ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬಣಗಳ ಪ್ರಬಲ ಪೈಪೋಟಿ

ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ ಇಂದು; ಮತದಾರರ ಓಲೈಕೆಗೆ ಕಸರತ್ತು
Last Updated 28 ಜನವರಿ 2017, 8:27 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ವಕೀಲರ ಸಂಘಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರ, ಮತದಾರರ ಓಲೈಕೆ ನಡೆದಿದೆ. ಎರಡು ಬಣಗಳು ಸ್ಪರ್ಧಿಸುತ್ತಿದ್ದು ಪೈಪೋಟಿ ನಡೆದಿದೆ.ಶನಿವಾರ ಸಂಜೆ ವೇಳೆಗೆ ಆಕಾಂಕ್ಷಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

ಅಧ್ಯಕ್ಷ ಸ್ಥಾನಕ್ಕೆ ಎ.ವಿ.ಕಣವಿ ಹಾಗೂ ದೊಡ್ಡಬಸಪ್ಪ ಸಕ್ರಪ್ಪ ಕಂಪ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮೊದಲು ಸಂಘದ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡುವಂತೆ ಪ್ರಯತ್ನ ನಡೆದಿತ್ತು. ಅದಕ್ಕೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪೈಕಿ ಒಬ್ಬರು ಒಪ್ಪದ ಕಾರಣ ಚುನಾವಣೆ ಅನಿವಾರ್ಯವಾಯಿತು. ಇಬ್ಬರೂ ಸಮರ್ಥರೇ ಇದ್ದಾರೆ. ಆದರೂ ಈ ಬಾರಿ ಹೊಸಬರಿಗೆ ಅವಕಾಶ ಕೊಡುವ ಚಿಂತನೆಯಲ್ಲಿದ್ದೇವೆ ಎಂದು ಹಿರಿಯ ವಕೀಲರೊಬ್ಬರು ಹೇಳಿದರು.

ದಟ್ಟವಾದ ಜಾತಿ ಛಾಯೆ: ಇದು ಬೌದ್ಧಿಕ ವರ್ಗದ ಚುನಾವಣೆ. ಆದರೂ ಇಲ್ಲಿ ಜಾತಿ ಪ್ರಭಾವದ ಛಾಯೆ ಬಲವಾಗಿದೆ. ಇದೇ ಕಾರಣದಿಂದ ಎರಡೂ ಬಣದಲ್ಲಿ ಅಭ್ಯರ್ಥಿಗಳನ್ನು ಜಾತಿಯ ದೃಷ್ಟಿಯಲ್ಲಿ ಸಮನಾಗಿ ಕಣಕ್ಕಿಳಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ವೀರಶೈವ ಸಮುದಾಯದ ಎರಡು ಸಮಾಜಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ದೊಡ್ಡಬಸಪ್ಪ ಅವರು ಪಂಚಮಸಾಲಿ ಸಮುದಾಯದವರು. ಕಣವಿ ಅವರು ಬಣಜಿಗ ಸಮುದಾಯದವರು.

ದೊಡ್ಡಬಸಪ್ಪ ಬಣದಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎಸ್‌. ಜಮಾಪುರ ಅವರನ್ನು ಕಣಕ್ಕಿಳಿಸಿ ಅಲ್ಪಸಂಖ್ಯಾತರ ಮತ ಸೆಳೆಯುವ ಯತ್ನವೂ ನಡೆದಿದೆ. ಇದೇ ಬಣದಲ್ಲಿ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿರುವ ಡಿ. ಲಂಕೇಶ್‌ ಅವರು ಕುರುಬ ಸಮಾಜದವರು.

ಇತ್ತ ಕಣವಿ ಬಣದಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವ ಸಿ.ಎನ್‌. ಗ್ಯಾನಪ್ಪ ಕುರುಬ ಸಮಾಜದವರು. ಪ್ರಕಾಶ ಹಾದಿಮನಿ ಅವರು ಎಸ್‌ಸಿ ಸಮುದಾಯದವರು.

ಹೀಗೆ ನಿರ್ಣಾಯಕ ಪಾತ್ರ ವಹಿಸಲಿರುವ ಸಮುದಾಯಗಳಿಗೆ ಎರಡೂ ಬಣಗಳು ಆದ್ಯತೆ ನೀಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂಬ ಮಾತುಗಳು ವಕೀಲರ ವಲಯದಲ್ಲಿ ಕೇಳಿಬಂದಿದೆ. ಆದರೆ, ಜಾತಿ ಪ್ರಭಾವ ಈ ಚುನಾವಣೆಯಲ್ಲಿ ನಿಜವಾಗಿಯೂ ಪರಿಣಾಮ ಬೀರಬಹುದೇ ಇಲ್ಲವೇ ಎಂದು ನಿಖರವಾಗಿ ಹೇಳಲು ಅಸಾಧ್ಯ ಎನ್ನುತ್ತಾರೆ ವಕೀಲರು.

ಉಭಯ ಬಣಗಳವರೂ ತಮ್ಮದೇ ಆದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಎರಡೂ ಪ್ರಣಾಳಿಕೆಗಳಲ್ಲಿ ಹಲವು ಸಾಮಾನ್ಯ ಎನಿಸುವ ಅಂಶಗಳೇ ಇವೆ.

ಕಣವಿ ಅವರ ಧನಾತ್ಮಕ ಅಂಶ: 2012ರಿಂದ 2014ರವರೆಗೆ ಅಧ್ಯಕ್ಷರಾದ ಅನುಭವ, ವಕೀಲರಿಗೆ ಕಾರ್ಯಾಗಾರ ರೂಪಿಸಿದ್ದು, ಹಳೆ ನ್ಯಾಯಾಲಯದ ಆವರಣದಲ್ಲಿ ಸಂಘಕ್ಕಾಗಿ 8 ಗುಂಟೆ ಜಮೀನು ಪಡೆಯಲು ಹೋರಾಟ ನಡೆಸಿದ್ದು. ಜನಪರಿಚಯ, ಹಿಂದಿನ ಸಂಸದರಿಂದ ಪಾರ್ಕಿಂಗ್‌ ಲಾಟ್‌ಗೆ ಅನುದಾನ ಪಡೆದು ಕಾಮಗಾರಿ ನಡೆಸಿದ್ದು ಮತ್ತು ಉದ್ಯಮಿಗಳಿಂದ ಬೃಹತ್‌ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ ಸಂಘಕ್ಕೆ ನಿಧಿ ಜಮಾಯಿಸಿದ್ದು ಮತ್ತು ರಾಜಕಾರಣದಲ್ಲಿ ಸಕ್ರಿಯ. ಕಣವಿಯವರು ವೃತ್ತಿಯಲ್ಲಿಲ್ಲದ (ನಾನ್‌ಪ್ರಾಕ್ಟೀಸ್‌) ವಕೀಲರ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ. ಈ ಮತಗಳು ಕಣವಿ ಅವರ ಹಾದಿ ಸುಗಮಗೊಳಿಸುವ ಸಾಧ್ಯತೆ ಇದೆ. 

ದೊಡ್ಡಬಸಪ್ಪ ಅವರ ಧನಾತ್ಮಕ ಅಂಶ: 2012ರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತವರು. ಸಾತ್ವಿಕ ವ್ಯಕ್ತಿತ್ವ. ಯುವ ಮತ್ತು ಹಿರಿಯ ವಕೀಲರು ಎರಡೂ ಕಡೆಯವರಿಗೆ ಸಮನಾಗಿ ಬೇಕಾಗುವವರು. ಯುವ ವಕೀಲರ ಒಲವಿಗೆ ಪಾತ್ರರಾದವರು. ಪ್ರಣಾಳಿಕೆ ಪ್ರಕಾರ ವಕೀಲರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದವರು. ಹಿಂದಿನ ಬಾರಿಯ ಸೋಲಿನ ಅನುಕಂಪದ ಅಲೆ, ಅವರ ತಂಡದ ಪ್ರಯತ್ನ ಯಶಸ್ವಿಯಾದರೆ ಅದು ದೊಡ್ಡಬಸಪ್ಪ ಪಾಲಿಗೆ ಪ್ಲಸ್‌ಪಾಯಿಂಟ್‌. ಇವರೂ ನಾನ್‌ಪ್ರಾಕ್ಟೀಸ್‌ ವಕೀಲರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ತಟಸ್ಥ ಗುಂಪಿನ ಮತವೇ ನಿರ್ಣಾಯಕ: ಈ ನಡುವೆ ಹಿರಿಯ ವಕೀಲರ ಶಿಷ್ಯರ ಸಮೂಹವೊಂದು ಎರಡೂ ಬಣದಲ್ಲೂ ಕಾಣಿಸಿಕೊಳ್ಳದೆ ತಟಸ್ಥ ನಿಲುವು ಹೊಂದಿದೆ. ಸುಮಾರು 50ಕ್ಕೂ ಹೆಚ್ಚು ಮಂದಿಯ ಈ ಗುಂಪು ಯಾರ ಪರ ಒಲವು ತೋರಿಸುತ್ತದೋ ಅದು ನಿರ್ಣಾಯಕವಾಗಿರುತ್ತದೆ. ಆದರೂ ಈ ಬಾರಿ ಯಾವುದೇ ಒಂದೇ ಗುಂಪಿಗೆ ಸ್ಪಷ್ಟ ಬಹುಮತ ಬರುವುದು ಕಷ್ಟ. ಎರಡೂ ಗುಂಪುಗಳಲ್ಲಿ ಚದುರಿ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಹಲವು ವಕೀಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT