ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ಭಾವನೆ ಅರಳುವ ಸ್ಪರ್ಧಾಸಮಯ

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ಭಾವನೆ ಮತ್ತು ಸಂಬಂಧಗಳನ್ನು ಬೆಸೆಯುವ ಕೊಂಡಿ ಭಾಷೆ. ಜಗತ್ತಿನಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಪೂರಕವಾಗಿ  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ವರ್ಮನ ಸ್ಮರಣೆಯಲ್ಲಿ ಭಾಷಾಜ್ಞಾನದ ಜಾಗೃತಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮಯೂರ ಕನ್ನಡ ಪ್ರತಿಭಾನ್ವೇಷಣೆ’ ಕಾರ್ಯಕ್ರಮದ ಮೂಲಕ ಸುಮಾರು ₹ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಸಂಸ್ಥೆ ಮುಂದಾಗಿದೆ.

ಈ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಮಕ್ಕಳಿಗೆ ನಡೆಯಲಿದೆ. ಯಾವುದೇ ಮಾಧ್ಯಮದಲ್ಲಿ  ವ್ಯಾಸಂಗ ಮಾಡುತ್ತಿರುವ ಕನ್ನಡ ಭಾಷೆಯನ್ನು ಬರೆಯಲು ಮತ್ತು ಓದಲು ಬರುವ ರಾಜ್ಯ, ದೇಶ,  ವಿದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಮೇಲ್ನೋಟಕ್ಕೆ ಸಾಮಾನ್ಯ ಸ್ಪರ್ಧೆಯಂತೆ ಕಂಡರೂ ಅಂತರಾಳದಲ್ಲಿ ಭಾಷೆ, ಭಾವನೆ ಸಂಬಂಧ, ಜಾನಪದ, ಕ್ರೀಡೆ, ನಿಸರ್ಗವನ್ನು ಪರಿಚಯಿಸುವ ಮೂಲಕ ಪರಿಸರ ಜಾಗೃತಿಗೂ  ಒತ್ತು ನೀಡಲಾಗಿದೆ.

ಈ ಪ್ರತಿಭಾನ್ವೇಷಣೆ ಮೂರು ವಿಭಾಗದಲ್ಲಿ ನಡೆಯಲಿದ್ದು, ಈ ಮೂರು ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು. ಪ್ರಾಥಮಿಕ ಶಾಲಾ ವಿಭಾಗದಲ್ಲಿ 5ರಿಂದ 7ನೇ ತರಗತಿ, ಪ್ರೌಢಶಾಲೆ ವಿಭಾಗದಲ್ಲಿ 8ರಿಂದ 10ನೇ ತರಗತಿ ಹಾಗೂ ವಿದೇಶಿ ವಿಭಾಗದಲ್ಲಿ 16 ವರ್ಷ ವಯೋಮಿತಿಯೊಳಗಿನ ಮಕ್ಕಳು ಭಾಗವಹಿಸಲು ಅವಕಾಶವಿದೆ.

ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಾಗುವ ಮೂವರು ವಿದ್ಯಾರ್ಥಿಗಳಿಗೆ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಪದಕವನ್ನು ನೀಡಲಾಗುವುದು. ರಾಜ್ಯ ಮಟ್ಟದ ಪ್ರತಿಭಾನ್ವೇಷಣೆಯಲ್ಲಿ ಗೆಲುವು ಸಾಧಿಸುವ ಮಕ್ಕಳಿಗೆ ಪ್ರಥಮ ‘ಮಯೂರ ಅಕ್ಷರ ವೀರ ಪ್ರಶಸ್ತಿ’ ಹಾಗೂ ₹1ಲಕ್ಷ ನಗದು ಪುರಸ್ಕಾರ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮಯೂರ ಅಕ್ಷರ ವೀರ ಪ್ರಶಸ್ತಿ ಜೊತೆಗೆ ಕ್ರಮವಾಗಿ ₹ 50 ಸಾವಿರ  ಹಾಗೂ ₹25 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಲಾಗುವುದು.

ಸರ್ಕಾರದ ಕಿಯೋನಿಕ್ಸ್   ಸಂಸ್ಥೆ ಹಾಗೂ ಈ – ನೆಟ್ ಇನ್ಫಾಮೆಟಿಕ್ಸ್ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಂ. ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಶಾಲಾಮಕ್ಕಳಿಗೆ ರಜೆ ಇರುವುದರಿಂದ ಆ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಸಂಸ್ಥೆ ಸಿದ್ಧತೆ ನಡೆಸಿದೆ. ಸಾಹಿತಿ ನಾ. ಡಿಸೋಜ ಅವರ ಗೌರವಾಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಥೆಗಾರ ಕುಂ. ವೀರಭದ್ರಪ್ಪ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪ್ರತಿಭಾನ್ವೇಷಣೆಯ ನ್ಯಾಯ ನಿರ್ಣಯಕರಾಗಲಿದ್ದಾರೆ. ಈ ಕಾರ್ಯಕ್ರಮ  ಪ್ರತಿ ವರ್ಷವೂ ವ್ಯವಸ್ಥಿತವಾಗಿ ನಡೆಸಲು ಸಂಸ್ಥೆ ರೂಪುರೇಷ ಸಿದ್ಧಪಡಿಸಿದೆ. ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ‘ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಮಾಧ್ಯಮ ಸಹಯೋಗ ನೀಡಿವೆ.

ಪರೀಕ್ಷೆ ಮಾಹಿತಿ
ಈ ಪ್ರತಿಭಾನ್ವೇಷಣೆ ರಾಜ್ಯದಲ್ಲಿ 4 ಹಂತದಲ್ಲಿ ಹಾಗೂ ವಿದೇಶಿ ವಿಭಾಗದಲ್ಲಿ 2 ಹಂತದಲ್ಲಿ ನಡೆಯಲಿದೆ.
ಪರೀಕ್ಷೆಯ ಮಾದರಿ: ಮೊದಲ ಮೂರು ಹಂತದಲ್ಲೂ ಸಹ ಬಹು ಆಯ್ಕೆ ಪ್ರಶ್ನೆಗಳಿಗೆ ಗುರುತಿಸುವ ಮೂಲಕ ಉತ್ತರಿಸುವುದು.
ಪಠ್ಯಕ್ರಮ: ಶಾಲಾ ಮಟ್ಟದಲ್ಲಿ –  ಕನ್ನಡ ಶಬ್ದಗಳ ( ಶಬ್ದ ಭಂಡಾರ) ಗ್ರಹಿಕೆ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ಕನ್ನಡ ಹಾಗೂ ರಾಜ್ಯ ಮಟ್ಟದಲ್ಲಿ ವಿಭನ್ನ ಆಯಾಮದಲ್ಲಿ ಮೌಖಿಕ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ
ಯಾವುದೇ ವಿದ್ಯಾರ್ಥಿ ನೇರವಾಗಿ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.  ಶಿಕ್ಷಕರು ಹಾಗೂ ಮಾರ್ಗದರ್ಶಕರ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು  ಪ್ರತಿ ತಾಲೂಕಿನಲ್ಲಿ ತೆರೆದಿರುವ ಇ–ನೆಟ್ ಕನ್ನಡ ಸೇವಾ ಕೇಂದ್ರ ಅಥವಾ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ www.enetkannada.com ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ಅರ್ಜಿ ಶುಲ್ಕ: ₹350 ಆನ್ ಲೈನ್ ಮೂಲಕವೇ ಪಾವತಿ ಮಾಡತಕ್ಕದ್ದು. ಪಾವತಿಯಾದ ನಂತರ ಅರ್ಜಿ ಪ್ರತಿಯನ್ನು  ಪಡೆಯಬೇಕು. ಫೆಬ್ರುವರಿ 25ರೊಳಗೆ ಈ ಸ್ಪರ್ಧಾ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಸೌಲಭ್ಯ: ವಿದೇಶಿ ವಿಭಾಗದ ವಿದ್ಯಾರ್ಥಿಗಳನ್ನು ಹೊರತುಪಡಿಸಿ,  ಉಳಿದಂತೆ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವತಿಯಿಂದ ₹1ಲಕ್ಷ ಮೌಲ್ಯದ ದುರ್ಘಟನೆ ವಿಮೆ ಹಾಗೂ ಕಿಯೋನಿಕ್ಸ್ ಸಂಸ್ಥೆಯ ₹500 ರೂಪಾಯಿ ಕೂಪನ್  ಉಡುಗೊರೆಯಾಗಿ ಸಿಗಲಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅರ್ಜಿಯನ್ನು www.enetkannada.comನಲ್ಲಿ ಪ್ರತ್ಯೇಕ ಅರ್ಜಿ ವಿಭಾಗದಲ್ಲಿ ಸಲ್ಲಿಸಬೇಕಾಗಿದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.  ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. 
ಮಾಹಿತಿಗೆ: ಕನ್ನಡ ಕಾಲ್ ಸೆಂಟರ್ ಸಹಾಯವಾಣಿ (9026131818)

***

ಸಾಗರೋಪಾದಿಯಲ್ಲಿ ಬನ್ನಿ...
ಕನ್ನಡದ ಪ್ರತಿಭೆಗಳನ್ನು ಗುರುತಿಸುವ, ಹುಡುಕುವ ಕಾರ್ಯಕ್ಕೆ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮುಂದಾಗಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಾನ್ವೇಷಣೆ  ನಡೆಸಿ ತಾಂತ್ರಿಕತೆ ಸಹಾಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ ಕನ್ನಡ ಪ್ರತಿಭಾನ್ವೇಷಣೆ ನಡೆಸಲು ಮುಂದಾಗಿರುವುದು ಮೆಚ್ಚುಗೆ ವಿಷಯ. ಪೋಷಕರು, ಶಾಲಾಶಿಕ್ಷಕರು ಮಕ್ಕಳಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಿ, ಭಾಗವಹಿಸಲು ಮಾರ್ಗದರ್ಶನ ನೀಡುವ ಮೂಲಕ ಕನ್ನಡದ ಕಾರ್ಯಕ್ಕೆ ಶಕ್ತಿ ತುಂಬಬೇಕು.
ನಾ. ಡಿಸೋಜ, ಸಾಹಿತಿ

***

ಮಯೂರ ಕನ್ನಡದ ಐಕಾನ್
ಶಿರಾಳಕೊಪ್ಪ ಸಮೀಪದ ತಾಳಗುಂದ ಕನ್ನಡದ ಶಕ್ತಿಕೇಂದ್ರ. ಮಯೂರ ವರ್ಮ ಕನ್ನಡದ ಬಹುದೊಡ್ಡ ಐಕಾನ್. ಈ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸ್ವಾಗತಾರ್ಹ. ಈ ಪ್ರತಿಭಾನ್ವೇಷಣೆ ನಾಡಿನಾದ್ಯಂತ ಜನಪ್ರಿಯವಾಗಬೇಕು. ನಾಡಿನ ಲಕ್ಷಾಂತರ ಮಕ್ಕಳು ಭಾಗವಹಿಸಬೇಕು.
ಕುಂ. ವೀರಭದ್ರಪ್ಪ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT