ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕಡೆಗಣಿಸಿರುವ ಸರ್ಕಾರ: ಟೀಕೆ

ಸಿರಿವರ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ
Last Updated 30 ಜನವರಿ 2017, 7:29 IST
ಅಕ್ಷರ ಗಾತ್ರ

ತುಮಕೂರು: ಹಾಲು, ಆಹಾರ ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನ ಅಲಂಕರಿಸಲು ಕಾರಣರಾದ ರೈತರನ್ನು ಸರ್ಕಾರಗಳು ನಿರ್ಲಕ್ಷ್ಯಿಸಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಆರೋಪಿಸಿದರು.

ತಾಲ್ಲೂಕಿನ ಹೆಬ್ಬೂರು ಹೋಬಳಿ ಸಿರಿವರ ಗ್ರಾಮದಲ್ಲಿ ರೈತ ಸಂಘ  ಹಾಗೂ ಹಸಿರು ಸೇನೆ ಗ್ರಾಮ ಘಟಕ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಖಾನೆ, ಸರ್ಕಾರಿ ಕಚೇರಿಗಳಲ್ಲಿ ದುಡಿಯುವ ನೌಕರರಿಗೆ ನಿಗದಿತ ವೇತನ ನೀಡಲಾಗುತ್ತದೆ. ಆದರೆ, ದಿನ 24 ಗಂಟೆ ದುಡಿಯುವ ರೈತರಿಗೆ ನಿಶ್ಚಿತ ಆದಾಯವಿಲ್ಲ. ಆರ್ಥಿಕ ಬಡತನಕ್ಕಿಂತ ಜ್ಞಾನದ ಬಡತನ ರೈತರನ್ನು ಕಾಡುತ್ತಿದೆ. ನಗರ ಕೇಂದ್ರಿತ ಯೋಜನೆಗಳಿಂದ ಗ್ರಾಮೀಣ ಪ್ರದೇಶಗಳು ಹಿಂದುಳಿಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ನಮ್ಮನಾಳುವ ಸರ್ಕಾರಗಳು ಉದ್ದಿಮೆದಾರರು, ಕೈಗಾರಿಕೋದ್ಯಮಿಗಳ ಪರವಾದ ನೀತಿಗಳನ್ನು ಜಾರಿಗೆ ತರುತ್ತಿರುವ ಪರಿಣಾಮ ಬಡವರು, ರೈತರು, ಕೂಲಿ ಕಾರ್ಮಿಕರು ನರಳುವಂತಾಗಿದೆ ಎಂದು ಹೇಳಿದರು.

ಸಂತೆಯಲ್ಲಿ ತರಕಾರಿ ಮಾಡುವವರು ₹60 ರಿಂದ 100 ಕ್ಕೆ ಡಿಜಿಟಲ್ ವ್ಯವಹಾರ ಮಾಡಲು ಹೇಗೆ ಸಾಧ್ಯ. ಅಷ್ಟೂ ತಿಳಿವಳಿಕೆ ಪ್ರಧಾನಿಗೆ ಇಲ್ಲವೇ ಎಂದು ಪ್ರಶ್ನಿಸಿದರು.
ಅಮೆರಿಕ ದೇಶದಲ್ಲಿ ಶೇ 35ರಷ್ಟು ವಹಿವಾಟು ಹಣದ ಮೂಲಕ ನಡೆಯುತ್ತಿದೆ. ಹೀಗಿರುವಾಗ ಶೇ 64 ರಷ್ಟು ಕೃಷಿ ಕುಟುಂಬ ಹೊಂದಿರುವ ಭಾರತದಲ್ಲಿ ನಗದುರಹಿತ ವ್ಯವಹಾರ ಕಾರ್ಯಸಾಧುವೇ ಎಂಬುದನ್ನು ಅವಲೋಕಿಸಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಜಿಲ್ಲೆಯಲ್ಲಿ 2 ಲಕ್ಷ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಲಕ್ಷಾಂತರ ತೆಂಗಿನ ಗಿಡಗಳ ಸುಳಿ ಮುರಿದು ಹೋಗಿದೆ. ಮುಂದಿನ ಒಂದು ವಾರದೊಳಗೆ ರೈತರ ಸಭೆ ಕರೆದು ಸಮಸ್ಯೆ ಆಲಿಸದಿದ್ದರೆ ಮತ್ತೆ ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ಯಾರಿಂದಲೂ ಬರ ತಡೆಯಲು ಸಾಧ್ಯವಿಲ್ಲ. ಕೈಗಾರಿಕೆಗಳು ಆಕಸ್ಮಿಕ ಬೆಂಕಿ ಅವಘಡಗಳಿಂದ ನಷ್ಟ ಅನುಭವಿಸಿದರೆ ಸರ್ಕಾರಗಳು ತಕ್ಷಣ ನೆರವಿಗೆ ಬರುತ್ತವೆ. ರೈತರ ಬದುಕು ಅತಂತ್ರದಲ್ಲಿದ್ದಾಗ ಏಕೆ ನೆರವಿಗೆ ಬರುತ್ತಿಲ್ಲ ಎಂದು ಕಿಡಿಕಾರಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷರ ವರದಿ ಬಗ್ಗೆ ಸರ್ಕಾರ ಕಣ್ಣು ಬಿಡುತ್ತಿಲ್ಲ. ಆದ್ದರಿಂದ ವಿಧಾನಸಭೆ, ಲೋಕಸಭೆಯಲ್ಲಿ ರೈತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬೇಕು. ಆಗ ಸಮಸ್ಯೆಗೆ ಖಂಡಿತ ಸ್ಪಂದನೆ ಸಿಗಲಿದೆ ಎಂದು ಹೇಳಿದರು. ರೈತ ಸಂಘದ ಮುಖಂಡರಾದ ಯಾಕೂಬ್‌, ಹಾವೇರಿಯ ಮಂಜುಳಾ, ಫರೀದಾ, ದೇವರಾಜು, ಉಮೇಶ್, ಹನುಮಂತೇಗೌಡ ಇತರರು ಉಪಸ್ಥಿತರಿದ್ದರು.

224 ಕ್ಷೇತ್ರಗಳಲ್ಲಿ ರೈತ ಸಂಘ ಸ್ಪರ್ಧೆ
ಸಾರ್ವತ್ರಿಕ ಚುನಾವಣೆಗಳಲ್ಲಿ ರೈತರು ಜಾತಿ, ಮತ ಮೀರಿ ಹಕ್ಕು ಚಲಾಯಿಸಿದರೆ ಮಾತ್ರ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲುಪುರದ ನಾಗೇಂದ್ರಪ್ಪ ಹೇಳಿದರು.
ಮುಂದಿನ ವಿಧಾನಸಭೆ  ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲೂ ರೈತ ಸಂಘ ಸ್ಪರ್ಧಿಸಲಿದೆ.  ಈ ಸಂಬಂಧ ಫೆ.12 ರಂದು ಮಂಡ್ಯದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

***
ಉದ್ದಿಮೆ ಸ್ಥಾಪನೆಗೆ ಅದರದ್ದೇ ಆದ ನೀತಿಗಳಿವೆ. ರೈತರಿಗೆ ಮಾತ್ರ ಯಾವುದೇ ಸಾಲ ನೀತಿ, ಬೆಲೆ ನೀತಿ ಇಲ್ಲ.ಕೃಷಿ ನೀರಾವರಿಯನ್ನು  ಅದ್ಯತಾ ವಲಯವಾಗಿ ಗುರುತಿಸಲು ನಿರಂತರ ಹೋರಾಟ ಅಗತ್ಯವಾಗಿದೆ.
- ಕೆ.ಎಸ್‌.ಪುಟ್ಟಣ್ಣಯ್ಯ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT