ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥೋತ್ಸವ ವೈಭವ; ಭಕ್ತರ ಕಲರವ

Last Updated 27 ಜನವರಿ 2017, 9:36 IST
ಅಕ್ಷರ ಗಾತ್ರ

ಸುತ್ತೂರು (ಮೈಸೂರು): ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ದಲ್ಲಿ ಗುರುವಾರ ಭಕ್ತರ ಝೇಂಕಾರ, ಸಾಂಸ್ಕೃತಿಕ ಕಲಾ ತಂಡಗಳ ಮೆರುಗಿನಲ್ಲಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಹೊರರಾಜ್ಯ ಮತ್ತು ನಾಡಿನ ವಿವಿಧೆಡೆಗಳಿಂದ ಜಾತ್ರೆಗೆ ಬಂದಿದ್ದ ಭಕ್ತರು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡು ಕೃತಾರ್ಥ ಭಾವ ಮೆರೆದರು. ಉತ್ಸವವು ಕರ್ತೃ ಗದ್ದುಗೆಯಿಂದ ಹೊರಟು ಗ್ರಾಮದಲ್ಲಿನ ದೊಡ್ಡಮ್ಮ ತಾಯಿ ದೇಗುಲ ತಲುಪಿ ಗದ್ದುಗೆ ಸ್ಥಳಕ್ಕೆ ವಾಪಸ್ಸಾಯಿತು. 

 ಕಲಾ ತಂಡಗಳ ಪ್ರದರ್ಶನಗಳು ಮೆರವಣಿಗೆಯುದ್ದಕ್ಕೂ ಗಮನ ಸೆಳೆ ದವು. ಜನರು ಮರಗಾಲು ಕುಣಿತ ಪ್ರದರ್ಶನವನ್ನು ಬೆರಗುಗಣ್ಣಿನಿಂದ ನೋಡಿ ಆನಂದಿಸಿದರು. ಪೂಜಾ ಕುಣಿತ, ಪಟ ಕುಣಿತ, ಗೊರವರ ಕುಣಿತ, ಡೊಳ್ಳು ಕುಣಿತ ಪ್ರದರ್ಶನಗಳು ಮುದ ನೀಡಿದವು.

ದೊಣ್ಣೆವರಸೆ, ಜಾನಪಥಕ್‌, ಜಗಲಿಗೆ ಮೇಳ, ಕೊರವಂಜಿ ಕೋಲಾಟ, ವೀರಗಾಸೆ ಆಕರ್ಷಿಸಿದವು. ಕಂಸಾಳೆ, ನಾದಸ್ವರ, ಸ್ಯಾಕ್ಸೋಫೋನ್‌ ಸಂಗೀತ, ತಮಟೆ–ನಗಾರಿ, ಮ್ಯೂಸಿಕ್‌ ಡ್ರಂ ಸಂಗೀತ, ಪಟಾಕಿ ಸದ್ದಿನ ಅಬ್ಬರ ಮುಗಿಲು ಮುಟ್ಟಿತ್ತು.  ನವಿಲು ನೃತ್ಯ, ಗಾರುಡಿ ಗೊಂಬೆ, ಹುಲಿವೇಷಧಾರಿಗಳ ಕುಣಿತ ಕಂಡು ಮಕ್ಕಳು ಸಂಭ್ರಮಿಸಿದರು. 42 ತಂಡಗಳು ನಾಡಿನ ವಿವಿಧೆಡೆಗಳ ಜನಪದ ಸೊಬಗು ಪ್ರದರ್ಶಿಸಿದವು.

ಗಣರಾಜ್ಯೋತ್ಸವ ನಿಮಿತ್ತ ರಜೆ ಇದ್ದಿದ್ದರಿಂದ ಜಾತ್ರೆ ಯಲ್ಲಿ ಜನಸಂದಣಿ ಹೆಚ್ಚು ಇತ್ತು. ಷಡಕ್ಷರಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್‌.ಗಂಗಾಧರನ್‌ ಇದ್ದರು.

ಗಾಂಧೀಜಿ’ ವೇಷಧಾರಿ
ಸುತ್ತೂರು (ಮೈಸೂರು):
ಜಾತ್ರೆಯಲ್ಲಿ ಜನ ಸಾಗರದ ನಡುವೆ ಗಾಂಧೀಜಿ ವೇಷಧಾರಿಯೊಬ್ಬರು ಗಮನ ಸೆಳೆದರು. ಆಂಧ್ರಪ್ರದೇಶದ ಚಿತ್ತೂರಿನ ಕನ್ನಯ್ಯ ಜನಜಂಗುಳಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಕನ್ನಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಗಾಂಧೀಜಿ ಮನುಕುಲಕ್ಕೆ ಮಾದರಿ. ಜಾತ್ರೆ, ಉತ್ಸವಗಳಲ್ಲಿ ಈ ರೀತಿ ವೇಷ ಧರಿಸುತ್ತೇನೆ.
ಹಣ ನೀಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ. ದಿನಕ್ಕೆ ₹ 500ರಿಂದ 1 ಸಾವಿರದವರೆಗೆ ಹಣ ಸಂಗ್ರಹವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT