ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದೊಳಗಿನ ಛಾಯೆ, ಚಿತ್ರವಾಗುವ ವಿಸ್ಮಯ

ಪಿಸುಗುಡುವ ಚಿತ್ರಪಟ * ಮಹೇಂದ್ರ ಸಿಂಹ
Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಛಾಯಾಗ್ರಹಣದ ಕಡೆ ನನ್ನ ಗಮನ ಹರಿದಿದ್ದು ಬಹಳ ಚಿಕ್ಕವನಿದ್ದಾಗಲೇ. ಆ ಸಣ್ಣ, ಕಪ್ಪುಬಣ್ಣದ ಕೌತುಕಕಾರಿ ಪರಿಕರವನ್ನು ಕೈಯಲ್ಲಿ ಹಿಡಿದ ವ್ಯಕ್ತಿ, ತನ್ನ ಸುತ್ತ ಮುತ್ತಲಿನವರ ಮೇಲೆ ಇಟ್ಟಿದ್ದ ಒಂದು ಹಿಡಿತ ನನ್ನನ್ನು ವಿಶೇಷವಾಗಿ ಆಕರ್ಷಿಸಿತ್ತು.

ಆಗ ಕ್ಯಾಮೆರಾ ಕೈಯಲ್ಲಿ ಹಿಡಿದ ವ್ಯಕ್ತಿ ಎಲ್ಲಾ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿರುತ್ತಿದ್ದ. ಆತ ‘ನಿಂತುಕೊ ಅಂದ್ರೆ ನಿಂತ್ಕೋ... ಕೂತ್ಕೋ ಅಂದ್ರೆ ಕೂತ್ಕೊ’. ಆತ ರೆಡಿ ಹೇಳಿದ ಮರುಕ್ಷಣ ‘ಫಳ್’ ಎಂದು ಬರುವ ಬೆಳಕು... ನಮ್ಮೆಲ್ಲರ ಆ ಕ್ಷಣದ ನಮ್ಮ ಬದುಕನ್ನು ತಲತಲಾಂತರದ ನೆನಪಾಗಿ ಸೆರೆಹಿಡಿಯುವ ಅ ಪ್ರಕ್ರಿಯೆಯೇ ಇನ್ನಿಲ್ಲದ ಮೋಡಿ ಮಾಡಿ ನನ್ನನ್ನು ಛಾಯಾಗ್ರಹಣಕ್ಕೆ ಕರೆತಂದಿತು. ನನ್ನ ಬಾಲ್ಯದ ಆಸೆ ಏನಿದ್ದರೂ, ಬೇಕು ಅಂದ ಕೂಡಲೇ ಕ್ಯಾಮೆರಾ ಕೊಂಡುಕೊಳ್ಳುವಷ್ಟು ಅನುಕೂಲ ನನಗಿರಲಿಲ್ಲ.

ಎಲ್ಲರಂತೆಯೇ ಜೀವನದ ದಾರಿ ಹುಡುಕುತ್ತಾ ಹೊರಟ ನಾನು ಪಿಯುಸಿ ನಂತರ ಆರಿಸಿಕೊಂಡಿದ್ದು ‘ಫೈನ್ ಆರ್ಟ್ಸ್’ ಕಾಲೇಜ್. ಕ್ಯಾಮೆರಾ ನಮ್ಮ ನೆನಪುಗಳನ್ನು ಹಿಡಿದಿಡುವ ಸಾಧನ ಮಾತ್ರವಲ್ಲ, ನಮ್ಮ ಅಭಿವ್ಯಕ್ತಿಯ ಮಾಧ್ಯಮ ಕೂಡ ಹೌದು ಎಂಬುದನ್ನು ಅರಿತುಕೊಂಡಿದ್ದು ಅಲ್ಲಿಯೇ.

‘Art is an expression of self in a chosen media’ ಎಂಬುದು ಕಲೆಯ ವ್ಯಾಖ್ಯಾನ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾವು ಆರಿಸಿಕೊಳ್ಳುವ ಮಾಧ್ಯಮ ಹಲವು.  ಬೇರೆ ಮಾಧ್ಯಮಗಳು  ನಮ್ಮೊಳಗಿನ ಪ್ರತಿಭೆ ಮತ್ತು ರೂಢಿಸಿಕೊಂಡ ನಿಪುಣತೆಗಳ ಆಧಾರದ ಮೇಲೆ ಪಕ್ವವಾಗಿ ಹೊರಹೊಮ್ಮಲು ಸಮಯ ಹಿಡಿಯುತ್ತದೆ. ಛಾಯಾಗ್ರಹಣ ಹಾಗೇನೂ ಅಲ್ಲ.

ಇವತ್ತಿನ ಅಂತರ್ಜಾಲ ಯುಗದಲ್ಲಿ ಕ್ಯಾಮೆರಾವನ್ನು ಪಳಗಿಸಿಕೊಳ್ಳುವುದು ಅಂಥ ಕಷ್ಟದ ಕೆಲಸವೇನಲ್ಲ. ಕ್ಷಣಾರ್ಧದಲ್ಲಿ ನಮ್ಮೆದುರಿಗಿರುವ ವಸ್ತು–ವಿಚಾರ ಅಥವಾ ನಮ್ಮನ್ನು ಆಕರ್ಷಿಸಿದ್ದನ್ನು ಸೆರೆಹಿಡಿಯುವ ಕೆಲಸ ನಡೆದು ಹೋಗುತ್ತದೆ. ಹಾಗಿದ್ದರೆ ಛಾಯಾಗ್ರಹಣ ಅಷ್ಟು ಸುಲಭದ ಮಾಧ್ಯಮವಾ ಎಂದು ಕೇಳಿದರೆ ಉತ್ತರಿಸುವುದು ಕಷ್ಟ.

ಬಹಳಷ್ಟು ಸಲ ನಾವು, ನಮ್ಮೆದುರಿರುವ ಜೀವನ ಎಂಬ ಬಹುದೊಡ್ಡ ಚಿತ್ರದ ಒಂದು ಸಣ್ಣ ತುಣುಕನ್ನು ಆರಿಸಿ ಬೇರ್ಪಡಿಸಿ ಸೆರೆ ಹಿಡಿಯುತ್ತಿರುತ್ತೇವೆ. ಹಾಗೆ ನಮ್ಮನ್ನು ತನ್ನತ್ತ ಸೆಳೆಯುವ ಆ ಸಣ್ಣ ತುಣುಕು ನಮ್ಮ ಆಸಕ್ತಿಯ ವಿಷಯವಾಗುತ್ತದೆ. ಆ ವಿಷಯ ಬಾಲ್ಯದಿಂದಲೂ ನಮ್ಮನ್ನು ಕಾಡಿರುತ್ತದೆ.

ನಮ್ಮೊಳಗಿನ ಆ ಭಾವ, ನಮ್ಮೆದುರಿನ ಚಿತ್ರ ಎರಡೂ ಒಂದಾದಾಗ – ನಮ್ಮ ಮನಸ್ಸಿನಲ್ಲಿ ಅವೆರಡೂ ಒಂದಕ್ಕೊಂದು ತಳಕು ಹಾಕಿಕೊಂಡಾಗ ‘ಇದು ನನ್ನ ಚಿತ್ರ’ ಎಂಬ ಭಾವ ಮೂಡುತ್ತದೆ. ಆಗ ಬೆರಳು ಗೊತ್ತಿಲ್ಲದೇ ಟ್ರಿಗರ್ ಒತ್ತಿ ಹಿಡಿಯುತ್ತದೆ.

ಆ ಅರೆಕ್ಷಣದಲ್ಲಿ ಟ್ರಿಗರ್ ಒತ್ತುವ ಮುಂಚೆ ನಿಮ್ಮಲ್ಲಿನ ಯಾವ ಭಾವ ಇನ್ನಿಲ್ಲದಂತೆ ಕಾಡಿ ಎದುರಿಗಿನ ಚಿತ್ರವನ್ನು ಸೆರೆ ಹಿಡಿಯುವಂತೆ ಮಾಡಿದೆ ಎಂಬ ಅಂಶವೇ ಆ ಛಾಯಾಚಿತ್ರವನ್ನು ಒಂದು ಕಲಾಕೃತಿಯೋ ಅಥವಾ ಬರೀ ಆ ಸಮಯವನ್ನು ದಾಖಲಿಸುವ ಸಾಮಾನ್ಯ ಚಿತ್ರವೋ ಎಂಬುದನ್ನು ನಿರ್ಧರಿಸುತ್ತದೆ.

ಆ ಒಂದು ಅದ್ಭುತ ಸಂದರ್ಭದಲ್ಲಿ ನಿಮ್ಮ ಹತ್ತಿರ ಕ್ಯಾಮೆರಾ ಇಲ್ಲದೇ ಇದ್ದರೆ ನಿಮ್ಮೆದುರಿನ ಚಿತ್ರ ಒಂದು ಕಾವ್ಯವಾಗಿ ಹೊರಹೊಮ್ಮುತ್ತಿತ್ತೇನೋ. ಅಥವಾ ಒಂದು ಕತೆಯಾಗುತ್ತಿತ್ತೇನೋ. ಈ ಭಾವನಾತ್ಮಕ ಅಂಶವೇ ಕ್ಯಾಮೆರಾ ಕಣ್ಣಿಗೆ ಸಿಕ್ಕು ಛಾಯಾಚಿತ್ರವಾಗಿ ರೂಪುಗೊಂಡಿದೆ. ಹೀಗಾದಾಗಲೇ ಅದು ಕಲಾಕೃತಿಯ ಮಟ್ಟಕ್ಕೆ ಏರುವುದು.

ನಮ್ಮ ಜೀವನದ ಹುಡುಕಾಟಗಳು, ತಳಮಳ, ಸಂತೋಷಗಳು, ನಾವು ಓದಿದ ವಿಚಾರ… ಅದು ಒಂದು ಮಟ್ಟಕ್ಕೆ ನಮ್ಮನ್ನು ಕಾಡಿ ಮನಸ್ಸಿನಲ್ಲಿ ಚಿತ್ರರೂಪದಲ್ಲಿ ನಿಂತರೆ ಅದೇ ಮುಂದೊಮ್ಮೆ ನಿಮ್ಮ ಕ್ಯಾಮೆರಾದಲ್ಲಿ ಅಭಿವ್ಯಕ್ತಿಗೊಂಡು ಕಲೆಯಾಗಿ ಅರಳುವುದು.

ಹೀಗೆ ಯೋಚನೆಗಳು, ವಿಚಾರಗಳು ಚಿತ್ರವಾಗಿ ಹೊರಹೊಮ್ಮಿದಾಗ ಆದಾಗಿನ ಸಂತೋಷಕ್ಕೆ ಪಾರವಿರುವುದಿಲ್ಲ. ಅದೊಂದು ಸಾರ್ಥಕ ಕ್ಷಣ. ಆ ಕ್ಷಣದಲ್ಲಿ ಅನುಭವಕ್ಕೆ ಬರುವ ಧನ್ಯತೆಯ ಕಾರಣಕ್ಕೇ ಛಾಯಾಗ್ರಹಣದ ಮಾಯೆಗೆ ನಾನು ಚಿರಋಣಿ.

ಮಹೇಂದ್ರ ಸಿಂಹ
ನಿಸರ್ಗದತ್ತ ಬೆಳಕಿನ ವಿನ್ಯಾಸದಲ್ಲಿಯೇ ಮನಸ್ಸನ್ನು ಉಲ್ಲಸಿತಗೊಳಿಸುವಷ್ಟು ವರ್ಣಮಯ ರಮ್ಯಚಿತ್ರಗಳನ್ನು ತೆಗೆಯುವ ಮಹೇಂದ್ರ ಸಿಂಹ ಕಪ್ಪು–ಬಿಳುಪು ಮಾಧ್ಯಮದಲ್ಲಿಯೂ ಬದುಕಿನ ವಿನ್ಯಾಸಗಳನ್ನು ಕಟ್ಟಿಕೊಡಬಲ್ಲ ಕಲಾವಿದ. 1998ರಿಂದ ಜಾಹೀರಾತು ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ ಮಹೇಂದ್ರ, ಪೆಟ್ರೋಕೆಮಿಕಲ್ಸ್‌ನಿಂದ ಫಾರ್ಮಾಸುಟಿಕಲ್ಸ್‌ನವರೆಗೆ ‘ಪ್ರಾಡಕ್ಟ್ ಫೋಟೊಗ್ರಫಿ’ಯಲ್ಲಿ ಪರಿಣತರು.

ಈಗ ಸಿನಿಮಾ ಕ್ಷೇತ್ರದಲ್ಲಿ ಪೋಸ್ಟರ್ ಡಿಸೈನ್‌ಗಾಗಿ ಫೋಟೊ ಶೂಟ್ ಮಾಡುವುದರಲ್ಲಿ ನಿರತನಾಗಿದ್ದಾರೆ. ‘ಡೈರೆಕ್ಟರ್‍ಸ್ ಸ್ಪೆಷಲ್’, ‘ಭಾರತ್ ಸ್ಟೋರ್ಸ್’ ಸಿನಿಮಾಗಳಿಗೆ ಛಾಯಗ್ರಾಹಕನಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಸದ್ಯಕ್ಕೆ ಸೂರಿ ನಿರ್ದೇಶನದ ‘ಟಗರು’ ಸಿನಿಮಾದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಫೇಸ್‌ಬುಕ್‌ ಪುಟದ ಕೊಂಡಿ goo.gl/ZpjM30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT