ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿ ಕೇಂದ್ರದಲ್ಲಿ ವಂಚನೆ: ಆರೋಪ

ಲಿಂಗಸುಗೂರು: ಖರೀದಿ ಬಿಲ್‌ ಮೊತ್ತ ₹ 1.21 ಲಕ್ಷ; ಎಫ್‌ಸಿಐ ಪಾವತಿಸಿದ ಹಣ ₹ 1.11 ಲಕ್ಷ!
Last Updated 28 ಜನವರಿ 2017, 7:24 IST
ಅಕ್ಷರ ಗಾತ್ರ

ಲಿಂಗಸುಗೂರು: ಕಳೆದ ಎರಡು ತಿಂಗಳಿಂದ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಭಾರತ ಆಹಾರ ನಿಗಮ ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದು, ರೈತರಿಗೆ ನೀಡಿದ ಬಿಲ್‌ ಆಧರಿಸಿ ಪೂರ್ಣ ಪ್ರಮಾಣದ ಹಣ ಪಾವತಿಸದೆ ವಂಚಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತೊಗರಿ ಖರೀದಿ ಕೇಂದ್ರದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ ರೈತರು, ಡಿಸೆಂಬರ್‌ 14ರಿಂದ ರೈತರಿಂದ ತೊಗರಿ ಖರೀದಿಸಲಾಗುತ್ತಿದೆ. ಜನವರಿ 6ರ ವರೆಗೆ ಬೆಂಬಲ ಬೆಲೆಯ ಬಿಲ್‌ ನೀಡಿದ್ದು, ಉಳಿದ ಪ್ರೋತ್ಸಾಹಧನ ಹಣವನ್ನು ನಂತರದಲ್ಲಿ ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ. ನಂತರದಲ್ಲಿ ತಮಗೆ ನೀಡಿದ ಬಿಲ್‌ನಂತೆ ಹಣ ಪಾವತಿಸಲಾಗುತ್ತದೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ಜನವರಿ 6ರಿಂದ ಬೆಂಬಲ ಬೆಲೆ ₹ 5,050 ಮತ್ತು ಪ್ರೋತ್ಸಾಹಧನ ₹ 450 ಸೇರಿ ಒಟ್ಟು ₹ 5,500ರಂತೆ ಪ್ರತಿ ಕ್ವಿಂಟಲ್‌ ತೊಗರಿ ಖರೀದಿ ಮಾಡಿದ್ದಾರೆ. ಈ ರೀತಿ ನೀಡಿರುವ ಬಿಲ್‌ ಆಧಾರದಲ್ಲಿ ಹಣ ಪಾವತಿಸದೆ ಭಾಗಶಃ ಹಣ ಪಾವತಿಸುತ್ತ ರೈತರಿಗೆ ವಂಚನೆ ಮಾಡಲಾಗುತ್ತಿದೆ. ಭಾಗಶಃ ಹಣದ ಬಗ್ಗೆ ರೈತರು ಪ್ರಶ್ನಿಸಿದರೆ ಕೇಂದ್ರ ಬಂದ್‌ ಮಾಡುತ್ತೇವೆ ಎಂದು ಎಫ್‌ಸಿಐ ವ್ಯವಸ್ಥಾಪಕರು ಹೇಳುತ್ತಿದ್ದಾರೆ.

ಜನವರಿ 6ರಂದು ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿಕೊಂಡಿದ್ದ ವೆಂಕಟೇಶ ಅಮರಾವತಿ ಎಂಬ ರೈತನಿಗೆ 22 ಕ್ವಿಂಟಲ್‌ ತೊಗರಿಗೆ ಬೆಂಬಲ ಬೆಲೆ, ಪ್ರೋತ್ಸಾಹಧನ ಸೇರಿ ₹ 5,500ರಂತೆ 22 ಕ್ವಿಂಟಲ್‌ಗೆ ₹ 1.21 ಲಕ್ಷದ ಬಿಲ್‌ ನೀಡಿದ್ದಾರೆ. ಈ ರೈತನಿಗೆ 11 ದಿನಗಳ ನಂತರದಲ್ಲಿ ಕೇವಲ ₹ 1.1ಲಕ್ಷ ಮಾತ್ರ ಹಣ ಕಾರ್ಪೋರೇಷನ್‌ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದಾರೆ ಎಂದು ದೂರಿದರು.

‘ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ್ದು, ಈ ನಡುವೆ ತೊಗರಿ ಬೆಲೆ ಕುಸಿದಿದೆ. ಅದರ ಜೊತೆಗೆ ಈ ರೀತಿಯ ಅನ್ಯಾಯವಾದರೆ ರೈತರು ಮಾಡುವುದಾದರೂ ಏನು’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಎಫ್‌ಸಿಐ ವ್ಯವಸ್ಥಾಪಕ ಪ್ರಕಾಶ ಅವರು ರಾಜ್ಯ ಸರ್ಕಾರ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಈಗಲೇ ಏನೂ ಮಾಡಲು ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರಿಂದ ರೈತರು ಮತ್ತು ಎಫ್‌ಸಿಐ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.

ಈ ವಿಷಯವನ್ನು ಉಪವಿಭಾಗಾಧಿಕಾರಿ ಗಮನಕ್ಕೂ ರೈತರು ತಂದಿದ್ದಾರೆ. ಈ ಸಂಬಂಧ ವೆಂಕಟೇಶ ಅಮರಾವತಿ, ಶಿವಪುತ್ರಪ್ಪ ಹಟ್ಟಿ, ಅಮರಪ್ಪ, ಮಲ್ಲಪ್ಪ, ಯಮನಪ್ಪ, ಗೋಪಾಲೆಪ್ಪ, ಬಸವರಾಜ, ಅಮರಯ್ಯ, ಮಹಾಂತೇಶ, ಮೌಲಾಸಾಬ, ಪೀರಸಾಬ ಮತ್ತಿತರರು ಲಿಂಗಸುಗೂರು ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT