ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಚಿಂಚನಸೂರ್  ಮಗಳಿದ್ದಂತೆ...!
ಯಾದಗಿರಿ: ಸಂಸದ ಮಲ್ಲಿಕಾರ್ಜುನ ಖರ್ಗೆ ದೆಹಲಿಯ ಭಾರೀ ಚಳಿ ತಾಳಲಾರದೆ ಬಹುದಿನಗಳ ನಂತರ ಇತ್ತೀಚೆಗೆ ಯಾದಗಿರಿಗೆ ಹಾರಿ ಬಂದಿದ್ದರು. ಮತ್ತವರು ಸಿಗಲಾರರೇನೋ ಎಂಬಂತೆ ಜಿಲ್ಲೆಯ ಹಲವು ಕಡೆ ಅಳಿದುಳಿದ ಯೋಜನೆಗಳ ಶಿಲಾನ್ಯಾಸ, ಉದ್ಘಾಟನಾ ಸಮಾರಂಭಗಳು ಸ್ಥಳೀಯ ಶಾಸಕ ಬಾಬುರಾವ್ ಚಿಂಚನಸೂರ್‌ ಅವರ ಅಧ್ಯಕ್ಷತೆಯಲ್ಲಿ ದಿಬ್ಬಣದೋಪಾದಿಯಲ್ಲಿ ಏರ್ಪಟ್ಟವು.
 
ಜನ ಖರ್ಗೆ ಅವರ ಆಗಮನಕ್ಕಾಗಿ ಚಾತಕಪಕ್ಷಿಯಂತೆ ಕಾದರು. ಕೊನೆಗೂ ಖರ್ಗೆ ಬಂದಾಗ ಹೂಮಾಲೆ ಹಾಕಲು ಮುಗಿಬಿದ್ದರು. ಸತತ ಒಂದು ಗಂಟೆ ಕಾಲ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಮುಗಿದ ಮೇಲೆ ಎದ್ದುನಿಂತ ಚಿಂಚನಸೂರ್, ‘ಖರ್ಗೆಜೀ ಅವರು ಅವ್ರ ತವರು ಮನೆಗೆ ಬಂದಿದ್ದಾರೆ. ಅದಕ್ಕ ಮಂದಿ ಮನೆಗೆ ಮಗಳೇ ಬಂದಷ್ಟು ಆನಂದ ಅನುಭವಿಸ್ಯಾರೆ’ ಎಂದು ಹಾಡಿಹೊಗಳಿದರು.
 
ಆಜಾನುಬಾಹು ಖರ್ಗೆ ಎದ್ದುನಿಂತು,‘ನಾನು 40 ವರ್ಷ ರಾಜಕೀಯ ಜೀವನ ಇಲ್ಲೇ ಕಳದಿದ್ದೀನಿ. ಮುಂದ ಮಾರ್ಚ್‌ ಬಂದ್ರ 45 ಕಳೀತದ. ಇದು ನನಗೆ ತವರೂ ಅಲ್ಲ, ಗಂಡನ ಮನೆಯೂ ಅಲ್ಲ. ಬಾಬುರಾವ ನಿನಗ ನನ್ನ ಗುರುಮಿಠಕಲ್‌ ಮತಕ್ಷೇತ್ರದ ಜನ ಆಶೀರ್ವದಿಸಿದ್ದಾರೆ. ನೀ ಇಲ್ಲಿ ಮಗಳಿದ್ದಂಗೆ. ನಾವಾ ನಿನ್ನ ಕಾಳಜಿ ಮಾಡೀವಿ. ಇಲ್ಲಿನ ಮಂದಿಗೆ ನೀ ಹ್ಯಾಂಗ್‌ ಪ್ರೀತಿ ತೋರಿಸ್ತಿಯೋ ಹಾಂಗ್‌ ಇಲ್ಲಿರ್ತಿ’ ಅಂದಾಗ ಜನರ ಚಪ್ಪಾಳೆ ಸದ್ದು ಮುಗಿಲುಮುಟ್ಟಿತು. ಚಿಂಚನಸೂರ್ ಕೂಡ ನಗೆಗಡಲಲ್ಲಿ ತೇಲಿದರು.
-ಮಲ್ಲೇಶ್ ನಾಯಕನಹಟ್ಟಿ
 
**
ನಿಜವಾಗಿಯೂ ನೀ ಅಪ್ಸರಾ...
ಮೈಸೂರು: ‘ನಿಮ್ಮ ಹೆಸರು ಅಪ್ಸರಾ... ನೋಡಲೂ ಅಪ್ಸರೆಯಂತೆ ಇದ್ದೀರಿ...! ಜಿಲ್ಲಾಡಳಿತದ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಅವರು ಅಪ್ಸರಾ ಎಂಬ ತೃತೀಯ ಲಿಂಗಿಗೆ ಹೇಳಿದ ಮಾತಿದು.
 
₹ 500 ಮಾಸಾಶನ ಕಲ್ಪಿಸುವ ‘ಮೈತ್ರಿ’ ಯೋಜನೆಗೆ ಸಂಬಂಧಿಸಿದ ಸಂವಾದದ ವೇಳೆ ತೃತೀಯ ಲಿಂಗಿಗಳು ವೇದಿಕೆ ಮೇಲೇರಿದರು. ಪರಿಚಯ ಮಾಡಿಕೊಳ್ಳುವ ವೇಳೆ ಒಬ್ಬರು ‘ನನ್ನ ಹೆಸರು ಅಪ್ಸರಾ’ ಎಂದರು. ಆಗ ಮಹದೇವಪ್ಪ, ‘ನೀವು ನೋಡಲೂ ಅಪ್ಸರೆಯಂತೆ ಕಾಣುತ್ತಿದ್ದೀರಿ’ ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ. ಕೈಗಳಿಂದ ಮುಖ ಮುಚ್ಚಿಕೊಂಡ ಅಪ್ಸರಾ ಕಿರುನಗೆ ಬೀರಿದರು.
 
‘ನಮಗೆ ಅಧಿಕಾರ ಕೊಟ್ಟು ನೋಡಿ. ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ತೋರಿಸಿಕೊಡುತ್ತೇವೆ’ ಎಂದು ಚಾಂದಿನಿ ಎಂಬುವವರು ಸಚಿವರಿಗೆ ಸವಾಲು ಹಾಕಿದರು. ‘ಯಾರೋ ಒಬ್ಬರು ತಪ್ಪು ಮಾಡಿದ್ದಕ್ಕೆ ಇಡೀ ತೃತೀಯ ಲಿಂಗಿಗಳ ಸಮುದಾಯಕ್ಕೆ ಶಾಪ ಹಾಕುತ್ತಾರೆ. ಬಾಡಿಗೆಗೆ ಮನೆ ನೀಡಲೂ ಹಿಂದೇಟು ಹಾಕುತ್ತಾರೆ. ತೃತೀಯ ಲಿಂಗಿಗಳ ಜನಗಣತಿ ಮಾಡಿ. ನಿಲ್ದಾಣಗಳಲ್ಲಿ ಕಸ ಗುಡಿಸುವ ಕೆಲಸವನ್ನಾದರೂ ನೀಡಿ’ ಎಂದು ನಿವೇದನೆ ಮಾಡಿಕೊಂಡರು. 
ಮಲ್ಲೇಶ್ ನಾಯಕನಹಟ್ಟಿ,
-ಕೆ.ಓಂಕಾರ ಮೂರ್ತಿ
 
**
ಜೈಲಿಗೆ ಹೋದವರಿಗೆ ನಿರಾಸೆ
ವಿಜಯಪುರ: ಸನ್ನಡತೆಯ ಆಧಾರದಲ್ಲಿ ಸೆರೆವಾಸದಿಂದ ಮುಕ್ತರಾದವರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರ ಅನಿಸಿಕೆ ಪಡೆಯುವ ಸಲುವಾಗಿ ಗಣರಾಜ್ಯೋತ್ಸವ ಆಚರಣೆ ದಿನ ಇಲ್ಲಿನ ದರ್ಗಾ ಜೈಲಿನ ಬಳಿ ತೆರಳಿದ ಪತ್ರಕರ್ತರಿಗೆ ನಿರಾಸೆ ಕಾದಿತ್ತು.
 
ಜೈಲಿನ ಹೊರ ಆವರಣದಲ್ಲಿ ತಾಸುಗಟ್ಟಲೆ ಕಾದರೂ ಯಾರೊಬ್ಬರೂ ಸ್ಪಂದಿಸಲಿಲ್ಲ. ಜೈಲಿನೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಒಳಗೆ ನಡೆಯುತ್ತಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದವರಿಗೆ ಮೊಬೈಲ್‌ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
 
ಕಾರ್ಯಕ್ರಮ ಮುಗಿದ ಬಳಿಕ ಸಚಿವರು, ಅಧಿಕಾರಿಗಳ ಬೆನ್ನಿಗೇ, ಬಿಡುಗಡೆ ಹೊಂದಿದ ಕೈದಿಗಳು ಸಹ ಹೊರಬಂದರು. ಮಾಧ್ಯಮದವರು ‘ಜೈಲು ಹಕ್ಕಿಗಳ’ ಪ್ರತಿಕ್ರಿಯೆಗೆ ಮುಗಿಬಿದ್ದರೆ, ಸಂಘಟನೆಗಳ ಮುಖಂಡರು ಗುಲಾಬಿ ನೀಡಿ, ಸಿಹಿ ತಿನಿಸಿ ಸ್ವಾಗತಿಸಲು ಮುಂದಾದರು.
 
ಈ ನಡುವೆ ಒಳಗಿದ್ದವರು ಪತ್ರಕರ್ತರ ಮೊಬೈಲ್ ಕರೆ ಏಕೆ ಸ್ವೀಕರಿಸಲಿಲ್ಲ, ಜೈಲಿನೊಳಗೆ ಅವರಿಗೆ ಪ್ರವೇಶ ನಿರಾಕರಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ನಡೆಸಿದಾಗ, ಬಹಿರಂಗಗೊಂಡ ಸತ್ಯ ಕೇಳಿ ಪೆಚ್ಚು ಮೋರೆ ಹಾಕಿಕೊಳ್ಳುವ ಸರದಿ ಪತ್ರಕರ್ತರದ್ದಾಗಿತ್ತು.
 
‘ಹಿಂದಿನ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ್ದ ವಿವಾದಿತ ‘ಐಟಂ ಸಾಂಗ್‌’ ಕಹಿ ಘಟನೆ ಜೈಲು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ನಮ್ಮೊಳಗಿನ ಲೋಪ ರಹಸ್ಯವಾಗಿರಲಿ ಬಹಿರಂಗಗೊಳ್ಳುವುದು ಬೇಡ ಎಂದೇ ಈ ಬಾರಿ ಯಾರೊಬ್ಬರಿಗೂ ಮೊಬೈಲ್‌, ಕ್ಯಾಮೆರಾ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಉಳಿದ ಕೈದಿಗಳನ್ನು ಒಂದೆಡೆ ಸೇರಿಸಿ ಸಮಾರಂಭ ನಡೆಸಲಿಲ್ಲ’ ಎಂದು ಜೈಲಿನೊಳಗೆ ತೆರಳಿದ್ದ ವ್ಯಕ್ತಿಯೊಬ್ಬರು ರಹಸ್ಯ ಬಹಿರಂಗಗೊಳಿಸಿದರು!
-ಡಿ.ಬಿ.ನಾಗರಾಜ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT