ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆಸೊಪ್ಪಿನ ಅಡುಗೆಯ ಸುಗ್ಗಿ

ನಳಪಾಕ
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ನುಗ್ಗೆಸೊಪ್ಪಿನ ರೊಟ್ಟಿ
ಬೇಕಾಗುವ ಸಾಮಗ್ರಿ:
ನುಗ್ಗೆಸೊಪ್ಪು 1 ಬಟ್ಟಲು, ತೆಂಗಿನ ತುರಿ 1/4 ಬಟ್ಟಲು, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಬಟ್ಟಲು, ಹಸಿಮೆಣಸು 2, ಅಕ್ಕಿಹಿಟ್ಟು 2 ಬಟ್ಟಲು, ಉಪ್ಪು ರುಚಿಗೆ ತಕ್ಕಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ.

ತಯಾರಿಸುವ ವಿಧಾನ: ನುಗ್ಗೆಸೊಪ್ಪು, ಉಪ್ಪು, ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಎಲ್ಲವನ್ನು ಒಟ್ಟು ಹಾಕಿ ಚೆನ್ನಾಗಿ ಕಲಸಿ. ಆಮೇಲೆ ಅಕ್ಕಿಹಿಟ್ಟನ್ನು ಹಾಕಿ ಕಲಸಿ. ನಂತರ ಬಾಳೆ ಎಲೆಯ ಮೇಲೆ ತೆಳುವಾಗಿ ತಟ್ಟಿ ಕಾದ ಕಾವಲಿ ಮೇಲೆ ಎಣ್ಣೆ ಸವರಿ ಎರಡೂ ಬದಿ ಹೊಂಬಣ್ಣ ಬರುವ ಹಾಗೆ ತುಪ್ಪ ಹಾಕಿ ಬೇಯಿಸಿ. ಬೆಣ್ಣೆ ಹಾಗೂ ಕಾಯಿ ಚಟ್ನಿಯೊಂದಿಗೆ ಸವಿಯಿರಿ.

*
ನುಗ್ಗೆಸೊಪ್ಪಿನ ಬಾತ್
ಬೇಕಾಗುವ ಸಾಮಗ್ರಿ:
ನುಗ್ಗೆಸೊಪ್ಪು 1 ಕಪ್, ಅಕ್ಕಿ 2 ಕಪ್, ಈರುಳ್ಳಿ ಹೆಚ್ಚಿದ್ದು 1, ಹಸಿ ಅಥವಾ ನೆನೆಸಿದ ಬಟಾಣಿ 1/4 ಕಪ್, ಕ್ಯಾರೆಟ್ 1, ಹೆಚ್ಚಿದ ಕೊತ್ತಂಬರಿ ಸೊಪ್ಪು 1 ಚಮಚ, ಹಸಿಮೆಣಸು 4, ಬೆಳ್ಳುಳ್ಳಿ 4, ಲವಂಗ 2, ಚಕ್ಕೆ ಚೂರು 1 ಇಂಚು, ಹೆಚ್ಚಿದ ಟೊಮೆಟೋ 1, ಶುಂಠಿ ತುಂಡು 1 ಇಂಚು, ತುಪ್ಪ 5 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೀರು ಬಸಿದಿಡಿ. ಕ್ಯಾರೆಟ್ಟನ್ನು ಸಣ್ಣಗೆ ಕತ್ತರಿಸಿ ಇಡಿ. ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಹೆಚ್ಚಿದ ಟೊಮೆಟೋ, ಹಸಿಮೆಣಸು ಎಲ್ಲವನ್ನೂ ನುಣ್ಣಗೆ ರುಬ್ಬಿ. ಕುಕ್ಕರಿನಲ್ಲಿ ತುಪ್ಪ ಹಾಕಿ ಈರುಳ್ಳಿ ಹಾಕಿ ಬಾಡಿಸಿ, ರುಬ್ಬಿದ ಮಸಾಲೆಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ನುಗ್ಗೆಸೊಪ್ಪು, ಬಟಾಣಿ, ಕ್ಯಾರೆಟ್, ಅಕ್ಕಿ ಹಾಕಿ ಚೆನ್ನಾಗಿ ಮಗುಚಿ. ಉಪ್ಪು ಹಾಗೂ 4 ಕಪ್ ನೀರು ಹಾಕಿ ಕುಕ್ಕರನ್ನು 1 ಸೀಟಿ ಕೂಗಿಸಿ ಇಳಿಸಿ. ಬಿಸಿಬಿಸಿ ನುಗ್ಗೆ ಸೊಪ್ಪಿನ ಬಾತ್ ಸವಿಯಲು ಸಿದ್ಧ.

*
ನುಗ್ಗೆಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿ
: ನುಗ್ಗೆಸೊಪ್ಪು 8 ಕಪ್, ಬೆಳ್ತಿಗೆ ಅಕ್ಕಿ 1/4 ಕೆ.ಜಿ., ಕುಚ್ಚಲು ಅಕ್ಕಿ 1/4 ಕೆ.ಜಿ., ಕಾಯಿತುರಿ 1 ಕಪ್, ಒಣ ಮೆಣಸಿನಕಾಯಿ 8, ಹುಳಿ ನಿಂಬೆ ಗಾತ್ರ, ಅರಸಿನ ಪುಡಿ 1 ಚಮಚ, ಬೆಲ್ಲ 1/2 ಅಚ್ಚು, ಕೊತ್ತಂಬರಿ 4 ಚಮಚ, ಜೀರಿಗೆ 1/2 ಚಮಚ, ಬಾಳೆಯೆಲೆ 10, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಯನ್ನು ಮೂರು ಗಂಟೆ ನೆನೆಹಾಕಿ ತೊಳೆದು ಇಟ್ಟುಕೊಳ್ಳಿ. ತೆಂಗಿನಕಾಯಿತುರಿ ಜೊತೆಗೆ ಒಣ ಮೆಣಸು, ಹುಳಿ, ಜೀರಿಗೆ, ಕೊತ್ತಂಬರಿ, ಉಪ್ಪು, ಬೆಲ್ಲ, ಅರಿಶಿಣವನ್ನು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಅಕ್ಕಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿ. ನುಗ್ಗೆಸೊಪ್ಪನ್ನು ಈ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಬಾಡಿಸಿ ಒರೆಸಿದ ಬಾಳೆಯೆಲೆಯಲ್ಲಿ ನಾಲ್ಕು ಸೌಟು ಹಿಟ್ಟು ಹಾಕಿ ಮಡಚಿ ಉಗಿಯಲ್ಲಿ ಒಂದೂವರೆ ಗಂಟೆ ಬೇಯಿಸಿ. ಪತ್ರೊಡೆಯನ್ನು ಕೊಬ್ಬರಿ ಎಣ್ಣೆ, ತುಪ್ಪ ಅಥವಾ ಸಾಂಬಾರು ಹಾಕಿ ತಿನ್ನಬಹುದು. ಒಗ್ಗರಣೆಯನ್ನು ಹಾಕಿಯೂ ಸವಿಯಬಹುದು.

ಪತ್ರೊಡೆ ಒಗ್ಗರಣೆ: ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ. ಒಂದು ಹಸಿಮೆಣಸನ್ನು ಸಿಗಿದು ಸೇರಿಸಿ. ಒಲೆ ಮೇಲೆ ಬಾಣಲೆ ಇಟ್ಟು ಒಗ್ಗರಣೆ ಸಿಡಿಸಿ, ಒಂದು ಎಸಳು ಕರಿಬೇವು, ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸು ಹಾಕಿ. ಕೆಂಪಗೆ ಹುರಿದ ನಂತರ ನಾಲ್ಕು ಪತ್ರೊಡೆಯನ್ನು ಪುಡಿ ಮಾಡಿ ಸೇರಿಸಿ, ಕೆದಕಿ ಅರ್ಧ ಕಪ್ ಕಾಯಿತುರಿ ಮಿಶ್ರ ಮಾಡಿ. ಕಾಯಿತುರಿಗೆ ಚೂರು ಉಪ್ಪು ಬೆರೆಸಬೇಕು. ಇದು ಬೆಳಗಿನ ಉಪಾಹಾರಕ್ಕೆ, ಸಂಜೆಯ ಟೀಗೂ ಚೆನ್ನಾಗಿರುತ್ತದೆ.

*
ನುಗ್ಗೆಸೊಪ್ಪಿನ ಹುಳಿ
ಬೇಕಾಗುವ ಸಾಮಗ್ರಿ:
ನುಗ್ಗೆಸೊಪ್ಪು 2 ಕಪ್, ಬೇಯಿಸಿದ ತೊಗರಿಬೇಳೆ 1/2 ಕಪ್, ಕೊತ್ತಂಬರಿ 1 ಚಮಚ, ಜೀರಿಗೆ 1/4 ಚಮಚ, ಸಾಸಿವೆ 1/4 ಚಮಚ, ಮೆಂತೆ 6 ಕಾಳು, ಹುಣಸೇಹಣ್ಣು 2 ಹುಣಸೇ ಬೀಜದಷ್ಟು, ಕೆಂಪು ಮೆಣಸು 5-6, ತೆಂಗಿನಕಾಯಿತುರಿ 3/4 ಕಪ್, ಎಣ್ಣೆ 2 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕೊತ್ತಂಬರಿ, ಜೀರಿಗೆ, ಸಾಸಿವೆ, ಮೆಂತ್ಯ ಹಾಗೂ ಕೆಂಪು ಮೆಣಸನ್ನು ಹುರಿದು ಕಾಯಿತುರಿ ಹಾಗೂ ಹುಣಿಸೆಯನ್ನು ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿದ ತೊಗರಿಬೇಳೆಗೆ ನುಗ್ಗೆ ಸೊಪ್ಪು ಹಾಕಿ ಬೇಯಿಸಿ. ರುಬ್ಬಿದ ಮಿಶ್ರಣ, ಉಪ್ಪು ಬೆರೆಸಿ ಬೇಕಾದಷ್ಟು ನೀರು ಹಾಕಿ ಹದ ಮಾಡಿಕೊಳ್ಳಿ. ಚೆನ್ನಾಗಿ ಕುದಿಸಿ ಇಳಿಸಿ. ಒಗ್ಗರಣೆ ಕೊಡಿ. ಊಟಕ್ಕೆ ರುಚಿ.

*
ನುಗ್ಗೆಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ:
ನುಗ್ಗೆಸೊಪ್ಪು 2 ಕಪ್, ಕಾಯಿತುರಿ 1/2 ಕಪ್, ಸಿಹಿಮಜ್ಜಿಗೆ 1 ಕಪ್, ತುಪ್ಪ 1 ಚಮಚ, ಜೀರಿಗೆ 1/2 ಚಮಚ, ಕಾಳುಮೆಣಸು 6, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ನುಗ್ಗೆಸೊಪ್ಪನ್ನು ತುಪ್ಪದಲ್ಲಿ ಹುರಿಯಿರಿ. ಕಾಳುಮೆಣಸು ಮತ್ತು ಜೀರಿಗೆಯನ್ನೂ  ಹುರಿದು ಕಾಯಿತುರಿಯೊಂದಿಗೆ ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಮಜ್ಜಿಗೆ ಬೆರೆಸಿ ತೆಳ್ಳಗೆ ಮಾಡಿ ಊಟದಲ್ಲಿ ಬಳಸಿ. ನುಗ್ಗೆಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಈ ತಂಬುಳಿ ರಕ್ತಹೀನತೆಯಿಂದ ಬಳಲುವವರಿಗೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT