ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತನವರ ರಥೋತ್ಸವ

ಫೆಬ್ರುವರಿ 3ರಂದು ರಥೋತ್ಸವ
Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ -2ರಲ್ಲಿ ಪ್ರತಿ ವರ್ಷ ರಥಸಪ್ತಮಿಯಲ್ಲಿ ಜರುಗುವ ರಥೋತ್ಸವ ಉಳಿದ ರಥೋತ್ಸವಗಳಿಗಿಂತ ಕೊಂಚ ಭಿನ್ನ. ಏಕೆಂದರೆ ಹೊಸ ಗ್ರಾಮವನ್ನು ಕಟ್ಟಿದ ನೆನಪಿಗಾಗಿ ಈ ರಥೋತ್ಸವ ನಡೆಯುತ್ತದೆ.

ಇದೇ ಫೆ.3ರಂದು ರಥೋತ್ಸವ ನಡೆಯಲಿದೆ. ಇಂತಹ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಮಹಾಯೋಗಿ ಸದ್ಗುರು ಮಹಾದೇವ ತಾತನವರು.  ಹಂಪಸಾಗರಕ್ಕೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ. ಶಿಲಾಯುಗದಲ್ಲೇ ಇಲ್ಲಿ ಜನರು ವಾಸಿಸುತ್ತಿರುವ ಬಗ್ಗೆ ಕುರುಹುಗಳಿವೆ. ಅನಾದಿ ಕಾಲದಿಂದಲೂ ಈ ಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.

ಹಂಪಸಾಗರ ತುಂಗಭದ್ರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗುವ ಪರಿಸ್ಥಿತಿ ಎದುರಾಗಿತು. 1950 ರಲ್ಲಿ ಅಂದಿನ ಮದ್ರಾಸ್ ಸರ್ಕಾರವು ಜನರಿಗೆ ಸ್ಥಳಾಂತರ ಮಾಡುವಂತೆ ಹಣವನ್ನೂ ಕೊಟ್ಟಿತು. ಇದನ್ನು ಮೊದಲೇ ತಿಳಿದಿದ್ದ ಮಹಾದೇವ ತಾತನವರು ಗ್ರಾಮದ ಸ್ಥಳಾಂತರದ ಬಗ್ಗೆ ಮತ್ತು ಜನರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸೂಕ್ತವಾದ ಸ್ಥಳದ ಬಗ್ಗೆ ಭವಿಷ್ಯ ನುಡಿದಿದ್ದರು. ಆದರೆ ವೈಷಮ್ಯ ಮತ್ತು ಕೆಲವರ ಸ್ವ-ಹಿತಾಸಕ್ತಿ ಸಾಧನೆಯಿಂದಾಗಿ ಒಮ್ಮತಕ್ಕೆ ಬರುವಲ್ಲಿ ಜನರು ಸೋತರು.

ಈ ಕಾರಣಕ್ಕೆ ಹಳೆ ಹಂಪಸಾಗರದಿಂದ ಜನರು ಮೂರು ಭಾಗವಾಗಿ ಚದುರಿ ಹೋದರು. ನಾರಾಯಣ್‌ರಾವ್ ನೇತೃತ್ವದಲ್ಲಿ ಹೋಗಿ ನೆಲೆಸಿದ ಗ್ರಾಮ ಈಗ ಹಂಪಸಾಗರ-3 ಎಂತಲೂ, ಬಹುಸಂಖ್ಯಾತ ನೇಕಾರರು ನೆಲೆಸಿದ ಗ್ರಾಮ ಹಂಪಸಾಗರ-1 ಎಂತಲೂ, ಸದ್ಗುರು ಮಹಾದೇವ ತಾತನವರ ಅಣತಿಯಂತೆ ಉದಯಿಸಿದ ಗ್ರಾಮ ಹಂಪಸಾಗರ-2 ಎಂದೂ ಹೆಸರಾಯಿತು.

ಹಂಪಸಾಗರ-2 ಗ್ರಾಮದಲ್ಲಿ 1952ರ ರಥಸಪ್ತಮಿ ದಿನ ಸದ್ಗುರು ಮಹಾದೇವ ತಾತನವರು ಗ್ರಾಮದ ಶಂಕುಸ್ಥಾಪನೆ ನೆರವೇರಿಸಿದರು. ಈ ಗ್ರಾಮಕ್ಕೆ ಕರೆಗಲ್ಲು ಹಾಕಿದ ಸ್ಥಳದಲ್ಲಿ ಮಠವನ್ನು ಕಟ್ಟಿ, ಅದಕ್ಕೆ ಉಷಾಮಠವೆಂದು ಹೆಸರಿಟ್ಟರು. (ಇದು ಈಗ ಉಷಾ, ಉಕ್ಕಿನ ಮಠವೆಂದೇ ಪ್ರಖ್ಯಾತಿ ಹೊಂದಿದೆ). ಈ ಮಠದಲ್ಲಿ ಶ್ರೀಗಳು ‘ಜ್ಯೋತಿರ್ಲಿಂಗೇಶ್ವರ’ ಎಂಬ ಹೆಸರಿನಿಂದ ಶಿವಲಿಂಗಸ್ಥಾಪಿಸಿದರು.

ಗ್ರಾಮದ ಅಭಿವೃದ್ಧಿಗಾಗಿ ಜ್ಯೋತಿರ್ಲಿಂಗೇಶ್ವರ ರಥೋತ್ಸವವನ್ನು ಮಾಘ ಶು. ರಥಸಪ್ತಮಿಯಲ್ಲಿ ಪ್ರಾರಂಭಿಸಿದರು. ರಥೋತ್ಸವದಲ್ಲಿ ಮೂರೂ ಹಂಪಸಾಗರದ ಜನರು ಸೇರುತ್ತಿದ್ದು ವಿಶೇಷ. ಮೂಲ ಹಂಪಸಾಗರದಿಂದ ಜನರು ಹರಿದು ಹಂಚಿ ಹೋದರೂ ವರ್ಷಕ್ಕೊಮ್ಮೆಯಾದರೂ ಒಂದೆಡೆ ಸೇರಬೇಕು ಎನ್ನುವ ಆಶಯ ತಾತನವರಲ್ಲಿತ್ತು. ಆ ಮೂಲಕ ಎಲ್ಲರೂ ತಮ್ಮಲ್ಲಿನ ಮನಸ್ತಾಪ, ಅಪನಂಬಿಕೆಗಳನ್ನು ತೊರೆದು ಭಾವೈಕ್ಯ, ಸಾಮರಸ್ಯದಿಂದ ಜೀವಿಸಬೇಕು ಎನ್ನುವ ಇವರ ಇಚ್ಛೆಗೆ ಈ ರಥೋತ್ಸವನ್ನು ವೇದಿಕೆಯಾಗಿಸಿದರು.

ಇಂದಿಗೂ ಭಕ್ತರು ಆವಿಗೆ ಮತ್ತು ಜ್ಯೋತಿರ್ಲಿಂಗೇಶ್ವರನ ಹಿತ್ತಾಳೆಯ ಉತ್ಸವ ಮೂರ್ತಿಯನ್ನು ರಥೋತ್ಸವದ ದಿನ ಗ್ರಾಮದ ಸುತ್ತ ಪಲ್ಲಕ್ಕಿ ಉತ್ಸವ ಮಾಡುತ್ತಾರೆ. ಗ್ರಾಮದ ಶಂಕುಸ್ಥಾಪನೆಯ ನೆನಪಿಗಾಗಿ ಮತ್ತು ಏಳಿಗೆಗಾಗಿ ಹುಟ್ಟಿ ಹಾಕಿದ ಜ್ಯೋತಿರ್ಲಿಂಗ ರಥೋತ್ಸವಕ್ಕೆ ಈಗ 60 ವರ್ಷ. ಆಡು ಭಾಷೆಯಲ್ಲಿ ಇದು ‘ತಾತನವರ ರಥೋತ್ಸವ’ ಎಂದು ಕರೆಯಿಸಿಕೊಳ್ಳುತ್ತದೆ. ಈಗ ನವಲಿ ಹಿರೇಮಠದ ಎನ್.ಎಚ್.ಎಂ ಕನ್ನಡ ಪಂಡಿತ ಸಿದ್ಧಲಿಂಗ ಸ್ವಾಮೀಜಿ ಮತ್ತು ಅವರ ಪುತ್ರ ಶಿವಲಿಂಗ ದೇವರು  ಈ ಕಾರ್ಯ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT