ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಭ್ಯಾಸದಿಂದ ರೋಗಮುಕ್ತ ಜೀವನ

ಯೋಗಾಸನ, ಪ್ರಾಣಾಯಾಮ ಮಾಡಿ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ನೀಡಿದ ಬಾಬಾ ರಾಮ್‌ದೇವ್‌
Last Updated 30 ಜನವರಿ 2017, 7:38 IST
ಅಕ್ಷರ ಗಾತ್ರ

* ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಸಂಪನ್ನ * ಬಾಬಾ ರಾಮ್‌ದೇವ್‌ ಕಿವಿಮಾತು

**
ಸುತ್ತೂರು (ಮೈಸೂರು): ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ರೋಗ ಮತ್ತು ವ್ಯಸನ ಮುಕ್ತ ಜೀವನ ನಡೆಸಬಹುದು ಎಂದು ಪತಂಜಲಿ ಯೋಗಪೀಠದ ಸಂಸ್ಥಾಪಕ ಬಾಬಾ ರಾಮ್‌ದೇವ್‌ ಸಲಹೆ ನೀಡಿದರು. 
 
ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಭಾನುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ  ಸಮಾರೋಪ ಸಮಾರಂಭದಲ್ಲಿ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಸಭಿಕರಿಗೆ ವಿವರಿಸಿದರು. 
 
ಜ್ಞಾನಯೋಗ, ಕರ್ಮಯೋಗ, ಅಷ್ಟಾಂಗ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೀರ್ಘವಾಗಿ ಉಸಿರು ತೆಗೆದುಕೊಂಡು ಬಿಡುವುದರಿಂದ ಶ್ವಾಸಕೋಶ ಸಮಸ್ಯೆ, ಆಸ್ತಮಾ, ಕ್ಯಾನ್ಸರ್‌ ಮೊದಲಾದವನ್ನು ಬರದಂತೆ ತಡೆಯಬಹುದು. ದೀರ್ಘ ಉಸಿರಾಟವು ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದರು. 
 
ಪ್ರಾಣಾಯಾಮ ಅಭ್ಯಾಸದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಪಾಲಭಾತಿ ಪ್ರಾಣಾಯಾಮವು ಸರ್ವರೋಗ ನಿವಾರಣೆಗೆ ಸಹಕಾರಿಯಾಗಿದೆ. ಎರಡು ವರ್ಷ ನಿರಂತರವಾಗಿ ಯೋಗಾಭ್ಯಾಸ ಮಾಡಿದರೆ ಶರೀರ ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಬಹುದು. ಒತ್ತಡ, ಅರ್ಧ ತಲೆನೋವು, ಥೈರಾಯ್ಡ್‌ , ಬೊಜ್ಜು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವಿಲೋಮ ಮತ್ತು ಅನುಲೋಮ ಪ್ರಾಣಾಯಾಮವು ಆತ್ಮಶುದ್ಧಿಗೆ ಸಹಕಾರಿಯಾಗಿದೆ. ಯೋಗಾಭ್ಯಾಸವನ್ನು ಸರಿಯಾಗಿ ರೂಢಿಸಿಕೊಂಡರೆ ಔಷಧಿಗಾಗಿ ಹಣ ಖರ್ಚು ಮಾಡುವ ಪ್ರಮೇಯವೇ ಇರುವುದಿಲ್ಲ ಎಂದರು. 
 
ವಿದೇಶಿ ಉತ್ಪನ್ನಗಳ ಮೂಲೋತ್ಪಾಟನೆ ಧ್ಯೇಯ
‘ಮುಂದಿನ 10 ವರ್ಷಗಳಲ್ಲಿ ವಿದೇಶಿ ಉತ್ಪನ್ನಗಳನ್ನು ಬೇರುಸಮೇತ ಕಿತ್ತೊಗೆಯುವುದು ಪತಂಜಲಿ ಆಯುರ್ವೇದ ಸಂಸ್ಥೆಯ ಧ್ಯೇಯ’ ಎಂದು ಬಾಬಾ ರಾಮ್‌ದೇವ್‌ ಹೇಳಿದರು. 
 
‘ದೇಶಕ್ಕೆ ಕಾಲಿಟ್ಟ ಈಸ್ಟ್‌ ಇಂಡಿಯಾ ಕಂಪೆನಿಯು ನೂರಾರು ವರ್ಷ ಅಧಿಪತ್ಯ ನಡೆಸಿತ್ತು. ದೇಶದಲ್ಲಿ ಈಗ ಸಾವಿರಾರು ವಿದೇಶಿ ಕಂಪೆನಿಗಳಿದ್ದು, ₹ 50 ಲಕ್ಷ ಕೋಟಿ ವಹಿವಾಟು ನಡೆಸುತ್ತಿವೆ. ದೇಶದ ಅಭಿವೃದ್ಧಿಗೆ ಅವುಗಳ ಕೊಡುಗೆ ಶೂನ್ಯ. ಪತಂಜಲಿ ಸಂಸ್ಥೆಯ ಸಂಪೂರ್ಣ ಲಾಭ ಸಮಾಜಸೇವೆಗೆ ಮುಡಿಪಾಗಿದೆ. ವಿದೇಶಿ ಕಂಪೆನಿ ಉತ್ಪನ್ನಗಳ ಮೂಲೋತ್ಪಾಟನೆಗೆ ಸಂಕಲ್ಪ ತೊಟ್ಟಿದ್ದೇವೆ’ ಎಂದರು. 
 
‘ಅಲೋಪತಿ ವೈದ್ಯ ಪದ್ಧತಿಯು 200 ವರ್ಷಗಳ ಹಿಂದೆ ಆರಂಭವಾಗಿದೆ. ಭಾರತದ ಪಾರಂಪರಿಕ ಪದ್ಧತಿಗಳಿಗೆ ಸಹಸ್ರಾರು ವರ್ಷಗಳ ಇತಿಹಾಸ ಇದೆ. ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ, ಪುರಾತನ ಪದ್ಧತಿಗಳನ್ನು ಬಿಟ್ಟು ಅಲೋಪತಿಗೆ ಮಾರುಹೋಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು. 
 
ಬೇಲಿಮಠದ ಶಿವರುದ್ರ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಮೆರಿಕದ ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅಮರನಾಥ ಗೌಡ, ಟ್ರಸ್ಟಿ ಹಳೇಕೋಟೆ ವಿಶ್ವಾಮಿತ್ರ, ಶಾಸಕರಾದ ಮಂಜುನಾಥ್‌ ಗೌಡ, ಚಿಕ್ಕಮಾದು, ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಸದಸ್ಯ ಶ್ರೀಕಂಠೇಗೌಡ, ಸಂಸದರಾದ ಪುಟ್ಟರಾಜು, ಜಿ.ಎಂ.ಸಿದ್ದೇಶ್ವರ, ಮೇಯರ್‌ ಎಂ.ಜೆ.ರವಿ ಕುಮಾರ್‌, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್‌ ಇದ್ದರು. 
 
‘ರೈತರ ಸಾಲಮನ್ನಾ ಸಾಧ್ಯ’
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಸರ್ಕಾರವು ಕಠಿಣ ನಿರ್ಧಾರಗಳನ್ನು ಕೈಗೊಂಡು ದುಂದುವೆಚ್ಚಗಳಿಗೆ ಕಡಿವಾಣ ಹಾಕಿದರೆ ರೈತರ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಲು ಸಾಧ್ಯವಿದೆ’ ಎಂದು ಹೇಳಿದರು. 
 
‘ಮಾರ್ಚ್‌ನೊಳಗೆ ರೈತರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ರೈತರಲ್ಲಿ ಹಣವೇ ಇಲ್ಲದಿರುವಾಗ ಅಸಲು ಪಾವತಿಸುವು­ದಾದರೂ ಹೇಗೆ?’ ಎಂದು ಅವರು ಪ್ರಶ್ನಿಸಿದರು.  
 
‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ₹ 29 ಸಾವಿರ ಕೋಟಿ ಮತ್ತು ಸಹಕಾರ ಬ್ಯಾಂಕುಗಳಲ್ಲಿ ₹ 10 ಸಾವಿರ ಕೋಟಿ ಸಾಲ ಇದೆ. ಇದನ್ನು ಮನ್ನಾ ಮಾಡಬೇಕು. ಮುಂದಿನ ದಿನಗಳಲ್ಲಿ ಅನ್ನದಾತರು ಸಾಲಕ್ಕೆ ಮೋರೆ ಹೋಗದಂತೆ ಶಾಶ್ವತ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. 
 
ಕೃಷ್ಣ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ನಷ್ಟ: ‘ಎಸ್‌.ಎಂ.ಕೃಷ್ಣ ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಅಪಾರ ನಷ್ಟ ಮತ್ತು ದೊಡ್ಡ ಪೆಟ್ಟು’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. 
 
‘ಆತ್ಮಗೌರವ ಇರುವವರು ಕಾಂಗ್ರೆಸ್‌ನಲ್ಲಿರುವುದು ಈಗ ಕಷ್ಟವಾಗಿದೆ. ಕೃಷ್ಣ ಅವರು ಪಕ್ಷ ತೊರೆದಿರುವುದು ಇದಕ್ಕೆ ಸ್ಪಷ್ಟ ನಿದರ್ಶನ’ ಎಂದರು.
‘ಕೃಷ್ಣ ಅವರನ್ನು ಭೇಟಿ ಮಾಡುವ ಸಂದರ್ಭ ಒದಗಿಲ್ಲ. ಅಗತ್ಯಬಿದ್ದರೆ ಖಂಡಿತ ಭೇಟಿ ಮಾಡುತ್ತೇನೆ’ ಎಂದು ಉತ್ತರಿಸಿದರು. 
 
*
ದೇಶದಲ್ಲಿ ಸಾವಿರಾರು ವಿದೇಶಿ ಕಂಪೆನಿಗಳಿದ್ದು, ₹ 50 ಲಕ್ಷ ಕೋಟಿ ವಹಿವಾಟು ನಡೆಸುತ್ತಿವೆ. ದೇಶದ ಅಭಿವೃದ್ಧಿಗೆ ಅವುಗಳ ಕೊಡುಗೆ ಶೂನ್ಯ. ಪತಂಜಲಿ ಸಂಸ್ಥೆ ಸಮಾಜಸೇವೆಗೆ ಮುಡಿಪಾಗಿದೆ. ವಿದೇಶಿ ಉತ್ಪನ್ನಗಳ ಮೂಲೋತ್ಪಾಟನೆಗೆ ಸಂಕಲ್ಪ ತೊಟ್ಟಿದ್ದೇವೆ.
-ಬಾಬಾ ರಾಮ್‌ದೇವ್‌
ಪತಂಜಲಿ ಯೋಗಪೀಠದ ಸಂಸ್ಥಾಪಕ 
 
**
ದೇಸಿ ಆಟಗಳ ವಿಭಾಗದ ಫಲಿತಾಂಶ
ನಂಜನಗೂಡು:
ಸುತ್ತೂರು ಜಾತ್ರೆಯಲ್ಲಿ ನಡೆದ ದೇಸಿ ಆಟಗಳ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಜಯಗಳಿಸಿದವರ ವಿವರ ಈ ಕೆಳಗಿನಂತಿದೆ.
 
ಕೆಸರು ಗದ್ದೆ ಓಟ: ಮಲ್ಲಿಕಾರ್ಜುನ, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (1), ರೋಹಿತಿ ಸ್ಯಾಮುಯಲ್, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (2), ಕೀರ್ತಿಕುಮಾರ್, ಜೆಎಸ್‍ಎಸ್ ಪ್ರೌಢಶಾಲೆ, ಮೂಗನೂರು (3)
 
ಗೋಲಿ: ಬಿ.ಸಿ.ರವಿ, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (1), ಮನೋಜ್, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (2), ಅಭಿಷೇಕ್, ಜೆಎಸ್‍ಎಸ್ ಪ್ರೌಢಶಾಲೆ, ಕಲ್ಕುಣಿಕೆ (3).
 
ಬುಗುರಿ: ಸಿದ್ದಣ್ಣ ಬಳಿಗಾರ್, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (1), ಆರ್.ಮದನ್, ಜೆಎಸ್‍ಎಸ್ ಪ್ರೌಢಶಾಲೆ, ಮೈಲಸಂದ್ರ, ಬೆಂಗಳೂರು (2), ಕೆ.ಎಸ್.ಹರ್ಷ, ಜೆಎಸ್‍ಎಸ್ ಪ್ರೌಢಶಾಲೆ, ಹಾಡ್ಯ (3)
 
ನವಕಂಕರಿ: ಎಚ್.ಎಂ.ಮಂಜುನಾಥ, ಜೆಎಸ್‍ಎಸ್ ಪ್ರೌಢಶಾಲೆ, ಹಳ್ಳಿಕೆರೆಹುಂಡಿ (1), ಎಂ.ಗಿರೀಶ್, ಜೆಎಸ್‍ಎಸ್ ಬಾಲಕರ ಪ್ರೌಢಶಾಲೆ, (2), ಸೋಮಶೇಖರ, ಜೆಎಸ್‍ಎಸ್ ಪ್ರೌಢಶಾಲೆ, ಬಂಡಳ್ಳಿ (3).
 
ಹುಲಿ– ಕುರಿ: ಶಶಾಂಕ್, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (1), ಆರ್.ರೋಹನ್, ಜೆಎಸ್‍ಎಸ್ ಪ್ರೌಢಶಾಲೆ, ಸುತ್ತೂರು (2), ಎಂ. ಎಸ್.ಯಶವಂತ, ಜೆಎಸ್‍ಎಸ್ ಪ್ರೌಢಶಾಲೆ, ಮನುಗನಹಳ್ಳಿ (3).
 
ಚೌಕಬಾರ: ಮಾರುತೇಶ ಹನುಮಪ್ಪ ವಂದಾಲಿ, ಜೆಎಸ್‍ಎಸ್ ಪ್ರೌಢಶಾಲೆ, ಹುಲ್ಲಹಳ್ಳಿ (1), ಮೊನೋದ, ಜೆಎಸ್‍ಎಸ್ ಪ್ರೌಢಶಾಲೆ, ಅಜ್ಜಿಪುರ (2), ಸಿ.ಜಯಶಂಕರ, ಜೆಎಸ್‍ಎಸ್ ಪ್ರೌಢಶಾಲೆ, ಉಮ್ಮತ್ತೂರು (3)
 
ಹಾವು– ಏಣಿ: ಮಧು, ಜೆಎಸ್‍ಎಸ್ ಪ್ರೌಢಶಾಲೆ, ಮೈಲಸಂದ್ರ, ಬೆಂಗಳೂರು(1), ಚರಣ್, ಜೆಎಸ್‍ಎಸ್ ಪ್ರೌಢಶಾಲೆ, ಅರಕಲವಾಡಿ (2), ಎಸ್.ನಿರಂಜನ, ಜೆಎಸ್‍ಎಸ್ ಪ್ರೌಢಶಾಲೆ, ಹೊರೆಯಾಲ (3).
 
ಚದುರಂಗ: ಎಂ.ಎಸ್.ಹೃಷಿಕೇಶ್, ಜೆಎಸ್‍ಎಸ್ ಪ್ರೌಢಶಾಲೆ, ಸಿದ್ದಾರ್ಥನಗರ, ಮೈಸೂರು (1), ಎಂ.ಎಂ.ಪ್ರಜ್ವಲ್ ರೂಪನಾಥ್, ಜೆಎಸ್‍ಎಸ್ ಪ್ರೌಢಶಾಲೆ, ಜೆ.ಪಿ.ನಗರ, ಮೈಸೂರು (1), ಯು.ಆರ್.ಗೌತಮ್, ಜೆಎಸ್‍ಎಸ್ ಪ್ರೌಢಶಾಲೆ, ಸಿದ್ದಾರ್ಥನಗರ, ಮೈಸೂರು (3).              
 
**
ಜಾತ್ರೆಗೆ  ಸಡಗರದ  ತೆರೆ
ಮೈಸೂರು: ಕಪಿಲಾ ನದಿಯ ತಟದ ಸುತ್ತೂರು ಕ್ಷೇತ್ರದಲ್ಲಿ ಆರು ದಿನ ವೈಭವೋಪೇತವಾಗಿ ಜರುಗಿದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಭಾನುವಾರ ಸಂಪನ್ನಗೊಂಡಿತು. 
 
ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಭಕ್ತರು ಜಾತ್ರೆಯ ಸೊಬಗನ್ನು ಕಣ್ತುಂಬಿಕೊಂಡು ಊರುಗಳಿಗೆ ಮರಳಿದರು. ಕೊನೆ ದಿನವಾದ ಭಾನುವಾರ ಜಾತ್ರೆಯಲ್ಲಿ ಕಡ್ಲೆಪುರಿ, ಸಿಹಿತಿನಿಸು, ಆಟಿಕೆಗಳ ಖರೀದಿ ಭರಾಟೆ ಜೋರಾಗಿತ್ತು. 
 
ಬೆಳಿಗ್ಗೆಯಿಂದಲೇ ಕರ್ತೃ ಗದ್ದುಗೆಯಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಕಪಿಲಾ ನದಿಯಲ್ಲಿ ಮಿಂದು, ಪೂಜೆ ಸಲ್ಲಿಸಿ ಪುನೀತ ಭಾವ ಮೆರೆದರು. ಚಿಣ್ಣರು ‘ಟೋರಾ ಟೋರಾ’, ‘ಸ್ಟೀರಿಂಗ್‌ ವ್ಹೀಲ್‌’ ಮೊದಲಾದವುಗಳಲ್ಲಿ ಆಡಿ ನಲಿದು ಸಂಭ್ರಮಿಸಿದರು.  
 
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಬಾಬಾ ರಾಮದೇವ್‌ ಅವರು ಯೋಗಾಸನ ಪ್ರದರ್ಶಿಸಿ ಸಭಿಕರಿಗೆ ರೋಮಾಂಚನ ಉಂಟು ಮಾಡಿದರು. ಕೃಷಿ ಬ್ರಹ್ಮಾಂಡ, ವಸ್ತು ಪ್ರದರ್ಶನ ಮೊದಲಾದವುಗಳನ್ನು ಕಂಡು ರೈತರು, ವಿದ್ಯಾರ್ಥಿಗಳು, ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಬಟ್ಟೆ, ಕೃತಕ ಆಭರಣ, ಆಟಿಕೆಗಳು ಮೊದಲಾದ ಅಂಗಡಿಗಳನ್ನು ಹಾಕಿದ್ದ ವ್ಯಾಪಾರಿಗಳು ಊರಿಗೆ ತೆರಳಲು ಗಂಟು ಮೂಟೆಗಳನ್ನು ಕಟ್ಟುವುದರಲ್ಲಿ ನಿರತರಾಗಿದ್ದರು.   
 
 ‘ಮಾಮೂಲಿ ಜಾತ್ರೆಗಳಿಗಿಂತ ಈ ಇದು ವಿಶಿಷ್ಟವಾಗಿದೆ. ಗ್ರಾಮೀಣ ಸೊಗಡಿನ ಜತೆಗೆ ಸಾಂಸ್ಕೃತಿಕ ವೈವಿಧ್ಯ, ಭರಪೂರ ಮಾಹಿತಿ ಮತ್ತು ಮನರಂಜನೆಗಳನ್ನು ಒಳಗೊಂಡಿದೆ. ಮಕ್ಕಳಿಂದ ಮುದುಕವರೆಗೂ ಎಲ್ಲರಿಗೂ ಇಷ್ಟವಾಗುವ ಕಾರ್ಯಕ್ರಮಗಳು ಇವೆ’ ಎಂದು  ಹಾವೇರಿಯ ಕರಿಯಣ್ಣ ಜಾತ್ರೆಯ ಸೊಬಗನ್ನು ವರ್ಣಿಸಿದರು. 
 
ಸ್ವಾಮೀಜಿ ಹಾಜರು
ಅನಾರೋಗ್ಯದಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಗಳಿಂದ ದೂರ ಉಳಿದಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸ್ವಾಮೀಜಿ ಆಸೀನರಾಗಿದ್ದರು. ‘ಸ್ವಾಮೀಜಿ ಈಗ ಆರೋಗ್ಯವಾಗಿ ದ್ದಾರೆ, ಆಶೀರ್ವಾದ ಪಡೆಯ ಬಹುದು’ ಎಂಬ ಮಾತುಗಳು ಸಭಿಕರ ವಲಯದಲ್ಲಿ ಕೇಳಿಬಂದವು. 
 
*
ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಅಪಾರ ನಷ್ಟ ಮತ್ತು ದೊಡ್ಡ ಪೆಟ್ಟುಕೊಡಲಿದೆ
-ಎಚ್‌.ಡಿ.ಕುಮಾರಸ್ವಾಮಿ 
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT