ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಚೀಟಿ ಇತಿಹಾಸದ ಹೆಜ್ಜೆಗುರುತು

ರೂರಾಪೆಕ್ಸ್-–2000 ವಿಶ್ವ ಗ್ರಾಮೀಣ ಅಂಚೆ ಚೀಟಿ ಪ್ರದರ್ಶನ
Last Updated 27 ಜನವರಿ 2017, 10:14 IST
ಅಕ್ಷರ ಗಾತ್ರ

ವಿಜಯಪುರ: ‘ಜಗತ್ತಿನ ಚರಿತ್ರೆಯನ್ನು ಅರಿತುಕೊಳ್ಳಲು ಹಲವು ಬಗೆಯ ಮಾರ್ಗಗಳಿದ್ದರೂ ಅಂಚೆ ಚೀಟಿಗಳು ಪ್ರಪಂಚದ ಹಲವು ದಾಖಲೆಗಳು, ಚಿತ್ರಗಳು, ಗ್ರಂಥಗಳು, ಇವುಗಳಲ್ಲಿ ಇತಿಹಾಸದ ಹೆಜ್ಜೆಗುರುತುಗಳನ್ನು ಗುರ್ತಿಸಲು ಸಹಕಾರಿಯಾಗಲಿವೆ’ ಎಂದು ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಚೈತನ್ಯ ದೇವ್ ತಿಳಿಸಿದರು.

ಹೋಬಳಿ ಸಮೀಪದ ಮೇಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ರೂರಾಪೆಕ್ಸ್-2000 ವಿಶ್ವ ಗ್ರಾಮೀಣ ಅಂಚೆ ಚೀಟಿ ಪ್ರದರ್ಶನ  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಆಯಾ ದೇಶಗಳ ವ್ಯಕ್ತಿ, ವಿಶೇಷ ಘಟನೆಗಳು, ಪರಿಸರ, ಪ್ರಾಣಿ, ಪಕ್ಷಿ ಪ್ರಪಂಚದ ಬಗ್ಗೆ ಅಂಚೆ ಚೀಟಿಗಳ ಮೂಲಕ ದಾಖಲಿಸಿ ಜ್ಞಾನ ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡುವುದು ಕಷ್ಟಕರವಾದ ಕೆಲಸ. ಆದರೂ ಮುಂದಿನ ಪೀಳಿಗೆಗೆ ಗತಕಾಲದ ವೈಭವಗಳನ್ನು ಸಾರಿ ಹೇಳುವಂತಹ ಸಮೂಹ ಮಾಧ್ಯಮವಾಗಿಯೂ ಅಂಚೆ ಚೀಟಿಗಳು ಕೆಲಸ ಮಾಡುತ್ತಿವೆ. ಈ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ  ಅವಶ್ಯಕತೆಯಿದೆ ಎಂದರು.

ಅಂಚೆ ಚೀಟಿ ಸಂಗ್ರಹ ಲೇಖಕ ಜಗನ್ನಾಥ ಪ್ರಕಾಶ್ ಮಾತನಾಡಿ, ಜನಪ್ರಿಯ ಹವ್ಯಾಸವೆನಿಸಿಕೊಂಡಿರುವ ಅಂಚೆ ಚೀಟಿ ಸಂಗ್ರಹ ಹಾಗೂ ಪ್ರದರ್ಶನಗಳು ಹೆಚ್ಚಾಗಿ ನಗರ ಪಟ್ಟಣಗಳಿಗೆ ಕೇಂದ್ರೀಕೃತವಾದ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಘ ಇದು ಎಂದರು.

ಅಂಚೆ ಚೀಟಿಗಳ ಪ್ರದರ್ಶನ ಮಾಡಿದ ಎಂ.ಆರ್.ಪ್ರಭಾಕರ್ ಅವರ ಹುಟ್ಟೂರಾದ ಮೇಲೂರು ಗ್ರಾಮದಲ್ಲಿ 1978 ರಲ್ಲಿ ಮೊದಲ ಪ್ರದರ್ಶನ, 1000 ನೇ ಪ್ರದರ್ಶನ, ಹಾಗೂ 2000 ನೇ ಪ್ರದರ್ಶನ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಭರತನಾಟ್ಯ ಪ್ರದರ್ಶನ ನೋಡುಗರ ಮನಸೆಳೆಯಿತು.

ಭಾರತ ದೇಶದ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಕೃತಿ ದತ್ತವಾದ ಔಷಧಿ ಮತ್ತು ಆಹಾರ ಸತ್ವದ ವೈವಿಧ್ಯ ಪೂರ್ಣ ಹೂ ಬಳ್ಳಿ, ಎಲೆ, ಬೇರುಗಳ ಸಮೃದ್ಧ ಸಸ್ಯ ಸಂಪತ್ತಿರುವ ಆಧುನಿಕ ವೈದ್ಯ ಪದ್ಧತಿಯನ್ನು ತಿಳಿಸಿಕೊಡುವ ಅಂಚೆ ಚೀಟಿಗಳು, ಮೀನಿನ ಚರ್ಮದಿಂದ ತಯಾರಿಸಿರುವ ಅಂಚೆ ಚೀಟಿಗಳು, ಯೂನಿಕ್ ಸ್ಟ್ಯಾಂಪ್ಸ್, ಎಲ್ಲರ ಗಮನಸೆಳೆದವು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೆಂದ್ರ, ಎಸ್.ಶಿವರಾಮ್, ಮೇಲೂರು ವೆಂಕಟರೆಡ್ಡಿ, ರಾಮಣ್ಣ, ಜೆಜೆಗೌಡ, ಮೋಹನ್ ರಾವ್, ಕೃಷ್ಣಾರೆಡ್ಡಿ, ರಾಮಕೃಷ್ಣಪ್ಪ, ಜಗನ್ನಾಥ್ ಮಣಿ, ಪ್ರಕಾಶ್ ಬಿಂದ್ರ, ರಾಮು, ವರಪ್ರಸಾದ್, ರಾಘವೇಂದ್ರ ಮುಂತಾದವರು ಹಾಜರಿದ್ದರು.

*
ಕರ್ನಾಟಕ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಗ್ರಾಮೀಣ ಪ್ರದೇಶಗಳಲ್ಲಿ ’ಅಂಚೆ ಚೀಟಿ’ ಮಹತ್ವದ ಪ್ರಸಾರ ಮಾಡುವ ಹೊಣೆಗಾರಿಕೆಯನ್ನು ನಾಲ್ಕು ದಶಕಗಳಿಂದ ನಿರ್ವಹಿಸುತ್ತಿದೆ.
-ಜಗನ್ನಾಥ ಪ್ರಕಾಶ್, ಅಂಚೆ ಚೀಟಿ ಸಂಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT