ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಕೊಳೆಗೇರಿಯ ರಾಜಕುಮಾರರು...

ಕಾಂಗ್ರೆಸ್‌ನ ಮೋಹನ ಹಿರೇಮನಿ ಪ್ರತಿನಿಧಿಸುವ 45ನೇ ವಾರ್ಡ್‌ನಲ್ಲಿ ಕೊಳೆಗೇರಿಗಳೇ ಹೆಚ್ಚು, ನಿವಾಸಿಗಳಲ್ಲಿ ಬೇಸರ
Last Updated 31 ಜನವರಿ 2017, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅದು ನಗರದ ಗಿರಣಿ ಚಾಳದ ಐದನೇ ಕ್ರಾಸ್‌. ಇಂದಿರಾ ಗಾಜಿನ ಮನೆಯಿಂದ ಮುಂದಕ್ಕೆ ಬಂದು ಬಲಕ್ಕೆ ಹೊರಳಿದರೂ ಆದೀತು. ಕಾರವಾರ ರಸ್ತೆ ಸೇರುವ ವೃತ್ತದಿಂದ ಬಾಸೆಲ್‌ ಮಿಶನ್‌ ಶಾಲೆಗೆ ಹೋಗುವ ದಾರಿಯಿಂದ ಎಡಕ್ಕೆ ಹೊರಳಿದರೂ ನಡೆದೀತು. ಈ ಚಾಳದಲ್ಲಿ ಗಟಾರದಿಂದ ಎತ್ತಿದ ಕಸ ಇರುವ ಜಾಗದ ಪಕ್ಕದಲ್ಲೇ ತಾಯಿ ಲಕ್ಷ್ಮಿ ತನ್ನ ಮಗುವಿಗೆ ಅನ್ನ ಉಣಿಸುತ್ತಿದ್ದಾಳೆ.

ಹೀಗೆ ಕಸದ ಜೊತೆಯಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವ ಪುಟ್ಟ ರಾಜಕುಮಾರ, ರಾಜಕುಮಾರಿಯರು ಇಲ್ಲಿದ್ದಾರೆ. ಮೂಟೆಗಟ್ಟಲೇ ಬಿದ್ದ ಕಸದ ಸನಿಹದಲ್ಲೇ ಹತ್ತಾರು ಮಕ್ಕಳು ಆಟವಾಡುವುದು ಸಾಮಾನ್ಯ. ಮಕ್ಕಳಿಗೆ ಸುಂದರ ವಾತಾವರಣ ಕಲ್ಪಿಸುವ ಸಲುವಾಗಿ ಆ ಕಸವನ್ನು ಪೌರ­ಕಾರ್ಮಿಕರು ನಿಯಮಿತವಾಗಿ ಎತ್ತಿ­ಕೊಂಡು ಹೋಗಬೇಕೆಂಬ ಕನಿಷ್ಠ ಕಾಳಜಿಯಾಗಲೀ, ಕರ್ತವ್ಯ ಪ್ರಜ್ಞೆಯಾಗಲೀ ಕಾರ್ಪೊರೇಶನ್‌ನ­ವರಿಗೆ ಇಲ್ಲ ಎಂಬ ಬೇಸರ ಇಲ್ಲಿನ ನಿವಾಸಿಗಳಲ್ಲಿ ಮಡುಗಟ್ಟಿದೆ.

ಇದು ಬರೀ ಗಿರಣಿ ಚಾಳದ ಕಥೆಯಷ್ಟೇ ಅಲ್ಲ. ಹೊಸೂರಿನ ವೀರ ಮಾರುತಿ ನಗರದಲ್ಲಿಯೂ ಸ್ವಚ್ಛತೆಯ ಸಮಸ್ಯೆ ಇದೆ. ಇಲ್ಲಿಗೆ ಬೆಳಿಗ್ಗೆ ಬರುವ ಸ್ವಚ್ಛತಾ ಸಿಬ್ಬಂದಿ ಕಸಬರಿಗೆ ಹಿಡಿದು ಸ್ವಚ್ಛತೆಯ ಪ್ರಹಸನ ಮಾಡುತ್ತಾರಷ್ಟೇ. ಆದರೆ, ವಾಸ್ತವವಾಗಿ ಕಸ ಅಲ್ಲಿಯೇ ಉಳಿದಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿ ಲಕ್ಷ್ಮಣ ಕ್ಯಾಸಟ್ಟಿ.

ಹೊಸೂರು– ಉಣಕಲ್‌ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕೋರ್ಟ್‌ ಕಟ್ಟಡದ ಎದುರಿನ ಬಡಾವಣೆಯಿಂದ ಮೊದಲ್ಗೊಂಡು ಶಕುಂತಲಾ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಎದುರಿಗಿನ ಹೊಸೂರು ಕೊಳೆಗೇರಿ ಪ್ರದೇಶವನ್ನು ಪಾಲಿಕೆ ಸದಸ್ಯ ಮೋಹನ ಹಿರೇಮನಿ ಅವರ ವ್ಯಾಪ್ತಿಯಲ್ಲಿದೆ.

ಒತ್ತೊತ್ತಾಗಿ ಇರುವ ಮನೆಗಳಿಂದ ಸಂಗ್ರಹವಾದ ಕಸವನ್ನು ಒಯ್ಯಲು ಸಾಕಷ್ಟು ಪೌರಕಾರ್ಮಿಕರಿಲ್ಲ. ಹೀಗಾಗಿ, ಎಲ್ಲವೂ ನಾವಂದುಕೊಂಡಂತೆ ನಡೆ­ಯು­ತ್ತಿಲ್ಲ ಎಂದು ಬೇಸರ ಭಾವವನ್ನು ಹಿರೇಮನಿ ಹೊರಹಾಕುತ್ತಾರೆ. ಅವರ ಮಾತಿಗೆ ಪೂರಕವಾಗಿ ಹೊಸೂರು–ಉಣಕಲ್‌ ರಸ್ತೆಯಲ್ಲಿ ಸಮಾರು 100 ಮೀಟರ್‌ ಅಂತರದಲ್ಲೇ ರಸ್ತೆ ಪಕ್ಕದಲ್ಲಿ ಕಸ ಬಿದ್ದುದು ಕಂಡು ಬಂತು.

ಈ ಬಡಾವಣೆಗಳು ತೀರಾ ಹಿಂದುಳಿದಿವೆ ಎನ್ನುವಂತೆಯೂ ಇಲ್ಲ. ಅದಾಗಲೇ ಇಲ್ಲಿ ಕಾಂಕ್ರಿಟ್‌ ರಸ್ತೆ, ಸುಸಜ್ಜಿತ ಗಟಾರುಗಳು, ಒಳಚರಂಡಿ ವ್ಯವಸ್ಥೆ ಎಲ್ಲವೂ ಬಂದಿವೆ. ಆಟೊ ಟಿಪ್ಪರ್‌ ಕೂಡಾ ಕೆಲವೆಡೆ ಬರುತ್ತಿದೆ. ಆದರೆ, ಇದನ್ನು ಇನ್ನಷ್ಟು ಪರಿಣಾ­ಮಕಾರಿಯಾಗಿ ನಿರ್ವಹಣೆ ಮಾಡಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಗಿರಣಿಚಾಳದ ನಿವಾಸಿ ಬಾಗಪ್ಪ ಚಲವಾದಿ ಹೇಳಿದರು.
 

‘ನಿವೃತ್ತಿ ಅಂಚಿನಲ್ಲಿ ಪೌರಕಾರ್ಮಿಕರು’
‘ನಮ್ಮದು ಪಾಲಿಕೆಯ ಕಾಯಂ ಪೌರಕಾರ್ಮಿಕರ ವಾರ್ಡ್‌ ಆಗಿದ್ದು, ಬಹುತೇಕ ಕಾರ್ಮಿಕರು ವೃದ್ಧರು. ನಿವೃತ್ತಿ ಅಂಚಿನಲ್ಲಿದ್ದಾರೆ. ಒಂದು ಕಾಲದಲ್ಲಿ 27 ಜನ ಇದ್ದ ಸಂಖ್ಯೆ ಈಗ ಕೇವಲ 18ಕ್ಕೆ ಇಳಿದಿದೆ. ಇಷ್ಟು ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಪಾಲಿಕೆಯಲ್ಲಿ 45ನೇ ವಾರ್ಡ್‌ ಪ್ರತಿನಿಧಿಸುವ ಕಾಂಗ್ರೆಸ್‌ನ ಮೋಹನ ಹಿರೇಮನಿ.

‘ಗಿರಣಿ ಚಾಳ, ಹೊಸೂರ, ಮಂಗಳ ಓಣಿ, ಚಾಣಕ್ಯಪುರಿ, ಎಂ.ಎಂ. ಜೋಶಿ ಆಸ್ಪತ್ರೆ, ಶಕುಂತಲಾ ಸ್ಮಾರಕ ಆಸ್ಪತ್ರೆಯ ಮುಂಭಾಗದ ಕೊಳೆಗೇರಿ ಪ್ರದೇಶ, ತಿಮ್ಮಸಾಗರ ಗುಡಿ ರಸ್ತೆ ನನ್ನ ವಾರ್ಡ್‌ನಲ್ಲೇ ಬರುತ್ತದೆ. ಬಹುತೇಕ ಬಡಾವಣೆಗಳು ಕೊಳೆಗೇರಿಗಳೇ ಆಗಿದ್ದರಿಂದ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿವೆ. ಅಲ್ಲದೇ, ಕಸ ಸಂಗ್ರಹಕ್ಕೆಂದು ಆಟೊ ಟಿಪ್ಪರ್‌ ಹೋಗಿರುತ್ತದೆ. ಅದು ಹೋದಾಗ ಕೆಲವರಷ್ಟೇ ಕಸ ಹಾಕುತ್ತಾರೆ. ಮತ್ತೆ ಕೆಲವರು ಗಟಾರಿಗೆ ಚೆಲ್ಲುತ್ತಾರೆ. ಇದರಿಂದಾಗಿ ತುಂಬಿಕೊಂಡ ನೀರು ಮುಂದಕ್ಕೆ ಹರಿಯುವುದೇ ಇಲ್ಲ. ಹೆಚ್ಚುವರಿ ಕಾರ್ಮಿಕರನ್ನು ಕೊಡುವಂತೆ ಮನವಿ ಮಾಡಿದ್ದೆ. ಆಗಾಗ ಕೆಲ ಗುತ್ತಿಗೆ ಪೌರಕಾರ್ಮಿಕರನ್ನು ಕಳಿಸುತ್ತಾರೆ. ಕೊಟ್ಟಿದ್ದ ಆಟೊ ಟಿಪ್ಪರ್‌ ಬದಲಾಯಿಸಿ ಹಳೆಯದು ಕೊಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

***

ರಸ್ತೆಯ ಕಸ ಗುಡಿಸಲು ಬರುವ ಮಹಿಳೆಗೆ ಸರಿಯಾಗಿ ಕಸ ತೆಗೆದಿಲ್ಲ ಎಂದರೆ ಜಗಳಕ್ಕೇ ಬರುತ್ತಾಳೆ. ಪೌರಕಾರ್ಮಿಕರು ಗಟಾರ ಸ್ವಚ್ಛ ಮಾಡುವುದಿಲ್ಲ
- ವಿದ್ಯಾ ಕ್ಯಾಸಟ್ಟಿ, ವೀರ ಮಾರುತಿ ನಗರ

***

ಹುಡುಗರು ಇಲ್ಲೇ ಆಟ ಆಡ್ತಾರಂತೆ ನಾವೂ ರಸ್ತಾದ ಮೇಲೆ ಬಿದ್ದ ಕಸಾನೆಲ್ಲ ಗುಡಿಸ್ತೀನಿ. ಇಲ್ನೋಡ್ರಿ, ಕಸ ತುಂಬಿದ್ದ­ರಿಂದ ಗಟಾರು ಕಟ್ಟಿಕೊಂಡಿತ್ತು. ನಾವ ಕಡ್ಡಿ, ಪ್ಲಾಸ್ಟಿಕ್‌  ಹೊರಗ ಹಾಕೀವಿ

- ಲಕ್ಷ್ಮಿ ನೀಲನಾಯಕ, ಗಿರಣಿ ಚಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT