ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ನೀಲನಕ್ಷೆಯಲ್ಲೇ ಹೊಸ ಕಟ್ಟಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವಿಕೆಗೆ ಕಾದಿರುವ ವಿಜಯಪುರ ಮಹಾನಗರಪಾಲಿಕೆ ಕಟ್ಟಡದ ಭೂಮಿಪೂಜೆ
Last Updated 31 ಜನವರಿ 2017, 5:23 IST
ಅಕ್ಷರ ಗಾತ್ರ

ವಿಜಯಪುರ: ಮೂರ್ನಾಲ್ಕು ವರ್ಷಗಳ ಹಿಂದೆ ರೂಪಿಸಿದ್ದ ನೀಲನಕ್ಷೆಯಲ್ಲೇ ಇಲ್ಲಿನ ಮಹಾನಗರ ಪಾಲಿಕೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಮುನ್ನುಡಿ ಬರೆದಿದೆ.

ವಿಜಯಪುರ ನಗರಸಭೆಗೆ ನೂತನ ಕಟ್ಟಡ ನಿರ್ಮಿಸಲು ರೂಪಿಸಿದ್ದ ನೀಲನಕ್ಷೆಯನ್ನೇ ₹ 14.51 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಯ ನೂತನ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಪಾಲಿಕೆ ಆಡಳಿತ ನಿರ್ಧಾರ ತೆಗೆದುಕೊಂಡಿದೆ.

ಬೇಸ್‌ಮೆಂಟ್‌ ಫ್ಲೋರ್‌ ಸೇರಿದಂತೆ ನೆಲಮಹಡಿ, ಮೊದಲ, ಎರಡನೇ ಮಹಡಿ ಹೊಂದುವ ನೂತನ ಕಟ್ಟಡದ ನೀಲನಕ್ಷೆ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಯಾವ್ಯಾವ ಮಹಡಿಯಲ್ಲಿ ಯಾವ್ಯಾವ ಕಚೇರಿ ಬರಲಿವೆ ಎಂಬುದರ ಮಾಹಿತಿ ಇಲ್ಲಿದೆ. ಬೇಸ್‌ಮೆಂಟ್‌ ಫ್ಲೋರ್‌ ವಾಹನ ಪಾರ್ಕಿಂಗ್‌ಗೆ ಮೀಸಲು. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ನೆಲ ಮಹಡಿಗೆ ಎರಡು ಕಡೆ ಪ್ರವೇಶವಿದೆ. ಒಂದೆಡೆ ಜನ ಸಾಮಾನ್ಯರ ಪ್ರವೇಶದ್ವಾರವಿದ್ದರೆ, ಮತ್ತೊಂದೆಡೆ ಗಣ್ಯರ ಪ್ರವೇಶದ್ವಾರವಿದೆ. ಕಟ್ಟಡದ ಮಧ್ಯದಲ್ಲಿ ವಿಶಾಲ ಜಾಗವಿದ್ದು, ಒಂದೆಡೆ ವಿಚಾರಣೆ, ಸ್ವಾಗತಕಾರರ ಸೆಲ್ ನಿರ್ಮಾಣಗೊಳ್ಳಲಿದೆ.

ಆರೋಗ್ಯ ವಿಭಾಗ ಇಲ್ಲಿ ಕಾರ್ಯ ನಿರ್ವಹಿಸಲಿದೆ. ಎಂಜಿನಿಯರ್ ಸೇರಿದಂತೆ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ಪ್ರಮುಖ ಅಧಿಕಾರಿಗಳಿಗೆ ವಿಶ್ರಾಂತಿ ಕೊಠಡಿಯೂ ಇಲ್ಲಿರಲಿದೆ. ಜನರಿಗೆ ನಿರೀಕ್ಷಣಾ ಕೊಠಡಿ, ದಾಖಲೆಗಳ ಕೊಠಡಿ ನಿರ್ಮಾಣಗೊಳ್ಳಲಿದೆ.

ವಿಜಯಪುರ ಒನ್‌ಗೆ ಸಂಬಂಧಿಸಿದ ಕಚೇರಿ, ವಿವಿಧ ವಿಭಾಗದ ಅಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸೇವೆಗಳೂ ಇದೇ ಮಹಡಿಯಲ್ಲಿ ಕಾರ್ಯ ನಿರ್ವಹಿಸಲಿವೆ.
ಇನ್ನೊಂದೆಡೆ ಕಂದಾಯ ವಿಭಾಗ ಕಾರ್ಯಾಚರಿಸಲಿದೆ. ಇಲ್ಲಿ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ಸಾರ್ವಜನಿಕರು ಕುಳಿತುಕೊಳ್ಳಲು ವಿಶಾಲ ಸಭಾಂಗಣ, ಕುಡಿಯುವ ನೀರಿನ ವ್ಯವಸ್ಥೆ, ಸಿಬ್ಬಂದಿಯ ಊಟದ ಸಭಾಂಗಣ, ಶೌಚಾಲಯ ಸೇರಿದಂತೆ, ಬೀದಿ ದೀಪ ನಿರ್ವಹಣೆ, ಐಟಿ–ಜಿಐಎಸ್‌ ವಿಭಾಗಗಳು ಇಲ್ಲಿ ಬರಲಿವೆ.

ಮೊದಲ ಮಹಡಿ: ಲೋಕೋಪಯೋಗಿ ಇಲಾಖೆ ಒಂದೆಡೆ. ಎಂಜಿನಿಯರ್‌ಗಳಿಗೆ ಪ್ರತ್ಯೇಕ ಕೊಠಡಿ, ವಿಶ್ರಾಂತಿ ಕೊಠಡಿ, ಸಭೆ ನಡೆಸಲು ಸಭಾಂಗಣ ಇರಲಿವೆ.
ಆಡಳಿತ ವಿಭಾಗ ಇನ್ನೊಂದೆಡೆ ಕಾರ್ಯಾಚರಿಸಲಿದೆ. ಆಯುಕ್ತ, ಉಪ ಆಯುಕ್ತ, ಜಂಟಿ ಆಯುಕ್ತ, ಸೂಪರಿಟೆಂಡಿಂಗ್‌ ಎಂಜಿನಿಯರ್ ಕಚೇರಿ, ಪ್ರತ್ಯೇಕ ವಿಶ್ರಾಂತಿ ಕೊಠಡಿ, ಸಾಮಾನ್ಯ ಜನರ ನಿರೀಕ್ಷಣಾ ಸಭಾಂಗಣ, ಊಟದ ಸಭಾಂಗಣ, ಶೌಚಾಲಯ ಇರಲಿವೆ.

ಇದಕ್ಕೆ ಹೊಂದಿಕೊಂಡಂತೆ ಪಾಲಿಕೆ ವ್ಯವಸ್ಥಾಪಕರ ಕಚೇರಿ, ಲೆಕ್ಕಪತ್ರ, ಕಾನೂನು, ಕಟ್ಟಡ ವಿಭಾಗ ಸೇರಿದಂತೆ ದಾಖಲೆಗಳ ವಿಭಾಗವೂ ಇಲ್ಲೇ ಕಾರ್ಯಾಚರಿಸಲಿದೆ.
ಎರಡನೇ ಮಹಡಿ: ಅತ್ಯಾಧುನಿಕ ಬೃಹತ್ ಕೌನ್ಸಿಲ್‌ ಸಭಾಂಗಣ. ಪುರುಷ–ಮಹಿಳಾ ಸದಸ್ಯರಿಗೆ ಪ್ರತ್ಯೇಕ ವಿಭಾಗ, ವಿಶ್ರಾಂತಿ ಕೊಠಡಿಗಳು, ಶೌಚಾಲಯ.
ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗಳು, ನಗರ ಪ್ರತಿನಿಧಿಸುವ ಇಬ್ಬರು ಶಾಸಕರ ಕಚೇರಿಗಳು, ಮೇಯರ್, ಉಪಮೇಯರ್‌ ಕಚೇರಿ, ನಿರೀಕ್ಷಣಾ ಕೊಠಡಿ, ಪ್ರಮುಖರಿಗೆ ವಿಶ್ರಾಂತಿ ಕೊಠಡಿ, ಸಭಾಂಗಣ ಈ ಮಹಡಿಯಲ್ಲಿರಲಿವೆ.

ಜಾಗದ ತಕರಾರು

ಮಹಾನಗರ ಪಾಲಿಕೆ ಆಡಳಿತ ಜಲನಗರ ಕಚೇರಿ ಪಕ್ಕದಲ್ಲೇ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಜಾಗದ ತಕರಾರು ಉಲ್ಭಣಿಸಿದೆ. ಕೆಲವರು ನ್ಯಾಯಾಲಯದ ಮೊರೆ ಹೊಕ್ಕಿದ್ದು ತಡೆಯಾಜ್ಞೆ ತಂದಿದ್ದಾರೆ.

ಸಿದ್ದರಾಮಯ್ಯಗೆ ಆಹ್ವಾನ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ವಿಜಯಪುರಕ್ಕೆ ಬರುವುದಾಗಿ ಡಿಸೆಂಬರ್‌ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಇದರಂತೆ ಪಾಲಿಕೆಯ ನೂತನ ಕಟ್ಟಡದ ಭೂಮಿಪೂಜೆಗೆ ಸಿಎಂ ಆಹ್ವಾನಕ್ಕೆ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಸಕಲ ಸಿದ್ಧತೆ ನಡೆಸಿದ್ದಾರೆ.

ಬದಲಿ ಸ್ಥಳಕ್ಕೆ ಮೊರೆ


ಉದ್ದೇಶಿತ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ತಕರಾರು ಕೇಳಿ ಬರುತ್ತಿದ್ದಂತೆ ಹೊಸ ಜಾಗದ ಶೋಧಕ್ಕಾಗಿ ಪಾಲಿಕೆ ಮೇಯರ್ ಪತಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಉಳಿದ ಸದಸ್ಯರ ಮನವೊಲಿಸಿಕೊಂಡು ಸಚಿವ ಎಂ.ಬಿ.ಪಾಟೀಲ ಬಳಿ ನಿಯೋಗ ತೆರಳುವ ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT