ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ದಾಪುಗಾಲು

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ರಾಜ್ಯ ಒಲಿಂಪಿಕ್‌ ಕ್ರೀಡಾಕೂಟಕ್ಕೆ ತನ್ನದೇ ಆದ ಮಹತ್ವವಿದೆ. ನಿಯಮಿತವಾಗಿ ನಿರ್ದಿಷ್ಟ ವರ್ಷಗಳಲ್ಲಿ ಈ ಕೂಟ ನಡೆದಿಲ್ಲ, ನಿಜ. ಆದರೆ ಈ ಕೂಟ ನಡೆದಾಗಲೆಲ್ಲಾ ರಾಜ್ಯದ ಕ್ರೀಡಾ ಚಟುವಟಿಕೆಯಲ್ಲಿ ಸಂಚಲನ ಮೂಡಿಸಿದೆ.

ಇದೀಗ ಫೆಬ್ರುವರಿ 3ರಿಂದ 10ರವರೆಗೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ರಾಜ್ಯ ಒಲಿಂಪಿಕ್ಸ್‌ ಕೂಟ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳೂ ಮುಗಿದಿವೆ.

ರಾಜ್ಯ ಒಲಿಂಪಿಕ್‌ ಸಂಸ್ಥೆಯ ಮಹಾ ಕಾರ್ಯದರ್ಶಿ ಅನಂತರಾಜು ಅವರ ಪ್ರಕಾರ ‘ರಾಜ್ಯ ಒಲಿಂಪಿಕ್ಸ್‌ ಸಂಘಟನೆಯು ಹಿಂದಿನಿಂದಲೂ ಈ ಕೂಟದ ಸಂಘಟನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡೇ ಬಂದಿದೆ.

ಎಂಬತ್ತರ ದಶಕದ ಆರಂಭದಲ್ಲೇ ಬೆಳಗಾವಿಯಲ್ಲಿ ಈ ಕೂಟ ನಡೆದಿತ್ತು. ನಂತರ ಬಾಗಲಕೋಟೆಗೂ ಆತಿಥ್ಯದ ಗೌರವ ಸಿಕ್ಕಿತ್ತು. ಒಂದೂವರೆ ದಶಕದ ಹಿಂದೆ ಬೆಂಗಳೂರಿನಲ್ಲಿ ಈ ಕೂಟ ನಡೆದಿದ್ದರೆ, ಎಂಟು ವರ್ಷಗಳ ಹಿಂದೆ ಬೆಂಗಳೂರು, ಮೈಸೂರು, ಮಂಡ್ಯಗಳ ವಿವಿಧ ಕ್ರೀಡಾಂಗಣಗಳಲ್ಲಿ ಈ ಕೂಟ ನಡೆದು ಕ್ರೀಡಾಭಿಮಾನಿಗಳ ಮನಗೆದ್ದಿತ್ತು’ ಎಂದಿದ್ದಾರೆ.

‘ಈ ಕೂಟ ದಸರಾ ಕ್ರೀಡಾಕೂಟದ ಮಾದರಿಯಲ್ಲಿ ನಡೆಯುವುದಿಲ್ಲ. ಇದು ರಾಷ್ಟ್ರೀಯ ಕ್ರೀಡಾಕೂಟದ ಮಾದರಿಯಲ್ಲಿ ನಡೆಯುತ್ತದೆ. ಸಂಬಂಧಪಟ್ಟ ಕ್ರೀಡೆಯ ರಾಜ್ಯ ಸಂಸ್ಥೆಯವರು ಸಂಬಂಧಪಟ್ಟ ಕ್ರೀಡೆಯ ಈ ವರ್ಷದ ಅಗ್ರ 8 ಸ್ಥಾನಗಳಲ್ಲಿರುವ ತಂಡಗಳನ್ನು ಸ್ಪರ್ಧೆಗೆ ಕಳುಹಿಸಿಕೊಡುತ್ತವೆ.

ಮೊದಲ ಮೂರು ಸ್ಥಾನಗಳಿಗಾಗಿ ಈ 8 ತಂಡಗಳ ನಡುವೆ ಪೈಪೋಟಿ ನಡೆಯುತ್ತದೆ. ತಂಡಗಳ ಆಯ್ಕೆ ಪ್ರಕ್ರಿಯೆ ನಮಗೆ ಸಂಬಂಧಿಸಿದ್ದೇ ಅಲ್ಲ. ಸಂಬಂಧಪಟ್ಟ ಕ್ರೀಡೆಯ ರಾಜ್ಯಸಂಸ್ಥೆಗಳು ತಂಡವನ್ನು ಆಯ್ಕೆ ಮಾಡಿ ಕಳುಹಿಸುತ್ತವೆ’ ಎಂದೂ ಅನಂತರಾಜು ಹೇಳುತ್ತಾರೆ.

ಒಲಿಂಪಿಕ್ಸ್‌ ಕ್ರೀಡಾಕೂಟವನ್ನು  ರಾಜ್ಯ ಸರ್ಕಾರದ ಹಣಕಾಸಿನ ನೆರವಿನಿಂದಲೇ ನಡೆಸಲಾಗುತ್ತದೆ. ‘ಈ ಸಲ ಕೂಡಾ ಈ ಕೂಟದ ಸಂಘಟನೆಗೆ ರಾಜ್ಯ ಸರ್ಕಾರ ₹ 3ಕೋಟಿ ನೀಡಿದೆ’ ಎಂದು ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜ್‌ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT