ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಶಕ್ತಿ ಬಲಿಷ್ಠಗೊಳಿಸಬೇಕಿದೆ: ಎಂ. ಕೃಷ್ಣಪ್ಪ

ಮೊಳಗಿದ ದೇಶಭಕ್ತಿ * ಆಕರ್ಷಕ ಪಥ ಸಂಚಲನ * ಗಮನಸೆಳೆದ ವಿದ್ಯಾರ್ಥಿಗಳ ನೃತ್ಯ * ಗೌರವ ವಂದನೆ ಸ್ವೀಕಾರ
Last Updated 27 ಜನವರಿ 2017, 9:46 IST
ಅಕ್ಷರ ಗಾತ್ರ

ಮಂಡ್ಯ: ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಚ್ಚು ಯುವ ಸಮುದಾಯವನ್ನು ಹೊಂದಿದ್ದೇವೆ. ಅವರನ್ನು ಬಲಿಷ್ಠರಾಗಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹೇಳಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕೆ ನೀರು, ರಸ್ತೆ, ಆಸ್ಪತ್ರೆ, ಶಾಲೆ, ಸಾರಿಗೆ ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಹಳ್ಳಿ ಹಾಗೂ ನಗರದ ಅಂತರ ಕಡಿಮೆಯಾಗುತ್ತಿದೆ. ಕೃಷಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರವು ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದರು.

ಭಾಷೆ, ಧರ್ಮ, ಪ್ರಾಂತ್ಯದಲ್ಲಿ ವಿವಿಧತೆ ಇದ್ದರೂ ಏಕತೆಯನ್ನು ಹೊಂದಿರುವ ರಾಷ್ಟ್ರ ಭಾರತ. ನೆಲ, ಜಲ, ಗಡಿ ಸಮಸ್ಯೆಗಳನ್ನು ನಿವಾರಿಸಿಕೊಂಡು ದೇಶ ಸದೃಢತೆಯತ್ತ ಹೆಜ್ಜೆ ಇಟ್ಟಿದೆ. ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದರು.

ಪ್ರತಿ ಬಿಪಿಎಲ್‌ ಪಡಿತರದಾರರಿಗೆ ಒಂದು ಕೆಜಿ ಹೆಸರುಕಾಳನ್ನು ಸಹಾಯಧನ ಯೋಜನೆಯಡಿ ವಿತರಿಸಲಾಗುವುದು. ಕ್ಷೀರಭಾಗ್ಯ ಯೋಜನೆಯಡಿ 1.33 ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ. 3,120 ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 420 ಕಂದಾಯ ಅದಾಲತ್‌ ನಡೆಸಲಾಗಿದೆ. ಅದರಲ್ಲಿ 1.51 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, 1.48 ಅರ್ಜಿ ಇತ್ಯರ್ಥ ಮಾಡಲಾಗಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಅಗತ್ಯ ಇರುವ ಕ್ರಮಗೈಗೊಳ್ಳಲಾಗಿದೆ ಎಂದು ಹೇಳಿದರು.

ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನು ಪಾಲಿಸಬೇಕು. ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸರ್ವೋತ್ತಮ ಪ್ರಶಸ್ತಿ ಪ್ರದಾನ
ಮಂಡ್ಯ:
ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆರು ಮಂದಿ ನೌಕರರಿಗೆ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಹಶೀಲ್ದಾರ್‌ ಮಾರುತಿ ಪ್ರಸನ್ನ, ವೈದ್ಯಾಧಿಕಾರಿ ಡಾ.ಶಶಿಧರ್‌ ಬಸವರಾಜು, ಭೂದಾಖಲಾಧಿಕಾರಿ ರಮ್ಯಾ, ನೀರಾವರಿ ಇಲಾಖೆ ಕಿರಿಯ ಎಂಜಿನಿಯರ್‌ ಕೆ.ತಾರಾ, ಜಿಲ್ಲಾಧಿಕಾರಿ ಆಪ್ತ ಸಹಾಯಕ ಕೈಲಾಷ್‌, ಪ್ರಥಮ ದರ್ಜೆ ಸಹಾಯಕ ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು.

ದೇಶದ ಏಕತೆಗೆ ಯುವಜನರು ಒಗ್ಗೂಡಲಿ: ಸಲಹೆ
ಮದ್ದೂರು:
ಭಾರತವು ಬೃಹತ್‌ ಸಂವಿಧಾನವನ್ನುಳ್ಳ ಮಹಾನ್‌ ರಾಷ್ಟ್ರವಾಗಿದ್ದು, ದೇಶದ ಏಕತೆ ಹಾಗೂ ಅಭಿವೃದ್ಧಿಗೆ ಯುವಜನರು ಒಗ್ಗೂಡಬೇಕೆಂದು ಶಾಸಕ ಡಿ.ಸಿ.ತಮ್ಮಣ್ಣ ಕರೆ ನೀಡಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮಂಗಳವಾರ ಆಯೋಜಿಸಿದ್ದ 68ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಇಂದು ಭಯೋತ್ಪಾದನೆ ಕೃತ್ಯಗಳು ಹೆಚ್ಚಿದ್ದು, ಒಂದು ಸವಾಲಾಗಿ ಪರಿಣಮಿಸಿದೆ. ಈ ಕೃತ್ಯಗಳ ತಡೆಗಾಗಿ ಪ್ರತಿಯೊಬ್ಬರೂ ಜಾತ್ಯತೀತರಾಗಿ ಸಂಘಟಿತರಾಗಬೇಕು ಎಂದು ಮನವಿ ಮಾಡಿದರು. ತಹಶೀಲ್ದಾರ್ ಎಸ್.ಹರ್ಷ ಧ್ವಜಾರೋಹಣ ನೆರವೇರಿಸಿ ಗಣ ತಂತ್ರದಿನದ ಮಹತ್ವ ಕುರಿತು ಸಂದೇಶ ನೀಡಿದರು. 

ಸಮಾಜ ಸೇವಕರಾದ ಮಾದನಾಯಕನಹಳ್ಳಿ ರಾಜಣ್ಣ, ಅಂದಾನಿ ಸೋಮನಹಳ್ಳಿ, ಹೆಬ್ಬೆರಳು ಕೃಷ್ಣಪ್ಪ, ಶಿಕ್ಷಕರಾದ ಭಾಗ್ಯಮ್ಮ, ನಾಗರತ್ನಮ್ಮ, ಪ್ರಗತಿಪರ ರೈತ ಕರಿಯಪ್ಪ, ಅಂಗವಿಕಲ ಕ್ರೀಡಾಪಟು ಸಿ.ಕೆ.ಕೃಷ್ಣ , ಪರಿಸರವಾದಿ ಅಂಬರಹಳ್ಳಿಸ್ವಾಮಿ,  ಪತ್ರಕರ್ತ ಪುಟ್ಟಸ್ವಾಮಿ, ಕ್ರೀಡಾಪಟು ಕೆ.ಬೆಳ್ಳೂರು ನಾಗವೇಣಿ, ಜಾನಪದ ಕಲಾವಿದ ಡಿ.ಎ.ಕೆರೆ ಚಿಕ್ಕೋನು ಅವರನ್ನು ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷೆ ಜಯಲಕ್ಷ್ಮಮ್ಮ, ಜಿ.ಪಂ. ಸದಸ್ಯ ಮರಿಹೆಗಡೆ, ಪುರಸಭೆ ಅಧ್ಯಕ್ಷೆ ಮಂಜುಳಾ ಮೃತ್ಯುಂಜಯ, ನಾಗರತ್ನಮ್ಮ, ಕಸಾಪ ಅಧ್ಯಕ್ಷ ವಿ. ಹರ್ಷ, ವೆಂಕಟಾಚಲಯ್ಯ, ಜಯಂತಿ ಲಾಲ್‌ಪಟೇಲ್‌, ಮಹದೇವು, ಮ.ನ. ಪ್ರಸನ್ನಕುಮಾರ್ ಇದ್ದರು. 

ಪುರಸಭೆ: ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಮಂಜುಳಾ ಮೃತ್ಯುಂಜಯ ಧ್ವಜಾರೋಹಣ ನೆರವೇರಿಸಿದರು.
ಮುಖ್ಯಾಧಿಕಾರಿ ಕರಿಬಸವಯ್ಯ, ಎಂಜಿನಿಯರ್‌ಗಳಾದ ಶ್ರೀಕಾಂತ್, ಮೀನಾಕ್ಷಿ, ವ್ಯವಸ್ಥಾಪಕ ಚಂದ್ರು, ಆರೋಗ್ಯ ನಿರೀಕ್ಷಕ ಶಿವಕುಮಾರ್, ಮಹೇಶ್ ಭಾಗವಹಿಸಿದ್ದರು.

*
ವಿದ್ಯಾಸಿರಿ ಯೋಜನೆಯಡಿ ಮಕ್ಕಳಿಗೆ ಪ್ರತಿ ತಿಂಗಳೂ 1,500 ಸಹಾಯಧನ ನೀಡಲಾಗುತ್ತಿದ್ದು, ಅವರ ಓದಿಗೆ ಅನುಕೂಲವಾಗಿದೆ. ಬಾಲ ಸಂಜೀವಿನಿ ಯೋಜನೆಯಡಿ ಅಪೌಷ್ಠಿಕತೆ ನಿವಾರಣೆಗಾಗಿ 21.12 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ.
-ಎಂ.ಕೃಷ್ಣಪ್ಪ,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT