.   ಶಿಕ್ಷಣ ಎಂಬುದು ನಮ್ಮ ರಾಜಕೀಯ ಪಕ್ಷಗಳಿಗೆ ಆದ್ಯತೆಯ ವಿಷಯವೇ ಅಲ್ಲ. ಒಂದುವೇಳೆ ಚುನಾವಣಾ ವಿಷಯವಾಗಿದ್ದರೆ ಅದಕ್ಕೆ  ‘ಕೋಮುವಾದಿ ರಾಜಕಾರಣ’ ಎಂದು ಭಿನ್ನ ರಾಜಕೀಯ ಪಕ್ಷಗಳು ಪರಸ್ಪರ ದೂಷಿಸಿಕೊಳ್ಳುವ ಆಯಾಮವೊಂದಿರುತ್ತದೆ. ಶಿಕ್ಷಣದ ದುಃಸ್ಥಿತಿಯ ಬಗ್ಗೆ ಮಾತನಾಡಲು ಬೇಕಾದ ಅರಿವು ಇರುವ ಮತ್ತೊಂದು ವರ್ಗವಿದೆ. ಈಗಾಗಲೇ ಶಿಕ್ಷಣ ಪಡೆದು ಅಭಿಪ್ರಾಯ ರೂಪಿಸುವ ಸಾಮರ್ಥ್ಯವಿರುವ ವರ್ಗವಿದು. ಜಾತಿ, ಮತ ಮತ್ತು ಸೈದ್ಧಾಂತಿಕ ಅಸ್ಮಿತೆಗಳ ಚರ್ಚೆಗಳ ಸಂದರ್ಭದಲ್ಲಿ ತಾರಕ ಸ್ಥಾಯಿಯಲ್ಲಿ ಕೇಳಿಬರುವ ಇವರ ಧ್ವನಿ, ಮೂಲಭೂತ ಸಮಸ್ಯೆಗಳ ಸಂದರ್ಭದಲ್ಲಿ ಉಡುಗಿ ಹೋಗಿರುತ್ತದೆ. ಇದರ ಹಿಂದೆ ಸ್ವಾರ್ಥವೂ ಇರಬಹುದು. ಈಗಿರುವ ಕನಿಷ್ಠ ಗುಣಮಟ್ಟದ ಶಿಕ್ಷಣದಿಂದಾಗಿ ಈ ವರ್ಗಕ್ಕೆ ಹೆಚ್ಚು ಲಾಭ ದೊರೆ ತಿದೆ. ಸರಳವಾಗಿ ಹೇಳುವುದಾದರೆ ಸ್ಪರ್ಧೆ ಕಡಿಮೆ ಮಾಡಿಕೊಳ್ಳುವ  ಸ್ವಾರ್ಥ ಇಲ್ಲಿದೆಯೇನೋ?
 
ಒಂದು ದಶಕದ ಅವಧಿಯಲ್ಲಿ ಶಿಕ್ಷಣಕ್ಕಾಗಿ ವ್ಯಯಿಸಿದ ಮೊತ್ತ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 2.1ರಿಂದ ಶೇ 2.68ಕ್ಕೇನೋ ಏರಿದೆ. ಆದರೆ ಈ ಏರಿಕೆಯಿಂದ ಏನೂ ವ್ಯತ್ಯಾಸ ಆಗಿಲ್ಲ. ಭಾರತವನ್ನೇ ಹೋಲುವ ಬ್ರೆಜಿಲ್‌ನಂಥ ದೇಶಗಳಿಗೆ ಹೋಲಿಸಿದರೂ ಶಿಕ್ಷಣ ಕ್ಷೇತ್ರಕ್ಕೆ ನಾವು ಮೀಸಲಿಡುವ ಹಣ ಕಡಿಮೆಯೇ. ಆದರೆ ಈ ಮೊತ್ತವನ್ನೂ ಸರಿಯಾಗಿ ವ್ಯಯಿಸಲಾರದ ದುರಂತವೊಂದು ನಮ್ಮಲ್ಲಿದೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಮೂಲಸೌಕರ್ಯಕ್ಕಾಗಿ ಬಹಳಷ್ಟು ಹಣ ವ್ಯಯವಾಗಿದೆ. ಆದರೆ ಈ ಸೌಕರ್ಯಗಳಲ್ಲಿ ಹೆಚ್ಚಿನವು ಬಳಸಬಹುದಾದ ಸ್ಥಿತಿಯಲ್ಲಿಲ್ಲ. ಇನ್ನು, ಶಿಕ್ಷಕರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ವ್ಯಯಿಸುವ ಹಣ ಒಟ್ಟು ಶೈಕ್ಷಣಿಕ ಬಜೆಟ್‌ನ ಶೇಕಡ ಒಂದರಷ್ಟೂ ಇಲ್ಲ. ಉತ್ತರದಾಯಿತ್ವ ಮತ್ತು ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವ ಕೆಲಸಕ್ಕಾಗಿ ಬಳಕೆಯಾಗುವ ಪ್ರಮಾಣ ಶೇ 0.5 ದಾಟುವುದಿಲ್ಲ. ಕರ್ನಾಟಕದಲ್ಲಂತೂ ಇದರ ಪ್ರಮಾಣ ಶೇ 0.04 ರಷ್ಟು ಇದೆ. ಶಿಕ್ಷಣ ಕ್ಷೇತ್ರಕ್ಕೆಂದು ಸರ್ಕಾರ ಮಾಡುತ್ತಿರುವ ಎಲ್ಲಾ ವೆಚ್ಚಗಳೂ ಶೈಕ್ಷಣಿಕ ಉದ್ದೇಶದಿಂದ ಹೊರತಾಗಿವೆ ಎಂಬುದನ್ನು ಇದು ತೋರಿಸುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಶಿಕ್ಷಣ ನೀತಿಯನ್ನು ರೂಪಿಸುವ ಸ್ಥಾನದಲ್ಲಿ ಕುಳಿತಿರುವ ರಾಜಕಾರಣಿಗಳಲ್ಲಿ ಮನೆಮಾಡಿರುವ ಊಳಿಗಮಾನ್ಯ ಮನಃಸ್ಥಿತಿ. ಜನರನ್ನು ಹಂಗಿನ ಬಲೆಗೆ ಸಿಲುಕಿಸುವಂಥ ಯೋಜನೆಗಳಿಗೆ ಅವರು ಆದ್ಯತೆ ನೀಡುತ್ತಿದ್ದಾರೆ. ಇದು ದೀರ್ಘಾವಧಿಯಲ್ಲಿ ಅಪಾಯಕಾರಿ. ಮಧ್ಯಾಹ್ನದ ಊಟದಂಥ ನೀತಿಗಳಿಗೆ ಮಹತ್ವವಿದೆ. ಇದು ಅಗತ್ಯವೂ ಇರಬಹುದು. ಹಾಗೆಂದು ಶೈಕ್ಷಣಿಕ ನೀತಿ ನಿರೂಪಣೆ ಎಂಬುದು  ಬಿಸಿಯೂಟದ ನಿರ್ವಹಣೆ ಯಷ್ಟೇ ಆಗಿಬಿಡಬಾರದಲ್ಲವೇ? ಶಿಕ್ಷಣ ನೀತಿಯನ್ನು ಇಂಥ ಕೆಲಸಗಳಿಗೆ ಸೀಮಿತವಾಗಿಸು ವುದರಲ್ಲಿ ರಾಜಕಾರಣಿಗಳು ತಮ್ಮ ಹಿತವನ್ನು ಕಾಣುತ್ತಿದ್ದಾರೆ.
 
ಶಿಕ್ಷಣದಂಥ ಕ್ಷೇತ್ರದಿಂದ ಸರ್ಕಾರವನ್ನು ದೂರವಿಡುವ ಸಂಚಿನ ಭಾಗವಾಗಿ ಇದನ್ನು ನಡೆಸುತ್ತಿದ್ದಾರೆಯೇ ಎಂಬ ಸಂಶಯ ಕಾಡುವಷ್ಟರ ಮಟ್ಟಿಗೆ ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕೇತರ ವಿಚಾರಗಳು ತೂರಿಕೊಳ್ಳು ತ್ತಿವೆ. ಗುಣಮಟ್ಟದ ಸಾರ್ವತ್ರಿಕ ಶಿಕ್ಷಣ, ಜವಾಬ್ದಾರಿಯುತ ನಾಗರಿಕರ ಪ್ರಮಾಣವನ್ನು  ಹೆಚ್ಚಿಸುತ್ತದೆ. ಇದು ನಿಜವಾದ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ರಾಜಕಾರಣವೊಂದರ ಹುಟ್ಟಿಗೂ ಕಾರಣವಾಗುತ್ತದೆ. ಆದರೆ ಆಡಳಿತಾರೂಢರಿಗೆ ಇದು ಬೇಕಿಲ್ಲ. ಎಲ್ಲರಿಗೂ ಶಿಕ್ಷಣ ನೀಡುವ ಮೂಲಭೂತ ಜವಾಬ್ದಾರಿಯಿಂದಲೇ ದೂರ ಉಳಿಯುವ ಹುನ್ನಾರ ಅವರದು. ಶಿಕ್ಷಕರಿಗೆ ಪ್ರೋತ್ಸಾಹ, ಸಾಮರ್ಥ್ಯವರ್ಧನೆ ಮತ್ತು ಉತ್ತರದಾಯಿತ್ವದಂಥ ಪದಗಳೇ ಶಿಕ್ಷಣ ಕ್ಷೇತ್ರದ ಹೊಣೆ ಹೊತ್ತಿರುವವರ ಬಾಯಿಂದ ಬರುತ್ತಿಲ್ಲ. ಇದನ್ನು ಬದಲಾಯಿಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಶಿಕ್ಷಣ ಎಂಬುದು ಒಂದು ಚುನಾವಣಾ ವಿಷಯವಾಗಬೇಕು. ಇಲ್ಲವಾದರೆ ಈಗಿನ ವರದಿಗೂ ಮುಂದಿನ ದಶಕದಲ್ಲಿ ಹೊರಬರುವ ಶೈಕ್ಷಣಿಕ ಸ್ಥಿತಿಗತಿಯ ವರದಿಗೂ ಯಾವುದೇ ವ್ಯತ್ಯಾಸವಿರಲಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT